ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಡರ್ಬನ್ ಎಂಬ ಸಂಭಾವಿತ ನಗರದಲ್ಲಿ...

ಡರ್ಬನ್ ನಗರವನ್ನು ಸುತ್ತಲೆಂದು ವಾಹನವೇರಿದಾಗ ನಮ್ಮ ಗೈಡ್...

Mainashree
Updated On : 27 Nov 2013, 1:39 am

ಡರ್ಬನ್ ನಗರವನ್ನು ಸುತ್ತಲೆಂದು ವಾಹನವೇರಿದಾಗ ನಮ್ಮ ಗೈಡ್, `ಡರ್ಬನ್ ನಗರವನ್ನು ಹೆಣ್ಣಿನ ಮನಸ್ಸಿಗೆ ಹೋಲಿಸಬಹುದು. ಅಲ್ಲೇನಿದೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಎಲ್ಲ ಯೋಚನೆಗಳು ಬಂದು ಹಾದು ಹೋಗುತ್ತಿರುತ್ತವೆ. ಯಾವುದೂ ಬಹಳ ಕಾಲ ನೆಲೆ ನಿಂತಿರು ವುದಿಲ್ಲ' ಎಂದ. ಪ್ರಾಯಶಃ ಆತ ಒಂದು ನಗರವನ್ನು ಇದಕ್ಕಿಂತ ಪರಿಣಾಮಕಾರಿಯಾಗಿ, ಇಷ್ಟೊಂದು ಚುಟುಕಾಗಿ ವರ್ಣಿಸಲು ಸಾಧ್ಯವೇ ಇರಲಿಲ್ಲ. `ಆದರೆ, ಹೆಣ್ಣಿನ ಮನಸ್ಸಿನಷ್ಟು ನಿಗೂಢ ಅಲ್ಲ. ಆದರೆ, ಅದನ್ನು ಒಲಿಸಿಕೊಳ್ಳಬೇಕು. ಒಲಿದವರ ಪ್ರೇಯಸಿ ಡರ್ಬನ್' ಎಂದ ಮಾದಕವಾಗಿ. ನಿಜಕ್ಕೂ ಡರ್ಬನ್ ಹಾಗಿದೆಯೋ ಇಲ್ಲವೋ ಗೊತ್ತಿಲ್ಲ, ಇದ್ದರೂ ಇದ್ದಿರಬಹುದು. ಆದರೆ, ನಾನಂತೂ ಅವನ ಮಾತಿನಿಂದ ಪ್ರೇರೇಪಿತನಾಗಿ ಅದರಂತೆ ಕಲ್ಪಿಸಿಕೊಳ್ಳಲಾರಂಭಿಸಿದೆ. `ನನ್ನ ಮಾತನ್ನು ಅಕ್ಷರಶಃ ತೆಗೆದುಕೊಳ್ಳಬೇಡಿ. ಅದರೊಂದು fine imagination' ಎಂದ. ಆದರೆ, ಡರ್ಬನ್ ನಗರಕ್ಕೆ ಹೊಂದಿಕೊಂಡ ಸುಂದರ ಸಮುದ್ರ ಕಿನಾರೆ, ಅದಕ್ಕೆ ಸದಾ ಅಪ್ಪಳಿಸುವ ಅಲೆ, ಮೋಹಕ ನೋಟ ಕಂಡು ವಾಸ್ತವಕ್ಕೆ ಸನಿಹದ ಕಲ್ಪನೆ ಎಂದೆನಿಸಿತು.
