ದಂತ ಕತೆ
ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ನಿಖರವಾಗಿ ಪತ್ತೇ ಹಚ್ಚಲು ತುಂಬ ಸಹಕಾರಿಯಾಗುತ್ತಿರುವುದು ನ್ಯಾಯ ದಂತ ವೈದ್ಯಶಾಸ್ತ್ರ...
ಅತ್ಯಾಚಾರ, ಕೊಲೆ, ಜಗಳ ಹಾಗೂ ಇನ್ನಿತರ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ನಿಖರವಾಗಿ ಪತ್ತೇ ಹಚ್ಚಲು ಇತ್ತೀಚಿನ ವರ್ಷಗಳಲ್ಲಿ ತುಂಬ ಸಹಕಾರಿಯಾಗುತ್ತಿರುವುದು ನ್ಯಾಯ ದಂತ ವೈದ್ಯಶಾಸ್ತ್ರ.
ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ದೆಹಲಿ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣದಲ್ಲಿಯೂ ಐವರಲ್ಲಿ ಇಬ್ಬರು ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಲು ಪ್ರಮುಖ ಸಾಕ್ಷಿಯಾಗಿದ್ದು ಇದೇ ನ್ಯಾಯ ದಂತ ವೈದ್ಯಶಾಸ್ತ್ರ.
ಆದರೆ, ಈ ನ್ಯಾಯ ದಂತ ವೈದ್ಯಶಾಸ್ತ್ರ ದೇಶದ ಎಲ್ಲ ದಂತ ವೈದ್ಯಕೀಯ ಕಾಲೇಜುಗಳಲ್ಲಿ ಇಲ್ಲ. ಹೀಗಾಗಿಯೇ ಧಾರವಾಡದ ಎಸ್ಡಿಎಂ ದಂತ ವೈದ್ಯಕೀಯ ಕಾಲೇಜಿನ ನ್ಯಾಯ ದಂತ ವೈದ್ಯಶಾಸ್ತ್ರ ವಿಭಾಗ ದೆಹಲಿಯ ನಿರ್ಭಯಾ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿತು.
ಆಸ್ಟ್ರೇಲಿಯಾದಲ್ಲಿ ಪಿಜಿ
ದೇಶದ ಏಕೈಕ ಸುಸಜ್ಜಿತ ನ್ಯಾಯ ದಂತ ವೈದ್ಯಶಾಸ್ತ್ರ ವಿಭಾಗ ಧಾರವಾಡದ ಎಸ್ಡಿಎಂ ದಂತ ವೈದ್ಯಕೀಯ ಕಾಲೇಜಿನಲ್ಲಿದೆ. ಇದೇ ಕಾಲೇಜಿನಲ್ಲಿ ಬಿಡಿಎಸ್ (ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ) ಮುಗಿಸಿ ಕಳೆದ 13 ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಆಶಿತ್ ಆಚಾರ್ಯ ಈ ವಿಭಾಗದ ಮುಖ್ಯಸ್ಥರಾಗಿದ್ದು, ಇಡೀ ದೇಶದಲ್ಲಿಯೇ ಚರ್ಚೆಗೆ ಬಂದ ಅಣ್ಣಿಗೇರಿ ತಲೆ ಬುರುಡೆಗಳ ಹಾಗೂ ದೆಹಲಿ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಹಲ್ಲಿಗೆ ಸಂಬಂಧಿಸಿದ ತನಿಖೆಯನ್ನು ಇದೇ ವ್ಯಕ್ತಿ ನಿಖರವಾಗಿ ಮಾಡಿ ಭೇಷ್ ಎನಿಸಿಕೊಂಡದ್ದು.
ಇಡೀ ಮನುಷ್ಯನ ದೇಹದಲ್ಲಿ ಹಲ್ಲು ಅತೀ ಗಟ್ಟಿಯಾದ ಅಂಗ. ಬಲಾತ್ಕಾರ, ಕೊಲೆ, ಜಗಳದಂತಹ ಸಂದರ್ಭದಲ್ಲಿ ಆರೋಪಿ ಸಾಮಾನ್ಯವಾಗಿ ಹಲ್ಲನ್ನು ಆಯುಧವಾಗಿ ಬಳಸುತ್ತಾನೆ. ವ್ಯಕ್ತಿ ಹಲ್ಲನ್ನು ರಕ್ಷಣೆಗೂ ಬಳಸಬಹುದು ಅಥವಾ ಆಕ್ರಮಣಕ್ಕೂ ಬಳಸಬಹುದು. ಸಂದರ್ಭಕ್ಕೆ ತಕ್ಕಂತೆ ಹಲ್ಲಿನ ಬಳಕೆಯಾಗುತ್ತದೆ. ಸಾಮಾನ್ಯವಾಗಿ ಇಂತಹ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳು ಪೊಲೀಸರಿಗೆ ಸಿಕ್ಕಾಗ, ಆತನ ಹಲ್ಲಿನ ಮಾದರಿ ಸಿದ್ಧಪಡಿಸಲಾಗುತ್ತದೆ. ಆತ ಕಚ್ಚಿದ ಭಾಗದ ಹಲ್ಲಿನ ಸೈಜ್ ಹಾಗೂ ಪ್ಯಾಟರ್ನ್ ಮೂಲಕ ಎರಡಕ್ಕೂ ಹೊಂದಾಣಿಕೆ ಆಗುತ್ತದೆಯೇ ಅಥವಾ ಇಲ್ಲವೋ ಎಂಬುದನ್ನು ತೀರ್ಮಾನಿಸಲಾಗುತ್ತದೆ. ಈ ತೀರ್ಮಾನವನ್ನು ನಿಖರ, ಹೆಚ್ಚಿನಾಂಶ ಹಾಗೂ ಸಂಭವನೀಯ ಎಂದು ಮೂರು ಪ್ರಕಾರದಲ್ಲಿ ನಿರ್ಧರಿಸಲಾಗುತ್ತದೆ.
ಪೊಲೀಸ್ ಇಲಾಖೆಗ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ವ್ಯಕ್ತಿಯ ವಯಸ್ಸನ್ನು ಸಹ ಈ ವೈದ್ಯಶಾಸ್ತ್ರದ ಮೂಲಕ ಗುರುತಿಸಬಹುದು. ವಯಸ್ಸು ಹೇಳುವ ನಿಖರ ದಾಖಲೆಗಳು ಸಿಗದಿರುವಾಗ ಆತನ ಹಲ್ಲಿನ ಮೇಲೆಯೂ ಆತನ ವಯಸ್ಸನ್ನು ತಿಳಿಯಬಹುದು. ಆತನ ಹಲ್ಲಿನ ಅಳತೆ ಹಾಗೂ ದವಡೆಯಲ್ಲಿರುವ ನರಗಳ ಆಧಾರದ ಮೇಲೆ ಕಂಡು ಹಿಡಿಯಬಹುದು. ಸಾಮಾನ್ಯವಾಗಿ ಮಹಿಳೆಯರಿಗೆ ಸಣ್ಣ ಹಾಗೂ ಪುರುಷರಿಗೆ ದೊಡ್ಡ ಹಲ್ಲುಗಳಿರುತ್ತವೆ. ಈ ಮೂಲಕ ಲಿಂಗ ಪತ್ತೇ ಮಾಡಬಹುದು. ಇದಲ್ಲದೇ, ನಮ್ಮದೆಯಾದ ಸೂತ್ರಗಳ ಮೂಲಕ ಕಂಪ್ಯೂಟರ್ನಲ್ಲಿ ಲೆಕ್ಕ ಹಾಕಿ ನಿರ್ಧಾರ ಮಾಡಲಾಗುವುದು. ಅಲ್ಲದೆ, ಗಂಭೀರ ಅಪಘಾತಗಳಲ್ಲಿ ವ್ಯಕ್ತಿ ಮುಖ ಪೂರ್ತಿ ಜಜ್ಜಿ ಹೋಗಿರುತ್ತದೆ ಅಥವಾ ಸುಟ್ಟಿರುತ್ತದೆ. ಆಗ ಸತ್ತ ವ್ಯಕ್ತಿ ಗಂಡೋ, ಹೆಣ್ಣೋ, ವಯಸ್ಸೇನು ಎಂಬುದನ್ನು ಸಹ ಹಲ್ಲಿನ ಆಧಾರದ ಮೇಲೆ ಗುರುತಿಸಬಹುದು. ಅಣ್ಣಿಗೇರಿ ತಲೆಬುರುಡೆ ಪ್ರಕರಣದಲ್ಲಿ ಹಲ್ಲಿನ ಆಧಾರದ ಮೇಲೆಯೇ ಗಂಡು, ಹೆಣ್ಣು, ವಯಸ್ಸನ್ನು ಸ್ವತಃ ನಾನೇ ತನಿಖೆ ಮಾಡಿದ್ದೆನೆಂದು ಆಶಿತ ಆಚಾರ್ಯ ತಿಳಿಸುತ್ತಾರೆ.
ನಿರ್ಭಯ ಪ್ರಕರಣ
ದೆಹಲಿ ನಿರ್ಭಯಾ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧಿಸಿದಂತೆ ನ್ಯಾಯ ದಂತ ವೈದ್ಯಶಾಸ್ತ್ರ ನೀಡಿದ ಕೊಡುಗೆ ಕುರಿತು ಡಾ. ಅಶಿತ್ ಆಚಾರ್ಯ ಮಾತನಾಡಿದ್ದಾರೆ:
ಡಿ. 16ರಂದು ನಡೆದ ಈ ಪ್ರಕರಣದಲ್ಲಿ ಆರೋಪಿಗಳು ಯುವತಿಯ ಮುಖ, ಹೊಟ್ಟೆ, ಕಾಲು, ಗುಪ್ತಾಂಗ ಸೇರಿದಂತೆ ಐದು ಕಡೆ ಕಚ್ಚಿ ಗಾಯಗೊಳಿಸಿದ್ದರು ಎಂದು ಸಫ್ದರ್ಜಂಗ್ ಆಸ್ಪತ್ರೆಯ ದಂತ ವೈದ್ಯ ಡಾ. ಅನುರಾಗ ಜೈನ್ ಅವರಿಂದ ಡಿ. 17ರ ರಾತ್ರಿ 10ಕ್ಕೆ ದೂರವಾಣಿ ಮೂಲಕ ನನಗೆ ಮಾಹಿತಿ ಬಂದಿತ್ತು. ಕಚ್ಚಿದ ಗಾಯಗಳ ಬಳಿ ಸ್ಕೇಲ್ ಇಟ್ಟು ಸರಿಯಾಗಿ ಫೋಟೋ ತೆಗೆಯಲು ಸಲಹೆ ನೀಡಿದ್ದೆ. ಆರೋಪಿಗಳು ಸಿಕ್ಕಾಗ ಅವರ ಹಲ್ಲಿನ ಮಾದರಿಗಳನ್ನು ತೆಗೆದಿಟ್ಟುಕೊಳ್ಳಲು ತಿಳಿಸಿದ್ದೆ. ಅಂತೆಯೇ, ಈ ಎಲ್ಲ ಪೂರಕ ದಾಖಲೆಗಳನ್ನು ಪೊಲೀಸ್ ಅಧಿಕಾರಿಯೊಬ್ಬರು ಜ. 2ರಂದು ಆಸ್ಪತ್ರೆಗೆ ತಮಗೆ ನೀಡಿದ್ದರು. ಜ. 3ರಿಂದ ನಿತ್ಯ 10 ತಾಸು ಪ್ರಯೋಗಾಲಯದಲ್ಲಿ ಹಾಗೂ ಕಂಪ್ಯೂಟರ್ನಲ್ಲಿನ ಸೂತ್ರಗಳ ಮೂಲಕ ತನಿಖೆಯಲ್ಲಿ ತೊಡಗಿ ಜ.7ರಂದು ತನಿಖೆ ಪೂರ್ತಿಗೊಳಿಸಿದೆ.
ಐವರು ಆರೋಪಿಗಳ ಪೈಕಿ ರಾಮಸಿಂಗ್ ಯುವತಿಗೆ ಕಚ್ಚಿದ್ದು ನಿಖರವಾಗಿ ತಿಳಿದು ಬಂತು. ಇನ್ನೋರ್ವ ಆರೋಪಿ ಅಕ್ಷಯ ಠಾಕೂರನ ಪಾತ್ರ ಹೆಚ್ಚಿನಂಶ ಇತ್ತು. ಈ ಕುರಿತು 12 ಪುಟಗಳ ವಿಸ್ತೃತ ವರದಿ ನೀಡಿದೆ. ಇದಾದ ನಾಲ್ಕು ತಿಂಗಳ ನಂತರ ಸಾಕೇತ್ ಕೋರ್ಟ್ನಲ್ಲಿ ನಾಲ್ಕು ಗಂಟೆಗಳ ವಿಚಾರಣೆ ನಡೆಯಿತು. ನಾನು ಮಾಡಿದ ತನಿಖೆ ಕುರಿತು ವಿವರವಾಗಿ ತಿಳಿಸಿದೆ. ಈಗ ಆರೋಪಿಗಳಿಗೆ ಗಲ್ಲು ಶಿಕ್ಷೆಯೂ ಆಗಿದೆ. ನ್ಯಾಯಾಧೀಶರು ನೀಡಿದ ಆದೇಶದ 128ರಿಂದ 132 ಪುಟದಲ್ಲಿ ಡಿಎನ್ಎ, ಬೆರಳಚ್ಚು ಪರೀಕ್ಷೆ ಹಾಗೂ ಯುವತಿಗೆ ಇವರೇ ಕಚ್ಚಿದ್ದಾರೆಂದು ನಿಖರವಾಗಿ ತನಿಖೆಯಿಂದ ತಿಳಿದಿದ್ದು, ಈ ಆಧಾರದ ಮೇಲೆ ಗಲ್ಲು ಶಿಕ್ಷೆ ನೀಡಲಾಗುತ್ತಿದೆ ಎಂಬುದಾಗಿಯೂ ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣದಲ್ಲಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ ಸಮಾಧಾನ ನನಗಿದೆ. ಇದು ಕಾಲೇಜಿಗೂ ಹಾಗೂ ಕಾಲೇಜಿನ ಸಂಸ್ಥಾಪಕ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರಿಗೂ ಗೌರವ ತರುವ ಕೆಲಸ ಎಂದರು ಡಾ. ಆಶಿತ.
ಇದು ನಮ್ಮಲ್ಲಿದೆ
1986ರಲ್ಲಿ ಧಾರವಾಡದಲ್ಲಿ ಆರಂಭವಾದ ಎಸ್ಡಿಎಂ ದಂತ ವೈದ್ಯಕೀಯ ಕಾಲೇಜು ದೇಶದಲ್ಲಿರುವ ಖಾಸಗಿ ದಂತ ವೈದ್ಯಕೀಯ ಕಾಲೇಜುಗಳಲ್ಲಿಯೇ ಕಳೆದ ನಾಲ್ಕು ವರ್ಷಗಳಿಂದ ಮೊದಲ ಸ್ಥಾನದಲ್ಲಿದೆ. ದಂತ ವೈದ್ಯಕ್ಕೆ ಸಂಬಂಧಿಸಿ ಒಂಬತ್ತು ಸ್ನಾತಕೋತ್ತರ ವಿಭಾಗಗಳಿವೆ. ಯಾವ ಖಾಸಗಿ ಕಾಲೇಜುಗಳಲ್ಲಿ ಇರದಿರುವ ಒಂದೇ ಸ್ಥಳದಲ್ಲಿ ಹಲ್ಲಿನ ಸಮಸ್ಯೆಯನ್ನು ಬಗೆಹರಿಸುವ ಸಂಪೂರ್ಣ ದಂತ ವಿಭಾಗ, ಹಿರಿಯರಿಗಾಗಿಯೇ ಪ್ರತ್ಯೇಕ ಚಿಕಿತ್ಸೆ ವಿಭಾಗ ಹಾಗೂ ಪ್ರಸ್ತುತ ಚರ್ಚೆಯಲ್ಲಿರುವ ನ್ಯಾಯ ದಂತ ವೈದ್ಯಶಾಸ್ತ್ರ ವಿಭಾಗ ನಮ್ಮ ಕಾಲೇಜಿನಲ್ಲಿದೆ. ನಿತ್ಯ 400ರಿಂದ 500 ರೋಗಿಗಳು ಬಂದು ಹೋಗುತ್ತಾರೆ. ಬರಿ ಹಲ್ಲು ಮಾತ್ರವಲ್ಲ ವಸಡು ಸಮಸ್ಯೆ, ಬಾಯಿ ಕ್ಯಾನ್ಸರ್ ಹಾಗೂ ಸೀಳು ತುಟಿ ಸರಿಪಡಿಸುವ ತಂತ್ರಜ್ಞಾನವೂ ನಮ್ಮಲ್ಲಿದೆ. 70 ಜನ ಪ್ರಾಧ್ಯಾಪಕರು ಇಲ್ಲಿದ್ದು, ದೇಶದ ರಾಜಧಾನಿ ದೆಹಲಿ ಅಂತಹ ಸ್ಥಳದಲ್ಲಿ ಇರದಿರುವ ದಂತ ನ್ಯಾಯ ವೈದ್ಯಶಾಸ್ತ್ರ ನಮ್ಮ ಕಾಲೇಜಿನಲ್ಲಿರುವುದು ಹೆಮ್ಮೆ ತಂದಿದೆ.
- ಡಾ. ಶ್ರೀನಾಥ ಠಾಕೂರ
ಎಸ್ಡಿಎಂ ದಂತ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ
- ಬಸವರಾಜ ಹಿರೇಮಠ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.