ವಾಸ್ತು ಬೇಕೆ?
ಒಂದು ಕುಟುಂಬದ ನೆಮ್ಮದಿಯಿಂದ ಬಾಳಲು ಭೌತಿಕ ವಸ್ತುವಾದ ವಾಸ್ತುವಿನ ಅಗತ್ಯವಿಲ್ಲ. ಬುದ್ಧಿ ಭಾವ ಶುದ್ಧವಾಗಿದ್ದರೆ ಸ್ಲಂ ಏರಿಯಾದಲ್ಲೂ ಸುಖವಾಗಿ ಬಾಳಬಹುದು. 'ವಾಸ್ತು' ಶ್ರೀಮಂತರಿಗೆ ಹಾರ್ಸ್ರೇಸ್, ಬಾರ್, ಕಾರ್ಡ್ಸ್, ಕ್ಲಬ್ ಡ್ಯಾನ್ಸ್ಗಳಂತೆ ಇದೂ ಒಂದು ಹವ್ಯಾಸ. ಬಡವರಿಗಂತೂ ಇದರ ಅರ್ಥವೇ ಗೊತ್ತಿರುವುದಿಲ್ಲ. ಹೆಚ್ಚಾಗಿ ತಲೆಕೆಡಿಸಿಕೊಳ್ಳುವವರು ಮಧ್ಯಮ ವರ್ಗದವರು. ಅದೂ ನಗರವಾಸಿಗಳಲ್ಲಿ ಅಧಿಕ. ಮನೆಯಿಂದ ಮನೆಗೆ ಅಂತರವೇ ಇಲ್ಲ. ಸೂರ್ಯ, ಚಂದ್ರ ದರ್ಶನವೇ ಕಾಣದು. ಕಾಂಪೌಂಡ್ ಹೊರಗೆ ದುರ್ನಾತ ಬೀರುವ ಕಸದ ರಾಶಿ. ಅಲ್ಲಲ್ಲಿ ಕಸದ ನಾಶಕ್ಕಾಗಿ ಎದ್ದು ಕಾಣುವ ಹೊಗೆಯ ಮೋಡಗಳು. ಹೀಗಾಗಿ ಕಾಯಿಲೆ, ಮನಸ್ತಾಪ, ಘರ್ಷಣೆ, ಸಂಕಷ್ಟಗಳು. ದೂರುವುದು ಮಾತ್ರ ಮನೆಯ ವಾಸ್ತುವನ್ನು. ನಮ್ಮ ಕರ್ಮಫಲಗಳ ಬಗ್ಗೆ ನಮ್ಮ ಮನೆಯ ವಿನ್ಯಾಸ ಬದಲಾಯಿಸುವುದೆಂದರೆ 'ನೃತ್ಯ ಮಾಡಲು ಆಗದವಳು ನೆಲ ಡೊಂಕು ಅಂದಂತೆ'.
-ಶ್ರೀಲತಾ ಸುಬ್ಬಣ್ಣ, ನಾಡಗಂಟಿ
ವಾಸ್ತು ಮಧ್ಯಮ ವರ್ಗಕ್ಕೆ ಅಲ್ಲ!
ಹಿಂದೆ 'ವಾಸ್ತು' ಎಂಬ ಪದ ಬಳಕೆಯಲ್ಲಿರಲಿಲ್ಲ. ಮನೆಯ ಯಾವ್ಯಾವ ದಿಕ್ಕುಗಳಲ್ಲಿ ಯಾವ್ಯಾವ ಕೆಲಸ ಮಾಡಬೇಕೆಂದು ಹಿರಿಯರು ನಿರ್ಣಯಿಸಿ ಹೇಳುತ್ತಿದ್ದರು. ಹೀಗಾಗಿ, ಆ ಮನೆ ನೆಮ್ಮದಿಯಿಂದ ಇರುತ್ತಿತ್ತು. ಈಗಿನ ಕಾಲದಲ್ಲಿ ಆ ದಿಕ್ಕುಗಳೇ ಜ್ಯೋತಿಷಿಗಳಿಗೆ ವ್ಯವಹಾರದ ವಿಚಾರವಾಗಿದೆ. ವಾಸ್ತು ಆಚರಣೆಯನ್ನು ಶ್ರೀಮಂತರು ಮಾಡಬಹುದೇ ಹೊರತು ಮಧ್ಯಮ ವರ್ಗದವರಿಗೆ ಅಸಾಧ್ಯ. ವಿಪರೀತವಾಗಿ ವಾಸ್ತು ನಂಬಿದರೆ ಅಮೃತವೂ ವಿಷವಾಗುತ್ತದೆ ಅನ್ನುವಂತಾಗುತ್ತದೆ. ನೆಮ್ಮದಿಯೂ ದೂರವಾಗಬಹುದು.
-ಮಾದಂಡ ಗೌರಿ, ಬಾಳೆಹೊನ್ನೂರು
ವಾಸ್ತುವಿಗೆ ಮಹತ್ವ ನೀಡಬೇಕಿಲ್ಲ...
ನಮ್ಮ ಹಿಂದಿನವರಿಗೆ ಆರೋಗ್ಯದ ಬಗ್ಗೆ ಹೆಚ್ಚು ಭರವಸೆ ಇತ್ತು. ಮನೆಯ ಯಾವ ಕೊಠಡಿಗಳು ಯಾವ ದಿಕ್ಕಿನಲ್ಲಿರಬೇಕೆಂಬುದನ್ನು ಅವರು ಸಾಮಾನ್ಯ ಪ್ರಜ್ಞೆಯಿಂದಲೇ ಯೋಚಿಸಿ ಅದರಂತೆಯೇ ಮನೆ ಕಟ್ಟುತ್ತಿದ್ದರು. ಅಂಥ ಮನೆಗಳಲ್ಲಿ ಸುಖವಿರುತ್ತಿತ್ತು. ಆದರೆ ವಾಸ್ತು ಶಾಸ್ತ್ರವೆಂಬ ಹೆಸರಿನಲ್ಲಿ ಜನರನ್ನು ಶೋಷಿಸಿ, ತಾವು ಬದುಕುವ ಒಂದು ಗುಂಪಿನ ಜನರಿಂದಾಗಿ ವಾಸ್ತುವೆಂದರೆ ನಗೆಪಾಟಲಿಗೀಡಾಗುವ ಸಂದರ್ಭ ಒದಗಿದೆ. ಆದಕಾರಣ ನಮ್ಮ ಮನಸ್ಸಿಗೆ ಸರಿಯೆನಿಸುವಂತೆ ಮನೆ ಕಟ್ಟೋಣ. ಯಾವುದನ್ನೂ ಅತಿಯಾಗಿ ಮಾಡುವುದು ಬೇಡ. ವಾಸ್ತುವೆನ್ನುವುದು ಅತಿ ಸಾಮಾನ್ಯ ಪ್ರಜ್ಞೆಯಷ್ಟೆ ಎನ್ನುವುದು ನನ್ನ ಸಲಹೆ.
-ಕೊ.ಸು. ನರಸಿಂಹಮೂರ್ತಿ, ಮೈಸೂರು
ವಾಸ್ತು ನಂಬಿಕೆ
ಇಂದಿನ ಜೀವನದ ವಾಸ್ತವಾಂಶ ತಿಳಿದಾಗ ವಾಸ್ತುವಿನ ಗಾಢ ಪ್ರಭಾವ ಹೇಗಿದೆ ಎಂಬುದು ಅರಿವಿಗೆ ಬರುತ್ತದೆ. ಮನುಷ್ಯ ಸುಖ ಜೀವನಕ್ಕೆ ಪರ್ಯಾಯ ಮೂಲ ಹುಡುಕೋದು ಸಹಜ. ಹಲವು ಕಾರ್ಯಗಳ ಅಭಿವೃದ್ಧಿಗೆ ಜನರಲ್ಲಿ ವಾಸ್ತು ಮೇಲಿನ ವ್ಯಾಮೋಹ ಹೆಚ್ಚಾಗುತ್ತಿದೆ. ವಾಸ್ತು ಇಂದಿನ ಜೀವನದಲ್ಲಿ ಹುಟ್ಟಿದ್ದಲ್ಲ, ಹಿಂದಿನಿಂದಲೂ ವಾಸ್ತು ಇತ್ತು. ಎಷ್ಟು ಬೇಕೋ ಅಷ್ಟು, ಅವರವರ ನಂಬಿಕೆಗೆ ತಕ್ಕಂತೆ ವಾಸ್ತುವನ್ನು ಬಳಸಿಕೊಳ್ಳುತ್ತಿದ್ದರು. ಆದರೆ ಇಂದು ಮೀತಿಮೀರಿದೆ.
-ಸಾಗರ ಗೋಪಾಲಕೃಷ್ಣ ಎನ್., ಮೈಸೂರು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.