ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮೋದಿ ದಿನಗಳು

25 ವರ್ಷಗಳ ಹಿಂದೆ... ಪಂಜಾಬ್ ರಾಜಧಾನಿ ಚಂಡಿಗಢದಲ್ಲಿ ಕಾರ್ಪೊರೇಶನ್ ಚುನಾವಣೆ..

Vishwanath S
Updated On : 25 Nov 2013, 1:49 am

25 ವರ್ಷಗಳ ಹಿಂದೆ...
ಪಂಜಾಬ್ ರಾಜಧಾನಿ ಚಂಡಿಗಢದಲ್ಲಿ ಕಾರ್ಪೊರೇಶನ್ ಚುನಾವಣೆ. ಬಿಜೆಪಿ ಮುಖಂಡ ದೇಶ್‌ರಾಜ್ ಎಂಬವರಿಗೆ ಟಿಕೆಟ್ ಸಿಗಲಿಲ್ಲ. ಬಂಡುಕೋರನಾಗಿ ಸ್ಪರ್ಧಿಸಿದರು. ಹಣದ ಬಲದಿಂದ ದಿನೇ ದಿನೇ ಬೆಂಬಲ ಹೆಚ್ಚಿಸಿಕೊಂಡರು. ಅಧಿಕೃತ ಅಭ್ಯರ್ಥಿ ಸೋಲು ಖಚಿತವಾಗಿತ್ತು.
ಸಂಘದ ವತಿಯಿಂದ ಚುನಾವಣೆ ಉಸ್ತುವಾರಿ ವಹಿಸಿದ್ದ ಚಾಣಾಕ್ಷಮತಿಯೊಬ್ಬರು ಚುನಾವಣೆ ಹಿಂದಿನ ರಾತ್ರಿ ಕಾರ್ಯಕರ್ತರನ್ನೆಲ್ಲ ಕರೆದುಕೊಂಡು ಆ ವಾರ್ಡ್‌ಗೆ ಹೋದರು. ತಂದಿದ್ದ ಪೋಸ್ಟರ್‌ಗಳನ್ನು ರಾತೋರಾತ್ರಿ ಎಲ್ಲೆಡೆ ಅಂಟಿಸಿಬಿಟ್ಟರು. ಬಿಜೆಪಿ ಅಧಿಕೃತ ಅಭ್ಯರ್ಥಿ ಗೆದ್ದು ಬಿಟ್ಟಿದ್ದ. ಬಂಡಾಯ ಅಭ್ಯರ್ಥಿ ಸೋತಿದ್ದ! ಪೋಸ್ಟರ್‌ನಲ್ಲಿ 'ದೇಶರಾಜ್ ಬಿಜೆಪಿ ಸೇರಿದ್ದಾರೆ' ಎಂದು ಬರೆಯಲಾಗಿತ್ತು. ಹೀಗಾಗಿ ಎಲ್ಲರೂ ಬಿಜೆಪಿಗೆ ಮತ ಹಾಕಿದ್ದರು. ಗೆದ್ದೇ ಬಿಟ್ಟ ಎಂದಿದ್ದ ಅಭ್ಯರ್ಥಿ ಸೋಲುಂಡಿದ್ದ.
25 ವರ್ಷ ಹಿಂದಿನ ಆ ಚಾಣಾಕ್ಷಮತಿ ಬೇರಾರು ಅಲ್ಲ, ಈಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ!
