ತಬಾಲಾ
ಕನ್ನಡದ ಎವರ್ಗ್ರೀನ್ ಹಿಟ್ಗಳಲ್ಲೊಂದಾದ 'ಆಡಿಸಿ ನೋಡು ಬೀಳಿಸಿ ನೋಡು' ಎಂಬ ಹಾಡು ಕೇಳುವಾಗ ನೀವು ಎಂದಾದರೂ...
ಕನ್ನಡದ ಎವರ್ಗ್ರೀನ್ ಹಿಟ್ಗಳಲ್ಲೊಂದಾದ 'ಆಡಿಸಿ ನೋಡು ಬೀಳಿಸಿ ನೋಡು' ಎಂಬ ಹಾಡು ಕೇಳುವಾಗ ನೀವು ಎಂದಾದರೂ ಅದರಲ್ಲಿನ ಡೋಲಕ್ ವಾದನವನ್ನು ಅಥವಾ ಎ. ಆರ್. ರೆಹಮಾನ್ ಸಂಗೀತ ನಿರ್ದೇಶನದ ಜೋಧಾ ಅಕ್ಬರ್ ಸಿನಿಮಾದ 'ಕ್ವಾಜಾ ಮೇರೆ ಕ್ವಾಜಾ...' ಹಾಡಲ್ಲಿನ ತಬಲಾ ವಾದನವನ್ನು ಗಮನಿಸಿದ್ದೀರಾ? ಇಂಥಾ ಹಲವಾರು ಸೂಪರ್ ಹಿಟ್ ಹಾಡುಗಳಿಗೆ ತಬಲಾ, ಡೋಲಕ್, ತುಂಬ, ಕೋಂಗೋ ಡ್ರಂ ಮೊದಲಾದ ಆನದ್ಧವಾದ್ಯಗಳನ್ನು (percussion instrument) ಬಾರಿಸಿದವರು ಎಚ್.ಪಿ. ಬಾಲಸುಬ್ರಮಣ್ಯಂ. ಹಿರಿಯ ಸಂಗೀತ ಕಲಾವಿದರಾದ ಬಾಲಸುಬ್ರಮಣ್ಯಂ ಸಂಗೀತ ಕ್ಷೇತ್ರದಲ್ಲಿ 'ತುಂಬ ಬಾಲಾ' ಎಂದೇ ಚಿರಪರಿಚಿತರು. ಕರ್ನಾಟಕದವರಾಗಿದ್ದರೂ ಚೆನ್ನೈಯಲ್ಲಿ ನೆಲೆಸಿರುವ ಬಾಲಾರನ್ನು ಬೈಟು ಕಾಫಿಗಾಗಿ ಮಾತನಾಡಿಸಲಾಯಿತು.
ಸಂಗೀತ ಕ್ಷೇತ್ರಕ್ಕೆ ನಿಮ್ಮ ಮೊದಲ ಹೆಜ್ಜೆ?
ಕನ್ನಡದ ಮೊದಲ 'ವಾಕ್ಚಿತ್ರ ಸತಿ ಸುಲೋಚನಾ'ದ ವಾದ್ಯಗೋಷ್ಠಿ ನಿಯಂತ್ರಕರಾಗಿದ್ದ ನನ್ನ ಅಪ್ಪ ಪದ್ಮನಾಭ ಶಾಸ್ತ್ರಿಗಳೇ ನನ್ನ ಗುರು. ನಾನು 12 ವರ್ಷದವನಿರುವಾಗ ತೆಲುಗು ಸಿನಿಮಾವೊಂದರಲ್ಲಿ ಡೋಲಕಿಯಂತಿರುವ ವಾದ್ಯವೊಂದನ್ನು ಬಾರಿಸುವ ಮೂಲಕ ಸಂಗೀತ ಕ್ಷೇತ್ರಕ್ಕೆ ಹೆಜ್ಜೆಯಿಟ್ಟೆ. 1960ರಲ್ಲಿ ಆವಾಗ ನನಗೆ 20ರ ಹರೆಯ. ಕೆ.ವಿ. ಮಹಾದೇವನ್ ಅವರ 'ವಿಳಯಾಟ್ಟು ಪಿಳ್ಳೈ' ಎಂಬ ಚಿತ್ರಕ್ಕೆ ತಬಲಾ ಬಾರಿಸಿದೆ. 1981ರಲ್ಲಿ ಮುಂಬೈನಲ್ಲಿ ಅಬ್ದುಲ್ ಸತ್ತಾರ್ ಅವರಿಂದ ಡೋಲಕ್ ಕಲಿತೆ. ಒಂದೊಂದೇ ವಾದ್ಯ ಕಲಿಯುತ್ತಾ ಹೊಸ ಪ್ರಯೋಗಗಳನ್ನು ಮಾಡುತ್ತಾ ಬಂದೆ. ಲ್ಯಾಟಿನ್ ಪರ್ಕಶನ್ ವಾದ್ಯವಾದ ತುಂಬ ಅನ್ನು ಮೊದಲ ಬಾರಿ ನುಡಿಸಿದ್ದು ನಾನೇ.
ಕನ್ನಡ ಚಿತ್ರರಂಗದಲ್ಲಿ ನಿಮ್ಮ ಅನುಭವ?
ಬಯಲು ದಾರಿ, ದಾರಿತಪ್ಪಿದ ಮಗ, ಕಸ್ತೂರಿ ನಿವಾಸ, ಎರಡು ಕನಸು, ಹೊಂಬಿಸಿಲು ಮೊದಲಾದ ಸೂಪರ್ ಹಿಟ್ ಸಿನಿಮಾಗಳಿಗೆ ಹಿನ್ನೆಲೆ ವಾದ್ಯ ನುಡಿಸಿದ ಅನುಭವ ನನ್ನದು. ರಾಜನ್- ನಾಗೇಂದ್ರ, ಜಿ.ಕೆ ವೆಂಕಟೇಶ್, ಸತ್ಯಂ, ರಂಗರಾವ್, ಉಪೇಂದ್ರ ಕುಮಾರ್, ವಿಜಯಭಾಸ್ಕರ್, ಹಂಸಲೇಖ, ಸಿ. ಆಶ್ವತ್ ಮತ್ತು ಎಲ್. ವೈದ್ಯನಾಥ್ ಅವರೊಂದಿಗೆ ನಾನು ಕೆಲಸ ನಿರ್ವಹಿಸಿದ್ದೇನೆ. ಹಳೇ ಕಾಲದ ಹಾಡುಗಳ ಮಾಧುರ್ಯವನ್ನು ಮರೆಯಲೆಂತು? ಕಸ್ತೂರಿ ನಿವಾಸ ಚಿತ್ರದ ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು, ಎರಡು ಕನಸು ಚಿತ್ರದ ಪೂಜಿಸಲೆಂದೇ ಹೂಗಳ ತಂದೇ ಹಾಡಿನಲ್ಲಿ ನಾನು ಡೋಲಕ್ ನುಡಿಸಿದ್ದೇನೆ. ಅದೇ ವೇಳೆ ತಮ್ನಂ ತಮ್ನಂ ನನ್ನೀ ಮನಸು(ಎರಡು ಕನಸು), ಎಲ್ಲಿರುವೆ ಮನವ ಕಾಡುವ ರೂಪಸಿಯೇ(ಬಯಲುದಾರಿ), ನಿನ್ನ್ನ ಮರೆಯಲಾರೆ (ನಾ ನಿನ್ನ ಮರೆಯಲಾರೆ), ಜೀವ ವೀಣೆ ನೀಡು ಮಿಡಿತದ ಸಂಗೀತ ಮತ್ತು ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು(ಹೊಂಬಿಸಿಲು), ಆಕಾಶವೇ ಬೀಳಲಿ ಮೇಲೆ(ನ್ಯಾಯವೇ ದೇವರು) ಮೊದಲಾದ ಹಾಡಿಗೆ 'ತುಂಬ' ವಾದ್ಯ ನುಡಿಸಿದ್ದೇನೆ. ಹಲವಾರು ರೀತಿಯ ವಾದ್ಯಗಳನ್ನು ವಿಶಿಷ್ಟ ರೀತಿಯಲ್ಲಿ ನುಡಿಸುವ ಹಲವಾರು ಪ್ರಯೋಗ ಮಾಡಿದ್ದೆ.
ನಿಮಗೆ ಹೆಚ್ಚಿನ ಅವಕಾಶ ಸಿಕ್ಕಿದ್ದು ತಮಿಳಿನಲ್ಲಿ ಅಲ್ಲವೆ?
ಹೌದು. ಎಂ.ಎಸ್. ವಿಶ್ವನಾಥನ್, ಕೆ.ವಿ ಮಹಾದೇವನ್, ಎ.ಎಂ ರಾಜಾ, ಜಿ.ಕೆ ವೆಂಕಟೇಶ್, ಶಂಕರ್-ಗಣೇಶ್, ಚಂದ್ರ ಬೋಸ್, ಇಳಯರಾಜ, ವಿದ್ಯಾ ಸಾಗರ್, ಎ.ಆರ್. ರೆಹಮಾನ್, ಯುವನ್ ಶಂಕರ್ ರಾಜಾ ಮೊದಲಾದವರೊಂದಿಗೆ ನಾನು ಕಾರ್ಯ ನಿರ್ವಹಿಸಿದ್ದೇನೆ. 'ಅನ್ಬೇ ಆರುಯಿರೇ' ಚಿತ್ರದ 'ಮಯಿಲರಗೇ...ಮಯಿಲಿರಗೇ' ಹಾಡಿನ ಆರಂಭದಲ್ಲಿ ನಾಯಕಿ ಡೋಲ್ ಬಾರಿಸುವ ದೃಶ್ಯ ಇದೆಯಲ್ವಾ? ಅದಕ್ಕೆ ಹಿನ್ನೆಲೆಯಲ್ಲಿ ಡೋಲ್ ಬಾರಿಸಿದ್ದು ನಾನೇ. ವಿಜಯಕಾಂತ್ ಅವರ ಪ್ರಥಮ ಚಿತ್ರವಾದ 'ದೂರತ್ತ್ ಇಡಿ ಮುಳಕ್ಕಂ' ಸಿನಿಮಾದಲ್ಲಿ 'ಉಳ್ಳಂ ಎಲ್ಲ ತಲ್ಲಾಡುದೇ' ಹಾಡು, 1976ರಲ್ಲಿ ತೆರೆಕಂಡ 'ಅಣ್ಣಕ್ಕಿಳಿ' ಎಂಬ ಚಿತ್ರದ 'ಅಣ್ಣಕ್ಕಿಳಿ ಉನ್ನೈ ತೇಡುದೇ' ಎಂಬ ಸೂಪರ್ ಹಿಟ್ ಹಾಡುಗಳಿಗೆ ವಾದ್ಯ ನುಡಿಸಿದ್ದೇನೆ. ಇಳಯರಾಜಾ ನನಗೆ ಪರಿಚಯವಾಗಿದ್ದು, 1973ರಲ್ಲಿ. ಅಲ್ಲಿಂದ ಇಲ್ಲಿಯವರೆಗೂ ನಾವು ಒಳ್ಳೆಯ ಸ್ನೇಹಿತರಾಗಿದ್ದೇವೆ. ಇಳಯರಾಜಾ ಸಂಗೀತ ನಿರ್ದೇಶಿಸಿ, ರಜನೀಕಾಂತ್ ನಟಿಸಿರುವ 'ಯಜಮಾನ್', 'ಅಪೂರ್ವ ಸಹೋದರರ್ಗಳ್', 'ಮಂಜಳ್ ನಿಲಾ' ಮೊದಲಾದ ಸಿನಿಮಾಗಳಲ್ಲಿ ವಾದ್ಯ ಸಾಥ್ ನೀಡಿದ್ದೇನೆ. ಇಳಯರಾಜಾ ಪ್ರತಿಯೊಂದು ಹಾಡಿಗೂ ವಾದ್ಯವನ್ನು ವಿಶೇಷ ರೀತಿಯಲ್ಲಿ ನುಡಿಸಿರುತ್ತಾರೆ. ಅವರಿಂದ ಕಲಿಯಬೇಕಾದುದು ತುಂಬಾ ಇದೆ. 2001ರಲ್ಲಿ ತೆರೆಕಂಡ ವಿಕ್ರಂ ಅಭಿನಯದ 'ಕಾಸಿ' ಚಿತ್ರದ ಎಲ್ಲ ಹಾಡುಗಳಿಗೂ ವಾದ್ಯ ನುಡಿಸಿದ್ದೆ.
ಮಲಯಾಳಂ ಚಿತ್ರರಂಗಕ್ಕೆ ನಿಮ್ಮ ಪ್ರವೇಶ ಹೇಗಾಯ್ತು?
1974ರಲ್ಲಿ ತೆರೆಕಂಡ 'ನೆಲ್ಲ್' ಎಂಬ ಚಿತ್ರಕ್ಕೆ ವಾದ್ಯ ನುಡಿಸಲು ಸಲೀಲ್ ಚೌಧರಿ ಅವಕಾಶ ಕಲ್ಪಿಸಿದ್ದರು. ಮಾತ್ರವಲ್ಲದೆ ಜಾನ್ಸನ್ ಮಾಸ್ಟರ್ ಸಂಗೀತ ನಿರ್ದೇಶಿಸಿದ 'ಸಲ್ಲಾಪಂ' ಚಿತ್ರದ 'ಚಂದನ ಚೋಲೆಯಿಲ್' ಮತ್ತು 'ಪೊನ್ನಿಲ್ ಕುಳಿಚ್ಚು ನಿನ್ನು' ಎಂಬ ಹಾಡಿಗೆ ತಬಲಾ ನುಡಿಸಿದ್ದೆ. ಶ್ಯಾಂ ಅವರು ಸಂಗೀತ ನಿರ್ದೇಶಿಸಿದ್ದ 'ಕುಯಿಲಿನೆ ತೇಡಿ' ಎಂಬ ಚಿತ್ರದ ಕಾತಿರಿಪ್ಪು...ಎಂಬ ಹಾಡಿಗೂ ಆನದ್ಧ ವಾದ್ಯ ಬಾರಿಸಿದ್ದೆ. ದಕ್ಷಿಣ ಮೂರ್ತಿ ಸ್ವಾಮಿ, ದೇವರಾಜನ್ ಮಾಸ್ಟರ್, ಜಯಚಂದ್ರನ್, ಅರ್ಜುನನ್ ಮಾಸ್ಟರ್, ಶರತ್ ಮೊದಲಾದ ಸಂಗೀತ ನಿರ್ದೇಶಕರೊಂದಿಗೆ ಕಾರ್ಯನಿರ್ವಹಿಸಿದ್ದೆ.
ತೆಲುಗು ಚಿತ್ರರಂಗದಲ್ಲಿ ನಿಮ್ಮ ಅನುಭವದ ಬಗ್ಗೆ ಹೇಳಿ..
ತೆಲುಗು ಚಿತ್ರರಂಗದಲ್ಲಿ ರಾಜೇಶ್ವರ್ ರಾವ್, ಸತ್ಯಂ, ರಾಜ್ಕೋಟಿ, ಕೀರವಾಣಿ ಮೊದಲಾದ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ ಅನುಭವವಿದೆ. 'ಜೀವನ' ತರಂಗಲು ಎಂಬ ಸಿನಿಮಾಕ್ಕೆ ಪಕ್ಕ ವಾದ್ಯ ನುಡಿಸಿದ್ದೆ. ಅನ್ನಮಯ್ಯ, ಸ್ವಾತಿ ಮುತ್ಯಂ, ಶಿವ, ಗೀತಾಂಜಲಿ ಮೊದಲಾದ ಸಿನಿಮಾಗಳಲ್ಲಿಯೂ ಹಿನ್ನೆಲೆ ನುಡಿಸಿದ್ದೆ.
ಬಾಲಿವುಡ್ ಸಿನಿಮಾಗಳಿಗೂ ನೀವು ವಾದ್ಯ ನುಡಿಸಿದ್ದೀರಿ. ಅಲ್ಲಿ ನಿಮ್ಮ ಅನುಭವಗಳೇನು?
ಸಂಗೀತಕ್ಕೆ ಭಾಷೆಗಳ ಹಂಗಿಲ್ಲ. ಹಿಂದಿ ಚಿತ್ರರಂಗದಲ್ಲಿ ಲಕ್ಷ್ಮೀಕಾಂತ್ ಪ್ಯಾರೇಲಾಲ್, ಸಲೀಲ್ ಚೌಧರಿ, ಇಳಯರಾಜಾ, ಎಂ.ಎಂ. ಕ್ರೀಮ್, ಎ.ಆರ್. ರೆಹಮಾನ್ ಜತೆಗೂ ಕಾರ್ಯ ನಿರ್ವಹಿಸಿದ್ದೇನೆ. ರೆಹಮಾನ್ ಸಂಗೀತ ನಿರ್ದೇಶನದ ಜೋಧಾ ಅಕ್ಬರ್ ಚಿತ್ರದ ಕ್ವಾಜಾ ಮೇರೆ ಕ್ವಾಜಾ, ಡೆಲ್ಲಿ 6 ಚಿತ್ರದ ಮೌಲಾ ಮೌಲಾ ಹಾಡುಗಳಿಗೆ ನಾನೇ ತಬಲಾ ನುಡಿಸಿದ್ದು. ರಣ್ಬೀರ್ ಕಪೂರ್ ನಟಿಸಿದ ರಾಕ್ಸ್ಟಾರ್ ಚಿತ್ರದ ಕತಿಯಾ ಕರೂಂ ಹಾಡಿಗೆ ಡೋಲಕ್ ಹಾಗು ಮಂಗಲ್ ಪಾಂಡೆ ಚಿತ್ರಕ್ಕಾಗಿ ತಬಲಾ ಮತ್ತು ಡೋಲಕ್ ನುಡಿಸಿದ್ದೇನೆ.
ಎಷ್ಟು ವಿಧದ ಆನದ್ಧ ವಾದ್ಯಗಳನ್ನು ನುಡಿಸಬಲ್ಲಿರಿ?
ತುಂಬ, ಕಾಂಗೋ ಡ್ರಂ, ಡೋಲಕ್, ತಬಲಾ, ಡೋಲಕಿ, ಬಾಂಗೋಸ್, ಧುನ್, ಡಿಕ್ಕಿ, ತರಂಗ್ ಹೀಗೆ ಯಾವುದೇ ಆನದ್ಧ ವಾದ್ಯಗಳನ್ನು ನಾನು ನುಡಿಸಬಲ್ಲೆ.
ಸಂಗೀತ ಕ್ಷೇತ್ರದಲ್ಲಿನ ನಿಮ್ಮ ಅನುಭವದ ಬಗ್ಗೆ ಹೇಳಿ.
ನನಗೀಗ 58 ವರ್ಷ. ಓದಿದ್ದು 10ನೇ ತರಗತಿ ವರೆಗೆ. ಸಂಗೀತದತ್ತ ನನ್ನ ಒಲವು ರಕ್ತಗತವಾಗಿತ್ತು. ಈವರೆಗೆ ಒಂದು ಲಕ್ಷಕ್ಕಿಂತಲೂ ಹೆಚ್ಚು ಹಾಡುಗಳಿಗೆ ಆನದ್ಧವಾದ್ಯಗಳನ್ನು ನುಡಿಸಿದ್ದೇನೆ. 35 ವರುಷಗಳ ಹಿಂದಿನ ಮಾತು, ನಾವು ಹಾಡು ರೆಕಾರ್ಡಿಂಗ್ಗಾಗಿ ಒಂದು ಸ್ಟುಡಿಯೋದಿಂದ ಇನ್ನೊಂದು ಸ್ಟುಡಿಯೋಗೆ ಹೋಗಬೇಕಾಗುತ್ತಿತ್ತು. ನಿರಂತರ ರೆಕಾರ್ಡಿಂಗ್ ನಡೆಯುತ್ತಿದ್ದ ಕಾರಣ ಈಗ ಯಾವ್ಯಾವ ಹಾಡಿಗೆ ಪಕ್ಕ ವಾದ್ಯ ನುಡಿಸಿದ್ದೇನೆ ಎಂದು ನೆನಪು ಬರುತ್ತಿಲ್ಲ. ಆವಾಗೆಲ್ಲಾ ಆರೇಳು ಗಂಟೆ ಪ್ರಾಕ್ಟೀಸ್ ಮಾಡುತ್ತಿದ್ದೆ. ಈಗ ಎರಡು ಮೂರು ಗಂಟೆ ಪ್ರಾಕ್ಟೀಸ್ ಮಾಡುತ್ತೇನೆ. ಆರ್ಕೆಸ್ಟ್ರಾಗಳಲ್ಲಿ ವಾದ್ಯ ನುಡಿಸಲು ಹೋಗುತ್ತೇನೆ. ವಿದ್ಯಾರ್ಥಿಗಳಿಗೆ ಆನದ್ಧವಾದ್ಯ ತರಬೇತಿನೀಡುತ್ತಿದ್ದೇನೆ. ನಾನಿನ್ನೂ ವಿದ್ಯಾರ್ಥಿ.
ಆಗಿನ ಕಾಲದ ಹಿನ್ನೆಲೆ ಸಂಗೀತಕ್ಕೂ, ಈಗಿನದಕ್ಕೂ ವ್ಯತ್ಯಾಸ?
ಆಗಿನ ಕಾಲದಲ್ಲಿ ಒಂದು ಹಾಡಿಗಾಗಿ ಆರ್ಕೆಸ್ಟ್ರಾ ಪ್ರಾಕ್ಟೀಸ್ ಮಾಡಬೇಕಾಗಿತ್ತು. ತಾಳ ತಪ್ಪಿಸಿದರೆ, ಮತ್ತೆ ಆರಂಭದಿಂದಲೇ ಆ ಹಾಡು ಹಾಡಿ ವಾದ್ಯ ನುಡಿಸಬೇಕಾಗಿತ್ತು. ನೋಡಿ, ತಬಲಾದಲ್ಲೇ ರೈಲಿನ ಓಡಾಡದ ಸದ್ದನ್ನು ಮಾಡಬಹುದು. ಮೊದಲೆಲ್ಲಾ ಇಂಥಾ ಸ್ವರಗಳನ್ನು ಬಳಸುತ್ತಿದ್ದರು. ಆಗ ನಮ್ಮೊಳಗೇ ಆರೋಗ್ಯಕರ ಸ್ಫರ್ಧೆ ಇರುತ್ತಿತ್ತು. ಈಗ ಇಲೆಕ್ಟ್ರಾನಿಕ್ಸ್ ತಂತ್ರಜ್ಞಾನದಿಂದಾಗಿ ಹಾಡುವವರು ಬಂದು ಹಾಡಿ ಹೋಗುತ್ತಾರೆ. ಇಲೆಕ್ಟ್ರಾನಿಕ್ ವಾದ್ಯಗಳಿಂದ ವಿವಿಧ ರೀತಿಯ ಸ್ವರ ಹೊರಡಿಸಬಹುದು. ತಗಲುವ ಸಮಯವೂ ಕಡಿಮೆ. ಆರ್ಕೆಸ್ಟ್ರಾಗಳು ಇರುವಾಗ ಎಲ್ಲರೂ ಜತೆಗಿರುತ್ತಾರೆ. ಈಗ ಅಂಥಾ ಸಂಬಂಧಗಳು ವಿರಳ.
ಐದು ಭಾಷೆಗಳ ಚಿತ್ರರಂಗದಲ್ಲಿ ನೀವು ಸಕ್ರಿಯವಾಗಿದ್ದರೂ ತೆರೆಮರೆಯಲ್ಲೇ ಉಳಿಯಲು ಕಾರಣ?
ಆಗ ಚೆನ್ನೈಯಲ್ಲಿ ಹೆಚ್ಚು ರೆಕಾರ್ಡಿಂಗ್ ಆಗುತ್ತಿದ್ದ ಕಾರಣ ಅಲ್ಲೇ ನೆಲೆಸಿದೆ. ಅಲ್ಲಿಯವರಿಗೆ ನಾನು ಕರ್ನಾಟಕದವನು, ಇಲ್ಲಿಯವರಿಗೆ ನಾನು ತಮಿಳಿಗನಾದೆ. ಹೀಗೆ ತ್ರಿಶಂಕು ಸ್ಥಿತಿ ನನ್ನದು.
ಯುವಜನಾಂಗಕ್ಕೆ ನಿಮ್ಮ ಸಂದೇಶ?
ಯಾವುದೇ ರೀತಿಯ ಸಂಗೀತವನ್ನು ಕಲಿಯಲು ಶ್ರದ್ಧೆ ಮುಖ್ಯ. ಒಳ್ಳೆಯ ಗುರುಗಳಿಂದ ಸಂಗೀತ ಅಭ್ಯಸಿಸಿ, ಹೆಚ್ಚೆಚ್ಚು ಸಮಯ ಪ್ರಾಕ್ಟೀಸ್ಗೆ ಮೀಸಲಿಡಿ.
- ರಶ್ಮಿ ಕಾಸರಗೋಡು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.