ಆ ಆನೆಯೇನಾದರೂ ಸೊಂಡಿಲು ಬೀಸಿದ್ದರೆ?
'ಬೆಳಗಿನ ಜಾವ ನಾಲ್ಕೂವರೆಗೆ ನಿಮ್ಮ ಟೆಂಟ್ ಬಳಿ ಬಂದು ಕೂಗುತ್ತೇನೆ. ಕಾಫಿ ಕುಡಿದು ಐದು ಗಂಟೆಗೆ ನಿಮ್ಮನ್ನು ಕಾಡಿಗೆ ಕರೆದುಕೊಂಡು ಹೋಗುತ್ತೇನೆ' ಎಂದು ಥಂಡಾ ಗೇಮ್ ಸಾಂಕ್ಚುವರಿಯ ಸಹಾಯಕ ರಾತ್ರಿ ಮಲಗುವ ಮುನ್ನ ಹೇಳಿದ. ಅಲ್ಲಿನ ರಿಸೆಪ್ಷನ್ನಿಂದ ನನ್ನ ಟೆಂಟ್ಗೆ ನೂರು ಮೀಟರ್ ದೂರ. ಆದರೂ ಆ ರಾತ್ರಿ ಅವನ ಜತೆಯಿಲ್ಲದೇ ಟೆಂಟ್ಗೆ ಹೋಗುವಂತಿಲ್ಲ. ಸೋಲಾರು ಲಾಟೀನು ಹಿಡಿದು ಆಳೆತ್ತರ ಬೆಳೆದ ಹುಲ್ಲಿನ ಮಧ್ಯೆ, ಆ ಕಾಲುದಾರಿಯಲ್ಲಿ ನಡೆಯುತ್ತಾ ಟೆಂಟ್ ಸೇರಿಕೊಳ್ಳಬೇಕಿತ್ತು. ಹಾವು, ಹರಣೆ, ಕಾಡುಪ್ರಾಣಿಗಳ ಭಯ ತೂಗುಗತ್ತಿಯಂತೆ ನೇತಾಡುತ್ತಿದ್ದರೂ ಜತೆಯಲ್ಲೊಬ್ಬ ಸಹಾಯಕನಿದ್ದಾನಲ್ಲ ಎಂಬ ಯಮಧೈರ್ಯ ಬೇರೆ. `ಬೆಳಗ್ಗೆ ಬಂದು ಕೂಗುತ್ತೇನೆ. ಗಾಬರಿಯಾಗಬೇಡಿ. ಬೇಗನೆ ಎದ್ದು ಸಿದ್ಧವಾಗಿ' ಎಂದು ಹೇಳಿ ಆತ ಆ ಕತ್ತಲೆಯಲ್ಲಿ ಕಣ್ಮರೆಯಾದ.
ಭಯ, ಆತಂಕ, ಸಂದೇಹಗಳ ಮಧ್ಯೆ ಆ ರಾತ್ರಿ ಅದೆಷ್ಟು ಹೊತ್ತಿಗೆ ಶರೀರ ನಿದ್ದೆಗೆ ಶರಣಾಗಿತ್ತೋ ಗೊತ್ತಿಲ್ಲ. ಗಾರ್ಡರ್ ಬಂದು ಬರೋಬರಿ ನಾಲ್ಕುವರೆ ಗಂಟೆಗೆ ಟೆಂಟ್ ಬಾಗಿಲು ಬಡಿದ. ಆಗಲೇ ಮುಬ್ಬು ಬೆಳಗು ಕಣ್ಣು ಬಿಡಲಾರಂಭಿಸಿತ್ತು. ಚಳಿ ಬಿಗಿದಪ್ಪಿತ್ತು. ತಕ್ಷಣ ಎದ್ದವನೇ ಬೇಗ ಬೇಗ ಸಿದ್ಧನಾಗಿ ರಿಸೆಪ್ಷನ್ ಬಳಿಯಿರುವ ಡೈನಿಂಗ್ ಹಾಲ್ಗೆ ಬಂದು ಕಾಫಿ ಹೀರುವಷ್ಟರಲ್ಲಿ ಸಫಾರಿ ಜೀಪ್ ನಮಗಾಗಿ ಕಾಯುತ್ತಿತ್ತು. ಅದರ ಆಕಾರ ಜೀಪ್ ಥರ ಇದ್ದಿರಬಹುದು. ಭಾರ ಹೊರುವುದರಲ್ಲಿ ಲಾರಿಯೇ. ಚಾಲಕನೂ ಸೇರಿ ಹನ್ನೆರಡು ಜನ ಕುಳಿತುಕೊಳ್ಳಬಹುದಾದ ಆ ಜೀಪಿಗೆ ಚಾವಣಿ ಇರಲಿಲ್ಲ. ಅದು ಓಪನ್ ಜೀಪ್. ಅದರ ಎಡಭಾಗದ ಬಾನೆಟ್ ಮುಂದೆ ಸಫಾರಿ ಲೀಡರ್ಗಾಗಿ ವಿಶೇಷ ಆಸನವಿತ್ತು. ಇದ್ಯಾವ ಪಾಟಿ ಜೀಪ್ ಅಂದ್ರೆ ಅದಕ್ಕೆ ರಸ್ತೆಯೇ ಬೇಕಿರಲಿಲ್ಲ. ಮುಳ್ಳು ಕಂಟಿ, ಸಣ್ಣಪುಟ್ಟ ಗಿಡಮರಗಳನ್ನೆಲ್ಲ ಸಪಾಟ ಮಲಗಿಸಿ ಹಳ್ಳದಿನ್ನೆಗಳನ್ನು ಗುದುಕಿ, ನದಿ, ಕೊಳ್ಳಗಳನ್ನು ಹಾಯ್ದು, ಎಂಥ ಏರನ್ನಾದರೂ ಏದುಸಿರು ಬಿಡದೇ ಹತ್ತಿ, ಸಣ್ಣಪುಟ್ಟ ಜಖಂಗಳನ್ನು ಲೆಕ್ಕಿಸದೇ ಮುನ್ನುಗುವ ಬುಲ್ಡೋಜರ್ನ ಕಿರಿಯ ಸಹೋದರನಂಥ ಆ ಭಂಡ ಜೀಪ್ ಹಿಂದಿನ ಜನ್ಮದಲ್ಲಿ ಆನೆಯಾಗಿತ್ತೋ ಏನೋ?
ಆ ಬೆಳಗಿನ ಜಾವದಲ್ಲಿ ಸಕಲ ಸಿದ್ಧತೆ ಮಾಡಿಕೊಂಡು ನಾವು ಕಾಡಿನ ಕಡೆಗೆ ಹೊರಟರೆ, ಕ್ಷಣಕ್ಷಣಕ್ಕೂ ಕುತೂಹಲ, ಧಾವಂತ. ಬಾನೆಟ್ ಮೇಲಿನ ಸೀಟಿನಲ್ಲಿ ಕುಳಿತ ಸಫಾರಿ ಲೀಡರ್, ಪ್ರಧಾನಿ ಹಾಗೂ ಗಣ್ಯವ್ಯಕ್ತಿಗಳ ಬೆಂಗಾವಲಿಗಿರುವವರು ಸುತ್ತಲೂ ನೋಡುತ್ತಿರುತ್ತಾರಲ್ಲ, ಅದೇ ರೀತಿ ಕಾಡು ಪ್ರಾಣಿಗಳಿಗಾಗಿ ಗಿಡಗಂಟೆ, ಪೊದೆಗಳತ್ತ ಲಕ್ಷ್ಯ ಹಾಯಿಸುತ್ತಿದ್ದ. ನಾನಂತೂ ಬಂದೂಕಿನ ಟ್ರಿಗರ್ ಮೇಲೆ ಬೆರಳೊತ್ತಿಕೊಂಡಿರುವ ಸೈನಿಕರ ಹಾಗೆ, ನನ್ನ ಎಕೆ-47ನಂತೆ ಕಾಣುವ ಕ್ಯಾಮೆರಾ ಅದುಮು ಗುಂಡಿಯ ಮೇಲೆ ಬೆರಳನ್ನು ಇಟ್ಟುಕೊಂಡಿದ್ದೆ.
ಆ ಹದಿನಾಲ್ಕು ಸಾವಿರ ಎಕರೆ ಅರಣ್ಯದ ಮಣ್ಣು ಹಾದಿಯಲ್ಲಿ ನಮ್ಮ ಜೀಪ್ ಸಾಗುತ್ತಿದ್ದರೆ, ಅದರ ಸಪ್ಪಳದ ಹೊರತಾಗಿ ಮಾತು ಕತೆಯಿರಲಿಲ್ಲ. ನಮ್ಮ ಉದ್ದೇಶ, ಅಚ್ಚರಿಗಳನ್ನು ಜೋರಾಗಿ ವ್ಯಕ್ತಪಡಿಸುವಂತಿಲ್ಲ. ನಮ್ಮ ಚಾಲಕ ಹಾಗೂ ಸಫಾರಿ ಲೀಡರ್ ಸಹ ಮೆಲ್ಲಗೆ ಅಥವಾ ಒಳಬಾಯಿಯಲ್ಲಿ ಮಾತಾಡುತ್ತಿದ್ದರು. ನಮ್ಮ ಜೀಪಿಗೆ ಮೊದಲು ಅಡ್ಡ ಬಂದು `ರಾಸ್ತಾ ರೋಖೋ' ಸ್ವಾಗತ ನೀಡಿದ್ದು ಆಫ್ರಿಕನ್ ಆನೆಗಳ ಹಿಂಡು. ನೀಳವಾಗಿ ಬಾಗಿದ ಕೋರೆದಂತ, ಚಾಮರದಂತೆ ಹರಡಿದ ಅಗಲ ಕಿವಿಯ ಈ ಆನೆಗಳು ಸಿಕ್ಕಸಿಕ್ಕ ಮರದ ಕೊಂಬೆಗಳನ್ನು ಮುರಿದು ದಂಟುಗಳನ್ನು ಬಾಯಿಗೆ ತುರುಕಿಕೊಳ್ಳುತ್ತಿದ್ದರೆ, ನಮ್ಮ ವಾಹನ ಅವುಗಳಿಂದ ಏಳೆಂಟು ಮೀಟರ್ನಷ್ಟು ಮುಂದೆ ಹೋಗಿ ನಿಂತಿತು. ಎರಡು ಮೀಟರ್ ಮುಂದೆ ಬಂದು ಬ್ಯಾಟು ಬೀಸಿದಂತೆ, ಅದೇನಾದರೂ ಕ್ರಿಸ್ ಗೇಯ್ಲ್ ಮಾದರಿಯಲ್ಲಿ ತನ್ನ ಸೊಂಡಿಲನ್ನು ಬೀಸಿದ್ದರೆ, ಜೀಪಿನಲ್ಲಿ ಕುಳಿತ ನಾವೆಲ್ಲಾ ಟಿವಿ ಚಾನೆಲ್ಗಳಿಗೆ ಬ್ರೇಕಿಂಗ್ ನ್ಯೂಸ್ ಆಗಿರುತ್ತಿದ್ದೆವು. ನಮ್ಮ ಜೀಪು ಮೆಲ್ಲಮೆಲ್ಲ ಅವುಗಳ ಹಿಂದೆ, ಪಕ್ಕಕ್ಕೆ, ಮುಂದ ಮುಂದಕ್ಕೆ ಉರುಳುತ್ತಿದ್ದರೆ, ಭಾರತದಿಂದ ತನ್ನನ್ನು ನೋಡಲು ಹತ್ತು ಪತ್ರಕರ್ತರು ಬಂದಿದ್ದಾರೆ ಎಂದು ಕನಿಷ್ಠ ಗೌರವವನ್ನೂ ಕೊಡದೇ, ಪ್ರಧಾನಿ ಡಾ. ಮನಮೋಹನ ಸಿಂಗ್ ಪತ್ರಕರ್ತರನ್ನು ಕಂಡರೆ ಸ್ವಾಟೆ ತಿರುವಿಕೊಳ್ಳುವಂತೆ ತಮ್ಮ ಪಾಡಿಗೆ ತಾವಿದ್ದವು.
ಒಂದು ಸಲವಂತೂ, ನಮ್ಮ ಜೀಪಿನಿಂದ ಸುಮಾರು ಇಪ್ಪತ್ತು ಮೀಟರ್ ದೂರದಲ್ಲಿದ್ದ ಮತ್ತೊಂದು ಜೀಪಿನ ಹತ್ತಿರ ಹೆಜ್ಜೆ ಹಾಕಿದ ಆನೆಯೊಂದು ಬಾನೆಟ್ಗೆ ಸವರಿಕೊಂಡು ಮೂರ್ನಾಲ್ಕು ನಿಮಿಷ ಸುಮ್ಮನೆ ನಿಂತಿದ್ದನ್ನು ನೋಡಿ ಕಂಗಾಲಾಗಿ ನೋಡುತ್ತಿದ್ದೆವು. ಇನ್ನು ಆ ಜೀಪಿನಲ್ಲಿ ಕುಳಿತವರ ಪಾಡು ಹೇಗಾಗಿರಬೇಡ? ಆನಂತರ ತನ್ನ ಪಾಡಿಗೆ ಹೆಜ್ಜೆ ಹಾಕುತ್ತಾ ಪೊದೆಯೊಳಗೆ ಹೊರಟು ಹೋಯಿತು. ಆ ಎರಡು ನಿಮಿಷ ಪ್ರಾಯಶಃ ಅವರ ಜೀವನದ ಎರಡು ವರ್ಷಗಳಾಗಿದ್ದಿರಬಹು. ಇಲ್ಲವೇ ಅವರ ಪಾಲಿಗೆ ಪುನರ್ಜನ್ಮವೂ ಆಗಿರಲಿಕ್ಕೆ ಸಾಕು.
ನಮ್ಮ ಜೀಪಿನಲ್ಲಿದ್ದವರು ಸಫಾರಿ ಲೀಡರ್ನನ್ನು ಕೇಳಿದರು `ಆನೆಗಳಾಗಲಿ, ಸಿಂಹ, ಚಿರತೆಗಳಾಗಲಿ ಮನುಷ್ಯರ ಮೇಲೆ ಅಟ್ಯಾಕ್ ಮಾಡಿದ್ದುಂಟಾ?'
ಅದಕ್ಕೆ ಆತ ಹೇಳಿದ `ಇಲ್ಲಿ ತನಕ ಯಾರ ಮೇಲೂ ಅಟ್ಯಾಕ್ ಮಾಡಿಲ್ಲ. ಹಾಗೆಂದ ಮಾತ್ರಕ್ಕೆ ಇನ್ನು ಮುಂದೆ ಅಟ್ಯಾಕ್ ಮಾಡುವುದೇ ಇಲ್ಲ ಎಂದರ್ಥವಲ್ಲ. ಅಷ್ಟಕ್ಕೂ ಅವು ಮೂಕಪ್ರಾಣಿಗಳು ತಾನೆ? ಹಿಂದೆಂದೂ ಅಹಿತಕರ ಘಟನೆ ನಡೆದಿಲ್ಲ ಎಂಬ ಧೈರ್ಯ ಹಾಗೂ ವಿಶ್ವಾಸವೇ ಸಫಾರಿಯ ಭದ್ರಬುನಾದಿ. ಈ ವಿಶ್ವಾಸವನ್ನು ಉಳಿಸಿ ಕೊಳ್ಳಬೇಕಾದ ಹೊಣೆಗಾರಿಕೆ ಪ್ರಾಣಿಗಳಿಗಿಂತ ಮನುಷ್ಯರ ಮೇಲೆ ಹೆಚ್ಚಾಗಿದೆ. ಕಾರಣ ನಾವು ಅವುಗಳ ಪ್ರದೇಶ, ವಠಾರದೊಳಗೆ ಪ್ರವೇಶಿಸಿ ಅವುಗಳನ್ನು ವೀಕ್ಷಿಸುತ್ತಿದ್ದೇವೆ. ಅವುಗಳಿಗೆ ತೊಂದರೆಯಾಗದಂತೆ, ಕಿರಿಕಿರಿಯಾಗದಂತೆ ವರ್ತಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.' ಆತನ ಮಾತು ನೂರಕ್ಕೆ ನೂರು ಒಪ್ಪುವಂಥದ್ದಾಗಿತ್ತು. ನಿಮ್ಮ ಮೇಲೆ ನಾವೆಂದೂ ಅಟ್ಯಾಕ್ ಮಾಡುವುದಿಲ್ಲ ಎಂಬ ನಡವಳಿಕೆಯನ್ನು ವನ್ಯಮೃಗ ಗಳಿಂದ ನಿರೀಕ್ಷಿಸುವುದಾದರೂ ಹೇಗೆ? ಅವು ಸಂಭಾವಿತರಂತೆ ವರ್ತಿಸಬೇಕೆಂದರೆ ಅವುಗಳಿಗಿಂತ ಹೆಚ್ಚು ಸಂಭಾವಿತರಾಗಿ ನಾವು ವರ್ತಿಸಬೇಕಾಗುತ್ತದೆ. ಅವುಗಳ ಠಿಡಿತಚಿಛಿಥಿಗೆ ತುಸು ಭಂಗ ತಂದರೆ, ಪ್ರತಿರೋಧಿಸದೇ ಸುಮ್ಮನೆ ಹೋಗಲು ಅವೇನು ಕನ್ನಡಿಗರಾ? ಆದರೆ, ಈ ವಿಷಯದಲ್ಲಿ ಅವೂ ಸಹ ಕನ್ನಡಿಗರ ಹಾಗೆ ಸಂಯಮ ಮೆರೆಯುತ್ತಿರುವುದು ಅಚ್ಚರಿಯೇ.
ಬಾನೆಟ್ ಮೇಲಿನ ಸೀಟಿನಲ್ಲಿ ಕುಳಿತ ಸಫಾರಿ ಲೀಡರ್ ಮೂಗಾಳಿ ಮೂಲಕ ಪ್ರಾಣಿಗಳ ಇರುವಿಕೆಯನ್ನು ಕಂಡುಹಿಡಿಯುವುದರಲ್ಲಿ ನಿಷ್ಣಾತ. `ಸಿಂಹಗಳು ಇಲ್ಲೆಲ್ಲೋ ಹತ್ತಿರದಲ್ಲಿವೆ' ಎಂದವನೇ ತನ್ನ ಸೀಟಿನಿಂದ ಜಿಗಿದು ನಮ್ಮೊಂದಿಗೆ ಹಿಂದೆ ಬಂದು ಕುಳಿತ. ನಾಲ್ಕು ಮಾರು ಕ್ರಮಿಸಿರಬಹುದು, ಹೌದು, ಮೂರ್ನಾಲ್ಕು ಸಿಂಹಗಳು ಮಲಗಿ ನಿದ್ರಿಸುತ್ತಿದ್ದವು. ನಮ್ಮ ವಾಹನದ ಸದ್ದಿಗೋ, ಕ್ಯಾಮೆರಾ ಷಟರ್ಗಳು ಒಂದೇ ಸಮನೆ ಚಟಚಟಚಟ ಎಂದು ಬಡಿದುಕೊಂಡ ಸದ್ದಿಗೋ `ರಾಯ'ರು ಎದ್ದರು. ಬಂದವರು ಇವರೇನಾ ಎಂದು ಅನಿಸಿರಬೇಕು, ಪುನಃ ಮಲಗಿಬಿಟ್ಟರು!
ಮುಕ್ತ ಅರಣ್ಯದಲ್ಲಿ ಸಿಂಹಗಳನ್ನು ಹೆಚ್ಚೆಂದರೆ ಆರೇಳು ಮೀಟರ್ಗಳ ಸನಿಹದಲ್ಲಿ `ಭೇಟಿ'ಯಾದದ್ದು, ಹತ್ತು ನಿಮಿಷ ಅವುಗಳ ಜತೆ `ಕಾಡುಹರಟೆ' ಹೊಡೆದಿದ್ದು ಮರೆಯಲಾಗದ ಅನುಭವ. ಅವುಗಳ ಒಂದು ಜಿಗಿತದಷ್ಟು ದೂರದಲ್ಲಿದ್ದ ನಾವು ಜೀವವನ್ನು ಮುಷ್ಟಿಯೊಳಗೆ ಹಿಡಿದು ಕುಳಿತಿದ್ದೆವು. ಉಗ್ರಗಾಮಿ ಕಸಬ್ ಕೈಯಲ್ಲಿನ ಗನ್ನಂತೆ ನನ್ನ ಕೈಯಲ್ಲಿದ್ದ ಕ್ಯಾಮೆರಾ ಚಟಪಟಗುಟ್ಟುತ್ತಿತ್ತು. ಐದಾರು ತಾಸುಗಳ ಹಿಂದೆ ಬೇಟೆಯಾಡಿದ ಕುರುಹಿನಂತೆ, ಒಂದು ಸಿಂಹದ ಬೆನ್ನ ಮೇಲೆ ರಕ್ತದ ಕಲೆಗಳಿದ್ದವು. ಪದೇಪದೆ ನಿರ್ಭಾವುಕವಾಗಿ ನಮ್ಮನ್ನು ದಿಟ್ಟಿಸುತ್ತಿದ್ದ ಆ ಸಿಂಹಗಳು ಫೋಟೊಕ್ಕೆ ಪೋಸು ಕೊಡುತ್ತಿರಬಹುದಾ ಎಂದು ಅಂದುಕೊಳ್ಳುವಷ್ಟು ಭಂಗಿಗಳನ್ನು ಬದಲಿಸುತ್ತಿದ್ದವು.
