ವಿಶ್ವಾತ್ಮನ ಕಂಡ ನವಾಬ!
ಸ್ವಾಮಿ ವಿವೇಕಾನಂದರು ಹೈದರಾಬಾದ್ಗೆ ತೆರಳಿದರು. ಅಲ್ಲಿ ನವಾಬ್ ಖುರ್ಷಿದ್ ಝಾ ಅವರನ್ನು ಭೇಟಿಮಾಡಿದರು. ಪರಮತ ಸಹಿಷ್ಣುತೆಗೆ ಹೆಸರಾಗಿದ್ದ ಝಾ ಸಕಲ ಹಿಂದೂ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿದ್ದ ಮುಸಲ್ಮಾನನಾಗಿದ್ದರು. ಅವರಿಗೆ ಸ್ವಾಮೀಜಿ ದೇವರ ಕಚಲ್ಪನೆಯು ಹೇಗೆ ಮೆಟ್ಟಿಲು ಮೆಟ್ಟಿಲಾಗಿ ವಿಕಾಸ ಹೊಂದುತ್ತ ಬಂದಿತು ಎಂಬುದನ್ನು ವಿವರಿಸಿದರು. ಮನುಷ್ಯ ನಿರಾಕಾರ ಸ್ಥಿತಿಗೆ ಏರಬೇಕಾದರೆ ಸಗುಣ-ಸಾಕಾರ ಕಲ್ಪನೆಯು ತುಂಬಾ ಸಹಕಾರಿ ಎಂಬುದನ್ನು ತೋರಿಸಿಕೊಟ್ಟರು.
ಯಾವ ಧರ್ಮ, ಪಂಥದಲ್ಲೇ ಆಗಲಿ ತೀವ್ರತೆಯಿಂದ ಸಾಧನೆ ಮಾಡಿದಲ್ಲಿ ಗುರಿ ಸೇರಬಹುದು ಹಾಗೂ ತನ್ನಲ್ಲಿರುವ ದೈವತ್ವವನ್ನು ಸಾಕ್ಷಾತ್ಕರಿಸಿಕೊಳ್ಳಬಹುದು ಎಂಬ ನೂತನ ವಿಚಾರಧಾರೆಯನ್ನು ನವಾಬನ ಮುಂದಿಟ್ಟರು. ಸ್ವಾಮೀಜಿ ಮಾತುಗಳಿಂದ ನವಾಬ ತೀವ್ರವಾಗಿ ಪ್ರಭಾವಿತನಾದ. ಅವರು ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಅಮೆರಿಕಕ್ಕೆ ಹೋಗಬೇಕೆಂದಿರುವ ವಿಚಾರ ತಿಳಿದು ಉತ್ಸಾಹಿತನಾದ. ನವಾಬ ಸ್ವಾಮೀಜಿಯಲ್ಲಿ ವಿಶ್ವಾತ್ಮನ ಕಂಡು ಕೃತಾರ್ಥನಾದ. ಹಿಂದೂ ಧರ್ಮದ ಸನ್ಯಾಸಿಯೊಬ್ಬ ಧರ್ಮ ಪ್ರಸಾರಕ್ಕಾಗಿ ಪಾಶ್ಚಾತ್ಯ ರಾಷ್ಟ್ರಕ್ಕೆ ಹೊರಟಿರುವುದನ್ನು ಕೇಳಿ ಮುಸಲ್ಮಾನ ನವಾಬನೊಬ್ಬ ಧನಸಹಾಯ ಮಾಡಲು ಮುಂದಾಗಿದ್ದು ಅದ್ಭುತ, ಅಪರೂಪದ ಸನ್ನಿವೇಶವೇ ಸರಿ.
ಸತ್ಯ ಧರ್ಮಾತೀತ ವ್ಯಕ್ತಿಯನ್ನು ನಿರ್ಮಿಸುತ್ತದೆ. ಸ್ವಾಮೀಜಿ ಸತ್ಯಯುತವಾಗಿ ತಮ್ಮ ಅಂತರಂಗದ ಧ್ಯೇಯಗಳನ್ನು ಹೊರಗೆಡವಿದಾಗ ನವಾಬನು ತನ್ನ ಹೃದಯವನ್ನೇ ತೆರೆದು ಅವರಿಗೆ ಸ್ಥಾನ ನೀಡಿದ.
- ಆನಂದ ಎಸ್.ಎನ್.
anandsn193@gmail.com