'ವಾಸ್ತು' ಕಂಪನ
ವಾಸ್ತು ರೀತಿಯಲ್ಲೇ ನಕ್ಷೆ ತಯಾರಿಸಿ, ಮನೆಯ ಕಾಮಗಾರಿಗಳನ್ನು ಅದಕ್ಕನುಗುಣವಾಗಿಯೇ ಪಾಲಿಸಿದ ಮೇಲೂ ಸಾಲದ ಬಾಧೆಯನ್ನು ತಾಳಲಾರದೆಯೋ, ಇನ್ನಿತರ ಕಾರಣಗಳಿಗಾಗಿಯೋ ಗೃಹ ಪ್ರವೇಶದ ಮೊದಲೇ ಮನೆ ಮಾರಾಟಕ್ಕಿಟ್ಟ ಪ್ರಸಂಗಗಳು ನಮ್ಮೆದುರಿಗಿವೆ. ಮೂರು ವಸಂತಗಳ ಹಿಂದಿನ ಮಾತು. ಅಂದು 'ವಾಸ್ತು'ವಿಗೆ ಅಷ್ಟೊಂದು ಪ್ರಾಮುಖ್ಯವಿರಲಿಲ್ಲ. ಪ್ರಚಲಿತ ವಾಸ್ತುವಿಗೆ ಹೋಲಿಸಿದರೆ ಅಂದು ನಿರ್ಮಾಣಗೊಂಡ ನಮ್ಮ ಮನೆಯು ಸಂಪೂರ್ಣ ತದ್ವಿರುದ್ಧವಾಗಿಯೇ ಇದೆ. ನಮ್ಮ ಇದುವರೆಗಿನ ವಾಸವು ನಮಗೆ ಕಹಿಗಿಂತ ಅಧಿಕವಾಗಿ ಸವಿಯನ್ನೇ ನೀಡಿದೆ.
- ಟಿ. ಯಶವಂತ ಪೈ. ಕೆಜಿಎಫ್
ವಾಸ್ತು- ಸಂಸ್ಕೃತಿಯ ಭಾಗ
ನಮ್ಮ ದೇಶ ಸಾಂಸ್ಕೃತಿಕ ಕಣಜ. ಇಲ್ಲಿ ನಂಬಿಕೆಗಳು, ರೀತಿ- ನೀತಿ ಶತ ಶತಮಾನಗಳಿಂದ ಹಾಸು ಹೊಕ್ಕಾಗಿವೆ. 'ವಾಸ್ತು' ಎನ್ನುವುದು ಭಾರತೀಯ ಸಂಸ್ಕೃತಿಯಲ್ಲಿ ಕಂಡುಬರುವ ಪರಿಕಲ್ಪನೆ. ಇದನ್ನು ನಂಬುವುದು ಬಿಡುವುದು ಅವರವರ ಭಾವಕ್ಕೆ ಬಿಟ್ಟಿದ್ದು. ಇಂದು ನಮ್ಮ ದೇಶದಲ್ಲಿ ಎಲ್ಲಾ ರಂಗಗಳಲ್ಲಿ ವಾಸ್ತು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ವಾಸ್ತು ಸರಿಯಿಲ್ಲದೆ ಇರುವ ಸ್ಥಳದಲ್ಲಿ ವಾಸ ಮಾಡಿದರೆ ಕಷ್ಟ ನಷ್ಟ ದುಃಖ ಉಂಟಾಗುತ್ತದೆ ಎಂದು ಹೇಳುವವರು, ಅದನ್ನು ಕೇಳುವವರು ಇದ್ದಾರೆ. ನಾಮ ಬಲಕ್ಕೂ ವಾಸ್ತುವಿಗೂ ನಿಕಟ ಸಂಬಂಧವಿದೆ. ಒಬ್ಬರಿಗೆ ಪೂರ್ವಾಭಿಮುಖ, ಉತ್ತರಾಭಿಮುಖವುಳ್ಳ ಬಾಗಿಲುಗಳ ಮನೆ ಒಳ್ಳೆಯದನ್ನು ಮಾಡಿದರೆ ಇನ್ನೂ ಕೆಲವರಿಗೆ ಪಶ್ಚಿಮಾಭಿಮುಖ, ದಕ್ಷಿಣಾಭಿಮುಖವುಳ್ಳ ಬಾಗಿಲುಗಳ ಮನೆ ಒಳ್ಳೆಯದನ್ನು ಮಾಡುತ್ತದೆ. ದಿಕ್ಕುಗಳ ಮೇಲೆ ವಾಸ್ತು ನಿರ್ಧಾರವಾಗುತ್ತದೆ. ಸಾಮಾನ್ಯವಾಗಿ 8 ದಿಕ್ಕುಗಳಲ್ಲಿ, ಆಗ್ನೇಯ, ನೈರುತ್ಯ, ವಾಯುವ್ಯ ಹಾಗೂ ಈಶಾನ್ಯ ದಿಕ್ಕುಗಳಲ್ಲಿ ಮುಖ್ಯ ಬಾಗಿಲನ್ನು ಇಡುವುದಿಲ್ಲ. ಹಾಗೆಯೇ ಮೂರು ಮೂಲೆಗಳುಳ್ಳ ಮನೆಯನ್ನು ಯಾರೂ ಕಟ್ಟುವುದಿಲ್ಲ. 4 ಮೂಲೆಗಳುಳ್ಳ ಮನೆಗಳೇ ನಮ್ಮಲ್ಲಿ ಹೆಚ್ಚು. ಶೇ.90 ಜನರು ವಾಸ್ತುವನ್ನು ನಂಬುತ್ತಾರೆ.
- ಡಾ. ಆರ್. ನಾಗರಾಜು ಗುರೂಜಿ, ರನ್ನ ಮುಧೋಳ.
ವ್ಯಕ್ತಿತ್ವ ಸರಿ ಇದ್ದರೆ ಸಾಕು
ವಾಸ್ತುವನ್ನು ನಂಬಿದರೆ ಮನೆ ಕಟ್ಟಲು ಸಾಧ್ಯವೇ ಇಲ್ಲ. ಇಂದು ಮನೆ ಕಟ್ಟಲು ಜಾಗ ಸಿಗುವುದೇ ಕಷ್ಟ. ವಾಸ್ತು ಕೇವಲ ಕಲ್ಪನೆ ಮಾತ್ರ. ವಾಸ್ತುವಿಗಿಂತ ನಮ್ಮ ವ್ಯಕ್ತಿತ್ವ ಸರಿಯಾಗಿದ್ದರೆ ಸಾಕು. ಮನೆ ಸದಾ ಆನಂದಮಯವಾಗಿರುತ್ತದೆ. ಆದ ಕಾರಣ ನಾವು ವಾಸ್ತುಗಿಂತ ದಾನ, ಧರ್ಮ ಮತ್ತು ಒಳ್ಳೆಯ ಕೆಲಸವನ್ನು ಮಾಡುವುದರ ಜೊತೆ, ದೇವರ ಧ್ಯಾನ, ಭಕ್ತಿಯಿಂದ ಪೂಜೆ ನೆರವೇರಿಸಿದರೆ ಎಲ್ಲವೂ ಒಳ್ಳೆಯದಾಗುತ್ತದೆ. ವಾಸ್ತು ಪ್ರಕಾರ ಮನೆ ಕಟ್ಟಿ ನಾವು ಅನ್ಯಾಯ, ಮೋಸದ ಕೆಲಸ ಮಾಡಿದರೆ ದೇವರೂ ಆ ಮನೆಯನ್ನು ಆನಂದಮಯವಾಗಿಡಲು ಸಾಧ್ಯವಿಲ್ಲ. ವಾಸ್ತು ಪ್ರಕಾರದ ಮನೆ ನಿರ್ಮಾಣಕ್ಕೆ ಜಾಗವೂ ಜಾಸ್ತಿ ಬೇಕು, ವಿಪರೀತ ಹಣವೂ ಖರ್ಚಾಗುತ್ತದೆ. ಒಟ್ಟಿನಲ್ಲಿ ಸದ್ಭಾವದಿಂದ ಮನೆ ನಿರ್ಮಿಸಿದರೆ ಸಾಕು.
-ವಿನಾಯಕ ಎಂ.ಎಂ., ಹಂಪಸಾಗರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.