ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಶುದ್ಧ ನೀರು ಉಳಿಸಿತು ಸಾವಿರ ಮಂದಿಯ ಪ್ರಾಣ

Vishwanath S
Updated On : 7 Oct 2013, 11:39 am

ಪ್ರವಾಸದಲ್ಲಿರುವಾಗ ಕುಡಿಯಬೇಕಾದ ನೀರಿನ ವಿಚಾರವಾಗಿ ಮಾತನಾಡುತ್ತಿದ್ದೆವು. ನಿಮಗೊಂದು ನಿಜಘಟನೆ ಹೇಳಬೇಕು. ಅದು 1970ರ ದಶಕದಲ್ಲಿ ಪೋರ್ಚುಗಲ್‌ನಲ್ಲಿ ನಡೆದದ್ದು. ಆಗ ಕಾಲರಾ ತೀವ್ರವಾಗಿದ್ದ ಕಾಲ. ಸಾವಿರಾರು ಜನ ಅದಕ್ಕೆ ತುತ್ತಾಗಿದ್ದರು. ವಿದೇಶಿ ಪ್ರವಾಸಿಗರಂತೂ ಅಲ್ಲಿಗೆ ಭೇಟಿ ನೀಡಲೂ ಹೆದರುತ್ತಿದ್ದರು. ಸರ್ಕಾರ ಎಷ್ಟೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡರೂ, ನೈರ್ಮಲ್ಯದ ವಿಚಾರದಲ್ಲಿ ಜಾಗೃತೆ ವಹಿಸಿದರೂ ಕಾಯಿಲೆ ನಿಯಂತ್ರಣಕ್ಕೆ ಬರುತ್ತಲೇ ಇರಲಿಲ್ಲ. ಕೊನೆಗೆ ವೈದ್ಯರ ತಂಡವೊಂದು ನೀರು ಶುದ್ಧೀಕರಣ ಘಟಕಗಳಿಗೆ ಹೋಗಿ ಪರೀಕ್ಷೆ ನಡೆಸುವ ನಿರ್ಧಾರ ಕೈಗೊಂಡಿತು. ಕೆಲವು ಘಟಕಗಳಲ್ಲಿ ನಾನ್‌ಕಾರ್ಬೊನೇಟೆಡ್ ನೀರನ್ನೇ ಪೂರೈಸಲಾಗುತ್ತಿತ್ತು. ವಿಚಿತ್ರ ಎಂದರೆ ಅಂಥ ಘಟಕಗಳಿಂದ ನೀರು ಪೂರೈಕೆಯಾಗುವ ಪ್ರದೇಶಗಳಲ್ಲೇ ಕಾಲರಾ ಹಾವಳಿ ಅಧಿಕವಾಗಿತ್ತು. ಕಾರ್ಬೊನೇಟೆಡ್ ನೀರು ಕುಡಿದವರು ಸುರಕ್ಷಿತವಾಗಿದ್ದರು. ಆದ್ದರಿಂದ ಕಾರ್ಬೊನೇಟೆಡ್ ನೀರನ್ನೇ ಪೂರೈಸಬೇಕು ಎಂದು ತಂಡ ಸರ್ಕಾರಕ್ಕೆ ಸಲಹೆ ಮಾಡಿತು. ಅದನ್ನು ಜಾರಿಗೊಳಿಸಿದ್ದರಿಂದ ಮುಂದೆ ಅತಿಶೀಘ್ರದಲ್ಲಿ ಕಾಲರಾ ನಿಯಂತ್ರಣಕ್ಕೆ ಬಂತು ಅಂತಿಟ್ಟುಕೊಳ್ಳಿ.
ಅಮೆರಿಕದ ಜಾನ್ಸ್ ಹಾಪ್‌ಕಿನ್ಸ್ ಯೂನಿವರ್ಸಿಟಿಯ ಸಹಾಯಕ ಪ್ರಾಧ್ಯಾಪಕ ಡಾ.ಡೆವಿಡ್ ಸ್ಯಾಕ್ಸ್ ಕೂಡ ಕಾರ್ಬೊನೇಟೆಡ್ ನೀರಿನ ಅಗತ್ಯವನ್ನು ಪ್ರತಿಪಾದಿಸುತ್ತಾರೆ. 'ವಿದೇಶ ಪ್ರವಾಸ ಕೈಗೊಳ್ಳುವವರು ಕಾರ್ಬೊನೇಟೆಡ್ ನೀರನ್ನೇ ಕುಡಿಯುವುದು ಒಳ್ಳೆಯದು. ಬಾಟಲಿಗಳ ಮೇಲೆ ಅದು ಕಾರ್ಬೊನೇಟೆಡ್ ನೀರು ಹೌದೊ, ಅಲ್ಲವೊ ಎನ್ನುವ ಉಲ್ಲೇಖ ಇರುತ್ತದೆ. ಅದನ್ನು ಗಮನಿಸಬೇಕು. ಕಾರ್ಬೊನೇಟೆಡ್ ನೀರು ಅತಿಸಾರಕ್ಕೆ ಕಾರಣವಾಗುವ ಬ್ಯಾಕ್ಟಿರೀಯಾಗಳೂ ಸೇರಿದಂತೆ ಅನೇಕ ರೋಗಕಾರಕ ಸೂಕ್ಷ್ಮಾಣುಗಳನ್ನು ನಾಶಪಡಿಸುವ ಆ್ಯಸಿಡಿಕ್ ಅಂಶಗಳನ್ನು ಹೊಂದಿರುತ್ತದೆ. ಹೀಗಾಗಿ ಈ ನೀರು ನಿಮ್ಮನ್ನು ಸೋಂಕು ರೋಗಗಳಿಂದ ಪಾರು ಮಾಡುತ್ತದೆ' ಎನ್ನುತ್ತಾರೆ ಅವರು.
ಒಮ್ಮೊಮ್ಮೆ ಪ್ರವಾಸದಲ್ಲಿದ್ದಾಗ ಎಷ್ಟೇ ಮುನ್ನೆಚ್ಚರಿಕೆ ಕೈಗೊಂಡರೂ ಅತಿಸಾರ ಕಾಡುವುದುಂಟು. ಅಂತಹ ಪ್ರಸಂಗದಲ್ಲಿ ಏನು ಮಾಡಬೇಕು? ಬಹಳಷ್ಟು ಮಂದಿ ಮಾಡುವ ತಪ್ಪು ಎಂದರೆ ಭೇದಿ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವಂತೆ ಆಹಾರ ಸೇವನೆ ನಿಲ್ಲಿಸಿಬಿಡುವುದು. ಹಾಗೆ ಮಾಡಬೇಡಿ. ಅದು ಸಮಸ್ಯೆ ಇನ್ನಷ್ಟು ಬಿಗಡಾಯಿಸುವಂತೆ ಮಾಡುತ್ತದೆ. ಬಾಳೆಹಣ್ಣು, ಟೋಸ್ಟ್ ಬಹುತೇಕ ಎಲ್ಲಾ ಕಡೆಗಳಲ್ಲಿಯೂ ಸಿಕ್ಕೇ ಸಿಗುತ್ತವೆ. ಅಂಥವನ್ನು ತಿನ್ನಬಹುದು. ದ್ರವಾಹಾರ ಜಾಸ್ತಿ ಸೇವಿಸಿ. ಕೆಫೀನ್ ಮತ್ತು ಸಕ್ಕರೆ ಮುಕ್ತ ಕಾರ್ಬೊನೇಟೆಡ್ ಪಾನೀಯಗಳನ್ನು ಆಗಾಗ ಸೇವಿಸಿ. ಜಾಸ್ತಿ ಉಪ್ಪು ಹಾಕಿಕೊಳ್ಳದೆ ಸೂಪ್ ಕುಡಿಯಿರಿ. ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ದೂರವಿರಿ.

- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement