ನಾಭಿ ಹೇಗಾಯ್ತು?
ಸುಂದರಿಯರ ಹೊಕ್ಕುಳಿಗೊಂದು ವಿಶಿಷ್ಟವಾದ ಸ್ಥಾನವಿದೆ. ಅದು ಮನುಷ್ಯನ ಜನನ ಸಂಬಂಧವಾಗಿ, ಮಾತೃಸ್ಥಾನದಲ್ಲಿರುವಂಥದು. ಅಲ್ಲಿಂದಲೇ ಗರ್ಭಸ್ಥ ಶಿಶುವಿಗೆ ಎಲ್ಲ ಸರಬರಾಜು. ಮಗು ನೆಲಕ್ಕಿಳಿದ ಮೇಲೆ ಹೊಕ್ಕುಳ ಬಳ್ಳಿ ಕತ್ತರಿಸಲೇಬೇಕು. ಆಗ ಬಳ್ಳಿ ಅಳಿದು ಗುಳಿ ಉಳಿಯುತ್ತದೆ. ಇನ್ನು ಗಂಡು- ಹೆಣ್ಣು ಪ್ರಣಯ ಸಂಬಂಧವಾಗಿ, ಕಾಮಪ್ರಚೋದಕ ಸ್ಥಾನದಲ್ಲಿಯೂ ಇರುವುದು. ಹೆಣ್ಣಿನ ಹೊಕ್ಕಳು ನೋಡಿ ಗಂಡು ಉಲ್ಲಸಿತನಾಗುತ್ತಾನೆ, ಉದ್ರೇಕಿತನಾಗುತ್ತಾನೆ. ಇಂಥ ನಾಭಿಗೆ ಸಂಸ್ಕೃತ ಕವಿಗಳು ಸಲ್ಲಿಸಿರುವ ಗೌರವ ಸಾಕಷ್ಟು.
ಸ್ತನೌ ತುಂಗೌ ಸಮಾರೂಢೇ ಚಾಪನ್ಯಸ್ತಭರೇ ಸ್ಮರೇ
ಕೋದಂಡಾಟನಿಮುದ್ರೇವ ಜಾತಾ ನಾಭೀ ನತಂಭ್ರುವಃ
ಮನ್ಮಥ ಈ ಹೆಣ್ಣುಗಳ ಅಂಗಾಂಗಗಳಲ್ಲಿ ನೆಲೆಸಿರುತ್ತಾನೆ. ಉದಾಹರಣೆಗೆ ಆಕೆಯ ಬಾಗಿದ ಹುಬ್ಬು. ಅಲ್ಲಿಂದಲೇ ಸಾಕಷ್ಟು ಕದನವನ್ನೆಸಗಿ, ಧೀರ ಗಂಡುಗಳನ್ನು ಸೋಲಿಸುತ್ತಾನೆ. ಈ ಕದನದಲ್ಲಿ ಆತನಿಗೆ ಬಳಲಿಕೆಯುಂಟಾಗುತ್ತದೆ. ಆಗ ಆತ ತುಂಗಸ್ತನಗಳ ಬೆಟ್ಟದ ಮೇಲೆ ಕುಳಿತು ವಿಶ್ರಮಿಸಿಕೊಳ್ಳುತ್ತಾನೆ. ಬಿಲ್ಲನ್ನು ಕೆಳಕ್ಕೆ ಎಸೆಯುತ್ತಾನೆ. ಆಗ ಆ ಬಿಲ್ಲಿನ ತುದಿ, ಆಕೆಯ ಸುಕೋಮಲವಾದ ಹೊಟ್ಟೆಯ ಮೇಲೆ ಕುಕ್ಕಿ, ಗುಳಿಯೊಂದನ್ನುಂಟುಮಾಡಿದೆ. ಅದೇ ನಾಭಿ!
ಕವಿಗಳು ಖತರ್ನಾಕ್ ಬಿಡಿ. ಅವರು ಹೆಣ್ಣಿನ ಒಂದೊಂದು ರೋಮಕ್ಕೆ ಒಂದೊಂದು ಕತೆ ಕಟ್ಟಬಲ್ಲರು!
- ಹರಿಹರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.