ಮನೆಮನೆಯಲ್ಲೂ ವಾಸ್ತುತಜ್ಞರು!
ವಾಸ್ತುಶಾಸ್ತ್ರ ಇತ್ತೀಚಿನ ದಿನಮಾನಗಳಲ್ಲಿ ವಾಸ್ತು ಎಂಬುವುದು ತನ್ನದೇ ಆದ ಒಂದು ಸ್ಥಾನಮಾನ ಹೊಂದಿರುವುದು, 21ನೆಯ ಶತಮಾನದಲ್ಲಿ ಬಹಳಷ್ಟು ಚರ್ಚೆಗೆ ಒಳಗಾಗುತ್ತಿರುವುದು ನಿಜ. ಆದಾಗ್ಯೂ ವಾಸ್ತುಶಾಸ್ತ್ರವು ಅತ್ಯಂತ ಪುರಾತನವಾದ ಶಾಸ್ತ್ರ ಎನ್ನುವುದೂ ಅಷ್ಟೇ ನಿಜ. ಆದರೆ ಕೆಲವರು ಇದನ್ನು ತಮ್ಮ ಒಂದು ಉದ್ಯೋಗವನ್ನಾಗಿ ಮಾಡಿಕೊಂಡು ಸುಲಿಗೆಯಲ್ಲಿ ತೊಡಗಿಕೊಂಡಿದ್ದು ಖೇದಕರ. ಮೊದಲಿನ ಕಾಲದಲ್ಲಿ ವಾಸ್ತುವನ್ನು ಆಯ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಇದನ್ನು ಆ ಕಾಲದಲ್ಲಿ ಒಂದು ನಿಯಮದ ಪ್ರಕಾರ ಒಂದು ತೆಂಗಿನಕಾಯಿ ಎಲೆ, ಅಡಿಕೆಯನ್ನು ಪಡೆದು ವಾಸ್ತುವನ್ನು ಹೇಳುವುದು ಪ್ರಚಾರದಲ್ಲಿತ್ತು. ಆದರೆ 21ನೆಯ ಶತಮಾನದಲ್ಲಿ ಇದಕ್ಕೆ ನಾನಾ ಅರ್ಥಗಳನ್ನು ನೀಡಿ ಜನರನ್ನು ವಂಚಿಸುತ್ತ ಜನರನ್ನು ಮರಳು ಮಾಡಿ ಸಿಹಿ ಕನಸುಗಳನ್ನು ತೋರಿಸಿ 'ಜನ ಮರಳೋ ಜಾತ್ರೆ ಮರಳೋ' ಎಂಬುವ ಹಾಗೇ ಕಾಣಿಸಿಯೂ ಕಾಣಿಸದ ಹಾಗೇ ಕಣ್ಣಿನ ಮುಂದೆ ದರೋಡೆ ಮಾಡುವ ವಾಸ್ತು ಪಂಡಿತರು ಮನೆ ಮನೆಯಲ್ಲಿ ಉದ್ಭವಗೊಳ್ಳುತ್ತಿರುವುದು ವಿಷಾದನೀಯ.
= ಶಫೀ ಅಹಮದ್ ಎನ್ ಅಂಕಲಗಿ, ಬೈಲಹೊಂಗಲ
ಜೇಬು ಕತ್ತರಿಸುವ ದಂಧೆ!
ವಾಸ್ತು ಇಂದು ನಮ್ಮ ಜನರಿಗೆ ಯಾವ ಪರಿ ಮೋಸ ಮಾಡುತ್ತಿದೆ ಎಂದರೆ, ಮುಗ್ದ ಜನರನ್ನು ಹೆದರಿಸಿ, ಇಲ್ಲ ಸಲ್ಲದ್ದನ್ನು ಹೇಳಿ ಭಾವನೆಗಳನ್ನು ಕೆರಳಿಸಿ ಜೇಬು ಕತ್ತರಿಸುವ ಕೆಲಸವಾಗಿ ಬೆಳೆದಿದೆ. ಇಂದಿನ ಸಮಾಜಕ್ಕೆ ಬೇಕಾಗಿರುವುದು ಒಳ್ಳೆಯ ತಂತ್ರಜ್ಞಾನದ ಮನೆಗಳೇ ಹೊರತು ವಾಸ್ತು ಅಲ್ಲ. ಅಮೆರಿಕ, ಫ್ರಾನ್ಸ್, ಇಂಗ್ಲೆಂಡಿನಂತಹ ಮುಂದುವರೆದ ದೇಶಗಳಲ್ಲಿ ಎಲ್ಲಿದೆ ವಾಸ್ತು? ಜಪಾನ್ನಂತಹ ದೇಶಗಳಲ್ಲಿ ಇರುವುದು ಕೇವಲ ತಂತ್ರಜ್ಞಾನ ಆಧಾರಿತ ಮನೆಗಳು. ಅವು ಎಷ್ಟು ಶಕ್ತಿಶಾಲಿಯಾಗಿವೆ ಎಂದರೆ ಭೂಕಂಪಕ್ಕೂ ಎದೆಯೊಡ್ಡಿ ನಿಲ್ಲುತ್ತವೆ. ಅವುಗಳಿಗೆ ವಾಸ್ತುವಿನ ಬಳಕೆ ಆಗಿಲ್ಲ. ಯಾವುದೇ ದೇಶಕ್ಕೆ ಕಾಡದ ದೋಷಗಳು ನಮ್ಮ ಭಾರತಕ್ಕೆ ಏಕೆ ಕಾಡುತ್ತವೆ, ಏಕೆಂದರೆ ನಾವು ಇಂದು ವಾಸ್ತುವಿಗೆ ಜೋತು ಬಿದ್ದಿರುವುದರಿಂದಲೇ ಆಗಿದೆ.
= ರಾಜಶೇಖರ ಜೆ., ವನದುರ್ಗಾ
ನಂಬಿಕೆಯೇ ಹೊರತು ಮೌಢ್ಯವಲ್ಲ
ವಾಸ್ತು ಎಂಬುದೊಂದು ನಂಬಿಕೆ. ಮುಕ್ಕೋಟಿ ಹಿಂದೂ ದೇವರುಗಳಲ್ಲಿ ಯಾವ ದೇವರನ್ನೂ ಪ್ರತ್ಯಕ್ಷವಾಗಿ ಯಾರೂ ಕಂಡಿಲ್ಲ. ಅದೊಂದು ದೈವತ್ವದ ನಂಬಿಕೆ. ನಮಗೆ ಬೇಕಿರುವುದೂ ಅಷ್ಟೆ. ನಮ್ಮಲ್ಲಿ ದೃಢ ನಂಬಿಕೆ ಇದ್ದರೆ ಮಾತ್ರ ಒಳ್ಳೆಯ ಆಲೋಚನೆಗಳು ಭಾವನೆಗಳು ಮೂಡಲು ಸಾಧ್ಯ. ಮನುಷ್ಯ ಬದುಕುವುದು ಭಾವನೆಗಳೊಂದಿಗೆ ಹೊರತು ವಾಸ್ತುವಿನೊಂದಿಗಲ್ಲ. ಬದುಕಲು ಬೇಕಿರುವುದು ಮನೆಯೇ ಹೊರತು ವಾಸ್ತುವಲ್ಲ. ಪೂರ್ವಜರಿಂದ ಬಳುವಳಿಯಾಗಿ ಬಂದ ಶಾಸ್ತ್ರ, ಸಂಪ್ರದಾಯಗಳು ವೈಜ್ಞಾನಿಕ ಅಂಶಗಳನ್ನು ಹೊಂದಿವೆಯೇ ಹೊರತು ಮೌಢ್ಯತೆಯನ್ನಲ್ಲ. ಮುಂಜಾನೆ ಏಳುವಾಗ ಬಲಭಾಗಕ್ಕೆ ಏಳಬೇಕೆಂದಿದ್ದಾರೆ. ಕಾರಣ ಎಡಭಾಗದಲ್ಲಿ ಹೃದಯಕ್ಕೆ ತೊಂದರೆಯಾದೀತು ಎಂಬ ಕಾರಣಕ್ಕೆ, ರಾತ್ರಿವೇಳೆ ಹುಣಸೇ ಮುಂತಾದ ಕೆಲ ಮರಗಳೆಡೆ ಹೋಗಬಾರದೆನ್ನುತ್ತಾರೆ. ಕಾರಣ ಅವು ರಾತ್ರಿ ವೇಳೆ ಯಥೇಚ್ಚವಾಗಿ ಇಂಗಾಲದ ಡೈ ಆಕ್ಸೈಡ್ ಬಿಡುವುದರಿಂದ. ಹೀಗೆ ಪ್ರತಿಯೊಂದು ವೈಜ್ಞಾನಿಕ ಕಾರಣಗಳ ಹಿನ್ನೆಲೆಯಲ್ಲಿ ಶಾಸ್ತ್ರಸಂಪ್ರದಾಯಗಳನ್ನು ನಿರೂಪಿಸಿದ್ದಾರೆ. ನಮಗೆ ಅವುಗಳ ಮೇಲೆ ಇರಬೇಕಾದದ್ದು ನಂಬಿಕೆ ಅಷ್ಟೆ, ಮೌಢ್ಯತೆ ಅಲ್ಲ.
= ಅರುಣ್ ಕುಮಾರ್.ಎನ್.ಎಸ್., ನಿಢಘಟ್ಟ
'ಜಗುಲಿ'ಯಲ್ಲಿ ಈ ಸಲದ ವಿಷಯ 'ಸಚಿನ್ ನಿವೃತ್ತಿ'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com