ಗುಡ್ ಗರ್ಲ್ಸ್ ಡೋಂಟ್ ಡಾನ್ಸ್
'ಒಳ್ಳೆ ಹುಡುಗಿ' ಅಥವಾ 'ಕೆಟ್ಟ ಹುಡುಗಿ' ಎಂಬ ಪದಕ್ಕೆ ಸಮಾಜ ಕೊಡುವ ವ್ಯಾಖ್ಯಾನಗಳೇನು? ಇದಕ್ಕೆಲ್ಲಾ ಉತ್ತರ ನೀಡಲು ಹೊರಟಿದೆ 'ಗುಡ್ ಗರ್ಲ್ಸ್ ಡೋಂಟ್ ಡಾನ್ಸ್' ಎಂಬ ಸಾಕ್ಷ್ಯಚಿತ್ರ...
'ಒಳ್ಳೆ ಹುಡುಗಿ' ಅಥವಾ 'ಕೆಟ್ಟ ಹುಡುಗಿ' ಎಂಬ ಪದಕ್ಕೆ ಸಮಾಜ ಕೊಡುವ ವ್ಯಾಖ್ಯಾನಗಳೇನು? ಇದಕ್ಕೆಲ್ಲಾ ಉತ್ತರ ನೀಡಲು ಹೊರಟಿದೆ 'ಗುಡ್ ಗರ್ಲ್ಸ್ ಡೋಂಟ್ ಡಾನ್ಸ್' ಎಂಬ ಸಾಕ್ಷ್ಯಚಿತ್ರ.
ದೆಹಲಿಯಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಸಂದರ್ಭ. ದೇಶದೆಲ್ಲೆಡೆ ಅತ್ಯಾಚಾರದ ವಿರುದ್ಧ ಭಾರಿ ಪ್ರತಿಭಟನೆಗಳು ನಡೆಯುತ್ತಿದ್ದವು. ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯಾಗಬೇಕೆಂದು ಎಲ್ಲೆಡೆಯಿಂದಲೂ ಒತ್ತಾಯದ ಕೂಗು ಕೇಳಿಬರುತ್ತಿದ್ದರೆ, ಇನ್ನು ಕೆಲವೆಡೆ ಅತ್ಯಾಚಾರಕ್ಕೊಳಗಾದ ಯುವತಿ ರಾತ್ರಿ ಹೊತ್ತಲ್ಲಿ ಗೆಳೆಯನ ಜತೆಗೆ ಹೋಗಿದ್ಯಾಕೆ? ಅವಳದ್ದೇ ತಪ್ಪು ಎಂಬ ವಾದವೂ ಕೇಳಿಬರುತ್ತಿತ್ತು. ನಮ್ಮ ಸಮಾಜವೇ ಅಂಥದ್ದು. ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ಅಥವಾ ಅತ್ಯಾಚಾರವೇ ನಡೆಯಲಿ ಅಲ್ಲಿ ಹೆಣ್ಣನ್ನೇ ದೋಷಿ ಎಂಬಂತೆ ಬಿಂಬಿಸಲಾಗುತ್ತದೆ. ಹಾಗಾದರೆ ಹೆಣ್ಣು ತಪ್ಪಿತಸ್ಥಳೇ? 'ಒಳ್ಳೆ ಹುಡುಗಿ' ಅಥವಾ 'ಕೆಟ್ಟ ಹುಡುಗಿ' ಎಂಬ ಪದಕ್ಕೆ ಸಮಾಜ ಕೊಡುವ ವ್ಯಾಖ್ಯಾನಗಳೇನು? ಇದಕ್ಕೆಲ್ಲಾ ಉತ್ತರ ನೀಡಲು ಹೊರಟಿದೆ 'ಗುಡ್ ಗರ್ಲ್ಸ್ ಡೋಂಟ್ ಡಾನ್ಸ್' ಎಂಬ ಸಾಕ್ಷ್ಯಚಿತ್ರ.
ಪ್ರಸ್ತುತ ಸಾಕ್ಷ್ಯಚಿತ್ರ ಈ ಬಾರಿ ಮುಂಬೈ ವುಮೆನ್ಸ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ಗೆ ಆಯ್ಕೆಯಾಗಿದ್ದು, ಅಕ್ಟೋಬರ್ 13ರಂದು ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಳ್ಳಲಿದೆ.
ಸಾಕ್ಷ್ಯಚಿತ್ರದಲ್ಲಿ ಏನಿದೆ?