ಡರ್ಬನ್ ಅಂದ್ರೆ ನನಗೆ ಎರಡು ಚಿತ್ರಗಳು ಕಣ್ಮುಂದೆ ಬರುತ್ತವೆ. ಮೊದಲನೆಯದು ಕ್ರಿಕೆಟ್. ಭಾರತ-ಸೌತ್ ಆಫ್ರಿಕಾ ನಡುವಿನ ಅವೆಷ್ಟೋ ಕ್ರಿಕೆಟ್ ಪಂದ್ಯಗಳನ್ನು ಡರ್ಬನ್ನ ಕಿಂಗ್ಸ್ಮೀಡ್ ಕ್ರೀಡಾಂಗಣದಲ್ಲಿ ವೀಕ್ಷಿಸುವಾಗ ಈ ನಗರದ ಒಂದು ಝಲಕನ್ನು ನೋಡಿದ್ದು. ಎರಡನೆ ಯದಾಗಿ, ಡರ್ಬನ್ ಅಂದಾಗ ನೆನಪಾಗುವುದು ಗಾಂಧೀಜಿಯವರ ಆರಂಭಿಕ ದಿನಗಳ ಅನುಭವ. ಶಾಲಾದಿನಗಳಲ್ಲಿ ಇತಿಹಾಸದ ತರಗತಿಯಲ್ಲಿ ಗಾಂಧೀಜಿಯವರ ಬಗ್ಗೆ ಮೇಷ್ಟ್ರ ಬಾಯಿಯಿಂದ ಕೇಳುವಾಗ ಈ ನಗರದ ಹೆಸರು ಹಾಗೇ ಅಚ್ಚೊತ್ತಿದೆ. ಡರ್ಬನ್ಗೆ ಬಂದಾಗ ಕಿಂಗ್ಸ್ಮೀಡ್ ಸ್ಟೇಡಿಯಂ ಹಾಗೂ ಗಾಂಧೀಜಿ ವಾಸಿಸಿದ ಮನೆ - ಈ ಎರಡೂ ನನ್ನ ಪಟ್ಟಿಯಲ್ಲಿದ್ದವು. ಈ ಎರಡೂ ತಾಣಗಳು ನಮ್ಮ ಕಾರ್ಯಕ್ರಮ ಪಟ್ಟಿಯಲ್ಲೂ ಇದ್ದುದನ್ನು ಕಂಡು ಅತೀವ ಸಂತಸವಾಯಿತು.
ಡರ್ಬನ್ ನಗರದ ಅಂದ-ಚೆಂದಕ್ಕೆ ಹಿಂದೂ ಮಹಾಸಾಗರದ ಕೊಡುಗೆ ಅಪಾರ. ಕಾರಣ ಆ ಮಹಾಸಾಗರದ ದಡದಲ್ಲಿಯೇ ಈ ನಗರ ತಲೆಯೆತ್ತಿ ನಿಂತಿದೆ. ಗಾಂಧೀಜಿಯವರು ಡರ್ಬನ್ ಕುರಿತು ಬರೆದ ಒಂದು ಲೇಖನದಲ್ಲಿ `ನಾನು ಈ ನಗರದ ಜತೆ ಭಾವನಾತ್ಮಕ ಸಂಬಂಧ ಹೊಂದಿದ್ದೇನೆ. ಮೊದಲ ಬಾರಿಗೆ ಇಲ್ಲಿಗೆ ಹಡಗಿನಲ್ಲಿ ಬಂದಿಳಿದಾಗ ಪರಕೀಯ ನಾಡಿಗೆ, ಅಪರಿಚಿತ ದೇಶಕ್ಕೆ ಬಂದೆ ಎಂದು ಅನಿಸಲಿಲ್ಲ. ನಾನು ಬರುವುದಕ್ಕೆ ಮುನ್ನ ಡರ್ಬನ್ನಲ್ಲಿ ಭಾರತೀಯರಿ ದ್ದರು. ಅವೆಲ್ಲಕ್ಕಿಂತ ಮುಖ್ಯವಾಗಿ ಡರ್ಬನ್ನ ಸಮುದ್ರದ ನೀರನ್ನು ಕಂಡಾಗ, ಇದು ಭಾರತವನ್ನು ಚುಂಬಿಸಿ, ತೊಳೆದು, ಹರಿದು ಬಂದ ನೀರು ಎಂದೆನಿಸುತ್ತಿತ್ತು. ಆ ನೀರಿನಲ್ಲಿ ಕಾಲಿಟ್ಟಾಗ, ಬೊಗಸೆಯಲ್ಲಿ ಎತ್ತಿ ಕೊಂಡಾಗ ನನ್ನಲ್ಲೊಂದು ವಿಶೇಷ ಪುಳಕ ಉಂಟಾಗುತ್ತಿತ್ತು' ಎಂದು ಬರೆದಿದ್ದಾರೆ.
ನನ್ನ ಹೋಟೆಲು ರೂಮಿನಿಂದ ಎದುರಿಗೆ ಕಣ್ಣುದೃಷ್ಟಿ ಹಾಯಿಸುವ ತನಕವೂ ಕಾಣುತ್ತಿದ್ದ ಹಿಂದೂಮಹಾಸಾಗರವನ್ನು ದಿಟ್ಟಿಸುವಾಗ ಗಾಂಧೀಜಿ ಯವರು ತಮ್ಮ ಭಾವನೆಗಳನ್ನು ನನಗೂ ಹಂಚಿದ್ದರು. ಆ ಸಮುದ್ರದ ಬಗ್ಗೆ ಏನೋ ಹೇಳಲಾಗದ ಒಂದು ಭಾವಜಣುಕು ಬಿಡಿಸುವಂತೆ ಒತ್ತಾಯಿಸುತ್ತಿ ರುವಂತೆ ಭಾಸವಾಗುತ್ತಿತ್ತು. ಭಾರತವನ್ನು ಸ್ಪಶರ್ಿಸಿದ ಸಾಗರ ಇಲ್ಲಿ ತನಕ ಬಂದಿದೆಯಲ್ಲ ಎಂಬ ಭಾವ ಬಿಡುಗಡೆಗೆ ಇಂಬು ನೀಡುತ್ತಿತ್ತು.
ಡರ್ಬನ್ ಒಂದು ಸಂಭಾವಿತ ನಗರ ಎನ್ನುವುದೇ ಹೆಚ್ಚು ಸೂಕ್ತ ಹಾಗೂ ಆಪ್ತ. ಕಾರಣ ಇಡೀ ನಗರದಲ್ಲಿ ಎಲ್ಲೂ ಟೆನ್ಷನ್ ಇಲ್ಲ. ಜನಜಂಗುಳಿ ಇಲ್ಲ. ಟ್ರಾಫಿಕ್ ಜಾಮ್ ಕಾಣಿಸುವುದಿಲ್ಲ. ಎಲ್ಲೂ ಹುಸಿ ಧಾವಂತ ಇಲ್ಲ. ಗಗನಚುಂಬಿ ಕಟ್ಟಡಗಳು ಅಲ್ಲೊಂದು, ಇಲ್ಲೊಂದು ಇದ್ದರೂ ಅವು ಹೆದರಿಸುವುದಿಲ್ಲ. ಸಿಮೆಂಟ್ ಕಾಡುಗಳು ಹಸುರನ್ನು ನುಂಗಿ ಹಾಕಿಲ್ಲ. ರಸ್ತೆಗಳೆಲ್ಲ ನುಣುಪಾಗಿಯೇ ಇವೆ. ರಸ್ತೆ ಇಕ್ಕೆಲಗಳಲ್ಲಿ ಹಸುರು, ಹೂವು, ಎಲೆಗಳು ನಳನಳಿಸುತ್ತವೆ. ನಗರದ ಗಬ್ಬು ವಾಸನೆ ಇಲ್ಲ. ಕಸಕಡ್ಡಿಗಳು ರಾಶಿ ಯಾಗಿಲ್ಲ. ಮನೆಯ ಅಂಗಳದಷ್ಟು ಸ್ವಚ್ಛ, ಜನರಲ್ಲೂ ಒಂದು ರೀತಿಯ ನಿರಾಳತೆ. ಶಾಂತವಾಗಿ ಹರಿಯುವ ನೀರಿನಂತೆ, ನದಿಯಂತೆ. ಮೂವತ್ತೈದು ಲಕ್ಷ ಜನಸಂಖ್ಯೆಯಿದ್ದರೂ ಗೌಜು, ಗದ್ದಲವಿಲ್ಲ. ಒಳಗಿನ ಬೇಗುದಿ ಯೇನೋ ಗೊತ್ತಿಲ್ಲ, ಹೊರಗಿನಿಂದ ಪ್ರಶಾಂತವಾಗಿರುವಂತೆ ತೋರುತ್ತದೆ.
ಡರ್ಬನ್ನ ಜನ ತಮ್ಮ ನಗರವನ್ನು `ಕಾಸ್ಮೋಪಾಲಿಟನ್ ಕ್ವೀನ್' ಅಂತ ಕರೆಯುತ್ತಾರೆ. ಇಡೀ ನಗರ ಒಂದು ಶಿಸ್ತಿಗೆ ಒಳಪಟ್ಟಂತೆ ಕಾಣು ತ್ತದೆ. ಇದಕ್ಕೆ ಸ್ಫೂತರ್ಿಸೆಲೆ ಎಂಬಂತೆ ಡರ್ಬನ್ನಲ್ಲಿ ಓಡಾಡುವಾಗ ಸ್ಥಳೀಯ ಮಹಾನಗರ ಪಾಲಿಕೆಯ My City My Home ಎಂದು ಬರೆದಿರುವ ಫಲಕಗಳು ಕಾಣಿಸುತ್ತವೆ. `ನನ್ನ ನಗರ ನನ್ನ ಮನೆ' ಯಾದರೆ, ನನ್ನ ನಗರವನ್ನು ಮನೆಯಂತೆ ಅಂದವಾಗಿ ಇಟ್ಟುಕೊಳ್ಳ ಬೇಡವೇ? ಇಡೀ ನಗರ ಯಾವುದೋ ಅಗೋಚರ ಆದೇಶಕ್ಕೆ ಒಳಗಾಗಿ ಶಿಸ್ತಿನ ನಿಯಮಕ್ಕೆ ಕಟ್ಟುಬಿದ್ದಂತೆ ತೋರುತ್ತದೆ.
2010ರಲ್ಲಿ ಡರ್ಬನ್ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯನ್ನು ಸಂಘಟಿಸಿತು. ಆಗ ಹಚ್ಚಿಕೊಂಡ ಮೇಕಪ್ ಈಗಲೂ ಹಾಗೇ ಉಳಿ ದಿದೆ. ಆ ನೆಪದಲ್ಲಿ ಸಿಂಗರಿಸಿಕೊಂಡ ನಗರ, ತನ್ನ ಚಹರೆಯನ್ನೇ ಬದಲಿಸಿಕೊಂಡಿದೆ. ದಕ್ಷಿಣ ಆಫ್ರಿಕಾದಲ್ಲಿ ಜೋಹಾನೆಸ್ಬಗರ್್ ಹಾಗೂ ಕೇಪ್ಟೌನ್ ನಂತರದ ದೊಡ್ಡ ನಗರ ಅಂದ್ರೆ ಡರ್ಬನ್. ಈ ನಗರ ವನ್ನು ದೇಶದ ಕ್ರೀಡಾನಗರಿ ಅಂತಾನೂ ಕರೆಯುತ್ತಾರೆ. ಈ ನಗರದಲ್ಲಿ ಆಡದ ಆಟವಿಲ್ಲ. ನಗರದ ಎಲ್ಲೆಡೆ ಕ್ರೀಡಾಂಗಣ, ಗಾಲ್ಫ್ ಕೋಸರ್್ಗಳು ಇಲ್ಲಿನ ಕ್ರೀಡಾಚಟುವಟಿಕೆಗಳಿಗೆ ಸಾಕ್ಷಿಗಳಾಗಿವೆ. ತಿಂಗಳಲ್ಲಿ ಒಂದಲ್ಲ ಒಂದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳು ನಡೆಯುತ್ತಿ ರುತ್ತದೆ. ಇದು ಹಬ್ಬ, ಹರಿದಿನಗಳ ಆಚರಣೆಗೆ ಸಮನಾಗಿರುತ್ತದೆ.
ಡರ್ಬನ್ ನಗರ ಭಾರತೀಯರಿಗೆ ಪರಕೀಯ ಊರು ಎಂದೆನಿಸು ವುದಿಲ್ಲ. ಯಾವುದೋ ಗೊತ್ತು, ಪರಿಚಯವಿಲ್ಲದ ದೇಶಕ್ಕೆ ಬಂದಿದ್ದೇವೆ ಎಂದೂ ಅನಿಸುವುದಿಲ್ಲ. ಬೆಂಗಳೂರಿಗರಿಗೆ ಕೋಲ್ಕತ್ತಾಕ್ಕೆ ಹೋದಾಗ ಏನನಿಸಬಹುದೋ, ದಿಲ್ಲಿ ಮಂದಿಗೆ ಕೇರಳಕ್ಕೆ ಹೋದಾಗ ಏನನಿಸ ಬಹುದೋ ಅಂಥ ಭಾವನೆ ಮೂಡಬಹುದು. ಕಾರಣ ಇಷ್ಟೆ, ಡರ್ಬನ್ ನಲ್ಲಿ ಸುಮಾರು ಮೂರುವರೆ ಲಕ್ಷ ಭಾರತೀಯರಿದ್ದಾರೆ. ನಗರದಲ್ಲಿ ಒಂದು ತಾಸು ತಿರುಗಿದರೆ ನಮ್ಮ ಮೈಬಣ್ಣದ ನೂರಾರು ಜನ ಕಾಣುತ್ತಾರೆ.
ಹಾಗೆ ನೋಡಿದರೆ ಡರ್ಬನ್ ನಗರದೊಳಗೆ `ಮಿನಿ ಇಂಡಿಯಾ'ವೇ ಇದೆ. ವಿಕ್ಟೋರಿಯಾ ಸೇಂಟ್ ಮಾಕರ್ೆಟ್ ಎಂಬ ಪ್ರದೇಶಕ್ಕೆ ಹೋದರೆ, ಭಾರತದ್ದೇ ವಾಸನೆ. ಅಲ್ಲಿನ ಬೀದಿಗಳಲ್ಲಿ ಓಡಾಡುವಾಗ, ಬಿದ್ದಿರುವ ಕಸ, ಹೊಲಸುಗಳನ್ನು ನೋಡಿಯೇ ಇದು ಭಾರತೀಯರೇ ಹೆಚ್ಚಾಗಿ ರುವ ಪ್ರದೇಶ ಎಂಬ ನಿಧರ್ಾರಕ್ಕೆ ಬರಬಹುದು. ಈ ಪ್ರದೇಶದಲ್ಲಿ ಸ್ಥಳೀಯರು ಇಲ್ಲವೇ ಇಲ್ಲ. ಭಾರತೀಯರು ಅದರಲ್ಲೂ ಹೆಚ್ಚಾಗಿ ಮುಸ್ಲಿಮರು ಆಕ್ರಮಿಸಿಕೊಂಡಿದ್ದಾರೆ. ಅಂಗಡಿಗಳ ಹೆಸರು ನಮ್ಮೂರಿನಲ್ಲಿ ನೋಡಿದಂಥವುಗಳೇ. ಅಜ್ಮೀರ್ ಬ್ಯಾಂಗಲ್ಸ್, ತಾಜ್ಮಹಲ್ ಸ್ವೀಟ್ಸ್, ಮುಂಬೈ ಮಿಠಾಯಿ, ಪಾಕೀಜಾ ಸಾರೀಸ್, ಹೇಮಾಮಾಲಿನಿ ಬ್ಯೂಟಿ ಪಾರ್ಲರ್... ರಸ್ತೆಯುದ್ದಕ್ಕೂ ಇಂಥದೇ ಬೋಡರ್ುಗಳು. ಎಲ್ಲವೂ ಚೈನಾದ ಸಾಮಾನುಗಳು, ಎಲ್ಲವೂ ಗಿಲೀಟು. ಪಾನಿಪುರಿ, ಮಸಾಲೆ ದೋಸೆ, ಚನ್ನಬಠೂರ, ಇಡ್ಲಿ ಸಾಂಬಾರಿನ ಸುವಾಸನೆ ಮೂಗಿಗೆ ಅಡರುತ್ತಿದ್ದರೆ, ಗಾಂಧಿ ಬಜಾರೋ, ಕಲಾಸಿಪಾಳ್ಯವೋ, ದುರ್ಗದ ಬೈಲೋ, ಹಂಪನಕಟ್ಟೆಯಲ್ಲೋ ಹೋಗುತ್ತಿರುವಂತೆ ಭಾಸವಾಗುತ್ತದೆ.
ದಕ್ಷಿಣ ಭೂಶಿಖರದಲ್ಲಿಯೇ ಅತ್ಯಂತ ದೊಡ್ಡ ಮಸೀದಿ - ಜುಮಾ ಮಸೀದಿ ಈ ಪ್ರದೇಶದ ಪ್ರಮುಖ ಆಕರ್ಷಣೆ. ಈ ಮಸೀದಿಗೆ ತಾಕಿಕೊಂಡಿರುವ ಮದ್ರಾಸ್ ಆರ್ಕೆಡ್ ಆ ಪ್ರದೇಶದ ದೊಡ್ಡ ಶಾಪಿಂಗ್ ಮಾಲ್. ಬೆಂಗಳೂರಿನ ಶಿವಾಜಿನಗರದಲ್ಲಿ ಇದ್ದಿರಬಹುದಾ ಎಂದು ಹೆಜ್ಜೆ ಹೆಜ್ಜೆಗೆ ಅನಿಸಿದ್ದುಂಟು.
1497ರಲ್ಲಿ ಕೇಪ್ ಟೌನ್ಗೆ ಬಂದ ವಾಸ್ಕೋಡ ಗಾಮ, ಅದೇ ವರ್ಷ ಡರ್ಬನ್ಗೆ ಬಂದಿದ್ದ. ಹೀಗಾಗಿ ಈ ನಗರದಲ್ಲಿ ಪೋರ್ಚುಗೀಸರ ಅಸ್ತಿತ್ವ ಅಲ್ಲಲ್ಲಿ ಕಾಣಬಹುದು. ನಗರದಲ್ಲಿ ವಾಸ್ಕೋಡ ಗಾಮನ ಸ್ಮಾರಕ ವಿದೆ. ಡಚ್ರು, ಪೋರ್ಚುಗೀಸರು, ಬ್ರಿಟಿಷರು ಡರ್ಬನ್ನಲ್ಲಿ ತಮ್ಮ ವಸಾಹತುಗಳನ್ನು ನಿರ್ಮಿಸಿಕೊಂಡಿದ್ದರೂ ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಇವರೆಲ್ಲರಿಗೂ ಬಿಸಿ ಮುಟ್ಟಿಸಿದವನು ಝುಲುಗಳ ಸಾಮ್ರಾಟ ಕಿಂಗ್ ಶಾಕ. ಇವನಿಲ್ಲದಿದ್ದರೆ ಈ ನಗರ ಪರಕೀಯರ ಕೈವಶವಾಗಿ ಬಿಡುತ್ತಿತ್ತು. ಹೀಗಾಗಿ ಶಾಕನ ಹೆಸರು ಎಲ್ಲೆಡೆ ರಾರಾಜಿ ಸುತ್ತದೆ. ಡರ್ಬನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಅವನದೇ ಹೆಸರು!
