ಮಾರಾಟವಾಗಿದೆ ಇಂಚಲರ ಮನೆ!
ಒಂದೊಮ್ಮೆ ಆ ಮನೆ ಸಾಹಿತಿಗಳಿಗೆ ಆಕರ್ಷಣೀಯ ಕೇಂದ್ರ. ಖ್ಯಾತಿವೆತ್ತ ಸಾಹಿತಿಗಳು, ಕವಿಗಳು ಪದೇ ಪದೆ ಇಲ್ಲಿಗೆ ಬರುತ್ತಿದ್ದರು. ಅದೆಷ್ಟೋ ಕಮ್ಮಟಗಳಿಗೂ ವೇದಿಕೆಯಾಗಿತ್ತು ಆ ಮನೆ. ಅಂಗಳದಲ್ಲಿ ತಿಂಗಳುಗಟ್ಟಲೆ ಕವಿಗೋಷ್ಠಿ ನಡೆಯುತ್ತಿತ್ತು. ಈಗ ಅಂಥ ಯಾವ ನೆನಪುಗಳೂ ಅಲ್ಲಿಂದ ಹೊರಬರುತ್ತಿಲ್ಲ. ಆ ಮನೆ ಇಂದು ಮಾರಾಟವಾಗಿದೆ. ನೆಲಕ್ಕೆ ಬಿದ್ದು, ಹೊಸಮನೆಯಾಗಿದೆ.
'ಗಂಡು ಕವಿ', 'ನಿಸರ್ಗ ಕವಿ' ಎಂದೇ ಪ್ರಖ್ಯಾತರಾಗಿದ್ದ ಎಸ್.ಡಿ. ಇಂಚಲರ ಮನೆಯ ದುರಂತ ಕಥೆ ಇದು. ಕನ್ನಡ- ಮರಾಠಿ ಭಾಷಾ ವಿವಾದದ ಕೇಂದ್ರಬಿಂದು ಬೆಳಗಾವಿಯ ಅತೀ ಸೂಕ್ಷ್ಮ ಪ್ರದೇಶವಾದ ಜಾಲಗಾರ ಗಲ್ಲಿಯಲ್ಲಿನ ಮನೆಯೊಂದರಲ್ಲಿ ಬಾಡಿಗೆಗೆ ವಾಸವಾಗಿ, ನಂತರ ಅದೇ ಮನೆಯನ್ನೇ ಖರೀದಿಸಿದ್ದರು ಇಂಚಲ. ಮನೆಯ ಅಟ್ಟದ ಮೇಲೆ ಸಾಹಿತ್ಯ ಗೋಷ್ಠಿ, ಸಂವಾದಗಳು ನಿರಂತರವಾಗಿ ನಡೆಯುತ್ತಿದ್ದವು. ಆದರೆ, ಆ ಮನೆಯಲ್ಲಿ ಈಗ ಇಂಚಲರ ಯಾವುದೇ ಕುರುಹುಗಳಿಲ್ಲ.
ಗಡಿನಾಡಿನ ಕವಿ
ದ.ರಾ. ಬೇಂದ್ರೆ, ಮಧುರ ಚೆನ್ನರು ಕಾವ್ಯಗಳ ಪ್ರೇರಣೆಯಿಂದಾಗಿ ಇಂಚಲರ ಕವಿತೆ ಬರೆಯಲು ಪ್ರಾರಂಭಿಸಿದರು. ಅವರ ಮೊಟ್ಟ ಮೊದಲ ಕವನ ಸಂಕಲನ 'ತರಂಗಿಣಿ'. ಅದರಲ್ಲಿ ಸಂಗ್ರಹಿಸಿರುವ ಬಹುತೇಕ ಕವಿತೆಗಳು ಕನ್ನಡ ನಾಡುನುಡಿಗೆ ಸಂಬಂಧಿಸಿದವು. ಎರಡನೇ ಕವನ ಸಂಕಲನ 'ಸ್ನೇಹಸೌರಭ', ಮೂರನೇ ಕವನ ಸಂಕಲನ 'ಡಿಂಡಿಮ'. ಬೆಳಗಾವಿಯಲ್ಲಿ ನಾಡಹಬ್ಬವನ್ನು ಅದ್ಧೂರಿಯಿಂದ ಆಚರಿಸಿ ಕನ್ನಡ ಜಾಗೃತಿಯುಂಟು ಮಾಡಿದವರು ಇಂಚಲ. ಗಡಿನಾಡಿನಲ್ಲಿ ಈಗಲೂ ಕನ್ನಡ ಸಾಹಿತ್ಯದ ಸೊಗಡಿದ್ದರೆ ಅದಕ್ಕೆ ಇಂಚಲರೂ ಒಂದು ಕಾರಣ. ಈ ಕವಿ ವಾಸವಿದ್ದ ಮನೆಯನ್ನು ಅವರ ಸಂಬಂಧಿಕರು ಮಾರಿದ್ದಾರೆ. ಆ ಜಾಗದಲ್ಲಿ ಬೇರೊಬ್ಬರ ಮನೆ ಎದ್ದು ನಿಂತಿದೆ.
ಕವಿ ಎಸ್.ಡಿ. ಇಂಚಲರ ಸ್ಮರಣಾರ್ಥ ರಾಜ್ಯ ಸರ್ಕಾರ ಯಾವ ಕೆಲಸವನ್ನೂ ಮಾಡಿಲ್ಲ. ಇಂಚಲರ ಶತಮಾನೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅವರ ಸಮಗ್ರ ಕಾವ್ಯ ಕೃತಿ ಹೊರತರುತ್ತಿದೆ. ತಂದೆಯ ನಿಧನಾನಂತರ ಅವರ ಅಭಿಮಾನಿಗಳು, ಅವರ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಕೂಡಿಕೊಂಡು 1976ರಲ್ಲಿ ಎಸ್.ಡಿ. ಇಂಚಲರ ಸ್ಮಾರಕ ಸಮಿತಿ ರಚಿಸಿದ್ದರು. ನಿರಂತರವಾಗಿ ಸಾಹಿತ್ಯ ಕಾರ್ಯಕ್ರಮಗಳು ನಡೆಯುತ್ತಿವೆ. ಅಲ್ಲದೆ, ಇಂಚಲರ ಕಾವ್ಯ ಪ್ರತಿಷ್ಠಾಪನ ಸ್ಥಾಪಿಸಿ ಪ್ರತಿವರ್ಷ ಶ್ರೇಷ್ಠ ಕಾವ್ಯಕೃತಿಗೆ ಇಂಚಲರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.
- ಪ್ರೊ.ಎಂ.ಎಸ್. ಇಂಚಲ (ಎಸ್.ಡಿ.ಇಂಚಲರ ಪುತ್ರ)
- ಶ್ರೀಶೈಲ ಮಠದ