ಮನಸ್ಸು ಗಟ್ಟಿ ಇದ್ದರೆ ಚಪಲದ ಆಟ ನಡೆಯದು
ಸಾಮಾನ್ಯವಾಗಿ ಪ್ರವಾಸಕ್ಕೆ ಹೋದಾಗಲೇ ತಿನ್ನುವ ಚಪಲವೂ ಕಾಡುತ್ತದೆ. ಕೆಲವರಿಗಂತೂ ಆಯಾ ಪ್ರಾಂತ್ಯದ ವಿಶಿಷ್ಟ ರುಚಿಗಳನ್ನು ಪರಿಚಯಿಸಿಕೊಳ್ಳುವ ತವಕ. ತಪ್ಪಲ್ಲ. ಮನುಷ್ಯರಿಗೆ ಅಷ್ಟುಮಾತ್ರದ ಕುತೂಹಲ, ತಿಳಿದುಕೊಳ್ಳುವ ಕಾತರ ಇಲ್ಲದಿದ್ದರೆ ಹೇಗೆ? ಬಹಳಷ್ಟು ಮಂದಿ ಎಡವುವುದು, ಅತಿಸಾರದಂಥ ಆರೋಗ್ಯ ತೊಂದರೆಗಳನ್ನು ತಂದುಕೊಳ್ಳುವುದು ಈ ವಿಚಾರದಲ್ಲಿಯೇ. ಬಾಯಿರುಚಿ ಹತ್ತಿದ ತಕ್ಷಣ ಮತ್ತಷ್ಟು ತಿನ್ನಕೂಡದು. ಕಂಡಿದ್ದನ್ನೆಲ್ಲ ತಿನ್ನುವುದು ಸರ್ವಥಾ ಸರಿಯಲ್ಲ. ಅದು ಪ್ರವಾಸದಲ್ಲಿ ಇರುವಾಗ ವಿಧಿಸಿಕೊಳ್ಳಲೇಬೇಕಾದ ಕಟ್ಟುನಿಟ್ಟು. ಅಲ್ಲಿನ ವಿಶಿಷ್ಟ ತಿನಿಸಿನ ರುಚಿ ಸವಿಯಬೇಕು ತಾನೆ? ಸವಿಯಿರಿ. ಆದರೆ ನೀವು ಆರಿಸಿಕೊಳ್ಳುವ ಹೋಟೆಲ್ ಎಷ್ಟೇ ಒಳ್ಳೆಯದಿರಲಿ. ತಿನ್ನುವ ಪ್ರಮಾಣದಲ್ಲಿ ಮಿತಿ ಇರಲಿ, ಅಂದರೆ ರುಚಿ ನೋಡಲು ಎಷ್ಟು ಬೇಕೋ ಅಷ್ಟೇ. ನಾಲಿಗೆ ಬೇಕು ಅನ್ನುತ್ತಿರುತ್ತದೆ. 'ಇಷ್ಟು ಸಾಕು' ಎಂದು ದೃಢನಿರ್ಧಾರ ಮಾಡಿಕೊಳ್ಳಿ. ಅಷ್ಟು ಗಟ್ಟಿಮನಸ್ಸು ನಿಮ್ಮದಾಗಿದೆ ಅಂತಾದರೆ ನಿಮ್ಮ ಪ್ರವಾಸದಲ್ಲಿ ಆಹಾರದಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಬಾಧಿಸಲು ಎಂದು ಖಚಿತವಾಗಿ ಹೇಳಬಹುದು. ಪ್ರವಾಸಿ ತಾಣಗಳಿಗೆ ಭೇಟಿ ಕೊಡುವವರು ಹೋಟೆಲ್‌ನ ಆಯ್ಕೆಯಲ್ಲಿ ಎಷ್ಟು ಜಾಗೃತೆಯಿಂದ ಇದ್ದರೂ ಕಡಿಮೆಯೇ. ಎಷ್ಟೇ ಅವಸರ ಇದ್ದರೂ ಶುಚಿತ್ವ ಇಲ್ಲದ ಹೋಟೆಲ್ ಆರಿಸಿಕೊಳ್ಳಬೇಡಿ. ಎಮರ್ಜೆನ್ಸಿಗಾಗಿ ಬ್ಯಾಗ್‌ನಲ್ಲಿ ಬಿಸ್ಕತ್ ಪೊಟ್ಟಣ ಇಟ್ಟುಕೊಂಡಿರುವುದು ಒಳ್ಳೆಯದು.