ಪೋರ್ಚುಗೀಸರು ಈ ನಗರಕ್ಕೆ ಇಟ್ಟ ಹೆಸರು ರಿಯೋಡಿ ನಟಾಲ್. ಕ್ರಮೇಣ ರಿಯೋ ಡಿ ಹೋಗಿ ಬರೀ ನಟಾಲ್ ಮಾತ್ರ ಉಳಿದು ಕೊಂಡಿತು. ಪೋರ್ಚುಗೀಸ್ ಭಾಷೆಯಲ್ಲಿ ನಟಾಲ್ ಅಂದ್ರೆ ಕ್ರಿಸ್ಮಸ್ ಎಂದರ್ಥ. ಕ್ವಾಝುಲು - ನಟಾಲ್ ಪ್ರಾಂತ ನಗರ - ಗ್ರಾಮೀಣ ಪ್ರದೇಶಗಳ ಸಂಗಮವಾಗಿರುವುದರ ಹಿನ್ನೆಲೆಯೇ ಇದು. 1835ರಲ್ಲಿ ನಟಾಲ್ ಹೋಗಿ ಡರ್ಬನ್ ಎಂದು ಪುನರ್ ನಾಮಕರಣವಾಯಿತು. ಈ ಪ್ರದೇಶದ ಗವರ್ನರ್ ಆಗಿದ್ದ ಸರ್ ಬೆಂಜಮಿನ್ ಡಿ ಅರ್ಬನ್ ನಗರದ ಅಭಿವೃದ್ಧಿಗೆ ಬಹಳ ಶ್ರಮವಹಿಸಿದ. ಅವನ ಗೌರವಾರ್ಥ ನಟಾಲ್ ಬದಲಿಗೆ ಡಿ ಅರ್ಬನ್ ಎಂದು ನಾಮಕರಣ ಮಾಡಲಾಯಿತು. ಡಿ ಅರ್ಬನ್ ಜನರ ಬಾಯಲ್ಲಿ ಡರ್ಬನ್ ಆಯಿತು.
ಹತ್ತೊಂಬತ್ತನೇ ಶತಮಾನದಿಂದಲೇ ಡರ್ಬನ್ ಪ್ರಮುಖ ಬಂದರು ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಜಗತ್ತಿನ ಹತ್ತು ಪ್ರಮುಖ ಬಂದರುಗಳ ಪೈಕಿ ಇದೂ ಒಂದು. ಆಕಾಶದಲ್ಲಿ ವಿಮಾನ, ಸಮುದ್ರದಲ್ಲಿ ಹಡಗು, ರಸ್ತೆಯಲ್ಲಿ ವಾಹನಗಳನ್ನು ಗಗನಚುಂಬಿ ಕಟ್ಟಡಗಳಿಂದ ನೋಡುತ್ತಿದ್ದರೆ ಅಪರೂಪದ ದೃಶ್ಯಗಳು ಅನಾವರಣಗೊಳ್ಳುತ್ತವೆ.
ಡರ್ಬನ್ನ್ನು ದಕ್ಷಿಣ ಆಫ್ರಿಕಾದ ಭವಿಷ್ಯತ್ತಿನ ನಗರ ಅಂತಾನೂ ಕರೆಯುವುದುಂಟು. ಕಾರಣ ಇದು ಎಲ್ಲ ಆಧುನಿಕ ಸೌಲಭ್ಯಗಳನ್ನು ಹೊಂದಿರುವ, ವಿಸ್ತರಿಸಿಕೊಳ್ಳಲು ಅಪರಿಮಿತ ಅವಕಾಶವಿರುವ ನಗರ ವಾಗಿದೆ. ಇದಕ್ಕೆ ಪೂರಕವಾಗಿರುವುದು ಇಲ್ಲಿನ ಹವಾಮಾನ. ಚಳಿಯಾ ಗಲಿ, ಸೆಕೆಯಾಗಲಿ ಯಾವುದೂ ಅತಿ ಇಲ್ಲ. ಹಿತವಾದ ವಾತಾವರಣ.
ಸಮುದ್ರಕ್ಕೆ ತೆರೆದುಕೊಂಡಿರುವುದರಿಂದ ಡರ್ಬನ್ ಪೂರ್ವದ ಹೆಬ್ಬಾಗಿಲು ಸಹ ಹೌದು. ಬಿಜಿನೆಸ್, ಪ್ರವಾಸೋದ್ಯಮ, ಕೈಗಾರಿಕೆ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಹೇಳಿ ಮಾಡಿಸಿದ ತಾಣ.
ಇದು ಉಳಿದೆಲ್ಲ ನಗರಗಳಂತಲ್ಲ. ನಿಮಗೆ ಪ್ರಿಯವಾಗುವಷ್ಟು ಭಿನ್ನ. ಮನಸ್ಸಿನೊಳಗೆ ಇಳಿಯುವಷ್ಟು ಸಂಪನ್ನ.

- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement