ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಹುಚ್ಚುತನದ ಪರಮಾವಧಿ

Mainashree
Updated On : 15 Oct 2013, 5:36 am

'ವಾಸ್ತು' ಎಂಬುದು ಹುಚ್ಚು ಕಲ್ಪನೆ. ಅಂಧಶ್ರದ್ಧೆಯ ಪರಮಾವಧಿ. ನಮ್ಮ ಆಚಾರ, ವಿಚಾರ, ನಡತೆ, ವ್ಯವಹಾರ ಕೇವಲ 'ನಮಗಷ್ಟೇ' ಅನುಕೂಲ ಅಥವಾ ತೃಪ್ತಿ ತರದೆ ನಮ್ಮ ನೆರೆ-ಹೊರೆಯವರಿಗೂ ಆಸು-ಪಾಸಿನವರಿಗೂ ಕಿರಿ-ಕಿರಿ ಅಗದಂತೆ ಇರಬೇಕು. ನಮ್ಮ ಆರೋಗ್ಯದಲ್ಲಿ ಮಾಡುವ ವೃತ್ತಿಯಲ್ಲಿ, ಕೆಲಸ ಕಾರ್ಯಗಳಲ್ಲಿ ಬಾಧೆ ಉಂಟಾಗುತ್ತಿದೆ ಅಂದರೆ ಅದಕ್ಕೆ ವಾಸ್ತು ಕಾರಣವಲ್ಲ. ಬದಲಿಗೆ ನಮ್ಮ ನಡತೆ ಅಥವಾ ವ್ಯವಹಾರ ಸರಿಯಾಗಿ ಇಲ್ಲ ಅಂತಲೇ ಅಂದುಕೊಳ್ಳಬೇಕು. 'ವಾಸ್ತು'ವಿನ ಹೆಸರಿನಲ್ಲಿ ಆಗುತ್ತಿರುವ ಅನಾಹುತಗಳನ್ನು ನೋಡಿದರೆ, ಮನುಷ್ಯ ಇಷ್ಟೊಂದು ಮೂಢನಂಬಿಕೆಯ ತೆಕ್ಕೆಗೆ ನಲುಗಿ ತನ್ನತನವನ್ನು ಕಳೆದುಕೊಳ್ಳುತ್ತಿದ್ದಾನೆ ಎಂದು ಅನ್ನಿಸದೇ ಇರದು. ಈಗ ಈ ಪಿಡುಗು ನಮ್ಮ ರಾಜಕಾರಣಗಳಿಗೂ ಹಬ್ಬಿಕೊಂಡಿದೆ. ಮಂತ್ರಿಯಾದವರು ಯಾವುದೋ ಜ್ಯೋತಿಷಿ ಮಾತು ಕೇಳಿ ಸುಸಜ್ಜಿತವಾಗಿ ನಿರ್ಮಿಸಿದ ವಿಧಾನಸೌಧದಂಥ ಐತಿಹಾಸಿಕ ಕಟ್ಟಡದ ಗೋಡೆಯನ್ನೂ ಕೆಡವಿಸಿದ್ದಾರೆ. ಹಾಗಂತ ವಾಸ್ತುನಿನ ಹಿಂದೆ ಬಿದ್ದ ಅದೆಷ್ಟು ಮಂದಿ ಉದ್ಧಾರವಾಗಿದ್ದಾರೆಂಬುದನ್ನು ತಿಳಿದರೆ ಮರುಕ ಹುಟ್ಟುತ್ತದೆ.
= ಶಂಕರನಾರಾಯಣ ಭಟ್, ಮೂಡಗೇರಿ

ದಗಾಕೋರರಿಂದ ಕಲಿಯಬೇಕಿಲ್ಲ
ನಮ್ಮ ಪೂರ್ವಿಕರು ಹಾಗೂ ಇಂದು ಗ್ರಾಮೀಣ ಪ್ರದೇಶದಲ್ಲಿ ವಾಸ್ತು ಇಲ್ಲದೆ ನೆಮ್ಮದಿಯಿಂದ ಬದುಕಿ ಬಾಳಿರುವ ಹಲವಾರು ನಿದರ್ಶನಗಳಿವೆ. ಪ್ರಕೃತಿದತ್ತವಾದ ಗಾಳಿ, ಬೆಳಕು, ನೀರು ವಿಚಾರದಲ್ಲಿ ಸೂಕ್ಷ್ಮವಾದ ಒಳನೋಟಗಳನ್ನು ಯಾರೋ ವಾಸ್ತು ಹೆಸರಲ್ಲಿ ಹಣ ದೋಚುವ ಮಂದಿ ಕೊಡಬೇಕಾಗಿಲ್ಲ. ದುಡ್ಡು ಮಾಡುವವರು ವಾಸ್ತು ಅನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಜನರಲ್ಲಿ ಭಯ ಹುಟ್ಟಿಸಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವುದು ಎಂಥ ವಿಪರ್ಯಾಸ! ಸುಖ ಸಂಸಾರಕ್ಕೆ ಬೇಕಾಗಿರುವುದು ವಾಸ್ತುವಲ್ಲ, ಮನೆಯ ಶಾಂತಿ. ನೆಮ್ಮದಿಯ ಮೂಲಬಿಂದು ನಮ್ಮ ಹೃದಯದಲ್ಲೇ ಇದೆ. ಅದನ್ನು ಅರಿತು ಬಾಳಿದರೆ ಮನೆ ನಂದನವನವಾಗುತ್ತದೆ. ಭಗವಂತನೊಲಿದರೆ ಕೊರಡು ಕೊನರುವುದಯ್ಯಾ ಎಂಬ ದಿವ್ಯ ವಾಣಿಯನ್ನು ನಂಬಿ ನಾವು ಪ್ರತಿಯೊಂದು ಅವಕಾಶವನ್ನು ಸ್ಪರ್ಶಮಣಿ ಎಂದು ಪರಿಗಣಿಸಿ ದುಡಿಯುವುದಾದರೆ ನಮ್ಮ ಬಾಳು ಬಂಗಾರವಾಗುವುದರಲ್ಲಿ ಅನುಮಾನ ಬೇಡ.
= ಎಸ್. ನಾಗರಾಜ್, ಪಿಳ್ಳೇನಹಳ್ಳಿ

ಸಂಕಟ ನಿವಾರಕ ವಾಸ್ತು
ಇಂದಿನ ಪ್ರಪಂಚದಲ್ಲಿ ವಾಸ್ತುವಿನ ಅಗತ್ಯವಿದೆ. ವಾಸ್ತುವಿನ ಪ್ರಕಾರ ಗೃಹವನ್ನು ನಿರ್ಮಿಸಿದ್ದರೆ ಯಾವುದೇ ತರಹನಾದ ಕಷ್ಟಕಾರ್ಪಣ್ಯಗಳಾಗಲೀ, ಮಾನಸಿಕ, ದೈಹಿಕ, ಶೈಕ್ಷಣಿಕ ಹಣಕಾಸಿನ ತೊಂದರೆಗಳಾಗಲೀ ಉದ್ಭವಿಸುವುದಿಲ್ಲ. ಆದರೆ, ಇತ್ತೀಚಿನ ವಿಜ್ಞಾನದ ಪ್ರಕಾರ ಮನೆಗಳನ್ನು ಮಾಡಿದ್ದಲ್ಲಿ ಹಲವಾರು ವಿಘ್ನಗಳು ಉಂಟಾಗುತ್ತವೆ. ವಾಸ್ತುವಿನ ಅಗತ್ಯತೆ ಎಲ್ಲಾ ತರಹದ ಅಂದರೆ ಮನೆ, ಕಚೇರಿಗಳು, ದೇವಸ್ಥಾನಗಳು ಎಲ್ಲದಕ್ಕೂ ಅಗತ್ಯವಿದೆ. ಯಶಸ್ವೀ ಪುರುಷನಾಗಬೇಕಾದರೂ ವಾಸ್ತುವಿನ ಪ್ರಕಾರವೇ ಜೀವನವನ್ನು ಮಾಡಬೇಕು! ವಾಸ್ತುವಿನ ಪ್ರಕಾರವೇ ಜೀವನವನ್ನು ಮಾಡಿಕೊಂಡು ಹೋದರೆ ಯಾವುದೇ ತರಹವಾದ ಹಣಕಾಸು, ಶೈಕ್ಷಣಿಕ, ಮಾನಸಿಕ, ದೈಹಿಕವಾಗಿ ಬಾಧೆಗಳು ಉದ್ಭವಿಸುವುದಿಲ್ಲ. ಆದುದರಿಂದ ಇತ್ತೀಚಿನ ದಿನಗಳಲ್ಲಿ ವಾಸ್ತುವಿನ ಅಗತ್ಯತೆ ಎಲ್ಲರಿಗೂ ಅವಶ್ಯಕ.
= ಟಿ.ಜೆ. ಮಂಜುನಾಥ, ತಟ್ಟಹಳ್ಳಿ

'ಜಗುಲಿ'ಯಲ್ಲಿ ಈ ಸಲದ ವಿಷಯ 'ಸಚಿನ್ ನಿವೃತ್ತಿ'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement