ಈ ಅತಿಥಿಯನ್ನು ಕಳಿಸುವುದು ಹೇಗೆ?
ಈರುಳ್ಳಿಗೂ, ಎದೆ ಉರಿಗೂ ಇರುವ ಸಂಬಂಧ ಖಚಿತಪಡಿಸಿಕೊಳ್ಳಲು ಮುಂದಾದ ಒಕ್ಲಾಹೊಮಾ ಆಸ್ಪತ್ರೆ ವೈದ್ಯರಿಗೆ ಇನ್ನೊಂದು ಅಚ್ಚರಿಯೂ ಕಾದಿತ್ತು. ಹಸಿ ಈರುಳ್ಳಿಯನ್ನು ಸೇವಿಸಿದ ಎರಡು ಗಂಟೆವರೆಗೆ ಸ್ಥಿರವಾಗಿದ್ದ ಆಮ್ಲ ಹಿನ್ಸರಿತ ಪ್ರಕ್ರಿಯೆ ಆ ಬಳಿಕ ತೀವ್ರ ಸ್ವರೂಪ ಪಡೆದಿತ್ತು. 'ಈರುಳ್ಳಿ ಎದೆ ಉರಿ ಉಂಟು ಮಾಡುವ ಪರಾಕ್ರಮಿ ಹೌದು, ಜತೆಗೆ ಈರುಳ್ಳಿಯಿಂದ ಉಂಟಾಗುವ ಎದೆನೋವು ದೀರ್ಘಕಾಲದವರೆಗೆ ಇರುತ್ತದೆ' ಎನ್ನುವ ನಿರ್ಧಾರಕ್ಕೆ ಬರದೇ ಇರಲು ವೈದ್ಯರಿಗೆ ಸಾಧ್ಯವಾಗಲಿಲ್ಲ. ಒಕ್ಲಾಹೊಮಾ ಆಸ್ಪತ್ರೆ ಸೇರಿದಂತೆ ಬಹುತೇಕ ಕಡೆ ಪ್ರಯೋಗಕ್ಕೆ ಬಳಸಿದ್ದು ಈರುಳ್ಳಿಯಾಗಿತ್ತು. ಬೇಯಿಸಿದ ಈರುಳ್ಳಿ ಬಳಸಿದರೆ...? ಬೇಯಿಸಿದ ಈರುಳ್ಳಿ ಸೇವಿಸಿದಾಗ ಎದೆ ಉರಿ ತೀವ್ರಗೊಂಡ ಬಗ್ಗೆ ಯಾವುದೇ ದೂರು ದಾಖಲಾದ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಆ ಬಗ್ಗೆ ತಜ್ಞರು ಕೂಡ ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ. ಆದರೆ, 'ಈರುಳ್ಳಿಯಲ್ಲಿ ಸ್ಪಿಂಕ್ಟರ್ ಸಡಿಲವಾಗುವಂತೆ ಮಾಡುವ ಗುಣ ಇದ್ದೇ ಇದೆ. ಆದ್ದರಿಂದ ಈಗಾಗಲೇ ಎದೆ ಉರಿಯಿಂದ ಬಳಲುತ್ತಿರುವವಲ್ಲಿ ಬೇಯಿಸಿದ ಈರುಳ್ಳಿಯೂ ಉರಿಯನ್ನು ತೀವ್ರಗೊಳಿಸಬಲ್ಲದು. ಇದಕ್ಕಿಂತ ಮುಖ್ಯವಾಗಿ ಜಠರಕ್ಕೆ ನೇರವಾಗಿ ಕಿರಿಕಿರಿ ಉಂಟುಮಾಡುವ ಗುಣ ಈರುಳ್ಳಿಯಲ್ಲಿದೆ' ಎಂದು ಎಚ್ಚರಿಸುತ್ತಾರೆ ತಜ್ಞರು.
ಬಹಳ ತೀಕ್ಷ್ಣವಾದ ಮಸಾಲೆ ಪದಾರ್ಥಗಳು ಕೂಡ ಎದೆ ಉರಿ ಹೆಚ್ಚಿಸುತ್ತವೆ. ನಿಮ್ಮಲ್ಲಿ ಈ ತೊಂದರೆ ಇರಲಿ, ಇಲ್ಲದಿರಲಿ. ಅತಿಯಾದ ಮಸಾಲೆ ಪದಾರ್ಥಗಳನ್ನು ಸೇವಿಸುವ ಅಭ್ಯಾಸ ಬೇಡ. ಒಮ್ಮೊಮ್ಮೆ ಸ್ವಲ್ಪ ಪ್ರಮಾಣದಲ್ಲಿ ಅತಿ ಮಸಾಲೆ ಪದಾರ್ಥ ತೆಗೆದುಕೊಂಡರೆ ಏನೂ ತೊಂದರೆ ಆಗದಿರಬಹುದು. 'ಏನೂ ಆಗಿಲ್ಲ' ಎಂದುಕೊಂಡು ಜಾಸ್ತಿ ತಿನ್ನುವುದೂ ಕೂಡದು. ಏಕೆಂದರೆ ಜಠರ ಒಮ್ಮೆ ಹಾನಿಗೀಡಾಯಿತು ಎಂದರೆ, ಅಪರೂಪಕ್ಕೆ ನಡೆಯುತ್ತಿದ್ದ ಆಮ್ಲ ಹಿನ್ಸರಿತದ ಕ್ರಿಯೆ ಪದೇಪದೇ ನಡೆಯಲು ಶುರುವಾಯಿತು ಅಂತಾ ದರೆ ಅದನ್ನು ಸರಿಪಡಿಸುವುದು ಬಹಳ ಕಷ್ಟ. ಅದಕ್ಕಾಗಿಯೇ ಇದನ್ನು ಮಧುಮೇಹ, ಅಧಿಕ ರಕ್ತದೊತ್ತಡದಂಥ ಕಾಯಿಲೆಗಳೊಂದಿಗೆ ಹೋಲಿಸುವುದು! ಡಯಟ್ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ಅವನ್ನು ಹೇಗೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದೋ, ಎದೆ ಉರಿಯನ್ನು ಕೂಡ ಅದೇರೀತಿ ನಿಯಂತ್ರಿಸಲು ಸಾಧ್ಯ. ಚಾಕೊಲೆಟ್, ಪೆಪ್ಪರ್ಮಿಂಟ್ಗಳಿಂದ ದೂರವಿದ್ದರೆ; ಹಸಿ ಈರುಳ್ಳಿಯನ್ನು ಜಾಸ್ತಿ ಸೇವಿಸದಿದ್ದರೆ; ಮಸಾಲೆ ಪದಾರ್ಥಗಳಿಂದ ದೂರವಿದ್ದರೆ; ಹುಳಿ ಪದಾರ್ಥಗಳಿಂದ ಸಮಸ್ಯೆ ಆಗುತ್ತಿದೆ ಎನ್ನುವುದು ಅರಿವಿಗೆ ಬರುತ್ತಿದ್ದಂತೆ ಅವುಗಳಿಂದ ಅಂತರ ಕಾಪಾಡಿಕೊಂಡರೆ; ಜಾಸ್ತಿ ತಿನ್ನುವುದು, ಅವಸರದಲ್ಲಿ ತಿನ್ನುವುದು, ತಿಂದ ತಕ್ಷಣ ಮಲಗುವುದು, ಅವೇಳೆಯಲ್ಲಿ ತಿನ್ನುವುದು, ಊಟೋಪಚಾರದ ವಿಚಾರದಲ್ಲಿ ಕಟ್ಟುನಿಟ್ಟಿನ ಸಮಯ ಪಾಲನೆ ಮಾಡುವುದು ಇವುಗಳಿಂದ ಎದೆ ಉರಿಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಖಂಡಿತಾ ಸಾಧ್ಯವಿದೆ.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com