ಡರ್ಬನ್ ನಲ್ಲಿ ಗಾಂಧಿ ಉಳಿದುಕೊಂಡ ಮನೆ, ಅವರ ಸರ್ವೋದಯ ನಿವಾಸ, ತಾವು ಪ್ರಕಟಿಸುತ್ತಿದ್ದ ಪತ್ರಿಕೆಯನ್ನು ಮುದ್ರಿಸುವ ಪ್ರಿಂಟಿಂಗ್ ಪ್ರೆಸ್ ಹಾಗೂ ಅಲ್ಲಿನ ಪರಿಸರದಲ್ಲಿ ಓಡಾಡುವ ಬಯಕೆ ಉತ್ಕಟವಾಗಿತ್ತು. ನಾವು ಬಾಲ್ಯದಲ್ಲಿ, ಕಾಲೇಜು ದಿನಗಳಲ್ಲಿ ಗಾಂಧೀಜಿ ಬಗ್ಗೆ ಓದಿಕೊಂಡಿದ್ದ ಸಂಗತಿಗಳಿಗೆ connect ಆಗುವ, ಗ್ರಹಿಕೆಯನ್ನು ಇನ್ನಷ್ಟು ಸ್ಪಷ್ಟಗೊಳಿಸುವ ಅವಕಾಶ ನಮ್ಮ ಮುಂದೆ ತೆರೆದುಕೊಳ್ಳುವ ಕ್ಷಣಗಳು ಸನ್ನಿಹಿತವಾಗುತ್ತಿದ್ದರೆ ಮನದಲ್ಲೊಂದು ಪುಳಕ, ಕಾಂಕ್ಷೆಗಳು ಚಿಗುರೊಡೆದಿದ್ದವು.
ಡರ್ಬನ್ನಲ್ಲಿ ನಾವು ಉಳಿದುಕೊಂಡಿದ್ದ `ಸದರ್ನ್ ಸ್ಟಾರ್' ಹೋಟೆಲಿನಿಂದ ಸಮುದ್ರ ತೀರದಗುಂಟ ವಾಹನದಲ್ಲಿ ಹೋಗುತ್ತಿದ್ದರೆ, ಆ ಮಣ್ಣಿನ ನೆಲದಲ್ಲಿ ಆ ಪುಣ್ಯಾತ್ಮನ ಬಾಳಪುಟಗಳು ಬಿಚ್ಚಿಕೊಳ್ಳುತ್ತಿದ್ದವು. ಗಾಂಧೀಜಿ ಇಲ್ಲಿಗೆ ಬಂದಿದ್ದಾದರೂ ಏಕೆ? ಈ ಮಣ್ಣು ಅವರ ಬದುಕನ್ನು ಹೇಗೆ ಬದಲಿಸಿತು? ಅವರು ಹೇಗೆ ಈ ಮಣ್ಣನ್ನು ಬದಲಿಸಿದರು? ಎಲ್ಲಿಯ ಪೋರ್ಬಂದರ್? ಎಲ್ಲಿಯ ಡರ್ಬನ್? ಒಂದು ವೇಳೆ ಗಾಂಧೀಜಿ ಡರ್ಬನ್ ಗೆ ಬರದಿದ್ದರೆ ಅವರ ಜೀವನದ ಗತಿ ಬದಲಾಗುತ್ತಿತ್ತಾ? ಅವರ ಬದುಕಿನಲ್ಲಿ ದಕ್ಷಿಣ ಆಫ್ರಿಕಾ ವಹಿಸಿದ ಪಾತ್ರವೇನು? ಈ ಎಲ್ಲ ಪ್ರಶ್ನೆಗಳು ಮುತ್ತಿಕೊಳ್ಳುತ್ತಿದ್ದವು.
ಡರ್ಬನ್ನ ಬೀಚ್ಗೆ ತಾಕಿಕೊಂಡು ವಿಶಾಲ ರಸ್ತೆಯಲ್ಲಿ ತುಸು ದೂರ ಕ್ರಮಿಸಿ ಹೊರಳುತ್ತಿದ್ದಂತೆ, ನಮ್ಮ ಗೈಡ್ `ಇದೋ ಮಹಾತ್ಮ ಗಾಂಧಿ ರಸ್ತೆ' ಎಂದು ಉದ್ಗರಿಸಿದ. ಹಸಿರು-ಬಿಳಿ ಬಣ್ಣದ ಬೋರ್ಡ್ ನಲ್ಲಿ ಮಹಾತ್ಮ ಗಾಂಧಿ ರೋಡ್ ಎಂದು ಬರೆದಿರುವುದು ಕಾಣಿಸಿತು. ನಮ್ಮ ತಂಡದಲ್ಲಿರುವವರೆಲ್ಲ ವಾಹನದಿಂದ ಇಳಿದು ಆ ಬೋರ್ಡ್ ನ ಮುಂದೆ ಹೋಗಿ ನಿಂತುಕೊಂಡು ಫೋಟೊಕ್ಕೆ ಫೋಸು ಕೊಟ್ಟಿದ್ದೇ ಕೊಟ್ಟಿದ್ದು. ಸ್ಥಳೀಯ ದಾರಿಹೋಕರಿಗೆ, ಇದೇನಪ್ಪಾ ಇದು ರಸ್ತೆ ಬದಿಯ ಯಾವುದೋ ಬೋರ್ಡ್ ನ ಕೆಳಗೆ ನಿಂತು ಫೋಟೊ ತೆಗೆಸಿಕೊಳ್ಳುತ್ತಿದ್ದಾರಲ್ಲ, ಇದೆಂಥ ವಿಚಿತ್ರ ಅನಿಸಿದ್ದಿರಬಹುದು. ಆದರೆ, ಅವರಿಗೇನು ಗೊತ್ತು ಪರಕೀಯ ನೆಲದಲ್ಲಿ ನಮ್ಮ ರಾಷ್ಟ್ರಪಿತನ ಹೆಸರು ಬರೆದ ಬೋರ್ಡ್ ಕಿಮ್ಮತ್ತು? ಆ ಬೋರ್ಡ್
ನಮ್ಮ ಮನಸ್ಸಿನಲ್ಲಿ ಅರಳಿಸುವ ಭಾವನಾತ್ಮಕ ಸಂಚಲನ?
ಆರೇಳು ನಿಮಿಷಗಳ ಮಟ್ಟಿಗೆ ಆ ಬೋರ್ಡ್ ನಮ್ಮ ಪಾಲಿಗೆ ಒಂದು ಮಹತ್ವದ ಸ್ಮಾರಕವೇ ಆಗಿಹೋಗಿತ್ತು! ಬೆಂಗಳೂರಿನಲ್ಲಿ ಮಹಾತ್ಮಗಾಂಧಿ ಹೆಸರಿನಲ್ಲಿ ಒಂದು ರಸ್ತೆಯೇ ಇದೆ. ಅಲ್ಲದೇ ಆ ರಸ್ತೆಯಲ್ಲಿ ಗಾಂಧೀಜಿ ಪ್ರತಿಮೆಯಿದೆ. ಭಾರತದ ಎಲ್ಲ ಊರುಗಳಲ್ಲೂ ಸಹ ಗಾಂಧೀಜಿ ಹೆಸರಿನಲ್ಲಿ ರಸ್ತೆಯೂ ಇದೆ. ಅವರ ಪ್ರತಿಮೆಯೂ ಇದೆ. ಆದರೆ, ನಾವ್ಯಾರೂ ಗಾಂಧೀಜಿ ಹೆಸರು ಬರೆದ ಬೋರ್ಡ್ ನ ಮುಂದೆ ನಿಂತು, ಅವರ ಪ್ರತಿಮೆ ಎದುರು ನಿಂತು ಫೋಟೊ ತೆಗೆಸಿಕೊಳ್ಳುವುದಿಲ್ಲ. ಹೆಚ್ಚೆಂದರೆ ದಿಲ್ಲಿಯ ರಾಜಘಾಟ್ಗೆ ಹೋದಾಗ, ಗುಜರಾತಿನ ಸಾಬರಮತಿ ಆಶ್ರಮಕ್ಕೆ ಹೋದಾಗ ನಮ್ಮ ನೆನಪಿನ ಬುತ್ತಿಗಾಗಿ ಫೋಟೊಕ್ಕೆ ಪೋಸು ಕೊಡಬಹುದು.
ಮಹಾತ್ಮನ ಹೆಸರಿನ ರಸ್ತೆಯಲ್ಲಿ ಸಾಗುವಾಗ ಗೈಡ್, ಗಾಂಧೀಜಿ ಬಗ್ಗೆ ಮುಕ್ತ ಕಂಠದಿಂದ ಪ್ರಶಂಸಿಸುತ್ತಿದ್ದ. `ಆತ ನಿಮ್ಮನ್ನೊಂದೇ ಅಲ್ಲ ನಮ್ಮನ್ನೂ ಬೆಳಗಿದ ಮಹಾತ್ಮ' ಎಂದು ವಿವರಿಸುತ್ತಿದ್ದ. ನಾವು ಭಾರತದಿಂದ ಬಂದ ಪತ್ರಕರ್ತರಾದ್ದರಿಂದ, ನಮ್ಮನ್ನು ಸಂತಸಪಡಿಸುವುದಕ್ಕಾಗಿ ಗಾಂಧೀಜಿಯನ್ನು ಹೊಗಳುತ್ತಿರಬಹುದಾ ಎಂದು ಅನುಮಾನಪಟ್ಟಿದ್ದೆ. ಆದರೆ, ಆ ವಯ್ಯ ಗಾಂಧೀಜಿ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾನೆಂಬುದು ಅವನ ಮುಂದಿನ ಮಾತುಗಳಿಂದ ಮನವರಿಕೆಯಾಯಿತು. `ವರ್ಣ ಭೇದ ನೀತಿ ವಿರುದ್ಧ ಹೋರಾಡಿದ ನೆಲ್ಸನ್ ಮಂಡೇಲಾ ನಮ್ಮ ದೇಶದ ಮಹಾತ್ಮ ಗಾಂಧಿಯಿದ್ದಂತೆ. ಮಂಡೇಲಾ ಮೇಲೆ ಗಾಂಧೀಜಿ ಪ್ರಭಾವ ಅಗಾಧವಾದುದು' ಎಂದು ಹೇಳಿದಾಗ ಅವನ ಬಗೆಗಿನ ಅಭಿಪ್ರಾಯವೇ ಬದಲಾಯಿತು. `ನೆಲ್ಸನ್ ಮಂಡೇಲಾ 28 ವರ್ಷಗಳ ಕಾಲ ಜೈಲಿನಲ್ಲಿದ್ದು ಹೋರಾಡಿದರು. ಅವರ ಈ ಸುದೀರ್ಘ ಹೋರಾಟ ಅಹಿಂಸಾತ್ಮಕವಾಗಿತ್ತು. ಪ್ರಾಯಶಃ ಮಂಡೇಲಾ ಮೇಲೆ ಗಾಂಧೀಜಿ ಪ್ರಭಾವವಿತ್ತು ಎಂದೆನಿಸುತ್ತದೆ' ಎಂದ ಗೈಡ್ `ದಕ್ಷಿಣ ಆಫ್ರಿಕಾದ ಕರಿಯರಿಗೆ ಗಾಂಧೀಜಿ ಮೇಲೆ ವಿಶೇಷ ಮಮತೆ. ಕಾರಣ ನಮಗೆ ಅನ್ಯಾಯದ ವಿರುದ್ಧ ಹೋರಾಡುವ ಅಹಿಂಸಾತ್ಮಕ ಮಾರ್ಗವನ್ನು ಕಲಿಸಿದವರು ಅವರೇ' ಎಂದ. ಸ್ವತಃ ಕರಿಯನಾದ ಅವನ ಮುಖದಲ್ಲಿ ಗಾಂಧೀಜಿ ಬಗ್ಗೆ ಗೌರವದ ಬಿಳಿಸೆಲೆಯಿತ್ತು.