ಮಂಗಳೂರಿನ ಮನೆಯಲ್ಲಿ ಪಾರ್ಶ್ವವಾಯು ಪೀಡಿತರಾಗಿ ಕುರ್ಚಿಗೆ ಅಂಟಿಕೊಂಡಂತೆ ಕುಳಿತಿರುವ ಬಾಬಾ ವಿಶ್ವನಾಥ್, ಮೋದಿ ಕುರಿತು ನೆನಪು ಮೊಗೆಯುವಾಗ ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ಬಾಬಾ ವಿಶ್ವನಾಥ್ ಮಂಗಳೂರಿನವರು. ಪಂಜಾಬ್‌ಗೆ 1968ರಲ್ಲಿ ಉದ್ಯೋಗಕ್ಕೆ ತೆರಳಿದವರು. ಭಾರತ ಪಾಕ್ ಯುದ್ಧ ವೇಳೆ ಸೈನಿಕರಿಗೆ ಆಹಾರ ಸರಬರಾಜು ಮಾಡುವ ಸಂಸ್ಥೆಯಲ್ಲಿದ್ದರು. ಕ್ರಮೇಣ ಆರ್‌ಎಸ್‌ಎಸ್ ಪ್ರಭಾವಕ್ಕೆ ಒಳಗಾಗಿ ಸ್ವಯಂಸೇವೆಗೆ 1984ರಲ್ಲಿ ಪಂಜಾಬ್‌ಗೆ ಬಂದಿದ್ದರು, ಅಲ್ಲಿ ಜತೆಯಾದವರೇ ಮೋದಿ. ಚಂಡಿಗಢದ 18 ಸೆಕ್ಟರ್, ಮಾಧವ ನಿವಾಸದ ಒಂದೇ ಕೋಣೆಯಲ್ಲಿ 7-8 ವರ್ಷ ಕಾಲ ಆರೆಸ್ಸೆಸ್ ಪ್ರಚಾರದಲ್ಲಿ ಮೋದಿ ಮತ್ತು ಬಾಬಾ ಜತೆಯಾಗಿ ತೊಡಗಿಕೊಂಡಿದ್ದರು.
ನಮ್ಮ ಕೋಣೆಯಲ್ಲಿ ಐವರು ಪ್ರಚಾರಕರಿದ್ದೆವು. ನಾಲ್ಕು ಮಂದಿ ಬೆಳಗ್ಗೆ ಕಾರ್ಯಾಲಯಕ್ಕೆ ಹೋದರೆ ರಾತ್ರಿ ಹತ್ತು ಗಂಟೆಗೆ ವಾಪಸ್ ಬರುತ್ತಿದ್ದೆವು. ಮೋದಿ ಮಾತ್ರ ರಾತ್ರಿ ಹಗಲೆನ್ನದೆ ದುಡಿಯುತ್ತಿದ್ದರು. ಬರುವಾಗ ರಾತ್ರಿ 1 ಗಂಟೆ. ಬಂದ ಬಳಿಕವೂ ಪುಟ್ಟ ಕೋಣೆಯಲ್ಲಿಯೇ ಗೋಡೆ ಬದಿ ಮುಖ ಮಾಡಿ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದರು. ಅವರಲ್ಲಿ ಸಾಧಿಸುವ ಛಲ ಇತ್ತು, ಅಧ್ಯಾತ್ಮವೂ ಇತ್ತು. ಅವರು ಯಾವಾಗಲೂ ಹೇಳುತ್ತಿದ್ದ ಮಾತು, 'ಆಧ್ಯಾತ್ಮಿಕ ಇಲ್ಲದೆ ರಾಜನೀತಿ ನಡೆಯಲು ಸಾಧ್ಯವಿಲ್ಲ'.
ಆಗೆಲ್ಲ ಅವರನ್ನು ಮೋದಿ ಎಂದು ಯಾರೂ ಕರೆಯುತ್ತಿರಲಿಲ್ಲ. ನಾನು ಪ್ರೀತಿಯಿಂದ ನರೇಂದರ್ ಎಂದೇ ಕರೆಯುತ್ತಿದ್ದೆ. ನರೇಂದ್ರ ನನ್ನನ್ನು ಬಾಬಾ ವಿಶ್ವನಾಥ ಎನ್ನುತ್ತಿದ್ದರು. ನನಗಿಂತ 2 ವರ್ಷ ದೊಡ್ಡವರಿರಬಹುದು. ಜೀವನ ತುಂಬಾ ಸರಳ. ಹಗಲಲ್ಲಿ ಆರ್‌ಎಸ್‌ಎಸ್ ಚಡ್ಡಿ. ನರೇಂದ್ರ ಬಳಿ ಒಂದು ಜತೆ ಕುರ್ತಾ ಪೈಜಾಮ ಇತ್ತು. ರಾತ್ರಿ ಒಗೆಯುವುದು, ಒಣಗಿಸಿ ತಲೆ ಅಡಿ ಇಟ್ಟುಕೊಳ್ಳುವುದು, ಅದೇ ಇಸ್ತ್ರಿ! ಸೈಕಲಲ್ಲಿ ಸಂಘ ಪ್ರಚಾರ. ಅವರದು ಆರೋಗ್ಯ ದೇಹ. ಇಡೀ ದಿನ ಸೈಕಲಲ್ಲಿ ಹಿಂದೆ ಕೂರಿಸಿಕೊಂಡು ಒಡಾಡಿದರೂ ಅವರಿಗೆ ಆಯಾಸ ಆಗುತ್ತಿರಲಿಲ್ಲ. ಊಟ ತಿಂಡಿ ಕಾರ್ಯಕರ್ತರ ಮನೆಯಲ್ಲಿ. ರಾತ್ರಿ ಕಾರ್ಯಾಲಯಕ್ಕೆ ಬಂದು ಒಣ ರೊಟ್ಟಿ ಜತೆ ತಿನ್ನುತ್ತಿದ್ದೆವು. ನೆಲದ ಮೇಲೆ ಚಾಪೆ ಹಾಕಿ ಮಲಗುತ್ತಿದ್ದೆವು.

ದಸ್ ಜಗ್ ಫಟಾ ಹುವಾ ಥಾ!
ಒಮ್ಮೆ ಹರಿದುಹೋದ ಕುರ್ತಾ ಪೈಜಾಮ ಹಾಕಿಕೊಂಡಿದ್ದರು. ನಾನು ಕೇಳಿದೆ 'ನರೇಂದರ್ ಆಪ್‌ಕಾ ಕುರ್ತಾ ಫಟಾ ಹುವಾ ಹೈ'. ಅದಕ್ಕೆ ಮೋದಿ ಹೇಳಿದ್ದು ನನ್ನ ಮನಸ್ಸಲ್ಲಿ ಹಾಗೇ ಇದೆ. 'ಬಾಬಾ ಪತಾ ಹೈ, ದೀನ್ ದಯಾಳ್ ಕೊ ಏಕ್ ಧೋತಿ ಥಾ, ಧೋತಿ ಮೇ ದಸ್ ಜಗ್ ಫಟಾ ಹುವಾ ಥಾ'. ಬಟ್ಟೆ ಶೋಕಿಗಾಗಿ ಸಮಾಜದ ಹಣ ಪೋಲು ಮಾಡಬಾರದು ಎನ್ನುವ ಚಿಂತನೆ.
40-50ರ ದಶಕದಲ್ಲಿ ನಾವು ಜತೆಯಾಗಿದ್ದೆವು. ಮೋದಿ ಬದುಕಲ್ಲಿ ಮೋಜಿಗೆ ಅವಕಾಶವೇ ಇರಲಿಲ್ಲ. ನಮ್ಮ ಜತೆ ಇದ್ದ ಕೆಲ ಯುವಕರು ಒಳ್ಳೆ ಸಿನಿಮಾ, ನಾಟಕ ಬಂದರೆ ಹೋಗುತ್ತಿದ್ದರು. ಮೋದಿಗೆ ರಾಮಕೃಷ್ಣ ಪರಮಹಂಸ, ವಿವೇಕಾನಂದ ಇದೇ ಮಾತು.

ಜನ್ಮಭೂಮಿ... ಯುದ್ಧ ಭೂಮಿ
ವಿಶ್ವನಾಥ್ 1968ರಲ್ಲಿ ಪಂಜಾಬ್‌ಗೆ ಉದ್ಯೋಗ ಅರಸಿ ಹೋದರು. ಸೈನಿಕರಿಗೆ ಆಹಾರ, ದಿನಸಿ ಸರಬರಾಜು ಮಾಡಲು ಪಂಜಾಬ್ ಸೇಲ್ಸ್ ಕಾರ್ಪೊರೇಶನ್ ಮಾಡಿದರು. 1971ರಲ್ಲಿ ಪಾಕ್‌ನಿಂದ 4 ಕಿ.ಮೀ. ದೂರದ ಜಲಾಲಬಾದ್, ಅಮೃತಸರ್‌ನಲ್ಲಿಯೂ ಕೆಲಸ ಮಾಡಿದರು. ಒಂದು ಕಡೆ ಪಾಕಿಸ್ತಾನದ ಉಗ್ರವಾದಿಗಳು, ಇನ್ನೊಂದು ಕಡೆ ಪಂಜಾಬ್‌ನ ಖಾಲಿಸ್ತಾನ್ ಉಗ್ರವಾದಿಗಳು. ಬದುಕು ಸೂಕ್ಷ್ಮವಾಗಿತ್ತು. ಹಿಂದು- ಸಿಖ್ ಏಕತೆಗೆ ಕೆಲಸ ಮಾಡಬೇಕು ಎಂದು ಸಂಘದಿಂದ ಕರೆ ಬಂತು. ತಕ್ಷಣ ಸಿದ್ಧನಾಗಿ ಹೆಂಡತಿ, ಮಕ್ಕಳನ್ನು ಪಂಜಾಬ್‌ನಿಂದ ಮಂಗಳೂರಿಗೆ ಕಳುಹಿಸಿದರು. ಜೈಲಿನಲ್ಲಿದ್ದ ಖಾಲಿಸ್ತಾನ್ ಉಗ್ರವಾದಿಗಳ ಮನಃಪರಿವರ್ತನೆಗೆ ತೊಡಗಿದರು. ಇದೇ ವೇಳೆ ಮೋದಿ ಚಂಡಿಗಢಕ್ಕೆ ಬಂದಿದ್ದರು. ಪಂಜಾಬ್, ಹರ್ಯಾಣ, ಹಿಮಾಚಲ ರಾಜ್ಯಗಳ ಮೇಲುಸ್ತುವಾರಿ ನೋಡುತ್ತಿದ್ದರು. 1984ರಿಂದ 92ರವರೆಗೆ ಒಟ್ಟಿಗಿದ್ದರು. ಕೆಲ ವರ್ಷ ಬಳಿಕ ಗುಜರಾತ್‌ನಲ್ಲಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಸಮಸ್ಯೆ ಪರಿಹಾರಕ್ಕೆ ಆಡ್ವಾಣಿಜಿ ಮೋದಿಗೆ ಬುಲಾವ್ ಕಳುಹಿಸಿದರು, ಬಳಿಕ ಮೋದಿಯ ಬದುಕಿನ ದಿಕ್ಕೇ ಬದಲಾಯಿತು.

ಕೃಷ್ಣ ಕುಚೇಲ ಸಂಬಂಧ
ಆರೋಗ್ಯ ಸಮಸ್ಯೆಯಿಂದ ವಿಶ್ವನಾಥ್ ಮಂಗಳೂರಿಗೆ ಮರಳಿದರು. ದಿನಪತ್ರಿಕೆಗೆ ದಿಲ್ಲಿಗೆ ಹೋಗಿ ಜಾಹೀರಾತು ಸಂಗ್ರಹಿಸುವ ಹೊಣೆ ಹೆಗಲೇರಿತು. ಆಗ ಮೋದಿ ಬಿಜೆಪಿ ಮಹಾಪ್ರಧಾನ ಕಾರ್ಯದರ್ಶಿ. ನಾನು ಮೊದಲಿಗೆ ಗ್ರಾಮೀಣ ವಿಕಾಸ ಮಂತ್ರಿ ವೆಂಕಯ್ಯ ನಾಯ್ಡು ಕಚೇರಿಗೆ ಹೋದೆ. ಪಿಎ ಅವಮಾನಿಸಿ ಕಳುಹಿಸಿದರು. ನರೇಂದ್ರನ ಬಳಿ ಬಂದೆ. ಮೋದಿ ತಕ್ಷಣ ವೆಂಕಯ್ಯ ನಾಯ್ಡುಗೆ ಕರೆ ಮಾಡಿ 'ನಾನು ವಿಶ್ವನಾಥರನ್ನು ಕಳುಹಿಸುತ್ತೇನೆ, ನೀವು ನೋಡಿಕೊಳ್ಳಬೇಕು' ಎಂದರು. ನಾಯ್ಡು ಕಚೇರಿಗೆ ಹೋದಾಗ ನನಗೆ ಅಚ್ಚರಿಯ ಸ್ವಾಗತ ಕಾದಿತ್ತು. ಕೆಲಸವಾಯ್ತು. ಮುಖ್ಯಮಂತ್ರಿ ಆದ ಬಳಿಕವೂ ಅದೇ ಪ್ರೀತಿ ತೋರಿಸಿದರು. ನನ್ನ ಮಿತ್ರರೊಬ್ಬರ ಟ್ರಕ್ ಗುಜರಾತ್‌ನಲ್ಲಿ ಕಳವಾದಾಗ, ಅವರಿಗೆ ಹೇಳಿದೆ. 2 ದಿನದಲ್ಲಿ ಟ್ರಕ್ ಸಿಕ್ಕಿತು. ಮುಖ್ಯಮಂತ್ರಿಗೆ ಇದು ಸಣ್ಣ ವಿಚಾರ, ಆದರೆ ಮೋದಿ ಅವರ ಗೆಳೆತನ ದೊಡ್ಡ ಗುಣ.
2008ರಲ್ಲಿ ಮಂಗಳೂರಿಗೆ ಬಂದಾಗ ಮಾತನಾಡಿದ್ದೆ. ಉಭಯ ಕುಶಲೋಪರಿ ಬಳಿಕ 'ಪೊಲಿಟಿಕಲ್ ಸಾಯನ್ಸ್ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತೇನೆ. ಅವರಿಗೆ ನರೇಂದ್ರ ಮೋದಿಯ ಅಧ್ಯಾತ್ಮಿಕ ರಾಜನೀತಿ ಉಪನ್ಯಾಸ ನೀಡುತ್ತೇನೆ' ಎಂದೆ. ಜೋರಾಗಿ ನಕ್ಕರು. ಒಂದುವರೆ ವರ್ಷದ ಹಿಂದೆ ಪಾರ್ಶ್ವವಾಯು ಬಡಿಯಿತು. ಏಪ್ರಿಲ್ ವಿಧಾನಸಭೆ ಚುನಾವಣೆ ವೇಳೆ ಮಂಗಳೂರಿಗೆ ಬಂದಾಗ ಭೇಟಿಯಾಗುವ ಹಂಬಲ ವ್ಯಕ್ತಪಡಿಸಿದ್ದರು. ಎಸ್ಪಿ ಬಂದು ಸ್ಥಳ ಪರಿಶೀಲನೆ ಮಾಡಿದ್ದರು. ಆದರೆ ನಮ್ಮ ಅಪಾರ್ಟ್‌ಮೆಂಟ್ ಹತ್ತಿರ ಇನ್ನೂ ಎತ್ತರದ ಕಟ್ಟಡಗಳು ಇರುವುದರಿಂದ ಭದ್ರತೆ ವಿಭಾಗದವರು ಅನುಮತಿ ನಿರಾಕರಿಸಿದರು.