ಯಾರು ಗುಡ್ ಗರ್ಲ್ಸ್, ಯಾರು ಬ್ಯಾಡ್ ಗರ್ಲ್ಸ್? ಎಂಬ ಪ್ರಶ್ನೆಯನ್ನು ಸಮಾಜದ ವಿಭಿನ್ನ ಸ್ತರದ ವ್ಯಕ್ತಿಗಳಲ್ಲಿ ಕೇಳಲಾಗಿದ್ದು, ಅವರ ಅಭಿಪ್ರಾಯಗಳನ್ನು ದಾಖಲಿಸಲಾಗಿದೆ. ಮಾತ್ರವಲ್ಲ, ಹೆಣ್ಣು ಮಕ್ಕಳು ಹೇಗಿರಬೇಕು? ಅವರ ವೇಷಭೂಷಣ ಹೇಗಿರಬೇಕು? ಸಮಾಜದ ಕಟ್ಟುಪಾಡುಗಳು, ಸ್ತ್ರೀ ಸ್ವಾತಂತ್ರ್ಯದ ವಿವಿಧ ಆಯಾಮಗಳನ್ನು ಸಮಾಜ ಯಾವ ರೀತಿ ಅಭಿವ್ಯಕ್ತ ಪಡಿಸುತ್ತದೆ ಎಂಬುದನ್ನೂ ತೋರಿಸಲಾಗಿದೆ. ಅದೇ ವೇಳೆ ಸಮಾಜದ ಚೌಕಟ್ಟುಗಳನ್ನು, ಅಭಿವ್ಯಕ್ತಿ ಸ್ವಾತಂತ್ರ್ಯದ ಮಜಲುಗಳನ್ನು ನೃತ್ಯ ರೂಪಕದಲ್ಲಿ ತೋರಿಸಿರುವುದು ಈ ಸಾಕ್ಷ್ಯ ಚಿತ್ರದ ಪ್ಲಸ್ ಪಾಯಿಂಟ್.
ನಿರ್ಮಾಣ ಆಗಿದ್ದು ಹೇಗೆ?
'ದೆಹಲಿ ಪ್ರಕರಣದ ಸಂದರ್ಭ ಎಲ್ಲೆಡೆ ಅದೇ ವಿಷಯ ಚರ್ಚೆಯಾಗುತ್ತಿತ್ತು. ಅತ್ಯಾಚಾರವನ್ನು ಖಂಡಿಸುವ ಜನರು, ಅತ್ಯಾಚಾರಕ್ಕೊಳಗಾದ ಯುವತಿಯನ್ನೇ ದೂರುವ ಪ್ರವೃತ್ತಿಯೂ ಹೆಚ್ಚಾಗಿತ್ತು. ಹೀಗಿರುವಾಗ ಸಮಾಜದ ದನಿಯನ್ನು ಸಾಕ್ಷ್ಯಚಿತ್ರವೊಂದರ ಮೂಲಕ ಮುಖ್ಯವಾಹಿನಿಗೆ ತರಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಈ ಪ್ರಾಜೆಕ್ಟ್‌ಗೆ ಕೈ ಹಾಕಿದೆ' ಅನ್ನುತ್ತಾರೆ ಪದ್ಮಲತಾ ರವಿ. ಹೀಗೆ ಫೇಸ್‌ಬುಕ್‌ನಲ್ಲಿ ನನ್ನ ಮನದ ಇಂಗಿತವನ್ನು ವ್ಯಕ್ತಪಡಿಸಿದೆ. ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಬೇಕಾದರೆ ಹಣ ಅತ್ಯಗತ್ಯ. ಫೇಸ್‌ಬುಕ್ ಮೂಲಕ ನಮಗೆ ಜನರ ಸಹಾಯ ಹಸ್ತ ಸಿಕ್ಕಿತು. ಉಮೇಶ್ ಪಿಎನ್, ಕ್ಯಾಮೆರಾ ಪರ್ಸನ್ ಸಜನಾ ಮತ್ತು ಡ್ಯಾನ್ಸ್ ಕೊರಿಯೋಗ್ರಾಫರ್ ಶಬರಿ ರಾವ್ ಅವರ ಸಹಕಾರ ನನಗಿತ್ತು. ಹೀಗೆ ಆರಂಭಿಸಿದ ಪ್ರಾಜೆಕ್ಟ್‌ಗೆ ಜನರ ಸಹಕಾರ ಅದ್ಭುತವಾಗಿತ್ತು. ಬೆಂಗಳೂರಿನಲ್ಲಿ ವಾಸಿಸುವ ವಿವಿಧ ಸ್ತರಗಳ, ಹಿರಿ ಕಿರಿಯ ವಯಸ್ಸಿನ, ವಿವಿಧ ಕೆಲಸ ನಿರ್ವಹಿಸುತ್ತಿರುವ ಜನರು ಒಳ್ಳೆ ಹುಡುಗಿ ಯಾರು? ಕೆಟ್ಟ ಹುಡುಗಿ ಯಾರು? ಎಂಬುದನ್ನು ಯಾವ ರೀತಿ ವಿಶ್ಲೇಷಿಸುತ್ತಾರೆ ಎಂಬುದನ್ನು ನಾವು ಈ ಸಾಕ್ಷ್ಯಚಿತ್ರದಲ್ಲಿ ತೋರಿಸಿದ್ದೇವೆ.
ಗುಡ್ ಗರ್ಲ್ಸ್ ಡು ನಾಟ್ ಡಾನ್ಸ್...ಹೌದಾ?
ನಮ್ಮ ಸಮಾಜದಲ್ಲಿ ಒಳ್ಳೆ ಹುಡುಗಿ ಅಂದ್ರೆ ಹೀಗೇ ಇರಬೇಕು ಎಂಬ ಪೂರ್ವಗ್ರಹವಿದೆ. ಪಕ್ಕಾ ಸಾಂಪ್ರದಾಯಿಕ ಉಡುಗೆ ತೊಟ್ಟವಳು ಒಳ್ಳೆ ಹುಡುಗಿ, ಸ್ಲೀವ್‌ಲೆಸ್, ಶಾರ್ಟ್, ಟೀ ಶರ್ಟ್ ಜೀನ್ಸ್ ಹಾಕಿಕೊಂಡವರು ಕೆಟ್ಟ ಹುಡುಗಿಯರು. ಉದ್ದ ಕೂದಲು ಬೆಳೆಸಿದರೆ ಸಂಪ್ರದಾಯಸ್ಥ ಹುಡುಗಿ, ಕೂದಲು ಶಾರ್ಟ್ ಇದ್ರೆ ಆಕೆ ಮಾಡರ್ನ್, 'ಸ್ಲಟ್' ಎಂಬ ತಪ್ಪು ಕಲ್ಪನೆಗಳು ನಮ್ಮಲ್ಲಿವೆ. ನಾವೆಷ್ಟೇ ಮುಂದುವರಿದಿದ್ದರೂ ಈಗಲೂ ನಮ್ಮ ಸಮಾಜ ಹುಡುಗಿಯನ್ನು ಕಟ್ಟುಪಾಡುಗಳಲ್ಲಿ ಬಂಧಿಸುತ್ತಿದೆ. ಆಕೆಯ ಸುತ್ತ ಲಕ್ಷ್ಮಣರೇಖೆ ಎಳೆದು 'ನೀನು ಹುಡುಗಿ' ಎಂದು ಪದೇ ಪದೆ ಎಚ್ಚರಿಸಲಾಗುತ್ತದೆ. ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸ್ವಾತಂತ್ರ್ಯವಿದೆ ನಿಜ, ಆದರೆ ಹುಡುಗಿಯೊಬ್ಬಳ ಸ್ವಾತಂತ್ರ್ಯಕ್ಕೆ ವಿವಿಧ ಅರ್ಥಗಳನ್ನು ಕಲ್ಪಿಸಲಾಗುತ್ತದೆ. ನಾವು ಬೆಳೆದು ಬಂದಿರುವ ವಾತಾವರಣ, ಚಿಂತನಾ ರೀತಿಗಳೂ ಇಲ್ಲಿ ಪ್ರಭಾವ ಬೀರುತ್ತವೆ. ಇವೆಲ್ಲವನ್ನೂ ಈ ಸಾಕ್ಷ್ಯಚಿತ್ರದ ಮೂಲಕ ಪ್ರಸ್ತುತ ಪಡಿಸಲಾಗಿದೆ.
ಪದ್ಮಲತಾ ರವಿ
ಹವ್ಯಾಸಿ ಪತ್ರಕರ್ತೆಯಾಗಿರುವ ಬೆಂಗಳೂರು ಮೂಲದ ಪದ್ಮಲತಾ ರವಿ ಅವರಿಗೆ ಪತ್ರಿಕಾರಂಗದಲ್ಲಿ 11 ವರ್ಷಗಳ ಅನುಭವವಿದೆ. ಡಾಕ್ಯುಮೆಂಟರಿ ಚಿತ್ರ ನಿರ್ಮಾಪಕಿ ಆಗಿರುವ ಇವರು ಈವರೆಗೆ 8 ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ. ವನ್ಯಜೀವಿ, ಲಿಂಗಭೇದ, ಪರಿಸರ ಹಾಗು ಶಿಕ್ಷಣ ವಿಷಯಗಳನ್ನಾಧರಿಸಿ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದು, ನನಸು ಕ್ರಿಯೇಷನ್ಸ್ ಪ್ರೊಡೆಕ್ಷನ್ ಹೌಸ್‌ನ ಮಾಲೀಕರಾಗಿದ್ದಾರೆ.
- ರಶ್ಮಿ ಕಾಸರಗೋಡು