ಚಳಿ ಪಾಠ
ವೈರಾಣು ಹಾಗೂ ಸೋಂಕಿನಿಂದ ಬರುವ ಕಾಯಿಲೆಗಳು ಚಳಿಗಾಲದಲ್ಲಿ ಕರೆಯದೇ ಬಂದೊಕ್ಕರಿಸುವ ಸಾಮಾನ್ಯ...
'ಹು... ಹು...ಹು ಏನ್ ಥಂಡಿ ರೀ...' ಅಂತ ಜನ ನಡುಗುತ್ತಲೇ ಗಂಟೆ ಏಳಾದರೂ ಹಾಸಿಗೆಯಿಂದ ಏಳುವ ಮನಸ್ಸು ಮಾಡದೆ ಮತ್ತೆ ರಗ್ಗನ್ನು ಮೈ ಮೇಲೆಳೆದುಕೊಂಡು ಮುದುಡಿ ಮಲಗುವುದನ್ನು ಈ ಚಳಿಗಾಲದಲ್ಲಿ ನೋಡಿದ್ದೇವೆ. ಮಧ್ಯಾಹ್ನ ಬಿಸಿಲು ಸ್ವಲ್ಪ ಚುರುಕಾದಂತೆನಿಸಿ ಮತ್ತೆ ಸಾಯಂಕಾಲ ನಾಲ್ಕಾಗುತ್ತಿದ್ದಂತೆ ಚಳಿ ಶುರು. ಚಳಿಗಾಲದ ಇನ್ನೊಂದು ವಿಶೇಷತೆ ಎಂದರೆ ಇಬ್ಬನಿ ಸುರಿಯುವುದು.
ಬೆಳಿಗ್ಗೆ ಗಂಟೆ ಹತ್ತಾದರೂ ಸ್ನಾನ ಮಾಡಲು ಮನಸ್ಸು ಬರದು. ಈ ಆಲಸ್ಯ ಚಳಿಗಾಲದ ಅತ್ಯಂತ ಸಾಮಾನ್ಯ ಕಾಯಿಲೆ. ಮೈತುಂಬ ಉಣ್ಣೆಯ ಬಟ್ಟೆ ಸುತ್ತಿಕೊಂಡು (ಕೆಲವರನ್ನು ನೋಡಬೇಕು, ಅವರ ಕಣ್ಣೆರಡು ಮಾತ್ರ ಕಾಣುತ್ತವೆ), ಬಿಸಿಬಿಸಿ ಕಾಫಿ ಟೀ ಹೀರುತ್ತಲೋ, ಈರುಳ್ಳಿ ಪಕೋಡಾ ಅಥವಾ ಹಪ್ಪಳ ಸಂಡಿಗೆ ಮೆಲ್ಲುತ್ತಲೋ ಇರಲು ಮನಸ್ಸು ಇಷ್ಟಪಡುತ್ತದೆ. ಇದೇ ಚಳಿಗಾಲದ ರೋಗಗಳಿಗೆ ಆಮಂತ್ರಣ.
ವೈರಾಣು ಹಾಗೂ ಸೋಂಕಿನಿಂದ ಬರುವ ಕಾಯಿಲೆಗಳು ಚಳಿಗಾಲದಲ್ಲಿ ಕರೆಯದೇ ಬಂದೊಕ್ಕರಿಸುವ ಸಾಮಾನ್ಯ ಕಾಯಿಲೆಗಳು. ಅನೇಕ ಅಲರ್ಜಿಗಳೂ, ಅರ್ಥರೈಟಿಸ್ ಕಾಯಿಲೆಗಳು ಈ ಕಾಲದಲ್ಲಿ ಉಲ್ಬಣಿಸುತ್ತವೆ. ವಯಸ್ಸಾದವರ ಚಟುವಟಿಕೆಗಳು ಈ ಕಾಲದಲ್ಲಿ ಅತ್ಯಂತ ಕಡಿಮೆ ಆಗುವುದರಿಂದ, ಈಗಾಗಲೇ ಇರುವ ಕಾಯಿಲೆಗಳು ಹೆಚ್ಚು ಕ್ರಿಯಾಶೀಲವಾಗುತ್ತವೆ. ಅವರು ಈ ಕಾಲದಲ್ಲಿ ಆದಷ್ಟೂ ಬೆಚ್ಚಗಿರಬೇಕು.
ನಮ್ಮ ದೇಹದ ಸಂವಿಧಾನವು ಒಂದು ನಿಶ್ಚಿತ ತಾಪಮಾನವನ್ನು ಅಳವಡಿಸಿಕೊಂಡಿರುತ್ತದೆ. ಋತುಗಳು ಬದಲಾದಂತೆ ವಾತಾವರಣದ ತಾಪಮಾನವೂ ಏರಿಳಿಯುತ್ತದೆ. ಹಿಂದಿನ ಋತುವಿಗೆ ಒಗ್ಗಿಕೊಂಡಿರುವ ದೇಹ ಈಗ ಬಂದಿರುವ ಕಾಲದ ಬದಲಾವಣೆಗೆ ಸುಲಭವಾಗಿ ಒಗ್ಗಿಕೊಳ್ಳದು. ಸಾಮಾನ್ಯವಾಗಿ ಎಲ್ಲರ ಅನುಭವಕ್ಕೆ ಬರುವ ಸಂಗತಿ ಎಂದರೆ ಚಳಿಗಾಲದಲ್ಲಿ ಹಸಿವು ಹೆಚ್ಚಾಗುತ್ತದೆ. ವಿಸ್ಮಯವೆಂದರೆ, ವೈರಾಣುಗಳೂ ಈ ಕಾಲದಲ್ಲಿಯೇ ಹೆಚ್ಚು ಕ್ರಿಯಾಶೀಲವಾಗುತ್ತವೆ. ಜನ ಮನೆಯೊಳಗೇ ಇರಲು ಇಷ್ಟಪಡುವುದರಿಂದ ದೈಹಿಕ ಕಸರತ್ತು ಕಡಿಮೆಯಾಗಿ ವೈರಾಣುಗಳ ವೃದ್ಧಿಯಾಗುತ್ತದೆ. ಬೇಸಗೆಯ ಹೆಚ್ಚಿನ ಕಾಯಿಲೆಗಳು ಚಳಿಗಾಲದಲ್ಲೂ ಬರುತ್ತವಾದರೂ, ನ್ಯುಮೋನಿಯಾ ಚಳಿಗಾಲದ ಆಪ್ತಮಿತ್ರ.
ಭಾರತದಲ್ಲಿ ಚಳಿಗಾಲ ಸೆಪ್ಟೆಂಬರ್ ಕೊನೆಯಿಂದ ಪ್ರಾರಂಭವಾಗಿ ಜನವರಿ ಕೊನೆವರೆಗೂ ಇರುತ್ತದೆ. ಶರದ್ ಹಾಗೂ ಹೇಮಂತ ಋತುಗಳು ಚಳಿಗಾಲದವು. ಪ್ರಕೃತಿ ಹಳೆಯುಡುಗೆ ತೊರೆಯಲಾರಂಭಿಸಿದಳೋ ಎಂಬಂತೆ ಗಿಡ ಮರಗಳ ಎಲೆಯುದುರಿ ಬೋಳಾಗತೊಡಗುತ್ತವೆ. ಶುಭ್ರ ನೀರವ ಹಗಲುಗಳು, ಕ್ರೂರ ಅತಿ ದೀರ್ಘ ಚಳಿ ರಾತ್ರಿಗಳು. ಚಳಿಗಾಲದ ವಿವರಣೆ ಎಲ್ಲ ಸಾಹಿತ್ಯದಲ್ಲೂ ವಿಪುಲವಾಗಿದೆ. ಕಾಳಿದಾಸನ ಋತುಸಂಹಾರ ಇದಕ್ಕೆ ಅತ್ಯುತ್ತಮ ಉದಾಹರಣೆ. ರಾಜಶೇಖರನು ತನ್ನ ಕಾವ್ಯಮೀಮಾಂಸದಲ್ಲಿ ಹೇಮಂತ ಶಿಶಿರಗಳಿಗೆ ಹೆಚ್ಚು ವ್ಯತ್ಯಾಸವಿಲ್ಲ ಅನ್ನುತ್ತಾನೆ. ಆದರೆ ಇದಕ್ಕೆ ಕಾಳಿದಾಸನ ಭಿನ್ನಮತವಿರುವ ಹಾಗಿದೆ. ರಾಜಶೇಖರನಂತೂ ಈ ಕಾಲದಲ್ಲಿ ಏನಾದರೂ ತಿನ್ನಿ ಎಷ್ಟಾದರೂ ಕುಡಿಯಿರಿ ಯಾವ ಸಂಗಾತಿಯೊಂದಿಗಾದರೂ ಪ್ರಣಯಿಸಿ ಅಂತ ಹೇಳಿ ದಂಗು ಬಡಿಸುತ್ತಾನೆ. ವಾಲ್ಮೀಕಿ, 'ಅವಶ್ಯಾಯತೋನದ್ಧ್ವಾ ನಿಹಾರತಮಸಾವೃತಾ ಪ್ರಸುಪ್ತಾ ಇವ ಲಕ್ಷಂತೇ ವಿಪುಷ್ಪಾ ವನರಾಜಯ'- ಕತ್ತಲೆಯ ಕಂಬಳಿ ಹೊದ್ದು ಹಿಮದ ಮುದ್ದೆ ಮೆದ್ದು ಹೂ ಹಣ್ಣು ತೊರೆದು ಮಲಗಿಹನು ವನರಾಜ ಅಂತ ಚಳಿಗಾಲದ ಪರಿಣಾಮವನ್ನು ಅತ್ಯಂತ ಸುಂದರವಾಗಿ ವರ್ಣಿಸುತ್ತಾರೆ.
ಸಾಮಾಜಿಕವಾಗಿಯೂ ಚಳಿಗಾಲಕ್ಕೆ ತುಂಬಾ ಮಹತ್ವವಿದೆ. ಮಳೆ ನಿಂತು ರೈತರು ಬಂಪರ್ ಬೆಳೆಯ ನಿರೀಕ್ಷೆಯಲ್ಲಿರುತ್ತಾರೆ. ರಾಜಕೀಯವಾಗಿ ಶಾಸನ ಸೌಧಗಳಲ್ಲಿ ಬಿಸಿಬಿಸಿ ಚರ್ಚೆಗಳು, ಮುಂದಿನ ಬಜೆಟ್ಟಿನ ಮುನ್ಸೂಚನೆ ನೀಡುತ್ತವೆ. ತುಳಸೀ ವಿವಾಹದೊಂದಿಗೆ ಮದುವೆಯ ಸೀಜನ್ ಕೂಡಾ ಪ್ರಾರಂಭವಾಗಿ, ನವವಿವಾಹಿತರಿಗೆ ಚಳಿಗಾಲ ಆಪ್ಯಾಯಮಾನವಾಗದೇ ಇರದು. ಚಳಿಗಾಲದಲ್ಲಿಯೇ ಪ್ರಮುಖ ಹಬ್ಬಗಳಾದ ನವರಾತ್ರಿ, ದೀಪಾವಳಿ, ಪೊಂಗಲ್, ಸಂಕ್ರಾಂತಿ, ಬಿಹು, ಕ್ರಿಸ್ಮಸ್, ಮೊಹರಂ ಬರುತ್ತವೆ. ಹಬ್ಬಗಳಲ್ಲಿ ಸಿಹಿ ತಿಂಡಿ, ಕರಿದ ಪದಾರ್ಥಗಳೂ ಯಥೇಚ್ಛ ಉಪಯೋಗಿಸಲ್ಪಡುತ್ತವೆ. ಗಂಟಲು ಸೋಂಕು ಆಗದೆ ಇನ್ನೇನಾದೀತು?
ಎಲ್ಲ ಡಾಕ್ಟರುಗಳ ಶಾಪಿನಲ್ಲಿ ಚಳಿಗಾಲವನ್ನು ಶಪಿಸುತ್ತಾ ಪಾಲಕರು ಚಿಕ್ಕಚಿಕ್ಕ ಮಕ್ಕಳನ್ನು ತೋರಿಸಲು ಸಾಲಾಗಿ ಕೂತ ದೃಶ್ಯ ಸಾಮಾನ್ಯ. ಆರ್ಎಸ್ವಿ ಎನ್ನುವ ವೈರಾಣುವಿನಿಂದ ಫ್ಲೂ ಕಾಯಿಲೆಗಳಾದ ಸೀನು, ಕೆಮ್ಮು, ಜ್ವರಗಳು ಮಕ್ಕಳನ್ನು ತುಂಬಾ ಬಾಧಿಸುತ್ತವೆ. ಸ್ಟ್ರೆಪ್ ಥ್ರೋಟ್ ಎನ್ನುವ ಗಂಟಲಿನ ಸೋಂಕು ಇನ್ನೊಂದು ಸಾಮಾನ್ಯ ಕಾಯಿಲೆ. ಇದು ಸಾಂಕ್ರಾಮಿಕ.
ಚಳಿಗಾಲದಲ್ಲಿ ಎಲ್ಲರೂ ಮನೆಯಲ್ಲಿಯೇ ಇರಲು ಬಯಸುತ್ತಾರಾದ್ದರಿಂದ, ಒಬ್ಬರಿಗೆ ಬಂದ ಕಾಯಿಲೆ ಇತರ ಸದಸ್ಯರಿಗೂ ಹರಡುತ್ತವೆ. ಗಂಟಲಿನ ಈ ಸೋಂಕು ಉಸಿರಾಟದ ತೊಂದರೆಯುಂಟು ಮಾಡುವ ವೈರಾಣುವಿನಿಂದ ಬರುತ್ತವೆ. ಆದರೆ ಆ್ಯಂಟಿಬಯಾಟಿಕ್ಸ್ಗಳಿಗೆ ಬಗ್ಗುವುದಿಲ್ಲ. ಶೇ. 15-20ರಷ್ಟು ಬೆಕ್ಟೀರಿಯಾ ಮೂಲದ ಗಂಟಲಿನ ಸೋಂಕು ಸಾಮಾನ್ಯ ಔಷಧಿಗಳಿಂದಲೇ ಕಡಿಮೆ ಆಗುತ್ತವೆ. ಆದ್ದರಿಂದ ಬೆಳಿಗ್ಗೆ ಹಾಗೂ ಸಂಜೆ ಉಗುರು ಬೆಚ್ಚಗಿನ ನೀರಲ್ಲಿ ಸ್ವಲ್ಪ ಅಡಿಗೆಯ ಉಪ್ಪನ್ನು ಹಾಕಿ ಬಾಯಿ ಮುಕ್ಕಳಿಸುವ ಅಭ್ಯಾಸ ಈ ಕಾಲದಲ್ಲಿ ಉತ್ತಮ ಮುಂಜಾಗ್ರತಾ ಕ್ರಮ. ರಾತ್ರಿ ಹೊತ್ತು ಈ ಕಾಯಿಲೆಗಳು ಹೆಚ್ಚು ಕಾಡುವುದರಿಂದ, ಪ್ಯಾರಾಸಿಟಮಲ್, ಬ್ರೂಫೆನ್ ಮುಂತಾದ ಕೆಲ ತುರ್ತು ಮಾತ್ರೆಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಇನ್ಹೇಲರ್ನಂತಹ ಶೀತೋಪಹಾರಿಗಳೂ ಅಪೇಕ್ಷಣೀಯವೇ. ಶಿಶುಗಳಿರುವವರು, ಓಆರ್ಎಸ್ ಮುಂತಾದ ಜೀವರಕ್ಷಕ ದ್ರವಗಳನ್ನೂ ಇಟ್ಟುಕೊಂಡಿರಬೇಕು.
ಜಠರದ ಕಾಯಿಲೆಗಳೂ ಚಳಿಗಾಲದಲ್ಲಿ ಸಾಮಾನ್ಯ. ಈ ಕಾಲದಲ್ಲಿ ತರಕಾರಿ ವಿಪುಲವಾಗಿ ದೊರಕುತ್ತವೆ. ಮಳೆಯ ನೀರು ಸೂರ್ಯನ ಶಾಖಕ್ಕೆ ಆವಿಯಾಗದೆ ನಿಂತು ಮಲೆತಿರುತ್ತದೆ. ಆ ನೀರಿನಲ್ಲಿಯೇ ತರಕಾರಿ ಮಾರುವವರು ಅವನ್ನು ತೊಳೆಯುತ್ತಾರೆ. ಪರಿಣಾಮ ಸೊಪ್ಪು ಸದೆಗಳು ಸ್ವಚ್ಛವಾಗುವುದಿರಲಿ, ಆ ನೀರಿನಲ್ಲಿಯ ವೈರಾಣುಗಳೂ ಸೊಪ್ಪಿಗೆ ಮೆತ್ತಿಕೊಳ್ಳುತ್ತವೆ. ಹೆಚ್ಚಿನವರು ಚಳಿಯ ಆಲಸ್ಯದಿಂದ ಅವುಗಳನ್ನು ಚೆನ್ನಾಗಿ ತೊಳೆಯದೇ ಉಪಯೋಗಿಸುತ್ತಾರೆ. ಅದರ ಪರಿಣಾಮವೇ ಈ ಗ್ಯಾಸ್ಟ್ರೋಎಂಟರೈಟಿಸ್. ಅತಿಸಾರ, ವಾಂತಿ, ಉದರಶೂಲೆ ಮುಂತಾದ ಕಾಯಿಲೆಗಳು ಸಾಮಾನ್ಯ.
ಎಲ್ಲರನ್ನೂ ಕಾಡುವ ಇನ್ನೊಂದು ಸಮಸ್ಯೆ ಎಂದರೆ ಚರ್ಮದೊಡೆತ, ತುಟಿ ಸೀಳುವುದು, ಹಿಮ್ಮಡಿ ಬಿರಿಯುವುದು. ಈ ಕಾಲದಲ್ಲಿ ಆರ್ದ್ರತೆ ಕನಿಷ್ಟ ಮಟ್ಟಕ್ಕಿಳಿದು ವಾತಾವರಣ ಶುಷ್ಕವಾಗುತ್ತದೆ. ಒಣ ಗಾಳಿಯು ದೇಹದ ಆರ್ದ್ರತೆಯನ್ನೂ ಹೀರಿಕೊಳ್ಳುವುದರಿಂದ ಚರ್ಮ ಒಡೆಯುತ್ತದೆ. ಸಾಕಷ್ಟು ನೀರು ಕುಡಿಯುತ್ತಿರಬೇಕು. ಆದರೆ ಮಧುಮೇಹಿಗಳಿಗೆ ಇದರಿಂದ ಅತಿಮೂತ್ರದ ಸಮಸ್ಯೆ ಉಂಟಾಗುತ್ತದೆ. ಆದಷ್ಟೂ ವಿಟಮಿನ್ಯುಕ್ತ ಪದಾರ್ಥ ಸೇವಿಸಬೇಕು. ಸಿ ವಿಟಮಿನ್, ಫ್ಲೂ ಕಾಯಿಲೆ ನಿಯಂತ್ರಿಸುತ್ತದೆ. ಮಾಶ್ಚರೈಜರುಗಳು, ವ್ಯಾಸಲಿನ್ ಮುಂತಾದ ಬಾಮ್ ಮೈಗೆ ಸವರಿಕೊಳ್ಳುವುದು ಉತ್ತಮ. ಹಿಮ್ಮಡಿ ಒಡೆತದ ಸಮಸ್ಯೆ ಇರುವವರು ತಣ್ಣೀರಿನ ಉಪಯೋಗ ಕಡಿಮೆ ಮಾಡಬೇಕು. ಪಾದಗಳನ್ನು ಆದಷ್ಟೂ ಡ್ರೈ ಆಗಿರಿಸಿಕೊಳ್ಳಬೇಕು. ಪೈರಿಯಾದಂತಹ ಹಲ್ಲು, ವಸಡುಗಳ ತೊಂದರೆಗಳೂ, ಬಾಯಿ ಹುಣ್ಣುಗಳೂ ಈ ಕಾಲದಲ್ಲಿ ಜಾಗ್ರತವಾಗುತ್ತವೆ. ಈ ರೋಗ ಪೀಡಿತರು ಗುಟ್ಕಾ ತಂಬಾಕು ತಿನ್ನಬಾರದು. ಸಿಗರೇಟು ಸೇವನೆ ಈ ಕಾಲದಲ್ಲಿ ವಿಪರೀತವಾಗುತ್ತದೆ. ಇದೂ ಕೂಡಾ ಅಸ್ತ್ಥಮಾ ಕಾಯಿಲೆಯನ್ನು ಉಲ್ಬಣಿಸುತ್ತದೆ. ದಿನಕ್ಕೆರಡು ಬಾರಿ ಹಲ್ಲುಜ್ಜಿ. ಬಾಯಿಯನ್ನು ಉಪ್ಪು ನೀರಿನಿಂದ ಮುಕ್ಕಳಿಸುವುದು, ವ್ಯಾಯಾಮ ಮಾಡುವುದರಿಂದ ಈ ತೊಂದರೆಗಳನ್ನು ನಿಯಂತ್ರಿಸಬಹುದು. ಆದಷ್ಟೂ ಸೂರ್ಯನ ಬಿಸಿಲಿಗೆ ಮೈಯೊಡ್ಡುವುದು ಅಪೇಕ್ಷಣೀಯ. ಡಿ ಅನ್ನಾಂಗ ದೊರೆತು ಈ ತೊಂದರೆಗಳು ಹತೋಟಿಗೆ ಬರುತ್ತವೆ.
ಹೆಚ್ಚಿನ ಹೃದಾಯಾಘಾತಗಳು ಚಳಿಗಾಲದಲ್ಲಿ ಅದೂ ನಸುಕಿನಲ್ಲಿ ಆಗುತ್ತವೆ. ರಾತ್ರಿಗಳಲ್ಲಿ ತಾಪಮಾನ ತುಂಬ ಕಡಿಮೆಯಾಗುವುದರಿಂದ ಅಪಧಮನಿಗಳು ಪೆಡುಸಾಗುತ್ತವೆ. ರಕ್ತದೊತ್ತಡ ಹಾಗೂ ಪ್ರೊಟೀನುಗಳ ಪ್ರಮಾಣ ಏರುತ್ತದೆ. ಇದು ರಕ್ತವನ್ನು ಹೆಪ್ಪುಗಟ್ಟಿಸಬಹುದು. ರಕ್ತ ಸಂಚಾರಕ್ಕೆ ತಡೆ ಉಂಟಾಗಿ ಹೃದಯಕ್ಕೆ ಸಾಕಷ್ಟು ಆಮ್ಲಜನಕ ದೊರಕದೆ ಹೃದಯಾಘಾತವಾಗುತ್ತದೆ. ಹೃದಯ ಸಂಬಂಧಿ ತೊಂದರೆಗಳಿರುವವರಲ್ಲಿ ಈ ಅಪಾಯದ ಪ್ರಮಾಣ ಹೆಚ್ಚು. ಇನ್ನೊಂದು ಅಚ್ಚರಿಯ ವಿಷಯವನ್ನು ವಿಜ್ಞಾನಿಗಳು ಹೇಳುತ್ತಾರೆ. ಅದೆಂದರೆ ಡಿ ಅನ್ನಾಂಗದ ಕೊರತೆಯೂ ಹೃದಯಾಘಾತ ಉಂಟು ಮಾಡಬಲ್ಲದಂತೆ. ನಮಗೆಲ್ಲಾ ಗೊತ್ತಿರುವಂತೆ ಸೂರ್ಯಕಿರಣ ಡಿ ಅನ್ನಾಂಗದ ಭಂಡಾರ. ಚಳಿಗಾಲದಲ್ಲಿ ಮನೆಯೊಳಗೇ ಇರಲಿಷ್ಟಪಡುವುದರಿಂದ, ಸೂರ್ಯಕಿರಣ ಕಡಿಮೆ ಸಮಯ ದೇಹಕ್ಕೆ ದೊರಕಿ ಡಿ ಅನ್ನಾಂಗದ ಪೂರೈಕೆ ಕಡಿಮೆ ಆಗುತ್ತದೆ. ಇನ್ನೊಂದು ಆಸಕ್ತಿದಾಯಕ ವಿಷಯವೆಂದರೆ, ಎತ್ತರ ಪ್ರದೇಶಗಳಲ್ಲಿ ವಾಸಿಸುವವರಿಗೆ ಕಡಿಮೆ ಹೃದಯಾಘಾತದ ರಿಸ್ಕ್. ಯಾಕೆಂದರೆ ಎತ್ತರ ಹೋದಂತೆ ಸೂರ್ಯ ಕಿರಣದಲ್ಲಿ ಅಲ್ಟ್ರಾವಯಲೆಟ್ ಪ್ರಮಾಣ ಹೆಚ್ಚಿ, ಡಿ ಅನ್ನಾಂಗದ ಪ್ರಮಾಣವೂ ಹೆಚ್ಚಿರುತ್ತದೆ. ಹೃದಯಾಘಾತದ ಇನ್ನೊಂದು ಕಾರಣ ಸ್ಥೂಲಕಾಯ. ಮನೆಯಲ್ಲಿಯೇ ಬೆಚ್ಚಗೆ ಕೂಡುವುದು, ಹೆಚ್ಚು ಕುರುಕಲು ಆಹಾರ ತಿನ್ನುವುದು, ವ್ಯಾಯಾಮ ಇಲ್ಲದಿರುವುದು, ಸೂರ್ಯದರ್ಶನವಿಲ್ಲದ್ದರಿಂದ ಡಿ ಅನ್ನಾಂಗದ ಕೊರತೆ, ಹೀಗೆ ಈ ಚತುರ್ವಿಧ ಶತ್ರುಗಳನ್ನು ದೇಹದೊಳಗಾಮಂತ್ರಿಸಿದಾಗ, ಐದನೆಯ ಜವರಾಯ ಆಮಂತ್ರಣವಿಲ್ಲದೇ ಬಂದೆರಗುತ್ತಾನೆ.
ಮಧುಮೇಹ ರೋಗವೂ ಈ ಕಾಲದಲ್ಲಿ ಉಲ್ಬಣಿಸುತ್ತದೆ. ಕಾರಣ ಹೆಚ್ಚು ವ್ಯಾಯಾಮ ಇಲ್ಲದಿರುವುದು. ರಕ್ತಪರಿಚಲನ ಕ್ರಿಯೆಯಲ್ಲಿ ವ್ಯತ್ಯಯ ಉಂಟಾಗುವುದರಿಂದ ಕಾಲುಗಳ ರಕ್ಷಣೆಯ ಬಗ್ಗೆ ಹೆಚ್ಚು ಕಾಳಜಿ ಅವಶ್ಯ. ಡಯಟ್ ನಿಯಂತ್ರಣ ಮುಖ್ಯ. ಕಡಿಮೆ ಕ್ಯಾಲೊರಿಯ ಆಹಾರ ಸೇವಿಸಬೇಕು, ಯಥೇಚ್ಛ ನೀರು ಕುಡಿಯಬೇಕು. ಚಳಿ ಇದ್ದರೂ ಸರಿ ವ್ಯಾಯಾಮ ಮಾಡಲೇ ಬೇಕು. ಚಳಿಗಾಲದಲ್ಲಿ ಸಹಜವಾಗಿ ಬಾಯಾರಿಕೆ ಕಡಿಮೆ. ಬೆವರಂತೂ ಬರುವುದೇ ಇಲ್ಲ. ಹೀಗಾಗಿ ನೀರಿನ ಅಂಶ ದೇಹದಲ್ಲಿ ಕಡಿಮೆ ಆಗಿ ಕಿಡ್ನಿ ತೊಂದರೆ ತಂದೊಡ್ಡಬಹುದು.
ಚಳಿಗಾಲದ ಇನ್ನೊಂದು ಪ್ರಮುಖ ಕಾಯಿಲೆ 'ವಿಂಟರ್ ಡಿಪ್ರೆಷನ್' ಅಥವಾ ಚಳಿಯ ಒತ್ತಡದ ಕಾಯಿಲೆ. ಇದು ಹೆಣ್ಣು ಮಕ್ಕಳಲ್ಲಿ ಹೆಚ್ಚು. ಇದರ ಮುಖ್ಯ ಲಕ್ಷಣಗಳೆಂದರೆ ತೀವ್ರ ಬೆಳಕಿನ ಕಿರಿಕಿರಿ, ಮೂಡ್ ಇಲ್ಲದಿರುವುದು, ನಿಶ್ಯಕ್ತಿ, ಕಿರಿಕಿರಿ, ಸ್ಟ್ರೆಸ್, ಹೆಚ್ಚಿದ ಹಸಿವು, ಸಾಮಾಜಿಕ ಕೆಲಸಕಾರ್ಯಗಳಲ್ಲಿ ಉದಾಸೀನತೆ, ಹೆಚ್ಚಿದ ಹಗಲು ನಿದ್ದೆ, ಬೆಳಿಗ್ಗೆ ಬೇಗ ಏಳುವ ಮನಸ್ಸಿಲ್ಲದಿರುವುದು ಮುಂತಾದವು. ಇದು ಬೇರೆ ತರಹದ ಡಿಪ್ರೆಶನ್ಗಳಿಗಿಂತ ಭಿನ್ನ. ಋತು ಬದಲಾಗುತ್ತಿದ್ದಂತೆಯೇ ಹೆಚ್ಚಿನವರಲ್ಲಿ ಇದು ಕಡಿಮೆ ಆಗುತ್ತವೆ.
ದೇಹದೊಳಿತಿಗೆ ಎಲ್ಲ ಋತುಗಳೂ ಅವಶ್ಯಕ. ಆಯಾ ಋತುಮಾನಕ್ಕೆ ತಕ್ಕ ಆಹಾರ, ವೇಷಭೂಷಣ, ಜೀವನ ಕ್ರಮ ಅಳವಡಿಸಿಕೊಂಡರೆ, ಬರಬಹುದಾರ ರೋಗಗಳನ್ನು ನಿಯಂತ್ರಿಸಬಹುದು ಅಥವಾ ಇರುವ ರೋಗಗಳು ಉಲ್ಬಣವಾಗದಂತೆ ಜಾಗ್ರತೆ ವಹಿಸಬಹುದು. ಪ್ರತಿಯೊಬ್ಬರ ದೇಹವೂ ವಿಶಿಷ್ಟವಾದ ಹಾಗೂ ಸ್ವತಂತ್ರವಾದ ಸಂವಿಧಾನವನ್ನು ಹೊಂದಿದೆ. ಅವರಿಗಾದದ್ದು ನಿಮಗಾಗದಿರಬಹುದು. ಸನ್ನೆಯರಿತು ಜೀವನ ಸಾಗಿಸಬೇಕು. ಆಯಾಕಾಲದ ಮಜವನ್ನು ಅನುಭವಿಸಲೇಬೇಕು, ಆದರೆ ಸೂಕ್ತ ಮುಂಜಾಗ್ರತೆ ಹಾಗೂ ರಕ್ಷಣೆಯೊಂದಿಗೆ.
- ಎಚ್. ಜಿ. ಮಳಗಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.