ಜಗತ್ಕಾರ್ಯಕ್ಕೆ ಸಾವಿರ ಕೈಗಳು ಒಗ್ಗೂಡಿದವು!
ವಿವೇಕಾನಂದರನ್ನು ಸರ್ವಧರ್ಮ ಸಮ್ಮೇಳನಕ್ಕೆ ಕಳುಹಿಸಲು ಉತ್ಸುಕರಾದ ಶಿಷ್ಯಂದಿರು ಅವರ ಒಪ್ಪಿಗೆ ಪಡೆದು ನಿಧಿ ಸಂಗ್ರಹಣೆ ಕಾರ್ಯದಲ್ಲಿ ಮಗ್ನರಾದರು. ಮದ್ರಾಸಿನ ಶಿಷ್ಯರೆಲ್ಲ ಸೇರಿ ಏಪ್ರಿಲ್ ವೇಳೆಗೆ ಸುಮಾರು ನಾಲ್ಕು ಸಾವಿರ ರು.ಗಳನ್ನು ತಂದು ಸ್ವಾಮೀಜಿಗೆ ಅರ್ಪಿಸಿದರು. ತಮ್ಮ ಕಾರ್ಯದ ಬಗ್ಗೆ ಅರೆ ಮನಸ್ಸು ಹೊಂದಿದ್ದ ಸ್ವಾಮೀಜಿಗೆ ಶಿಷ್ಯರೆಲ್ಲಾ ಉತ್ಸಾಹದಿಂದ ನಿಧಿ ಸಂಗ್ರಹಿಸಿ ತಂದದ್ದನ್ನು ಕಂಡು, 'ಇವರೆಲ್ಲ ಸೇರಿ ಇಷ್ಟೊಂದು ಹುಮ್ಮಸ್ಸಿನಿಂದ ಕಾರ್ಯಮಗ್ನರಾಗಿರುವುದನ್ನು ನೋಡಿದರೆ, ಇದೇ ಭಗವದಿಚ್ಛೆಯ ಮೊದಲ ಸಂಕೇತವಾಗಿರಬಹುದೆ?' ಎನಿಸಿತು. ಆದರೂ ಅತಿ ಉತ್ಸಾಹದಲ್ಲಿ ಎಡವುವಂತಾಗಬಾರದೆಂದು ಆಲೋಚಿಸುತ್ತಿದ್ದರು. ಅಂದು ಕನಸಿನಲ್ಲಿ ಸಮುದ್ರದ ಅಲೆಗಳ ಮೇಲೆ ನಡೆದುಹೋಗುತ್ತ ಶ್ರೀರಾಮಕೃಷ್ಣರು ತಮ್ಮನ್ನು ಕೈಬೀಸಿ ಕರೆದಂತಾಯಿತು. ತಕ್ಷಣ ಎಚ್ಚೆತ್ತ ಸ್ವಾಮೀಜಿಗೆ 'ಇದು ಗುರುವೇಚ್ಛೆಯೇ' ಎಂಬುದು ದೃಢವಾಯಿತು. ಪ್ರಯಾಣಕ್ಕೆ ಶುಭಾಶೀರ್ವಾದ ಪಡೆದುಕೊಳ್ಳುವ ಇಚ್ಛೆಯಿಂದ ಶ್ರೀಮಾತೆ ಶಾರದಾದೇವಿಗೆ ಪತ್ರ ಬರೆದರು, ಅವರಿಂದ ಉತ್ತರವೂ ಬಂತು.
ಶ್ರೀಮಾತೆಯವರ ಪತ್ರವನ್ನು ಓದಿದ ಸ್ವಾಮೀಜಿ ಆನಂದಾತಿಶಯದಿಂದ ಭಾವುಕರಾಗಿ ಅತ್ತುಬಿಟ್ಟರು. 'ಹೌದು! ಇನ್ನೀಗ ಪಶ್ಚಿಮಕ್ಕೆ ಹೊರಡುವುದೇ ಕೆಲಸ. ನಾನೀಗ ಸಿದ್ಧನಾಗಿದ್ದೇನೆ. ನಾವೆಲ್ಲ ತಡಮಾಡದೇ ಕಾರ್ಯಮಗ್ನರಾಗಬೇಕು. ಸ್ವಯಂ ಜಗನ್ಮಾತೆಯೇ ಅನುಮತಿ ನೀಡಿದ್ದಾಳೆ!' ಎಂದು ಶಿಷ್ಯರ ಸಮ್ಮುಖದಲ್ಲಿ ಉದ್ಗರಿಸಿದರು. ಶಿಷ್ಯರು ಸ್ವಾಮೀಜಿಯ ಮುಖದಲ್ಲಿ ದಿವ್ಯ ಜ್ಯೋತಿಯೊಂದು ಬೆಳಗುತ್ತಿರುವುದನ್ನು ಕಂಡು ಉತ್ಸಾಹದಿಂದ ಸಿದ್ಧತಾ ಕಾರ್ಯಕ್ಕೆ ಮುಂದಾದರು.
- ಆನಂದ ಎಸ್.ಎನ್.
anandsn193@gmail.com