'ನಿನ್ನ ಆರೋಗ್ಯ ಸಮಸ್ಯೆ ಪರಿಹಾರಕ್ಕೆ ಮೋದಿ ಬಳಿ ನೆರವು ಕೇಳಬಹುದಲ್ಲ?' ಎಂದು ಗೆಳೆಯರು ಕೇಳುತ್ತಾರೆ. ಅದಕ್ಕೆ ನಾನು ಹೇಳುವುದಿಷ್ಟು: 'ನನ್ನ ಪಾರ್ಶ್ವವಾಯುವಿಗೆ ವೈದ್ಯರು ಚಿಕಿತ್ಸೆ ನೀಡುತ್ತಾರೆ, ದೇಶಕ್ಕೆ ಬಡಿದಿರುವ ರೋಗಕ್ಕೆ ಮೋದಿಯಿಂದ ಮಾತ್ರ ಮದ್ದು ಸಾಧ್ಯ. ಸಾಧ್ಯವಾದರೆ ನಾನು ನರೇಂದ್ರನಿಗೆ ಸಹಯೋಗ ನೀಡುತ್ತೇನೆ'.

ಮುಸ್ಲಿಂ ವಿರೋಧಿಯಲ್ಲ
ಉಮಾಭಾರತಿ, ಗೋವಿಂದಾಚಾರ್ಯರಿಗೂ ನನಗೂ ಆತ್ಮೀಯತೆ ಇತ್ತು. ಉಮಾಭಾರತಿ ಬಿಜೆಪಿಯಿಂದ ಸಿಡಿದು ಜನಶಕ್ತಿ ಪಕ್ಷ ಕಟ್ಟಿದರು. ನನ್ನನ್ನು ಕರೆದು ಪ್ರಧಾನ ಕಾರ್ಯದರ್ಶಿ ಮಾಡಿದರು. ಗುಜರಾತ್ ಚುನಾವಣೆ ವೇಳೆ ಜನಶಕ್ತಿಯ 4-5 ಅಭ್ಯರ್ಥಿ ನಿಲ್ಲಿಸಲಾಗಿತ್ತು. ಪ್ರಚಾರಕ್ಕೆ ಹೋದೆವು. ಗಾಂಧಿನಗರದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚು. ಪ್ರಚಾರದ ವೇಳೆ ಮುಸ್ಲಿಮರ ಗುಂಪು ಬಂತು. 'ನೋಡಿ, ನಿಮ್ಮ ಪಕ್ಷದ ಬಗ್ಗೆ ಪ್ರಚಾರ ಮಾಡಿ. ಆದರೆ ನರೇಂದ್ರ ಮೋದಿ ವಿರುದ್ಧ ಮಾತನಾಡಿದರೆ ನಿಮ್ಮ ಮೇಲೆ ಜನ ಕಲ್ಲು ಹೊಡಿತಾರೆ' ಎಂದರು. ಮುಸ್ಲಿಮರಿಗೆ ಮೋದಿ ವಿರೋಧಿ ಅಲ್ವ ಎಂದೆ. 'ಖಿಲಾಫ್ ಲೋಗೋಂಕೆ ಲಿಯೆ ಹೋಂಗೆ, ಹಮ್ ಲೋಗೋಂಕೆ ನಹಿ, ಹಮ್ ಆಜ್ ಜೋ ಇಜ್ಜತ್ ಕೆ ಸಾತ್ ಜೀರಹೆ ಹೈ ವೊ ಮೋದಿ ವಜೆಸೆ' ಎಂದರು. ಕಾರ್ಯಕ್ರಮ ಮೋದಿ ವಿರೋಧಿಸದೆ ನಡೆಯಿತು.

- ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments