ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಆ್ಯಪ್ ಯೋಗ

ಶಿವಮೊಗ್ಗದ ಮೂವರು ಹುಡುಗರು ಸಿದ್ಧಪಡಿಸಿದ ಆ್ಯಪ್ ವಿಶ್ವಮಾನ್ಯವಾಗುತ್ತಿದೆ. ವಿಂಡೋಸ್-8 ಮೂಲಕ ಕೆಲಸ ನಿರ್ವಹಿಸುವ....

Mainashree
Updated On : 16 Oct 2013, 12:55 pm

ಚೆನ್ನೈನ ಇಬ್ಬರು ಬಾಲಕರು ಆ್ಯಪ್ಸ್ ಕಂಪನಿಯನ್ನೇ ಆರಂಭಿಸಿದ್ದಾರೆ ಎಂಬ ವರದಿಗಳು ಅನೇಕರ ಕಿವಿಗಳನ್ನು ನೆಟ್ಟಗೆ ಮಾಡಿದ್ದುಂಟು. ಇಂಥ ಸಂದರ್ಭದಲ್ಲಿ ಶಿವಮೊಗ್ಗದ ಮೂವರು ಹುಡುಗರು ಸಿದ್ಧಪಡಿಸಿದ ಆ್ಯಪ್ ವಿಶ್ವಮಾನ್ಯವಾಗುತ್ತಿದೆ.
ವಿಂಡೋಸ್-8 ಮೂಲಕ ಕೆಲಸ ನಿರ್ವಹಿಸುವ ಈ ಆ್ಯಪ್ ನಿರ್ಮಿಸಿದವರು ಶಿವಮೊಗ್ಗದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ 7ನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ಎಚ್.ಎಲ್.ದರ್ಶನ್, ಎಂ.ಎಸ್. ಮಹೇಶ್ ಕುಮಾರ್, ಬಿ.ಜಿ. ಮಾಲತೇಶ್.

ಆ್ಯಪ್‌ನಲ್ಲೇನಿದೆ?
ಈ ಹುಡುಗರು ಸಿದ್ಧಪಡಿಸಿರುವ ಆ್ಯಪ್ ಅರ್ಥಾತ್ ಅಪ್ಲಿಕೇಷನ್ ಯೋಗಾಭ್ಯಾಸ ಕುರಿತಾದದ್ದು. ಯೋಗಾಸನ ಹೇಗೆ ಮಾಡಬೇಕು, ಅದರಿಂದ ಏನೆಲ್ಲಾ ಉಪಯೋಗವಿದೆ ಎಂಬುದನ್ನು ಸುಲಭವಾಗಿ ತಿಳಿಸಿಕೊಡುವ ಮಾಧ್ಯಮವಾಗಿ ಈ ಅಪ್ಲಿಕೇಷನ್ ಕೆಲಸ ಮಾಡುತ್ತದೆ. 2013ರ ಏಪ್ರಿಲ್‌ನಲ್ಲಿ ಈ ಆ್ಯಪ್ ಸಿದ್ಧಗೊಳಿಸಲಾಯಿತು. ನಂತರ ಅದನ್ನು ಮೈಕ್ರೋಸಾಫ್ಟ್ ಕಂಪನಿಗೆ ಕಳುಹಿಸಲಾಯಿತು. ಕಂಪನಿ ಕಡೆಯಿಂದ 7 ದಿನಗಳ ಕಾಲ ಆ್ಯಪ್‌ನ್ನು ಪರೀಕ್ಷೆ ನಡೆಸಿ ಅಂತಿಮವಾಗಿ ಗ್ರಾಹಕರಿಗೆ ದೊರೆಯುವಂತೆ ಅವಕಾಶ ಕಲ್ಪಿಸಲಾಯಿತು. ಅಚ್ಚರಿ ಎಂದರೆ ಸೆಪ್ಟೆಂಬರ್ ಮಧ್ಯಭಾಗದೊಳಗೆ ಈ ಹುಡುಗರ ಆ್ಯಪ್ 25 ಸಾವಿರಕ್ಕೂ ಹೆಚ್ಚು ಬಾರಿ ಡೌನ್‌ಲೋಡ್ ಆಗಿತ್ತು. ಇನ್ನೊಂದು ವಿಶೇಷವೆಂದರೆ ಜಪಾನ್ ಮತ್ತು ಚೀನಾದಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಆಗಿದೆ ಎಂದು ಮೈಕ್ರೋಸಾಫ್ಟ್ ಅಧಿಕಾರಿ ಸಂದೀಪ್ ಜೆ. ಆಲೂರ್ ವಿವರಿಸುತ್ತಾರೆ.
ಸದ್ಯ ಇದು ಡೆಸ್ಕ್‌ಟಾಪ್ ಆಧಾರಿತ ಆ್ಯಪ್. ಮೊಬೈಲ್‌ನಲ್ಲಿ ಇದನ್ನು ಬಳಸಲು ಅನುವಾಗುವಂತೆ ಅಭಿವೃದ್ಧಿಪಡಿಸುವ ಆಲೋಚನೆ ಇದೆ. ಆ ಕಾರ್ಯವೂ ನಡೆದರೆ ಮತ್ತಷ್ಟು ಬೇಡಿಕೆ ಬರಬಹುದೆಂದು ಅವರು ಹೇಳುತ್ತಾರೆ.
ಪಿಇಎಸ್ ಕಾಲೇಜು ಆಡಳಿತ ಮಂಡಳಿಯ ಪ್ರಯತ್ನದಿಂದಾಗಿ ಮೈಕ್ರೋಸಾಫ್ಟ್ ಕಂಪನಿ ಕಾಲೇಜಿಗೆ ಬಂತು, ಇದರಿಂದ ನಮಗೂ ಒಂದು ವೇದಿಕೆ ಸಿಕ್ಕಿತು ಎಂದು ಹೇಳುವ ಯೋಗ ಆ್ಯಪ್ ತಯಾರಿಕಾ ತಂಡದ ಸದಸ್ಯ ಮಹೇಶ್ ಕುಮಾರ್, ನಮಗೆ ಮುಂಚೆ ಆ್ಯಪ್ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಮೈಕ್ರೋಸಾಫ್ಟ್ ತಂಡ ನಮಗೆ ಆ್ಯಪ್ ತಯಾರಿಕೆ ಬಗ್ಗೆ ತರಬೇತಿ ಕೊಟ್ಟಿತು. ನಾವು ಯೋಗ ಕುರಿತು ಅಪ್ಲಿಕೇಷನ್ ಸಿದ್ಧಪಡಿಸಿ ಕಳುಹಿಸಿದೆವು. ಅದು ಇಷ್ಟೊಂದು ಯಶಸ್ವಿಯಾಗುತ್ತದೆ ಎಂದೆಣಿಸಿರಲಿಲ್ಲ. ಮತ್ತಷ್ಟು ಆ್ಯಪ್ಸ್ ಮಾಡಲು ನಮಗೆ ಉತ್ತೇಜನ ಸಿಕ್ಕಂತಾಗಿದೆ ಎಂದರು.

ಕೆರಳಿದ ಆಸಕ್ತಿ
ವಿಂಡೋಸ್-8 ಇನ್ನೂ ಅಷ್ಟಾಗಿ ವ್ಯಾಪಕವಾಗಿ ಬಳಕೆಯಾಗುತ್ತಿಲ್ಲ. ಇಂತಹ ಹೊತ್ತಿನಲ್ಲೇ ದೊಡ್ಡ ಮಟ್ಟದಲ್ಲಿ ಶಿವಮೊಗ್ಗದ ಹುಡುಗರು ಮಾಡಿದ ಒಂದು ಸಣ್ಣ ಆ್ಯಪ್‌ಗೆ ವಿಶ್ವದೆಲ್ಲೆಡೆಯಿಂದ ಬೇಡಿಕೆ ಬಂದಿರುವುದು ಮೈಕ್ರೋಸಾಫ್ಟ್ ಕಂಪನಿಯ ಅಧಿಕಾರಿಗಳ ಆಸಕ್ತಿಯನ್ನು ಕೆರಳಿಸಿದೆ. ಈ ಹಿನ್ನೆಲೆಯಲ್ಲಿ ಈ ಹುಡುಗರನ್ನು ಕಂಪನಿ ಗೌರವಿಸಿದೆ. ಜತೆಗೆ ಮೊಬೈಲ್ ಆ್ಯಪ್ಸ್ ಟೆಸ್ಟಿಂಗ್ ಮಾಡುವ ನೋಕಿಯಾ ಲುಮಿಯಾ ಸೆಟ್‌ನ್ನು ಕೂಡ ಈ ತಂಡಕ್ಕೆ ನೀಡಿದೆ.
ಈ ಯೋಗ ಆ್ಯಪ್‌ನಲ್ಲಿ ಫೋಟೋ ಮತ್ತು ಮಾಹಿತಿ ಇದೆ. ಮುಂದೆ ಇದನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಈ ವಿದ್ಯಾರ್ಥಿಗಳು ಹೊಂದಿದ್ದಾರೆ. ಸದ್ಯಕ್ಕೆ ಮೈಕ್ರೋಸಾಫ್ಟ್‌ನವರು ಈ ಆ್ಯಪ್‌ನ್ನು ಗ್ರಾಹಕರು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಮುಂದೆ ಡೌನ್‌ಲೋಡ್‌ಗೆ ದರ ನಿಗದಿ ಮಾಡಿದರೆ, ಶುಲ್ಕದ ಒಂದು ಪಾಲು ವಿದ್ಯಾರ್ಥಿಗಳಿಗೆ ಸಿಗಬಹುದು. ಸದ್ಯ ಈ ವಿದ್ಯಾರ್ಥಿಗಳ ತಂಡ ಜಿಮ್ ಇನ್‌ಸ್ಟ್ರುಮೆಂಟ್ ಕುರಿತು ಆ್ಯಪ್ ಸಿದ್ಧಪಡಿಸಿದೆ. ಜತೆಗೆ ಇಂಟರ್ಯಾಕ್ಷನ್ ಮಾಡುವಂಥ ಆ್ಯಪ್ ಸಿದ್ಧಪಡಿಸುವ ತಯಾರಿಯಲ್ಲಿದ್ದಾರೆ.

- ಶ್ರೀಕಾಂತ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments