ಅಯಾಚಿತ ಬೇಟೆ
ಕೂಂಬಿಂಗ್ ಎಂದರೆ, ಬಾಚಣಿಕೆಯಿಂದ ತಲೆ ಬಾಚಿ ಕೂದಲಲ್ಲಿ ಅಡಗಿರುವ ಹೇನುಗಳನ್ನು ಹೆಕ್ಕಿ ಹೊರ ತೆಗೆಯುವಂತೆ ಕಾಡು ಅಥವಾ ನಿಗದಿತ ಪ್ರದೇಶದ ಇಂಚಿಂಚು ಪ್ರದೇಶವನ್ನೂ ಪರಿಶೀಲಿಸಿ ಕ್ರಿಮಿನಲ್ಗಳನ್ನು ಹೆಕ್ಕಿ ಹಿಡಿಯುವುದು ಎಂಬರ್ಥ....
ಇಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರ ಸಮಯ ಪ್ರಜ್ಞೆಯಿಂದ ಕಳ್ಳನನ್ನು ಹಿಡಿಯಲು ಸಾಧ್ಯವಾದ 'ಕೂಂಬಿಂಗ್ ಕತೆ' ಇದು.
ಕೂಂಬಿಂಗ್ ಎಂದರೆ, ಬಾಚಣಿಕೆಯಿಂದ ತಲೆ ಬಾಚಿ ಕೂದಲಲ್ಲಿ ಅಡಗಿರುವ ಹೇನುಗಳನ್ನು ಹೆಕ್ಕಿ ಹೊರ ತೆಗೆಯುವಂತೆ ಕಾಡು ಅಥವಾ ನಿಗದಿತ ಪ್ರದೇಶದ ಇಂಚಿಂಚು ಪ್ರದೇಶವನ್ನೂ ಪರಿಶೀಲಿಸಿ ಕ್ರಿಮಿನಲ್ಗಳನ್ನು ಹೆಕ್ಕಿ ಹಿಡಿಯುವುದು ಎಂಬರ್ಥ. ಈ ಪದವನ್ನು ಹೆಚ್ಚಾಗಿ ಬಳಕೆ ಮಾಡುವುದು ನಕ್ಸಲೀಯ ಕಾರ್ಯಾಚರಣೆಯಲ್ಲಿ. ಕೆಲವೊಮ್ಮೆ, ಹುಡುಕುತ್ತಿದ್ದವರ ಬದಲು ಇನ್ಯಾರೋ ಈ ಕೂಂಬಿಂಗ್ನಲ್ಲಿ ಸಿಗುವ ಸಂದರ್ಭವೂ ಉಂಟು. ಇದು ಅಂಥದೇ ಒಂದು ಕೂಂಬಿಂಗ್ ಕತೆ. ಇಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರ ಸಮಯ ಪ್ರಜ್ಞೆಯಿಂದ ಕಳ್ಳನನ್ನು ಹಿಡಿಯಲು ಸಾಧ್ಯವಾಯಿತು.
=
ಈ ಘಟನೆ ನಡೆದಿದ್ದು 2001ರಲ್ಲಿ. ಅದು ಕರ್ನಾಟಕದ ಗಡಿ ಬೀದರ್ ಜಿಲ್ಲೆ. ಬಾಲ್ಕಿ ಟೌನ್ ಪೊಲೀಸ್ ಠಾಣೆ. ಠಾಣೆ ವ್ಯಾಪ್ತಿಯಲ್ಲಿ ಹೇರಳವಾಗಿ ಜಾನುವಾರುಗಳ ಕಳ್ಳತನವಾಗುತ್ತಿತ್ತು. ಕಳುವಾದ ಜಾನುವಾರುಗಳಾಗಲಿ ಕಳ್ಳರಾಗಲಿ ಸಿಕ್ಕಿರಲಿಲ್ಲ. ಇದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಪ್ರತಿ ದಿನ ಒಂದಲ್ಲ ಒಂದು ಪ್ರಕರಣ ಪೊಲೀಸ್ ಠಾಣೆಗೆ ಬರುತ್ತಿದ್ದ ಕಾರಣ ಮೇಲಧಿಕಾರಿಗಳು ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಇದರಿಂದ ದನಗಳ್ಳತನ ಬಾಲ್ಕಿ ಟೌನ್ ಪೊಲೀಸರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.
ಪ್ರತಿ ತಿಂಗಳು ನಡೆಯುವ ಜಿಲ್ಲಾ ವರಿಷ್ಠಾಧಿಕಾರಿಗಳ ನೇತೃತ್ವದ ಅಪರಾಧ ಪ್ರಕರಣಗಳ ಕುರಿತು ಸಭೆಯಲ್ಲಿ ಈ ವಿಚಾರ ಪ್ರಸ್ತಾಪಕ್ಕೆ ಬಂತು. ದನಗಳವು ಬಾಲ್ಕಿ ಠಾಣಾ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ ವಿವಿಧ ಠಾಣಾ ವ್ಯಾಪ್ತಿಯಲ್ಲೂ ನಡೆಯುತ್ತಿದೆ ಎಂಬುದು ಅರಿವಿಗೆ ಬಂತು. ಇದರಿಂದ ಸಹಜವಾಗಿಯೇ ಜಿಲ್ಲಾ ವರಿಷ್ಠಾಧಿಕಾರಿಗಳು ಗರಂ ಆದರು. ಉತ್ತರಿಸಲಾಗದೆ ಇನ್ಸ್ಪೆಕ್ಟರ್ಗಳು ಪರದಾಡತೊಡಗಿದರು.
ಇದೇ ಸಮಯ ನಾಯಕ್ ಎಂಬ ಇನ್ಸ್ಪೆಕ್ಟರ್ ಒಬ್ಬರು ಎದ್ದು ನಿಂತು, 'ಸರ್ ಈ ದನಗಳವು ಮಾಡುವವರು ಲಂಬಾಣಿ ತಾಂಡಾದವರೆ ಆಗಿರ್ತಾರೆ. ಅವರನ್ನು ಸೆರೆ ಹಿಡಿಯುವುದು ಕಷ್ಟ. ಕಾರಣ ಅವರ ತಾಂಡಾಗಳು ಕಾಡಿನ ಅಂಚಿನಲ್ಲಿರುವುದರಿಂದ ಪೊಲೀಸರು ದಾಳಿ ಮಾಡಿದ ಕೂಡಲೇ ಅವರು ಕಾಡಿಗೆ ಪರಾರಿಯಾಗುತ್ತಾರೆ. ಜೊತೆಗೆ ಈ ಪ್ರದೇಶಗಳಲ್ಲಿ ದನಗಳನ್ನು ಕಳವು ಮಾಡಿಕೊಂಡು ಮಹಾರಾಷ್ಟ್ರದಲ್ಲಿ ಮಾರಾಟ ಮಾಡುವುದರಿಂದ ಅವುಗಳ ಸುಳಿವು ದೊರೆಯುವುದಿಲ್ಲ' ಎಂದು ವಿವರಿಸಿದರು.
ಕಳವು ಮಾಡುವವರು ಯಾರು ಎಂಬು ಬಹಿರಂಗವಾದ ಕಾರಣ ಪೊಲೀಸ್ ಅಧಿಕಾರಿಗಳು ಸ್ವಲ್ಪ ಮಟ್ಟಿಗೆ ನಿರಾಳರಾದರು. ಮುಂದುವರೆದ ಅದೇ ಇನ್ಸ್ಪೆಕ್ಟರ್ ಇವರನ್ನು ಹಿಡಿಯಲು ನಾವು ಹಗಲಿನಲ್ಲಿ ದಾಳಿ ನಡೆಸಿದರೆ ಅವರು ಪರಾರಿಯಾಗುತ್ತಾರೆ. ಆದ್ದರಿಂದ ರಾತ್ರಿ ವೇಳೆಯಲ್ಲೇ ದಾಳಿ ನಡೆಸಬೇಕು. ಕೂಂಬಿಂಗ್ ಮೂಲಕ ಅವರನ್ನು ಸೆರೆಹಿಡಿಯಬಹುದು ಎಂದು ಸೂಚಿಸಿದ. ವರಿಷ್ಠಾಧಿಕಾರಿಗಳು ಈ ಸೂಚನೆಗೆ ಒಪ್ಪಿಕೊಳ್ಳದೆ ಬೇರೆ ದಾರಿ ಇರಲಿಲ್ಲ.
=
ಪೊಲೀಸ್ ಅಧಿಕಾರಿಗಳೂ ಸೇರಿದಂತೆ 300 ಜನರ ಪೊಲೀಸ್ ತಂಡ ಸಿದ್ಧವಾಯಿತು. ಔರಾದ್ ತಾಲೂಕಿನ ಸಂತಾಪೂರ್ ಪೊಲೀಸ್ ಠಾಣೆ ವ್ಯಾಪ್ತಿಯ ಕೆಲವು ತಾಂಡಾಗಳ ಮೇಲೆ ದಾಳಿ ನಡೆಸುವುದು, ಪಳಗಿದ ಹಳೇ ಪಾತಕಿಗಳ ಜತೆಗೆ ನೂತನವಾಗಿ ಕಳ್ಳತನಕ್ಕೆ ಇಳಿದಿರುವವರನ್ನು ಸೆರೆ ಹಿಡಿಯುವುದು ಪೊಲೀಸರ ಯೋಜನೆಯಾಗಿತ್ತು. ಯಾವುದೇ ಕಾರಣಕ್ಕೆ ಫೈರ್ ಮಾಡಬಾರದು ಎಂಬ ನಿರ್ದೇಶನವಾಗಿತ್ತು. ಯಾಕೆಂದರೆ ಸೆರೆ ಹಿಡಿಯಲು ಹೊರಟಿದ್ದುದು ದನ ಮತ್ತು ಮನೆಗಳ್ಳರನ್ನು ಮಾತ್ರ.
ರಾತ್ರಿ 11.30ಕ್ಕೆ ಗುಡ್ಡಗಳ ಮಧ್ಯೆ ಇದ್ದ ಒಂದು ತಾಂಡಾದ ಮೇಲೆ ದಾಳಿ ನಡೆಯಿತು. 300 ಜನರ ಪೊಲೀಸ್ ತಂಡ ಏಕಾಏಕಿ ತಾಂಡಾಗೆ ಲಗ್ಗೆ ಇಟ್ಟರು. ಆದರೆ ಅವರಿಗೆ ನಿರಾಸೆ ಕಾದಿತ್ತು. ತಾಂಡಾದಲ್ಲಿ ಮುದುಕರು ಮತ್ತು ಹೆಂಗಸರು ಬಿಟ್ಟು ಒಬ್ಬೇ ಒಬ್ಬ ಗಂಡಸು ಇರಲಿಲ್ಲ. ತಾಂಡಾದ ಗಂಡಸರು ರಾತ್ರಿ 'ಡ್ಯೂಟಿ'ಗೆ ಅಂತ ಪಟ್ಟಣದ ಕಡೆ ಹೋಗಿದ್ದರು. ಉಳಿದಿದ್ದ ಕೆಲವು ಗಂಡಸರು ಪೊಲೀಸರ ಗಲಾಟೆ ಕೇಳಿ ಕಾಡಿಗೆ ಪೇರಿ ಕಿತ್ತರು. ಇದರಿಂದ ಉತ್ಸಾಹ ಕಳೆದುಕೊಂಡ ಪೊಲೀಸರನ್ನು, ಮತ್ತೊಂದು ತಾಂಡಾದ ಮೇಲೆ ದಾಳಿ ನಡೆಸಲು ಹಿರಿಯ ಅಧಿಕಾರಿಗಳು ಹುರಿದುಂಬಿಸಿದರು.
ಮಧ್ಯರಾತ್ರಿ ಎರಡು ಗಂಟೆಗೆ ಪೊಲೀಸರ ತಂಡ ಒಂದು ತಗ್ಗು ಪ್ರದೇಶದಲ್ಲಿರುವ ತಾಂಡಾದ ಮೇಲೆ ದಾಳಿ ನಡೆಸಲು ಸಜ್ಜಾಯಿತು. 50 ಜನ ಇನ್ಸ್ಪೆಕ್ಟರ್ ಗೋವಿಂದರಾಜು ನೇತೃತ್ವದಲ್ಲಿ ಕಾಡಿನ ಅಂಚಿನಲ್ಲಿ ಐದು ಅಡಿಗೆ ಒಬ್ಬರಂತೆ ನಿಂತರು. ಉಳಿದ 250 ಪೊಲೀಸರು ವಿರುದ್ಧ ದಿಕ್ಕಿನಲ್ಲಿ ಹೊರಟರು. ಪೊಲೀಸರು ಹೊರಟ ಸಮಯದಲ್ಲಿ ತಿಂಗಳ ಬೆಳಕಿತ್ತು. ತಾಂಡಾ ಇದ್ದ ದಿಕ್ಕಿನಿಂದ ಯಾರಾದರೂ ಓಡಿ ಬಂದರೆ ಸೆರೆ ಹಿಡಿಯಬಹುದು ಎಂಬುದು ಪೊಲೀಸರ ಉದ್ದೇಶವಾಗಿತ್ತು. ಆದರೆ ಅವರ ಪ್ಲಾನ್ ಅವರಿಗೆ ತಿರುಗುಬಾಣ ಆಗುತ್ತೆ ಎಂಬ ಅನುಮಾನ ಇನ್ಸ್ಪೆಕ್ಟರ್ ಗೋವಿಂದರಾಜುರನ್ನು ಕಾಡತೊಡಗಿತ್ತು. ಇದೇ ಸಮಯಕ್ಕೆ ದೂರದಲ್ಲಿ ಯಾರೋ ಓಡಿ ಬರುತ್ತಿರುವುದು ಕಾಣಿಸಿತು.
ತಡ ಮಾಡಿದರೆ ಆತ ತಮಗೆ ಚಳ್ಳೇಹಣ್ಣು ತಿನ್ನಿಸಿ ನಾಪತ್ತೆಯಾಗುತ್ತಾನೆ ಎಂಬುದು ಅರಿವಿಗೆ ಬಂದು ಕೂಡಲೇ ಸಾಲಿನಲ್ಲಿ ನಿಂತಿದ್ದ ತನ್ನ ಸಹೋದ್ಯೋಗಿಗಳಿಗೆ ಲೈಯಿಂಗ್ ಪೊಸಿಷನ್ ತೆಗೆದುಕೊಳ್ಳಲು ಹೇಳಿದರು. ಲೈಯಿಂಗ್ ಪೊಸಿಷನ್ ಎಂದರೆ ಅದೇ ಜಾಗದಲ್ಲಿ ಮಕಾಡೆ ಮಲಗಿಕೊಳ್ಳುವುದು. ಹಿರಿಯ ಅಧಿಕಾರಿ ಸೂಚನೆ ನೀಡಿದ ಕೂಡಲೇ ಸಾಲಿನಲ್ಲಿ ನಿಂತಿದ್ದ ಎಲ್ಲ ಪೊಲೀಸರು ಮಕಾಡೆ ಮಲಗಿದರು. ಎದುರಿಗೆ ಓಡಿ ಬರುತ್ತಿದ್ದ ವ್ಯಕ್ತಿಗೆ ಅಲ್ಲಿ ಪೊಲೀಸರು ತನಗಾಗಿ ಬಲೆ ಬೀಸಿ ಕಾಯುತ್ತಿದ್ದಾರೆ ಎಂಬುದು ಅರಿವಿಗೆ ಬರಲಿಲ್ಲ. ಹಾಗಾಗಿ ನೇರವಾಗಿ ಪೊಲೀಸರ ಬಳಿಗೇ ಬಂದ. ಅವನು ಸಮೀಪಿಸಿದ ಕೂಡಲೇ ಮಲಗಿದ್ದ ಪೊಲೀಸರು ಅವನನ್ನು ಸುತ್ತುವರೆದು ಸೆರೆ ಹಿಡಿದರು. ಸ್ವಲ್ಪ ಸಮಯದಲ್ಲೇ ತಾಂಡಾದಲ್ಲಿ ಕೂಂಬಿಂಗ್ ನಡೆಸಲು ಹೊರಟಿದ್ದ ಪೊಲೀಸರ ತಂಡ ವಾಪಸ್ ಬಂತು. ಹಾಗೆ ಬಂದವರು ಹಲವರನ್ನು ಬಂಧಿಸಿದ್ದರಾದರೂ ಅವರಲ್ಲಿ ಕುಖ್ಯಾತರು ಯಾರೂ ಇರಲಿಲ್ಲ. ಇದರಿಂದ ಕೂಂಬಿಂಗ್ ನಿರ್ವಹಿಸಿದ ಪೊಲೀಸ್ ತಂಡಕ್ಕೆ ನಿರಾಸೆ ಕಾಡುತ್ತಿತ್ತು.
ಪೊಲೀಸ್ ತಂಡ ಬಂದು ಲೈಯಿಂಗ್ ಪೊಸಿಷನ್ಲ್ಲಿ ಬಂಧಿಸಿದ್ದ ವ್ಯಕ್ತಿಯನ್ನು ಗಮನಿಸಿದರು. ಕೂಡಲೇ 'ಸಾರ್ ಇವನು ನರಸಿಂಹ ಅಯ್ಯಂಗಾರ್ ಅವರಿಗೇ ಲಾಂಗ್ ಬೀಸಿದ್ದ ಪಾತಕಿ' ಎಂದು ಅಲ್ಲಿದ್ದ ಪೇದೆ ಒಬ್ಬ ಹೇಳಿದ. ನರಸಿಂಹ ಅಯ್ಯಂಗಾರ್ ಒಬ್ಬ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದವರು. ಇವರು ಆ ಕಳ್ಳನನ್ನು ಸೆರೆ ಹಿಡಿಯಲು ಪ್ರಯತ್ನಿಸಿದಾಗ ತಪ್ಪಿಸಿಕೊಳ್ಳಲು ಕೈಯಲ್ಲಿದ್ದ ಲಾಂಗ್ನಿಂದ ಇನ್ಸ್ಪೆಕ್ಟರ್ಗೆ ಹೊಡೆದು ಪರಾರಿಯಾಗಿದ್ದ. ತೀವ್ರ ಗಾಯಗೊಂಡಿದ್ದ ಇನ್ಸ್ಪೆಕ್ಟರ್ ನರಸಿಂಹ ಅಯ್ಯಂಗಾರ್ ಹೈದರಾಬಾದಿನ ಆಸ್ಪತ್ರೆಯಲ್ಲಿ ಎರಡು ತಿಂಗಳು ಚಿಕಿತ್ಸೆ ಪಡೆಯಬೇಕಾಯಿತು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ನರಸಿಂಹ ಅಯ್ಯಂಗಾರ್ ನಂಜನಗೂಡು ಮೂಲದವರು. ಅವರು ಬೆಂಗಳೂರಿನಲ್ಲಿಯೂ ಡಿಸಿಪಿಯಾಗಿ ಕಾರ್ಯ ನಿರ್ವಹಿಸಿದವರು.
ಇಂತಹ ಪಳಗಿದ ಪಾತಕಿ ತಾಂಡಾದ ಮೇಲೆ ಪೊಲೀಸರ ದಾಳಿ ನಡೆದಿದೆ ಎಂಬ ವಾಸನೆ ಅರಿತು ಕತ್ತಲಿನಲ್ಲಿಯೇ ಓಡಿ ಬಂದಿದ್ದ. ಆದರೆ ಎದುರಿಗೆ ಕಾಯುತ್ತಿದ್ದ ಪೊಲೀಸರ ಅರಿವಿಲ್ಲದೆ ನೇರವಾಗಿ ಅವರ ಬಲೆಗೆ ಬಿದ್ದಿದ್ದ. ಕೂಂಬಿಂಗ್ ಪರಿಣಾಮ ದನಗಳ್ಳತನಕ್ಕೂ ಕಡಿವಾಣ ಬಿತ್ತು. ಸಣ್ಣ ಪುಟ್ಟ ಕಳ್ಳತನಗಳೂ ನಿಂತವು. ಸಮಯ ಪ್ರಜ್ಞೆ ಪೊಲೀಸರಿಗೆ ಎಷ್ಟು ಅಗತ್ಯ ಎಂಬುದನ್ನು ಈ ಘಟನೆಯಿಂದ ಅರಿಯಬಹುದು.
- ಅಶ್ವತ್ಥನಾರಾಯಣ್ ಎಲ್.
sathyajns@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.