ಗಾಂಧೀಜಿಯವರಿಗೆ ಚಲಿಸುವ ರೈಲಿನಲ್ಲಾದ ಅವಮಾನಕರ ಘಟನೆಯನ್ನು ಸಹ ಆತ ವಿವರಿಸಿದ. `ಹಾಗೆ ನೋಡಿದರೆ, ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದಲೇ
ಮಾನಸಿಕವಾಗಿ ಸಿದ್ಧರಾಗುತ್ತಿದ್ದಿರಬಹುದು. ಗಾಂಧೀಜಿ ಬಗ್ಗೆ ನಮಗೂ ಅತೀವ ಗೌರವ ಹಾಗೂ ಹೆಮ್ಮೆಯಿರುವುದಕ್ಕೆ ಇವೆಲ್ಲವೂ ಕಾರಣವಾಗಿರಬಹುದು' ಎಂದು ದ್ವಿಪಕ್ಷೀಯ ಸಂಬಂಧಕ್ಕೆ ತನ್ನದೇ ಷರಾ ಬರೆಯುತ್ತಿದ್ದ. ದಕ್ಷಿಣ ಆಫ್ರಿಕಾದಲ್ಲಿ ಅದರಲ್ಲೂ ವಿಶೇಷವಾಗಿ ಜೋಹಾನೆಸ್ ಬರ್ಗ್ ಹಾಗೂ ಡರ್ಬನ್ನಲ್ಲಿ ಗಾಂಧೀಜಿ ಮಾಡಿದ ಮ್ಯಾಜಿಕ್ ಅಷ್ಟಿಷ್ಟಲ್ಲ. ಗಾಂಧೀಜಿ ದೆಸೆಯಿಂದಾಗಿ ಭಾರತೀಯರಿಗೆ ಒಂದು ಮುಷ್ಟಿ ಮರ್ಯಾದೆಯೂ ಜಾಸ್ತಿ.ದಕ್ಷಿಣ ಆಫ್ರಿಕಾಕ್ಕೆ ಗಾಂಧೀಜಿ ಬಂದಿದ್ದಾದರೂ ಏಕೆ?
ಇಂಗ್ಲೆಂಡ್ನಲ್ಲಿ ಕಾನೂನು ವ್ಯಾಸಂಗ ಮುಗಿಸಿದ ಬಳಿಕ ಗಾಂಧೀಜಿಯವರು ಸ್ವದೇಶಕ್ಕೆ ಮರಳಿದರು. ಮುಂಬೈ ಹಾಗೂ ರಾಜಕೋಟದಲ್ಲಿ ವಕೀಲಿಕೆ ವೃತ್ತಿಯನ್ನು ಆರಂಭಿಸಿದರು. ಆದರೆ, ಆ ಎರಡೂ ಕಡೆಗಳಲ್ಲಿ ಅವರಿಗೆ ಅಂಥ ಉತ್ತೇಜನ ಸಿಗಲಿಲ್ಲ. ತಾವೊಬ್ಬ ಸಮರ್ಥ ವಕೀಲ ಎಂಬುದನ್ನು ಸಾಬೀತುಪಡಿಸಲು ಬಹಳ ಶ್ರಮಪಟ್ಟರೂ ಅವರಿಗೆ ಯಶಸ್ಸು ಸಿಗಲಿಲ್ಲ. ಇದೇ ಸಂದರ್ಭದಲ್ಲಿ ಅವರಿಗೆ ದಕ್ಷಿಣ ಆಫ್ರಿಕಾದ ಪ್ರಸಿದ್ಧ ಲೀಗಲ್ ಕಂಪನಿ ದಾದಾ ಅಬ್ದುಲ್ ಸೇಠ್ ಸಂಸ್ಥೆಯಿಂದ ಬುಲಾವ್ ಬಂದಿತು. ಗಾಂಧೀಜಿ ಮುಂದೆ ಬೇರೆ ಆಯ್ಕೆಗಳಿರಲಿಲ್ಲ. ಅದಕ್ಕಿಂತ ಮುಖ್ಯವಾಗಿ ಅವರಿಗೆ ತಾವೊಬ್ಬ ಉತ್ತಮ ಅಡ್ವೊಕೇಟ್ ಎಂದು ಸ್ಥಾಪಿತವಾಗುವ ಜರೂರತ್ತು ಇತ್ತು. ಹೀಗಾಗಿ ತಕ್ಷಣ ಈ ಆಹ್ವಾನವನ್ನು ಸ್ವೀಕರಿಸಿದರು. 1893ರ ಏಪ್ರಿಲ್ ತಿಂಗಳಲ್ಲಿ ಹಡಗಿನ ಮೂಲಕ ದಕ್ಷಿಣ ಆಫ್ರಿಕಾಕ್ಕೆ ಹೊರಟರು.
ಒಂದು ತಿಂಗಳ ಬಳಿಕ ಅವರು ಡರ್ಬನ್ಗೆ ಆಗಮಿಸಿದರು. ಈ ಯುವ ವಕೀಲನನ್ನು ಸ್ವತಃ ದಾದಾ ಅಬ್ದುಲ್ಲಾ ಸೇಠ್ ಅವರೇ ಬರ ಮಾಡಿಕೊಂಡರು. ಮೂಲತಃ ಸೇಠ್ ಶ್ರೀಮಂತ. ನಟಾಲ್ ಪ್ರದೇಶದ ಪ್ರಮುಖ ವ್ಯಕ್ತಿ ಎಂದು ಹೆಸರುಗಳಿಸಿದ್ದರು. ಗಾಂಧೀಜಿ ಮೊದಲ ಬಾರಿಗೆ ಡರ್ಬನ್ ಕೋರ್ಟ್ ಗೆ ಹಾಜರಾದಾಗ ಸೇಠ್ ಸಹ ಜತೆಗಿದ್ದರು. ಗಾಂಧೀಜಿಗೆ ಮೊದಲ ಸಲವೇ ಅವಮಾನವಾಗುವಂಥ ಘಟನೆಯಾಯಿತು. ಅವರು ಧರಿಸಿದ್ದ ಟರ್ಬನ್ನ್ನು ತೆಗೆಯುವಂತೆ ಮ್ಯಾಜಿಸ್ಟ್ರೇಟ್ ಸೂಚಿಸಿದರು. ಅವರ ಆದೇಶವನ್ನು ಗಾಂಧೀಜಿ ಪಾಲಿಸಲಿಲ್ಲ. ಮ್ಯಾಜಿಸ್ಟ್ರೇಟ್ ಅವರ ಸೂಚನೆಯನ್ನು ಖಂಡಿಸಿ ಪತ್ರಿಕೆಗಳಿಗೆ ಪತ್ರ ಬರೆದರು. ಅದು ಮುಂದೆ ಚಂಡಮಾರುತ ಬೀಸುವುದರ ಸಣ್ಣ ಸೂಚನೆಯಾಗಿತ್ತು!
ಇದಾಗಿ ಕೆಲ ತಿಂಗಳುಗಳ ನಂತರ ಗಾಂಧೀಜಿ ಡರ್ಬನ್ನಿಂದ ಪ್ರಿಟೋರಿಯಾಕ್ಕೆ ಹೊರಟಾಗ ರೈಲಿನಲ್ಲಿ ನಡೆದ ಪ್ರಸಂಗ ಅವರ ಜೀವನದ ಗತಿಯನ್ನೇ ಬದಲಿಸಿತು.
ಗಾಂಧೀಜಿ ಫಸ್ಟ್ಕ್ಲಾಸ್ ಬೋಗಿಯ ಟಿಕೆಟ್ ಪಡೆದು ಪ್ರಿಟೋರಿಯಾಕ್ಕೆ ಪಯಣಿಸುತ್ತಿದ್ದರು. ರೈಲು ಪೀಟರ್ ಮರಿಟ್ಸ್ ಬರ್ಗ್ ನಿಲ್ದಾಣ ತಲುಪಿದಾಗ ಬಿಳಿಯನೊಬ್ಬ ಗಾಂಧೀಜಿ ಕುಳಿತಿದ್ದ ಬೋಗಿಯೊಳಗೆ ಪ್ರವೇಶಿಸಿದ. ಅದೇನು ಅನಿಸಿತೋ ಏನೋ ಗಾಂಧೀಜಿಯವರನ್ನು ಕಂಡವನೇ ಕಸಿವಿಸಿಗೊಂಡ. ಅವರ ಮೈಬಣ್ಣ ನೋಡಿ ಆ ಬಿಳಿಯ ಕ್ರುದ್ಧನಾದ. ಗಾಂಧೀಜಿಯನ್ನು ಥರ್ಡ್ ಕ್ಲಾಸ್ ಕಂಪಾಟರ್ ಮೆಂಟ್ಗೆ ಸ್ಥಳಾಂತರಿಸುವಂತೆ ರೈಲ್ವೆ ಅಧಿಕಾರಿಯನ್ನು ಕರೆದು ಹೇಳಿದ.
ಇಂಥ ಅಮಾನವೀಯ ಅನುಭವ ತಮ್ಮ ಮುಂದೆ ಅನಾವರಣಗೊಳ್ಳಬಹುದು ಎಂದು ಗಾಂಧೀಜಿ ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ಆ ಬಿಳಿಯನ ಹಾಗೂ ರೈಲ್ವೆ ಅಧಿಕಾರಿಯ ವರ್ತನೆಯನ್ನು ಅವರು ಪ್ರತಿರೋಧಿಸಿದರು. ವ್ಯಕ್ತಿಯ ಮೈಬಣ್ಣ ನೋಡಿ ಮಣೆ ಹಾಕುವ ಪ್ರವೃತ್ತಿಯನ್ನು ಖಂಡಿಸಿದರು. ವರ್ಣಭೇದ ನೀತಿಗೆ ಧಿಕ್ಕಾರ ಕೂಗಿದರು. ಆದರೆ, ಆ ಬಿಳಿಯರು ಇದಕ್ಕೆಲ್ಲ ಸೊಪ್ಪು ಹಾಕಲಿಲ್ಲ.
ಗಾಂಧೀಜಿಯನ್ನು ಎಳೆದು ಬೋಗಿಯಿಂದ ಹೊರ ನೂಕಿದರು!
ಬೇರೆ ದಾರಿಯಿಲ್ಲದೇ ಗಾಂಧೀಜಿ ಆ ಚಳಿಯಲ್ಲಿ ನಡುಗುತ್ತಾ ಅವಮಾನದಿಂದ ನರಳುತ್ತಿದ್ದರೆ, ರೈಲು ಅವರನ್ನು ಅಲ್ಲಿಯೇ ಬಿಟ್ಟು ಮುಂದಕ್ಕೆ ಚಲಿಸಿತು. ನಿಂತ ಮೆಟ್ಟಿನಲ್ಲಿ ಗಾಂಧೀಜಿ ನಿರ್ಧರಿಸಿದರು ವರ್ಣಭೇದ ನೀತಿಯನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ದಕ್ಷಿಣ ಆಫ್ರಿಕಾದಲ್ಲಿ ಇರುವಷ್ಟು ದಿನ ಅದರ ವಿರುದ್ಧ ಹೋರಾಡಬೇಕು.
ಇದಾಗಿ ಕೆಲವು ವಾರಗಳ ನಂತರ ಪ್ರಿಟೋರಿಯಾದಲ್ಲಿ ಗಾಂಧೀಜಿ ಭಾರತೀಯರ ಸಭೆ ಕರೆದು ಅವರಲ್ಲಿ ಜಾಗೃತಿ ಮೂಡಿಸುವ ಭಾಷಣ ಮಾಡಿದರು. ಇಂಥ ದಯನೀಯ ಪರಿಸ್ಥಿತಿಯಿಂದ ಹೊರಬನ್ನಿ ಎಂದು ಕರೆಯಿತ್ತರು. ಭಾರತೀಯರ ಹಿತಾಸಕ್ತಿಯನ್ನು ಕಾಪಾಡಲು ನಟಾಲ್ ಇಂಡಿಯನ್ ಕಾಂಗ್ರೆಸ್ ಎಂಬ ಸಂಘಟನೆಯನ್ನು ಕಟ್ಟಿದರು. ಇದರ ನೇತೃತ್ವವನ್ನು ತಾವೇ ವಹಿಸಿಕೊಂಡರು.
ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯರ ಹಕ್ಕು, ಮಾನ್ಯತೆಗಳನ್ನು ಕಸಿದುಕೊಳ್ಳುವ ಕಾನೂನನ್ನು ಜಾರಿಗೊಳಿಸಲು ಅಲ್ಲಿನ ಸರ್ಕಾರ ಮುಂದಾದಾಗ ಗಾಂಧೀಜಿ ಸತ್ಯಾಗ್ರಹಕ್ಕೆ ತೊಡಗಿದರು. ಬರೀ ಭಾರತೀಯರಲ್ಲಷ್ಟೇ ಅಲ್ಲ, ಅಲ್ಲಿನ ಕರಿಯರಲ್ಲೂ ಎಚ್ಚರ ಮೂಡಿಸಲು ಹೆಣಗಿದರು. ನಿಧಾನವಾಗಿ ಗಾಂಧೀಜಿ ಒಬ್ಬ ನಾಯಕನಾಗಿ ರೂಪುಗೊಂಡಿದ್ದರು. ಅವರ ನಾಯಕತ್ವದ ಚಳವಳಿಯ ಬೆನ್ನು ಮುರಿಯಲೆಂದು ಅಲ್ಲಿನ ಸರ್ಕಾರ ಅವರನ್ನು ಜೈಲಿಗೆ ಹಾಕಿತು. ಒಂದು ತಿಂಗಳ ಬಳಿಕ ಹೊರಬಂದರೂ, ಮತ್ತೊಂದು ನೆಪ ಹೇಳಿ ಜೈಲಿಗೆ ತಳ್ಳಿತು. ಕಸ್ತೂರ ಬಾ ಗಾಂಧಿ, ಅವರ ಮೊದಲ ಮಗ ಹರಿಲಾಲ ಗಾಂಧಿ ಸಹ ಸೆರೆಮನೆವಾಸ ಅನುಭವಿಸಿದರು. ಗಾಂಧೀಜಿ ಸತ್ಯಾಗ್ರಹ ದಿನದಿಂದ ದಿನಕ್ಕೆ ಜನಪ್ರಿಯವಾಗತೊಡಗಿದರೆ, ಅಲ್ಲಿನ ಸರ್ಕಾರಕ್ಕೆ ಅವರು ಅಕ್ಷರಶಃ ತಲೆನೋವಾಗಿ
ಪರಿಣಮಿಸಿದರು. ಮೂವತ್ತೈದರ ಆಸುಪಾಸಿನಲ್ಲಿದ್ದ ಗಾಂಧೀಜಿ ಪ್ರಮುಖ ಹೋರಾಟಗಾರರಾಗಿ, ನಾಯಕರಾಗಿ ರೂಪುಗೊಂಡಿದ್ದರು. ಒಂದು ಪ್ರಬಲ ಸಮುದಾಯವನ್ನು ಮುನ್ನಡೆಸುವ ತಾಕತ್ತು,
ಧೀಮಂತಿಕೆ ಹಾಗೂ ಬುದ್ಧಿಮತ್ತೆ ತಮಗಿದೆ ಎಂಬುದನ್ನು ಸಾಬೀತುಪಡಿಸಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಅವರು ಕಳೆದ ಇಪ್ಪತ್ತೆರಡು ವರ್ಷ ಚಾರಿತ್ರಿಕವಾದುದು. ಇದು ಭಾರತದ ಸ್ವಾತಂತ್ರ್ಯ ಚಳವಳಿಗೆ ಗಾಂಧೀಜಿಯವರು ತಾಲೀಮು ನಡೆಸಲು ಅನುವಾಯಿತು.
ಗೈಡ್ ಗಾಂಧೀಜಿ ಅವರ ದಕ್ಷಿಣ ಆಫ್ರಿಕಾದ ಅನುಭವಗಳನ್ನು ವಿವರಿಸುತ್ತಿದ್ದರೆ ನಾವು ಅವರ ಆಶ್ರಮದ ಮುಂದೆ ಬಂದು ನಿಂತಿದ್ದೆವು.
- ವಿಶ್ವೇಶ್ವರ ಭಟ್