ಇನ್ನೊಂದು ಪ್ರಮುಖ ಸಂಗತಿ ಎಂದರೆ ಪ್ರವಾಸದಲ್ಲಿರುವಾಗ ಮಾಮೂಲಿಗಿಂತ ತುಸು ಕಡಿಮೆ ತಿಂದರೆ ಒಳ್ಳೆಯದು. ಏಕೆಂದರೆ ಆಗ ನೀವು ಅಷ್ಟು ಚಟುವಟಿಕೆಯಿಂದ ಕೂಡಿರುವುದಿಲ್ಲ. ಬಹುತೇಕ ಅವಧಿಯನ್ನು ಪ್ರಯಾಣದಲ್ಲಿ ಕಳೆಯುತ್ತೀರಿ. ಹೀಗಾಗಿ ಜೀರ್ಣವಾಗುವುದು ಕಡಿಮೆ. ಆದ್ದರಿಂದ ಸ್ವಲ್ಪ ಕಡಿಮೆ ತಿಂದರೆ ಯಾವ ತೊಂದರೆಯೂ ಆಗುವುದಿಲ್ಲ. ನೀರಿನ ವಿಚಾರದಲ್ಲೂ ಅಷ್ಟೇ ಎಚ್ಚರಿಕೆ ಇರಲಿ. ಸೀಲ್ ಮಾಡಿದ ಬಾಟಲಿ ನೀರನ್ನೇ ಕುಡಿಯಿರಿ. ಕೆಲವು ಕಡೆ ಸೀಲ್ ಒಡೆದಿರುತ್ತದೆ. 'ಇದು ಶುದ್ಧ ನೀರು' ಎಂದು ವೇಯ್ಟರ್ ಹೇಳುತ್ತಾನೆ. ಅದನ್ನೇನು ಅವನು ಪುಕ್ಕಟೆಯಾಗಿ ಕೊಡುವುದಿಲ್ಲವಲ್ಲ. ಆದ್ದರಿಂದ ಸೀಲ್ ಮಾಡಿದ ಬಾಟಲಿಯನ್ನೇ ಕೇಳಿ ಪಡೆಯಿರಿ. ಅದರಲ್ಲೂ ಕಾರ್ಬೊನೇಟೆಡ್ ನೀರು ಕುಡಿಯುವುದು ಉತ್ತಮ. ಇನ್ನು ಸಾಮಾನ್ಯವಾಗಿ ಎಲ್ಲ ಹೊಟೆಲ್‌ಗಳಲ್ಲೂ ಬಿಸಿ ನೀರು ಸಿಗುತ್ತದೆ. ಸರ್ಕಾರದ ಕಾಯ್ದೆ ಪ್ರಕಾರ ಬಿಸಿ ನೀರು ಕೊಡುವುದು ಕಡ್ಡಾಯ ಕೂಡ. ಎಲ್ಲೋ ಕೆಲವರು ಕೊಡದೇ ಇರಬಹುದು. ಕೊಟ್ಟಿಲ್ಲ ಎಂದಾದರೆ ನೀವು ನಿಮ್ಮ ಹಕ್ಕಿಗಾಗಿ ಬೇಡಿಕೆ ಮಂಡಿಸಬಹುದು. ಅಗತ್ಯ ಬಿದ್ದರೆ ಸಂಬಂಧಿಸಿದ ಪ್ರಾಧಿಕಾರಕ್ಕೆ ದೂರು ನೀಡುವ ಬೆದರಿಕೆಯನ್ನೂ ಹಾಕಬಹುದು. ಅದರಲ್ಲಿ ತಪ್ಪೇನೂ ಇಲ್ಲ. ಅತಿಸಾರ ಹರಡುವ ಇ-ಕೋಲಿ ನಿಮ್ಮ ದೇಹವನ್ನು ಪ್ರವೇಶಿಸುವುದೇ ನೀರಿನ ಮೂಲಕ. ಆದ್ದರಿಂದ ನೀರಿನ ವಿಚಾರದಲ್ಲಿಯೂ ಎಚ್ಚರಿಕೆ ಅಗತ್ಯ.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com