ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸ್ಪರ್ಧಿಗಳೆದುರು ಸಬಲರಾಗಿ

Vishwanath S
Updated On : 7 Oct 2013, 11:39 am

ಒಂದಂತೂ ಸತ್ಯ, ನಮ್ಮ ವಿಶ್ವಾಸ ಎನ್ನುವುದಿದೆಯಲ್ಲಾ ಅದು ಗಟ್ಟಿಯಾಗಿ ಇರುವವರೆಗೆ ನಮ್ಮನ್ನು ಯಾರಿಂದಲೂ ಏನೂ ಮಾಡಿಕೊಳ್ಳಲು ಆಗುವುದಿಲ್ಲ. ಯಾವಾಗ ನಾವು ಅಳುಕುತ್ತ, ಅಂಜುತ್ತ ನಡೆಯುತ್ತೇವೆಯೋ ಆಗಲೇ ನಮ್ಮ ಮೇಲೆ ಸವಾರಿ ಹೆಚ್ಚುತ್ತಲೇ ಹೋಗುತ್ತದೆ. ಅಷ್ಟಕ್ಕೂ ನಾವೇಕೆ ಅಂಥ ಅಳುಕನ್ನು ತೋರಬೇಕು?  ಯಾರಿಗೇಕೆ ವೃಥಾ ಅಂಜಬೇಕು? ಹಾಗಂತ ಉದ್ಧಟತನ ತೋರಬೇಕೆಂದೇನೂ ಇಲ್ಲ. ಈ ವಿಶ್ವಾಸ ಮತ್ತು ಅಹಂ ಎನ್ನುವುದರ ಮಧ್ಯೆ ಇರುವ ಅಂತರ ತೀರಾ ಕಿರಿದು. ವಿಶ್ವಾಸ ಎನ್ನುವುದು ಪ್ರಾಮಾಣಿಕತೆಯ, ಜ್ಞಾನಿಯ ಲಕ್ಷಣ. ಅತ್ಯಂತ ಶ್ರದ್ಧೆಯಿಂದ, ನಮ್ಮ ಕೆಲಸವನ್ನು ನಾವು ಅಚ್ಚುಕಟ್ಟಾಗಿ ಮಾಡಿ ತೋರಿಸುವ ಛಾತಿ ನಮ್ಮಲ್ಲಿದ್ದರೆ ಸಾಕು. ಮತ್ತಾರಿಗೂ ನಾವು ತಲೆಬಾಗಲೇಬೇಕಿಲ್ಲ. ಅದೆಷ್ಟೇ ಹುನ್ನಾರಗಳು ನಮ್ಮ ಸುತ್ತಲೂ ನಡೆದರೂ ನಮ್ಮನ್ನು ಅವು ಯಾವುದೇ ರೀತಿಯಿಂದಲೂ ಅಲ್ಲಾಡಿಸಲು ಸಾಧ್ಯವೇ ಇಲ್ಲ. ಅದೇ ರೀತಿ, ನಾವು ವಿಷಯದ ಮೇಲೆ ಪ್ರೌಢಿಮೆಯನ್ನೂ ಸಾಧಿಸಿರಬೇಕು. ನಾವು ಮಾಡುತ್ತಿರುವ ಕೆಲಸದ ಸಂಪೂರ್ಣ ಅರಿವೂ ನಮಗಿರಬೇಕು. ಅಂಥ ಅರಿವು ನಮ್ಮನ್ನು ತನ್ನಿಂದ ತಾನೇ ಮುನ್ನಡೆಸುತ್ತಿರುತ್ತದೆ. ಇಂಥವರಿಗೆ ಹೊರಗಿನ ಯಾವ ಗುರುವಿನ ಅವಶ್ಯಕತೆಯೂ ಇರುವುದಿಲ್ಲ. ಅರಿವೇ ಗುರು ಅನ್ನುವುದು ಇದಕ್ಕೇ. ನಮ್ಮನ್ನು ನಾವು ಅರಿತುಕೊಂಡಾಗ ನಾವೇ ಗುರುವಾಗಿ ನಿಲ್ಲುತ್ತೇವೆ. ಯಾರಲ್ಲಿ ಅರಿವಿನ ಕೊರತೆ ಇರುತ್ತದೆಯೋ, ಯಾರು ಪ್ರಾಮಾಣಿಕವಾಗಿರುವುದಿಲ್ಲವೋ ಅವರಲ್ಲಿ ಅಂಜಿಕೆಯೂ ಇರುತ್ತದೆ. ಅದನ್ನು ಮುಚ್ಚಿಟ್ಟುಕೊಳ್ಳಲು ಅಹಂಕಾರಿಯಾಗಿಯೂ ವರ್ತಿಸುತ್ತಿರುತ್ತಾರೆ. ಒಂದು ವಿಷಯವನ್ನು ಗಮನಿಸಿಕೊಂಡು ಬಿಡಿ, ಹೊರಗಿನ ಎಂಥದೇ ದಾಳಿಗೂ ನೀವು ಧೃತಿಗೆಡಬೇಕಿಲ್ಲ. ಹಾಗೊಮ್ಮೆ ನಿಮ್ಮ ವಿರುದ್ಧವೇ ಮೇಲಿಂದ ಮೇಲೆ ದಾಳಿಗಳು ನಡೆಯುತ್ತಿವೆ, ಎಲ್ಲ ಸಂದರ್ಭದಲ್ಲಿಯೂ ನೀವೇ ಗುರಿಯಾಗಿರುತ್ತೀರಿ, ನಿಮ್ಮ ವಿರುದ್ಧವೇ ಎಲ್ಲರೂ ಕತ್ತಿ ಮಸೆಯುತ್ತಿದ್ದಾರೆ ಎಂದರೆ ಅದು ನಿಮ್ಮ ವೈಫಲ್ಯವಲ್ಲ. ನಿಮ್ಮನ್ನು ಇತರರು ಅಷ್ಟೊಂದು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದರ್ಥ. ನಿಮ್ಮನ್ನೇ ಅವರು ನೇರ ಸ್ಪರ್ಧಿಯೆಂದು ಪರಿಗಣಿಸಿದ್ದಾರೆ ಎಂದೇ ಅಂದುಕೊಳ್ಳಬೇಕು. ಹಾಗಿರುವಾಗ ನೀವು ಇನ್ನಷ್ಟು ಸಬಲರಾಗಿ ನಿಲ್ಲುವ ಬದಲು ನಿಮ್ಮನ್ನು ನೀವೇ ಏಕೆ ದುರ್ಬಲರು ಎಂಬಂತೆ ಬಿಂಬಿಸಿಕೊಳ್ಳುತ್ತೀರಿ? ಸೆಟೆದು ನಿಂತು ಮುನ್ನುಗ್ಗಿ, ಅಂತಿಮ ವಿಜಯ ನಿಮ್ಮದೇ.

- ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement