ವಾಸ್ತು ಮನೆಗೋ, ಮನಸ್ಸಿಗೋ?
ಈ ವಾಸ್ತು ಎಂಬುದು ಒಂದು ಮಾನಸಿಕ ಖಿನ್ನತೆಯಾಗಿದೆ. ಯಾವುದೇ ತೊಂದರೆ ತಾಪತ್ರಯಗಳಿಗೆ ಕಾರಣ ವಾಸ್ತು ದೋಷ ಎಂಬ ಮೌಢ್ಯತೆಯನ್ನು ತೆಗೆದು ಹಾಕಿ. ನಾವು ಮಾಡುವ ಕೆಲಸದಲ್ಲಿ ನಂಬಿಕೆ, ವಸ್ತುನಿಷ್ಠ ಯೋಚನೆ ಇರಬೇಕೇ ಹೊರತು, ವಾಸ್ತುದೋಷದಿಂದಲೇ ಆಗಿದೆ ಎಂದು ಏನೇನೋ ಮಾಡಲು ಹೋದರೆ ಪ್ರಮಾದವಾದೀತು. ನಮಗೆ ಇರುವ ಸಮಸ್ಯೆ, ದೋಷಗಳಿಗೆ ಪರಿಹಾರ ಹುಡುಕುವ ಆಲೋಚನೆ ಮಾಡಬೇಕೇ ಹೊರತು ಅವಿವೇಕಿಗಳಂತೆ ಆಡಬಾರದು. ಒಳ್ಳೆಯ ಸಂಸ್ಕಾರಗಳನ್ನು ಸ್ವಾಗತಿಸೋಣ ಆದರೆ ಮೌಢ್ಯತೆಯನ್ನಲ್ಲ, ಹಾಗಿದ್ದರೆ ವಿದೇಶಗಳಲ್ಲಿ ವಾಸ್ತುಬದ್ಧವಾಗಿಯೇ ಮನೆಗಳನ್ನು ನಿರ್ಮಿಸುತ್ತಾರೆಯೇ? ಬೆಂಗಳೂರಂಥ ಸಿಟಿಗಳಲ್ಲಿ ವಾಸ್ತುಬದ್ಧವಾದ ಬಾಡಿಗೆ ಮನೆಗಳನ್ನು ಹುಡುಕಲು ಹೋದರೆ ಮನೆ ಮಾತ್ರವಲ್ಲ, ಹಾಸ್ಟೆಲ್‌ಗಳೂ ಸಿಗುವುದಿಲ್ಲ.
= ಗೂಳೂರು ಕವಿತ ಕೆ.ಆರ್.
ತಲೆ ಕೆಡಿಸಿಕೊಳ್ಳಬೇಡಿ...
ವಾಸ್ತು ಬೇಕೇ, ಬೇಡವೇ ಎಂಬ ವಿಷಯ ಬಂದಾಗ ನಾವು ಅನಗತ್ಯವಾಗಿ ಯೋಚಿಸುತ್ತಿದ್ದೇವೆ ಅನ್ನಿಸುತ್ತಿದೆ. ನಮ್ಮ ಅಜ್ಜನ ಕಾಲದಲ್ಲಿ ಯಾವ ವಾಸ್ತುವಿನ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಹಿರಿಯರಿಂದ ಬಂದ ಮನೆಯಲ್ಲಿ ವರ್ಷಾನುಗಟ್ಟಲೆ ಸಂತೋಷದಿಂದ ಇರುತ್ತಿದ್ದರು. 15 ವರ್ಷದಿಂದೀಚೆಗೆ ಈ ವಾಸ್ತುವೆಂಬ ವಸ್ತು ತುಂಬಾ ತಲೆ ಕೆಡಿಸುತ್ತಿದೆ. ಏನೇ ಒಂದು ಚೂರು ಕಷ್ಟ ಬಂದರೂ ಅದಕ್ಕೆ ವಾಸ್ತು ಸರಿ ಇಲ್ಲ ಅದಕ್ಕೇ ಹೀಗಾಯ್ತು ಅಂತ ದಿನಾ ಅದನ್ನೇ ಚಿಂತಿಸಿ ನಿಜವಾಗಿ ಕಾಯಿಲೆ ಬರಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ವಾಸ್ತು ಎಷ್ಟು ಬೇಕೋ ಅಷ್ಟನ್ನು ಬಳಸಿ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಆರೋಗ್ಯದಿಂದಿರಿ.
= ಸುವರ್ಣಲತಾ, ಅಬುಧಾಬಿ
ನಮ್ಮಿಷ್ಟದಂತೆ ಮನೆ
ಇಂದು ವಾಸ್ತುವಿನ ಹೆಸರಿನಲ್ಲಿ ಅನೇಕರು ಹಣ ಹಾಗೂ ನೆಮ್ಮದಿ ಕಳೆದುಕೊಂಡಿದ್ದಾರೆ. ಅಂಥವರು ಹಳೇ ಕಾಲದ ಮನೆಗಳನ್ನು ಒಮ್ಮೆ ಗಮನಿಸಬೇಕಾಗುತ್ತದೆ. ಯಾವುದೇ ವಾಸ್ತುವಿನ ಹಂಗಿಲ್ಲದೆ ಕಟ್ಟಿದ ಮನೆಗಳು ಬಹಳ ಕೌಶಲ್ಯ ಪೂರ್ಣವಾಗಿಯೂ, ದೃಢವಾಗಿಯೂ ಇರುತ್ತವೆ. ಅದರಲ್ಲಿ ವಾಸಿಸುತ್ತಿರುವವರೂ ಯಾವುದೇ ತೊಂದರೆಗಳಿಲ್ಲದೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಹೀಗಿರುವಲ್ಲಿ ಆಧುನಿಕ ಕಾಲದಲ್ಲೂ ವಾಸ್ತುವನ್ನು ನಂಬಿ, ಹಣ ಹಾಗೂ ನೆಮ್ಮದಿ ಕಳೆದುಕೊಳ್ಳುವುದಲ್ಲದೆ ತಮ್ಮ ಇಷ್ಟದಂತೆ ಮನೆಗಳನ್ನು ನಿರ್ಮಿಸಿಕೊಳ್ಳಲಾಗದೆ, ಯಾರದೋ ಮಾತಿನಂತೆ ಮನೆಮಾಡಿ (ಒಡೆದುಹಾಕಿ) ಅದನ್ನೇ ಅಂದವೆಂದು ಭಾವಿಸುವ ಅಲ್ಪಸಂತೋಷಿಗಳೂ ಇದ್ದಾರೆ. ಹಣ, ಶ್ರಮ, ಸಮಯ ನಮ್ಮದಾಗಿರುವಾಗ, ಆಧುನಿಕತೆಯೂ ಮುಂದುವರಿದಿರುವಾಗ ಮನೆಯ ವಿನ್ಯಾಸ ಕೂಡ ಯಾಕೆ ನಮ್ಮದಾಗಿರಬಾರದು?
- ನವೀನ್ ಸಂಪತ್, ಚಾಮರಾಜನಗರ