ಘನತೆಯ ಚಿತ್ರ
ಕಲಾ ಜಗತ್ತಿನಲ್ಲಿ ವಾಣಿಜ್ಯ ಪ್ರಧಾನ ಚಿತ್ರಗಳು ಏನೇ ಸದ್ದು ಮಾಡುತ್ತಿದ್ದರೂ ಅವುಗಳ ನಡುವೆ ಸದಭಿರುಚಿ ಚಿತ್ರಗಳ ಪಯಣ ಮಾತ್ರ ನಿರಂತರವಾಗಿರುತ್ತದೆ. ಒಂದಲ್ಲ ಒಂದು ಚಿತ್ರೋತ್ಸವ, ಸಂವಾದ ಕಾರ್ಯಕ್ರಮಗಳಲ್ಲಿ ಈ ಚಿತ್ರಗಳು ಜೀವಂತವಾಗಿರುತ್ತವೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಅವಕಾಶಕ್ಕೆ ಪಾತ್ರವಾಗುವ ಇಂಥ ಚಿತ್ರಗಳು ಆಗಾಗ ನಮ್ಮ ನಡುವೆಯೂ ಬಂದು ಚರ್ಚೆ ಮೂಡಿಸುತ್ತವೆ. 'ಸಿನಿಮಾ, ಜನರಿಗಾಗಿ' ಎನ್ನುವ ಘೋಷಣೆಯೊಂದಿಗೆ ಹುಟ್ಟಿಕೊಂಡಿರುವ ಆವಿಷ್ಕಾರ ಫಿಲ್ಮ್ ಸೊಸೈಟಿ ತನ್ನ ಎರಡನೇ ವರ್ಷದ ಆಚರಣೆಗಾಗಿ ಚಲನಚಿತ್ರೋತ್ಸವವನ್ನು ಆಯೋಜಿಸುತ್ತಿದೆ. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜು ಸಭಾಂಗಣದಲ್ಲಿ ಅಕ್ಟೋಬರ್ 4, 5 ಮತ್ತು 6ರಂದು ನಡೆಯಲಿರುವ ಈ ಚಿತ್ರೋತ್ಸವ 'ಮಹಿಳಾ ಘನತೆ' ಎನ್ನುವ ಆಶಯವನ್ನು ಒಳಗೊಂಡಿದೆ.
ಮಹಿಳೆಯರ ಮೇಲೆ ದಿನೇ ದಿನೆ ದೌರ್ಜನ್ಯಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಮಹಿಳಾ ಸಿನಿಮೋತ್ಸವ ತನ್ನ ಮಹತ್ವ ಕಾಯ್ದುಕೊಳ್ಳಲಿದೆ ಎಂಬುದು ಆಯೋಜಕರ ಮಾತು. ಮುಖ್ಯವಾಹಿನಿಯ ಸಿನಿಮಾಗಳಲ್ಲಿ ಮಹಿಳೆಯನ್ನು ಕೇವಲ ಒಂದು ಭೋಗದ ವಸ್ತುವನ್ನಾಗಿ ಚಿತ್ರಿಸಲಾಗುತ್ತಿದೆ. ಆದರೆ ಮಹಿಳಾ ಘನತೆಯನ್ನು ಎತ್ತಿ ಹಿಡಿಯುವಂತಹ ಚಿತ್ರಗಳು ಸಾಕಷ್ಟು ಬಂದಿವೆ. ಅಂಥ ಪ್ರಮುಖ ಚಿತ್ರಗಳಾದ ಗಿರೀಶ್ ಕಾಸರವಳ್ಳಿ ನಿರ್ದೇಶನದ ಹಸೀನಾ, ವಿಟ್ಟೋರಿಯೋ ಡಿಸಿಕಾ ನಿರ್ದೇಶನದ ಟೂ ವುಮೆನ್ (ಇಟಾಲಿಯನ್), ಕೇತನ್ ಮೆಹ್ತಾ ನಿರ್ದೇಶನದ ಮಿರ್ಚ್ ಮಸಾಲಾ (ಹಿಂದಿ), ವಿಕ್ಟರ್ ಪ್ಲೆಮಿಂಗ್ ನಿರ್ದೇಶನದ ಜೋನ್ ಆಫ್ ಆರ್ಕ್ (ಇಂಗ್ಲಿಷ್), ತಪನ್ ಸಿನ್ಹಾರ ಅದಾಲತ್ ಓ ಎಕ್ತಿ ಮೆಯೆ (ಬಂಗಾಳಿ) ಮತ್ತು ನಂದಿತಾ ದಾಸ್ರ ಫಿರಾಖ್ (ಹಿಂದಿ) ಚಿತ್ರಗಳು ಮೂರು ದಿನ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.
ಇದೇ ಸಂದರ್ಭ 'ಭಾರತೀಯ ಸಿನಿಮಾರಂಗದಲ್ಲಿ ಪ್ರಯೋಗಶೀಲತೆ', 'ಭಾರತೀಯ ಸಿನಿಮಾ ರಂಗದಲ್ಲಿ ಮಹಿಳೆಯ ಚಿತ್ರಣ', ಹಾಗೂ 'ಭಾರತೀಯ ಸಿನಿಮಾ ರಂಗದಲ್ಲಿ ಸಂಗೀತದ ಪಾತ್ರ' ಕುರಿತು ಸಂವಾದಗಳು ನಡೆಯಲಿವೆ. ನಿರ್ದೇಶಕ ಪಿ.ಶೇಷಾದ್ರಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಎಚ್.ಜಿ.ಸೋಮಶೇಖರ ರಾವ್, ಗಿರೀಶ್ ಕಾಸರವಳ್ಳಿ, ಜಗನ್ನಾಥ್ ಪ್ರಕಾಶ್, ವಿಶಾಖ, ಎನ್.ಎಸ್. ಶ್ರೀಧರ್ಮೂರ್ತಿ, ಗಂಗಾಧರ್ ಮೊದಲಿಯಾರ್, ಬಿ.ಸುರೇಶ ಆಗಮಿಸಲಿದ್ದಾರೆ. ಸಿನಿಮಾ ಆಸಕ್ತರು ಮೂರು ದಿನಗಳ ಈ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ: 9480232406, 9448132322.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.