ಭಿಕ್ಷೆ
ಮಾಸಿದ ಬಟ್ಟೆ ಧರಿಸಿದ, ದೈನ್ಯತೆಯನ್ನೇ ತನ್ನ ಕಂಗಳಲ್ಲಿ ತುಂಬಿಕೊಂಡ ಹನ್ನೆರಡರ ವಯಸ್ಸಿನ ಪೋರನೊಬ್ಬ ಹೋಟೆಲೊಂದರ ಮುಂದೆ ನಿಂತು ಹೋಗಿ-ಬರುವವರ ಎದುರು ಕೈಯೊಡ್ಡುತ್ತಾ ಭಿಕ್ಷೆ ಬೇಡುತ್ತಿದ್ದ. ಅಷ್ಟರಲ್ಲಿ ಟಿಪ್ಟಾಪ್ ಆಗಿ ಬಂದ ಯುವಕನೊಬ್ಬನ ಹತ್ತಿರ ಹುಡುಗ ಕೈಚಾಚಿದ. ಯುವಕನಿಗೆ ಸಿಟ್ಟು ಬಂತು. 'ಏನಯ್ಯಾ, ಶಾಲೆಗೆ ಹೋಗೋದು ಬಿಟ್ಟು, ಹೀಗೆ ಭಿಕ್ಷೆ ಬೇಡ್ತಿದೀಯಾ? ಹೊಟ್ಟೆ ಹಸಿದಿದೆ ಅಂತ ಬೇರೆ ನಾಟಕಾ ಆಡ್ತೀಯಾ? ಶಾಲೆಗೆ ಹೋದ್ರೆ ಮಧ್ಯಾಹ್ನದ ಊಟ ಸಿಗ್ತದೆ, ನಾಲ್ಕಕ್ಷರ ಕಲೀಬಹುದು. ಯಾಕ್ರಯ್ಯಾ ನಮ್ಮ ದೇಶದ ಮಾನ ಹರಾಜು ಹಾಕ್ತೀರಾ. ನಿಮ್ಮಿಂದಲೇ ನಮ್ಮ ದೇಶಕ್ಕೆ ಬೆಗ್ಗರ್ ಕಂಟ್ರಿ ಅಂತ ಹೆಸರು ಬಂದಿರೋದು. ಥೂ... ತೊಲಗಾಚೆ' ಎಂದ.
ಯುವಕ ಹೋಟೆಲ್ನಲ್ಲಿ ತಿಂಡಿ ತಿಂದು ಬಿಲ್ಲು ತೆರಲು ಜೇಬಿಗೆ ಕೈಹಾಕಿದ. ಜೇಬು ಖಾಲಿಯಾಗಿತ್ತು. ಪರ್ಸನ್ನು ಯಾರೋ ಎಗರಿಸಿದ್ದರು. 'ಸರ್, ದುಡ್ಡು ಕಳುವಾಗಿಬಿಟ್ಟಿದೆ... ಸಾರಿ ಸರ್.. ನಾಳೆ ಹಣ ಕೊಡ್ತೀನಿ...' ಎಂದು ಉಗುಳು ನುಂಗುತ್ತಾ ನಿಂತ. ಹೋಟೆಲ್ನ ಮಾಲೀಕರು 'ನಿನ್ನಂಥ ಎಷ್ಟು ಜನರನ್ನು ನೋಡಿದೀನಿ ನಾನು. ತಿನ್ನೋದೆಲ್ಲ ತಿಂದು ಈಗ ದುಡ್ಡು ಯಾರೋ ಕದ್ದರು ಅಂತ ನಾಟಕಾ ಆಡ್ತೀಯಾ... ಲೇ ಬಾರೋ ಇಲ್ಲಿ, ಇವನನ್ನು ಒಳಗೆ ಕರ್ಕೊಂಡು ಹೋಗಿ ಹಿಟ್ಟು ರುಬ್ಬೋಕೆ ಹಚ್ರೋ' ಎಂದು ದಬಾಯಿಸಿದರು. ಹೊರಗೆ ನಿಂತ ಭಿಕ್ಷೆ ಬೇಡುವ ಹುಡುಗ ಆ ಯುವಕನನ್ನೇ ದಿಟ್ಟಿಸುತ್ತಿದ್ದ.
- ನಾಗೇಶ್ ಜೆ. ನಾಯಕ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.