ಅಲರ್ಜಿ ಆಹಾರ ಪತ್ತೆ ಹೇಗೆ?
ಕೆಲವರ ಸಂದೇಹ. 'ಯಾವ ಆಹಾರ ನಮಗೆ ಅಲರ್ಜಿ ಮತ್ತು ಏನು ತಿಂದರೆ ಜೀರ್ಣಾಂಗಗಳಲ್ಲಿ ತೊಂದರೆಯಾಗುತ್ತದೆ? ಅದನ್ನು ಕಂಡುಕೊಳ್ಳುವುದು ಹೇಗೆ? ಇದನ್ನು ದಯವಿಟ್ಟು ತಿಳಿಸಿಕೊಡಿ' ಎಂದು ಪತ್ರ, ಎಸ್‌ಎಂಎಸ್ ಮೂಲಕ ಕೋರಿದ್ದಾರೆ. ಹಿಂದೆ ಯಾವುದೋ ಸಂದರ್ಭದಲ್ಲಿ ಹೇಳಿದ್ದೆ ಎಂದು ತೋರುತ್ತದೆ. ಇಂಥದ್ದೇ ಆಹಾರ ನಮಗೆ ಅಲರ್ಜಿ ಉಂಟುಮಾಡುತ್ತಿದೆ ಎನ್ನುವುದನ್ನು ಪತ್ತೆ ಮಾಡಲು ನಿರ್ದಿಷ್ಟ ಪರೀಕ್ಷೆ ಅಥವಾ ತನಿಖಾ ವಿಧಾನಗಳೇನೂ ಇಲ್ಲ. ಟ್ರಯಲ್ ಅಂಡ್ ಎರರ್ ವಿಧಾನದ ಮೂಲಕ ಅದನ್ನು ನಾವೇ ಕಂಡುಕೊಳ್ಳಬೇಕು.
ಹಲವರಿಗೆ ಅದು ಸುಲಭ, ಕೆಲವರಿಗೆ ತ್ರಾಸದಾಯಕವೂ ಆಗಿರಬಹುದು. ಆದರೆ ಭವಿಷ್ಯದಲ್ಲಿ ಇನ್ನಷ್ಟು ನೋವು ಅನುಭವಿಸುವುದರಿಂದ ಪಾರಾಗಲು ಸ್ವಲ್ಪವಾದರೂ ರಿಸ್ಕ್ ತೆಗೆದುಕೊಳ್ಳಲೇಬೇಕು ಅಲ್ಲವೆ? ಒಂದು ದಿನ ತೀವ್ರ ತಲೆನೋವು ಅಥವಾ ಹೊಟ್ಟೆಯಲ್ಲಿ ಏನಾದರೂ ತೊಂದರೆ ಕಾಣಿಸಿಕೊಂಡಿತು ಎಂದಿಟ್ಟುಕೊಳ್ಳಿ. ಆವತ್ತು ಏನೇನು ತಿಂದಿರಿ ಎನ್ನುವುದನ್ನು ನೆನಪು ಮಾಡಿಕೊಂಡು ಬರೆದಿಟ್ಟುಕೊಳ್ಳಿ. ಎರಡು ದಿನಗಳ ನಂತರ ನಿಮ್ಮ ಪ್ರಯೋಗ ಶುರುಮಾಡಿಕೊಳ್ಳಿ. ನಿಮ್ಮ ಪಟ್ಟಿಯಲ್ಲಿರುವ ಒಂದೊಂದು ತಿನಿಸನ್ನು ಒಂದೊಂದು ದಿನ ತಿನ್ನುತ್ತಾ ಬನ್ನಿ. ಮಧ್ಯೆ ಎರಡು ದಿನಗಳ ಅಂತರ ಇರಲಿ. ಉದಾಹರಣೆಗೆ ನೀವು ಆವತ್ತು ಔಟಿಂಗ್ ಹೋಗಿದ್ದಿರಿ, ರೋಟಿ ಕರ್ರಿ, ಐಸ್‌ಕ್ರೀಂ, ಫ್ರೈಡ್ ರೈಸ್ ತಿಂದಿದ್ದಿರಿ ಎಂದುಕೊಳ್ಳೋಣ. ಒಂದು ದಿನ ರೋಟಿ-ಕರ್ರಿ ತಿನ್ನಿ. ಮಾಮೂಲಿಗಿಂತ ತುಸು ಜಾಸ್ತಿಯೇ ತಿನ್ನಿ ಪರವಾಗಿಲ್ಲ. ಎರಡು ದಿನಗಳ ತರುವಾಯ ಫ್ರೈಡ್‌ರೈಸ್ ಸೇವಿಸಿ. ಏನು ತಿಂದಾಗ ನಿಮ್ಮ ಆರೋಗ್ಯದಲ್ಲಿ ಏರಿಳಿತ ಕಾಣಿಸಿಕೊಂಡಿದೆ ಎನ್ನುವುದನ್ನೂ ದಾಖಲಿಸಿಕೊಳ್ಳಿ. ಹೀಗೆ ಮಾಡುವುದರಿಂದ ಯಾವ ತಿನಿಸು ನಿಮಗೆ ಆಗಿ ಬರುವುದಿಲ್ಲ ಎನ್ನುವುದು ಗೊತ್ತಾಗುತ್ತದೆ. ಹಂತಹಂತವಾಗಿ ಅವುಗಳ ಸೇವನೆ ಕಡಿಮೆ ಮಾಡಿ. ಅವುಗಳನ್ನು ಬಿಟ್ಟೇ ಬಿಡಬೇಕು ಅಂತೇನೂ ಇಲ್ಲ, ನಾಲ್ಕು ರೊಟ್ಟಿ ತಿನ್ನುತ್ತಿದ್ದವರು ಎರಡು ತಿನ್ನಿ. ವಾರಕ್ಕೆ ಎರಡು ದಿನ ಫ್ರೈಡ್ ರೈಸ್ ಸೇವಿಸುತ್ತಿದ್ದವರು ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ತಿನ್ನಿ. ಸೇವನೆಯ ಪ್ರಮಾಣ ಕಡಿಮೆ ಮಾಡುವುದರಿಂದ ಅವು ಉಂಟುಮಾಡಬಹುದಾದ ರಿಯಾಕ್ಷನ್ ಪರಿಣಾಮ ತೀವ್ರವಾಗಿರುವುದಿಲ್ಲ.
ಜರ್ಮನ್ ಸಂಶೋಧಕರು ಮ್ಯೂನಿಚ್‌ನ ಆಸ್ಪತ್ರೆಯೊಂದರಲ್ಲಿ ಉದರ ಶೂಲೆಯ ಚಿಕಿತ್ಸೆಗೆ ಬರುತ್ತಿದ್ದವರಿಗೆ ಇದೇ ಪ್ರಶ್ನೆ ಕೇಳಿದರು, 'ಏನು ತಿಂದರೆ ನಿಮಗೆ ಕಿರಿಕಿರಿ, ಆರೋಗ್ಯ ತೊಂದರೆ ಉಂಟಾಗುತ್ತದೆ?' ತಕ್ಷಣದಲ್ಲಿ ಯಾರ ಬಳಿಯೂ ಉತ್ತರ ಇರಲಿಲ್ಲ. ಅವರಿಗೆ ಸಂಶೋಧಕರು ಈ ವಿಧಾನ ತಿಳಿಸಿಕೊಟ್ಟಾಗ ಎರಡು ವಾರದ ಬಳಿಕ ಒಬ್ಬೊಬ್ಬರಾಗಿ ಉತ್ತರ ಹೇಳತೊಡಗಿದರು. ಕೆಲವರಿಗೆ ಮೊಟ್ಟೆ, ಎಣ್ಣೆ ಇತ್ಯಾದಿಗಳನ್ನು ಬಳಸಿ ಮಾಡಿದ ಮಸಾಲೆ ಪದಾರ್ಥಗಳು; ಕ್ಯಾಬೇಜ್; ಹುರಿದ ಮತ್ತು ಕರಿದ ತಿನಿಸುಗಳು; ಮಸಾಲೆ ಪದಾರ್ಥಗಳು; ಅಧಿಕ ಉಪ್ಪು ಹಾಕಿದ ಪದಾರ್ಥಗಳು ತೊಂದರೆ ಉಂಟುಮಾಡಿದ್ದವು. ಕೆಲವರಿಗೆ ಕಾರ್ಬೊನೇಟೆಡ್ ಪಾನೀಯಗಳು, ಹಣ್ಣಿನ ರಸಗಳು ಕಿರಿಕಿರಿ ಉಂಟುಮಾಡಿದ್ದವು. ಅಪರೂಪಕ್ಕೆ ಒಬ್ಬೊಬ್ಬರಿಗೆ ಕಾಫಿ ಕೂಡ ತೊಂದರೆ ಉಂಟುಮಾಡುತ್ತಿತ್ತು.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com