ಪ್ರತಿ ನೂರು ಮೀಟರ್ಗೆ ಬೇರೆ ಬೇರೆ ಪ್ರಾಣಿಗಳು ನಮ್ಮ ಮುಂದೆ ಬಿಂಕ ಬೀರಿ ಹೋಗುತ್ತಿದ್ದವು. ಕೆಲವು ಸಲ ನಾಲ್ಕೈದು ಕಿ.ಮೀ. ಕ್ರಮಿಸಿ ದರೂ ಯಾವ ಪ್ರಾಣಿಗಳೂ ಕಣ್ಣಿಗೆ ಬೀಳುತ್ತಿರಲಿಲ್ಲ. ಜೀಬ್ರಾ, ಜಿರಾಫೆ, ಘೇಂಡಾಮೃಗ, ಜಿಂಕೆ, ಕೇಪ್ ಬಫೆಲೋ, ಮುಳ್ಳುಹಂದಿ, ಕೃಷ್ಣಮೃಗ, ಹೇಸರಗತ್ತೆ, ನರಿ, ತೋಳಗಳು ಆ ಕಾಡಿನಲ್ಲಿ ದಂಡಿಯಾಗಿದ್ದವು.
ನಮ್ಮ ಹಾದಿಯಲ್ಲಿ ಮಲಗಿದ ಎರಡು ಚಿರತೆಗಳು ಹತ್ತು- ಹದಿನೈದು ನಿಮಿಷ ನಮ್ಮೊಂದಿಗೆ ದೃಷ್ಟಿಯುದ್ಧಕ್ಕಿಳಿದ ಕ್ಷಣಗಳು ಈಗಲೂ ಹಸಿಹಸಿ ಹಸಿರು. ನಮಗೂ ಅವುಗಳಿಗೂ ಒಂದೇ ಜಿಗಿತದ ಅಂತರ. ಮೃತ್ಯುವಿನ ದವಡೆ ನೋಡಿ ಬಂದ ಅನುಭವ. ಒಂದು ಸಂದರ್ಭದಲ್ಲಂತೂ ಚಿರತೆ ಯೊಂದು ನಮ್ಮ ಜೀಪಿನ ಒಂದು ಪಕ್ಕವನ್ನು ಉಜ್ಜಿಕೊಂಡು ಹೋಗುವ ಸನಿಹದಲ್ಲಿ ನಿಧಾನವಾಗಿ ಹೋದರೆ ಮೃತ್ಯವಿನ ಮನೆಯ ಮೆಟ್ಟಿಲು ಗಳನ್ನು ಎಣಿಸುವುದೊಂದು ಬಾಕಿ! ಯಾವುದೇ ಅಹಿತಕರ ಘಟನೆ ಆಗಲಿಲ್ಲವೆನ್ನುವುದನ್ನು ಬಿಡಿ, ಅಂಥ ಘಟನೆಯಾಗುವುದಕ್ಕೆ ಸಾಕ್ಷಿ ಹೇಳಲು ಸಹ ಇಲ್ಲವಾಗುವಂಥ ಅವಕಾಶವನ್ನಂತೂ ಕಲ್ಪಿಸಿಕೊಟ್ಟಿದ್ದೆವು.
ದಕ್ಷಿಣ ಆಫ್ರಿಕಾದ ಗೇಮ್ ರಿಸರ್ವರ್ ಗಳಲ್ಲಿ ಬೆಳಗ್ಗೆ ಐದು ಗಂಟೆಯಿಂದ ನಾಲ್ಕು ತಾಸು ಕಾಡಿನಲ್ಲಿ ನಲವತ್ತು, ಐವತ್ತು ಕಿ.ಮೀ. ಸುತ್ತಿಸಿ ಪುನಃ ಟೆಂಟ್ಗೆ ಕರೆದುಕೊಂಡು ಬರುತ್ತಾರೆ. ಈ ಮಧ್ಯೆ ಕಾಡಿನಲ್ಲಿ ಒಂದೆಡೆ ಜೀಪು ನಿಲ್ಲಿಸಿ ಕಾಫಿ, ಟೀ, ಬಿಸ್ಕತ್ ನೀಡ ಲಾಗುತ್ತದೆ. ಜೀಪಿನಿಂದ ಇಳಿದು ಆ ಕಾಡಿನಲ್ಲಿ ಕಾಫಿ ಹೀರುವುದು ಸಹ ಮುದ ನೀಡುವ ಅನುಭವ. (ಸಾಯಂಕಾಲ ಸಫಾರಿಯಲ್ಲಿ ವೈನು, ಬಿಯರ್ ನೀಡಲಾಗುತ್ತದೆ.) ಬೆಳಗ್ಗೆ ಹನ್ನೊಂದರಿಂದ ಸಾಯಂಕಾಲ ನಾಲ್ಕೂವರೆ ತನಕ ವಿಶ್ರಾಂತಿ. ಆನಂತರ ಐದು ಗಂಟೆಗೆ ಪುನಃ ಸಫಾರಿ, ಪ್ರಾಣಿಗಳ ದರ್ಶನ. ರಾತ್ರಿ ಏಳುವರೆಗೆ ವಾಪಸ್. ಮರುದಿನ ಬೆಳಗ್ಗೆ ಇಡೀ ಕಾರ್ಯಕ್ರಮದ ಪುನರಾವರ್ತನೆ. ಟೆಂಟ್ ಸುತ್ತಮುತ್ತ ಹಲವು ಮರಗಳಿರುವುದರಿಂದ ಪಕ್ಷಿ ವೀಕ್ಷಣೆಗೆ ಹೇಳಿ ಮಾಡಿಸಿದ ತಾಣ. ನೂರಾರು ಹಕ್ಕಿಗಳ ಕಲರವಕ್ಕೆ ಕಿವಿಯಾಗುವುದೇ ಒಂದು ದಿವ್ಯ ಅನುಭೂತಿ. ಮೂರು ದಿನಗಳ ವಾಸ್ತವ್ಯದ ನಡುವೆ ಒಂದು ರಾತ್ರಿ ಕಾಡಿನಲ್ಲಿ ಊಟ, ಝುಲು ನೃತ್ಯ ವೀಕ್ಷಣೆ, ಕ್ಯಾಂಪ್ ಫೈರ್ ಒಂದು ವಿಶೇಷ ಆಕರ್ಷಣೆ. ವಿಶ್ವದ ಲೀಡಿಂಗ್ ಹೋಟೆಲ್ಗಳ ಸದಸ್ಯತ್ವವನ್ನು ಪಡೆದಿರುವ ಥಂಡಾ ಪ್ರೈವೇಟ್ ಗೇಮ್ ರಿಸರ್ವರ್ (www.thanda.com) ನಲ್ಲಿ ರಜಾದಿನವನ್ನು ಆಲಸ್ಯದಿಂದ ಕಳೆಯುತ್ತಲೇ ಕ್ರಿಯಾಶೀಲರಾಗಿಯೂ ಇರಬಹುದಾದ ಅಪರೂಪದ ತಾಣ.
ದಕ್ಷಿಣ ಆಫ್ರಿಕಾದಲ್ಲಿ ಇಂಥ ನೂರಾರು ಗೇಮ್ ರಿಸರ್ವರ್ ಗಳಿವೆ. ಸಮಸ್ಯೆಯೇನೆಂದರೆ ಒಂದಕ್ಕಿಂತ ಮತ್ತೊಂದು ಚೆನ್ನಾಗಿದೆ .
- ವಿಶ್ವೇಶ್ವರ ಭಟ್
(ಪ್ರದಕ್ಷಿಣೆ ಮುಂದುವರಿಯುವುದು)