ಕನ್ನಡಕ್ಕೆ ನ್ಯಾಯ
ಅಪ್ಪಟ ಕನ್ನಡ ಪ್ರೇಮಿ ಜಡ್ಜ್ ಒಬ್ಬರು ನವೆಂಬರ್ 30ರಂದು ನಿವೃತ್ತರಾಗುತ್ತಿದ್ದಾರೆ. ಇದರಲ್ಲಿ ವಿಶೇಷ ಏನೂ ಇಲ್ಲ. ಆದರೆ ನ್ಯಾಯಾಂಗ ವ್ಯವಸ್ಥೆಯಲ್ಲೂ ಕನ್ನಡ ಅಂಕಿಗಳು, ಪದಗಳು, ವಾಕ್ಯಗಳನ್ನು ಬಳಕೆ ಮಾಡುವುದರ ಜೊತೆಗೆ ಸಾಹಿತ್ಯವನ್ನೂ ಸಹ ತಮ್ಮ ತೀರ್ಪಿನಲ್ಲಿ ಉಣಬಡಿಸಿ ಕನ್ನಡಕ್ಕಾಗಿ ಸದಾ ಕೈ ಎತ್ತುತ್ತಿದ್ದ ನ್ಯಾಯಾಧೀಶರವರು. ಕಳೆದ 31 ವರ್ಷ ಸದ್ದಿಲ್ಲದೆ ಕನ್ನಡ ಸೇವೆ ಮಾಡಿದವರು.
ನ್ಯಾಯಾಂಗ ವ್ಯವಸ್ಥೆಯಲ್ಲಿ ಇಂಗ್ಲಿಷ್ ಹಾಸುಹೊಕ್ಕಾಗಿದ್ದರೂ, ಮಾತೃಭಾಷೆಗೆ ಗೌರವ, ಘನತೆ ಇದ್ದೇ ಇದೆ ಎಂದು ತೋರಿಸಿಕೊಟ್ಟ ಹಲವಾರು ನ್ಯಾಯಾಧೀಶರ ಪೈಕಿ ಶಿವಲಿಂಗೇಗೌಡರೂ ಒಬ್ಬರು. 1983ರಲ್ಲಿ ಮುನ್ಸಿಫ್ ನ್ಯಾಯಾಧೀಶರಾಗಿ ಆಯ್ಕೆಯಾದ ದಿನದಿಂದ ನಿವೃತ್ತಿ ಹೊಂದುವ ತನಕವೂ ಕನ್ನಡವನ್ನು ಅನುಸರಿಸಿದ್ದಾರೆ, ಆರಾಧಿಸಿದ್ದಾರೆ. ಕನ್ನಡದ ಸ್ಫುಟವಾದ ಮಾತುಗಳು, ಸ್ಪಷ್ಟವಾದ ಭಾಷೆ, ಹೊಸ ಪದಗಳ ಪ್ರಯೋಗಕ್ಕೆ ಎತ್ತಿದ ಕೈ. ತಮ್ಮ ಆಡಳಿತ, ನೀಡುವ ತೀರ್ಪು, ನಿತ್ಯ ಕಚೇರಿಯ ವಹಿವಾಟಿನಲ್ಲೂ ಕನ್ನಡ ಭಾಷೆ, ಅಂಕಿಗಳನ್ನು ಬಳಕೆ ಮಾಡಿಕೊಂಡರು.
ವರನಟ ದಿ. ಡಾ. ರಾಜಕುಮಾರ್ ಅಂದರೆ ಪ್ರಾಣ. ರಾಜ್ ಬಳಸುತ್ತಿದ್ದ ಸ್ಪಷ್ಟವಾದ ಕನ್ನಡ, ಅವರ ವಿನಯ, ಪಾತ್ರದ ಗಂಭೀರತೆ, ಸಮಾಜಕ್ಕೆ ನೀಡುತ್ತಿದ್ದ ಸಂದೇಶಗಳಿಂದ ಪ್ರಭಾವಿತರು. ಹಳೇ ಕನ್ನಡ ಚಿತ್ರಗಳು, ಹಾಡುಗಳು ಎಂದರೆ ಪಂಚಪ್ರಾಣ.
ರಾಮನಗರ ಜಿಲ್ಲೆಯ ಕನಕಪುರ ಸಮೀಪದ ಕೋಡಿಹಳ್ಳಿ ಪಟೇಲ್ ಚಿಕ್ಕೇಗೌಡರ ಮೊಮ್ಮಗ ಶಿವಲಿಂಗೇಗೌಡರು ಇತಿಹಾಸ ಉಪನ್ಯಾಸಕನಾಗಬೇಕು ಅಂದುಕೊಂಡಿದ್ದರು. ತಂದೆ, ತಾಯಿಗಳು ಕೃಷಿಕರು. ತಾತ ಚಿಕ್ಕೇಗೌಡರ ಪ್ರಭಾವ, ಅವರಲ್ಲಿದ್ದ ಕನ್ನಡದ ಸೆಳೆತ ಇವರಿಗೆ ಕನ್ನಡವನ್ನು ಉಸಿರಾಗಿಸಿತು.
1983ರಲ್ಲಿ ನ್ಯಾಯಾಧೀಶರಾಗಿ ಮೊದಲ ನೇಮಕಾತಿ ಎನ್.ಆರ್. ಪುರ. ಅಲ್ಲಿಂದ ಮುಂದೆ ಕೋಲಾರ, ಉಡುಪಿ, ಪುತ್ತೂರು, ಟಿ. ನರಸೀಪುರ, ಮಂಗಳೂರು, ಕೊಡಗು, ಬೆಂಗಳೂರು. ಕೊಡಗಿನಲ್ಲಿ ನಾನು ಬಳಕೆ ಮಾಡುತ್ತಿದ್ದ ಕನ್ನಡ ಭಾಷೆಯನ್ನು ನೋಡಿ ಹಿರಿಯ ವಕೀಲರು, ಸಾರ್, ದಯವಿಟ್ಟು ಇಂಗ್ಲಿಷ್ನಲ್ಲಿ ಏನೂ ಅಂತ ಹೇಳಿ ಎಂದು ಕೇಳುತ್ತಿದ್ದರು. ಕನ್ನಡದ ಬಗ್ಗೆ ಗೌರವ ಇಟ್ಟು ಇಂಗ್ಲಿಷ್ನಲ್ಲಿ ಹೇಳಿ ಅಂತ ಕೇಳಿದರೆ ಮಾತ್ರ ಇಂಗ್ಲಿಷ್ನಲ್ಲೂ ಭಾಷಾಂತರಿಸಿ ಹೇಳುತ್ತೇನೆ ಎಂಬ ಷರತ್ತು ಹಾಕುತ್ತಿದ್ದೆ ಎಂದು ನೆನಪುಗಳನ್ನು ನ್ಯಾ. ಶಿವಲಿಂಗೇಗೌಡರು ಬಿಚ್ಚಿಡುತ್ತಾರೆ. ಕನ್ನಡದಲ್ಲೇ ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಸಾಹಿತ್ಯ ಲೇಪನದ ಮೂಲಕ ಸಾವಿರಾರು ತೀರ್ಪುಗಳನ್ನಿತ್ತ ಗೌಡರನ್ನು ಉಚ್ಚ ನ್ಯಾಯಾಲಯದ ಅನೇಕ ನ್ಯಾಯಾಧೀಶರೂ ಕೊಂಡಾಡಿದ್ದಾರೆ. ಪತ್ನಿ ಸರಸ್ವತಿ, ಪುತ್ರಿ ಅಪರ್ಣಾ, ಮಗ ಡಾ. ಆಶೀಶ್ ಕೂಡ ಕನ್ನಡಪ್ರೇಮಿಗಳು.
- ಕೆ.ಎನ್. ರವಿ