ಧೀರ ಸನ್ಯಾಸಿಯ ವೀರ ಗೀತೆ
ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿ ಸಂಸ್ಥೆಯೊಂದನ್ನು ಕಟ್ಟಬೇಕೆಂಬ ಮಹದಾಸೆಯನ್ನು ಹೊಂದಿದ್ದರು. ಆದರೆ ಎಲ್ಲರೂ ಭಾವಿಸಿದಂತೆ ಕಲ್ಲು-ಇಟ್ಟಿಗೆಗಳಿಂದ ಕಟ್ಟಿದ ಕಟ್ಟಡವಲ್ಲ, ಬದಲಾಗಿ ಉದಾತ್ತಚರಿತರಾದ, ಶುದ್ಧಹೃದಯದ, ಉತ್ಸಾಹಶೀಲರಾದ, ಕಾರ್ಯದಕ್ಷರಾದ ವ್ಯಕ್ತಿಗಳ ಸಮುದಾಯ. ಇಂತಹ ಸಾಧನಾಶೀಲ ಮಾನವಸಂಸ್ಥೆಯನ್ನು ಕಟ್ಟುವ ಉದ್ದೇಶದಿಂದಲೇ ಸ್ವಾಮೀಜಿ ಸಾರ್ವಜನಿಕ ಭಾಷಣಗಳನ್ನು ಕಡಿಮೆ ಮಾಡಿ ಆಧ್ಯಾತ್ಮಿಕ ತರಬೇತಿ ತರಗತಿಗಳನ್ನು ಆರಂಭಿಸಿದರು.
ನ್ಯೂಯಾರ್ಕ್ನ 'ವೇದಾಂತ ಸೊಸೈಟಿ' ತರಗತಿಯ ಮೂಲಕ ಸ್ವಾಮೀಜಿ ಅನೇಕರಿಗೆ ಸನ್ಯಾಸ ದೀಕ್ಷೆಯನ್ನೂ, ಇನ್ನು ಕೆಲವರಿಗೆ ಬ್ರಹ್ಮಚರ್ಯ ದೀಕ್ಷೆಯನ್ನು ನೀಡಿದರು. ಇದನ್ನು ಅಮೆರಿಕದ ಶ್ರೀಮಂತ ವ್ಯಕ್ತಿಯೊಬ್ಬ ಟೀಕಿಸಿ ಸ್ವಾಮೀಜಿಗೆ ಪತ್ರ ಬರೆದ. ಆತ ಸನ್ಯಾಸತ್ವವನ್ನೇ ಅಲ್ಲಗಳೆದಿದ್ದ. ಈ ವಿಚಾರವನ್ನು ಗಂಭೀರವಾಗಿ ಸ್ವೀಕರಿಸಿದ ಸ್ವಾಮೀಜಿ, ತಮ್ಮ ಶಿಷ್ಯರಿಂದ ಏಕಾಂತ ಪಡೆದು ತ್ಯಾಗವೈರಾಗ್ಯಗಳ ಪ್ರಖರತೆಯನ್ನು ಪ್ರಕಟಿಸುವ ಒಂದು ಸುಂದರ ಕವನವನ್ನು ರಚಿಸಿದರು. ಸಾವಿರಾರು ಯೋಧರನ್ನು ಗೆದ್ದವನಿಗಿಂತ ತನ್ನ ಇಂದ್ರಿಯಗಳನ್ನು ಗೆದ್ದವನೇ ನಿಜವಾದ ವೀರ! ಪರರಾಜ್ಯಕ್ಕಿಂತ ಆತ್ಮರಾಜ್ಯದ ಮೇಲೆ ವಿಜಯ ಸಾಧಿಸಿದವನೇ ನಿಜವಾದ ಧೀರ! ಎಂದು ವರ್ಣಿಸುವ ಈ ಗೀತೆಯನ್ನು ಪತ್ರಿಸಿದ್ದ ಆ ವ್ಯಕ್ತಿಗೆ ಕಳುಹಿಸಿದರು. ಆತ್ಮಸಾಕ್ಷಾತ್ಕಾರದ ವೈಭವದಿಂದ ವಿರಾಜಿಸುವ ವೀರಸನ್ಯಾಸಿಯೊಬ್ಬನ ಧೀರಗಂಭೀರ ವ್ಯಕ್ತಿತ್ವವನ್ನು ಚಿತ್ರಿಸುವ ಈ ಕವನವೇ 'ಸಾಂಗ್ ಆಫ್ ದ ಸನ್ಯಾಸಿನ್' ಇದನ್ನು ರಾಷ್ಟ್ರಕವಿ ಕುವೆಂಪು ಅವರು 'ಸನ್ಯಾಸಿಗೀತೆ' ಎಂದು ಕನ್ನಡಿಸಿದ್ದಾರೆ. ಈ ಗೀತೆಯು ಒಟ್ಟು ಒಂಬತ್ತು ನುಡಿಗಳನ್ನು ಹೊಂದಿದೆ.
- ಆನಂದ ಎಸ್.ಎನ್.
anandsn193@gmail.com