ಚದುರಂಗಭೂಮಿ, ಈಗ ಬಾಡಿಗೆ ಮನೆ!
ಬದುಕಿನಲ್ಲಿ ನರಳದೆ ಇದ್ದರೆ ದೊಡ್ಡದೇನನ್ನೂ ಸಾಧಿಸಲಾಗುವುದಿಲ್ಲ- ಎಂಬ ನಿಲುವಿನಿಂದ ಬಾಳಿ ಬದುಕಿದ ಕನ್ನಡದ ಸಾಹಿತಿ ಚದುರಂಗ ಅವರದು ಮೇರು ವ್ಯಕ್ತಿತ್ವ. ಅರಸು ಮನೆತನದಲ್ಲಿ ಹುಟ್ಟಿ ಬೆಳೆದರೂ ಜೀವನವಿಡೀ ಕಡು ಕಷ್ಟಗಳನ್ನು ಅನುಭವಿಸಿ ನಾನಾ ತಿರುವುಗಳ ಮೂಲಕ ಮೂರ್ತರೂಪ ಪಡೆದ 'ಚದುರಂಗ'ರ ಮೂಲ ಹೆಸರು ಮುದ್ದುರಾಜ ಅರಸ್ ಸುಬ್ರಮಣ್ಯ ರಾಜ್ ಅರಸ್.
ಹುಟ್ಟೂರು ಹುಣಸೂರು ತಾಲೂಕಿನ ಕಲ್ಲಹಳ್ಳಿಯಿಂದ ಮೈಸೂರಿಗೆ ಬಂದ ಇವರು ಮೈಸೂರಿನ ವಾಣಿವಿಲಾಸಪುರಂನ 6ನೇ ಮುಖ್ಯರಸ್ತೆ, 8ನೇ ತಿರುವು, ನಂ. 2823ರಲ್ಲಿ ಮನೆ ಮಾಡಿದರು. 1960ರಿಂದ 1992ರವರೆಗೂ ಇಲ್ಲಿಯೇ ನೆಲೆಸಿದರು. ಆ ಕಾಲದಲ್ಲೇ ಬಂಡಾಯಗಾರರೂ, ಪ್ರಜಾಪ್ರಭುತ್ವವಾದಿಯೂ ಆಗಿದ್ದ ಇವರು ದೊಡ್ಡಮ್ಮಣ್ಣಿ ಅವರನ್ನು ಪ್ರೇಮವಿವಾಹವಾಗಿ ಜೀವನ ದೂಡಿದ್ದು ಇದೇ ಮನೆಯಲ್ಲಿ. ಇವರಿಗೆ ಜನಿಸಿದ ಪ್ರೊ. ನಾಗೇಂದ್ರ ವಿಕ್ರಮ ರಾಜ್ ಅರಸ್ರನ್ನು ಎತ್ತಾಡಿ ಮುದ್ದಿಸಿ ಬೆಳೆಸಿದ್ದು ಇಲ್ಲಿಯೇ. ಕೊನೆಗೆ ಪತ್ನಿಯನ್ನು ಕಳೆದುಕೊಂಡಿದ್ದೂ ಇಲ್ಲಿಯೇ.
ಇಂದು ಈ ಮನೆಯನ್ನು ಬಾಡಿಗೆಗೆ ನೀಡಲಾಗಿದೆ. ಚದುರಂಗರು ತಮ್ಮ ಕೊನೆಯ ದಿನಗಳನ್ನು (ಆರು ವರ್ಷ) ಶಾರದಾದೇವಿನಗರದಲ್ಲಿ ಹೊಸದಾಗಿ ಕಟ್ಟಿಸಿದ ಮತ್ತೊಂದು ಮನೆಯಲ್ಲಿ ಕಳೆದರು. 'ಹೆಜ್ಜಾಲ' ಎಂಬ ಕೊನೆಯ ಕಾದಂಬರಿ ಬರೆದು 1998ರಲ್ಲಿ ಇಲ್ಲಿಯೇ ನಿಧನರಾದರು.
ವಿವಿ ಪುರಂನ ಮನೆಯಲ್ಲಿದ್ದಾಗ ನಾಟಕಗಳಾದ 'ಕುಮಾರರಾಮ', 'ಇಲಿಬೋನು', ಕಾದಂಬರಿಗಳಾದ 'ಉಯ್ಯಾಲೆ', 'ವೈಶಾಖ' ಬರೆದರು. ಸಣ್ಣಕಥೆಗಳನ್ನೂ ಬರೆದರು. ಚದುರಂಗರು ಯಾರನ್ನೂ ಕಡಿಮೆ ದೃಷ್ಟಿಯಿಂದ ನೋಡಲಿಲ್ಲ. ಪ್ರೀತಿಯಿಂದಲೇ ಮಾತನಾಡಿಸುತ್ತಿದ್ದರು. ಇಂಥ ಚುಂಬಕಶಕ್ತಿಯುಳ್ಳವರ ಸ್ನೇಹ ಪಡೆದ ಸತ್ಯಕಾಮ, ರಾವ್ ಬಹದ್ದೂರ್, ಆನಂದ, ತರಾಸು, ಗೋಪಾಲಕೃಷ್ಣ ಅಡಿಗ, ಶ್ರೀಕೃಷ್ಣ ಆಲನಹಳ್ಳಿ, ಗಿರೀಶ್ ಕಾರ್ನಾಡ್, ಬಿ.ವಿ. ಕಾರಂತ, ಪಂ. ರಾಜೀವ್ ತಾರಾನಾಥ್, ಯು.ಆರ್. ಅನಂತಮೂರ್ತಿ, ದೇವನೂರ ಮಹಾದೇವರು ಇವರ ಮನೆಗೆ ಬರುತ್ತಿದ್ದರು. ಹೀಗಾಗಿ, ಈ ಮನೆಯಲ್ಲಿ ಖ್ಯಾತ ಸಾಹಿತಿಗಳ ನೆನಪುಗಳೂ ಅಡಗಿವೆ.
ಚದುರಂಗ ಹೆಸರಿನ ಹಿಂದೆ...
ಚದುರಂಗರು ತಲಕಾಡಿನ ರಾಜವಂಶಕ್ಕೆ ಸೇರಿದವರು. ತಲಕಾಡು ಮರಳಿನಿಂದ ಮುಚ್ಚಿದ ಮೇಲೆ ಅವರ ಹಿರಿಯರು ಸಮೀಪದ ಪಾಳ್ಯದಲ್ಲಿ ನೆಲೆಸಿದರು. ಆಗ ಅವರನ್ನು 'ಚತುರಂಗ ಅರಸು ಮನೆತನದವರು' ಎಂದು ಕರೆಯಲಾಯಿತು. ಇವರೆಲ್ಲರು ಚದುರಂಗ (ಚತುರಂಗ ಸಂಸ್ಕೃತ ಮೂಲ) ಕ್ರೀಡೆಯಲ್ಲಿ ಪ್ರವೀಣರಾಗಿದ್ದರಿಂದ ಇವರಿಗೆ ಈ ಹೆಸರು ವಂಶಪಾರಂಪರ್ಯವಾಗಿ ಬಂದಿತ್ತು. ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಇವರ ಸಂಬಂಧಿ.
- ಜೆ. ಮಹದೇವ
ಚಿತ್ರಗಳು: ಎಸ್. ಮಂಜುನಾಥ್