ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಪುಟ್ಟಗೌರಿ ಪರ್ವ

ಅ.18ರಂದು ಸೀಗೆಹುಣ್ಣಿಮೆ. ಅಂದು ಆಚರಿಸುವ ಸಣ್ಣಗೌರಿ ಹಬ್ಬದ ವಿಶೇಷವೆಂದರೆ ಅದು ಗ್ರಾಮೀಣ ಬಾಲಕಿಯರ ಹಬ್ಬ ಎಂಬುದು....

Lingaraj Badiger
Updated On : 16 Oct 2013, 6:32 am

ಅ.18ರಂದು ಸೀಗೆಹುಣ್ಣಿಮೆ. ಅಂದು ಆಚರಿಸುವ ಸಣ್ಣಗೌರಿ ಹಬ್ಬದ ವಿಶೇಷವೆಂದರೆ ಅದು ಗ್ರಾಮೀಣ ಬಾಲಕಿಯರ ಹಬ್ಬ ಎಂಬುದು.

ಸೀಗೆಹುಣ್ಣಿಮೆ, ಗ್ರಾಮೀಣ ಭಾರತಕ್ಕೆ ಸಂಬಂಧಿಸಿದ ವಿಶಿಷ್ಟ ಹಬ್ಬ. ಪಟ್ಟಣ ಹಾಗೂ ಅರೆಪಟ್ಟಣ ಪ್ರದೇಶಗಳ ಎಲ್ಲರೂ ನವರಾತ್ರಿ ಆಚರಿಸಿ ದಶಮಿಯಂದು ಅದ್ದೂರಿ ಮಾಡಿ ಸುಸ್ತಾದ ಬಳಿಕ ಗ್ರಾಮೀಣರ ಈ ಹಬ್ಬ ಬರುತ್ತದೆ. ದಶಮಿಯ ಐದು ದಿನ ನಂತರ ಬರುವ ಆ ಹಬ್ಬದಲ್ಲಿ ಪುಟ್ಟ ಬಾಲಕಿಯರದೇ ನೇತೃತ್ವ.

ಸಣ್ಣ ಗೌರಿ ಹಬ್ಬದ ಆರಂಭದಿಂದ ಕೊನೆಯವರೆಗೂ ಹಿರಿಯ ಹೆಣ್ಣುಮಕ್ಕಳ ಸಹಕಾರ ಬಾಲಕಿಯರಿಗೆ ಇದ್ದೇ ಇರುತ್ತದೆ. ಗೌರಿ ಹಾಡುಗಳನ್ನು ಬಾಲೆಯರಿಗೆ ಹಾಡಲು ಪ್ರೇರೇಪಿಸುತ್ತಾರೆ. ಸೀಗೆ ಹುಣ್ಣಿಮೆಯ ನಂತರದ ಒಂದೆರಡು ದಿನಗಳಲ್ಲಿ ಬಾಲಕಿಯರು ಗೌರಿಮಕ್ಕಳಾಗಿ ಸೀರೆ ತೊಟ್ಟು ಕೋಲು ಹಾಕುತ್ತಾ ಗೌರಿ ಹಾಡು ಹೇಳುತ್ತ ನೆರೆಹೊರೆಯವರ, ಸಂಬಂಧಿಗಳ, ಪರಿಚಿತರ ಮನಸ್ಸೆಳೆದು ಅವರಿಂದ ಬಿಡಿಗಾಸು ಪಡೆದು ಗೌರಿಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಾರೆ.

ವಿಜಯದಶಮಿಯಂದು ಗೋಧೂಳಿ ಸಮಯದಲ್ಲಿ ಹಿರಿಯರು ಬನ್ನಿ ಪತ್ರಿಯನ್ನು ಪರಸ್ಪರ ಪಡೆದು ಶುಭ ಹಾರೈಸುವಲ್ಲಿ ತಲ್ಲೀನವಾಗಿದ್ದರೆ, ಬಾಲಕಿಯರು ಒಟ್ಟುಗೂಡಿ ಒಂದೊಂದು ಸೇರಿನಂತೆ ಧಾನ್ಯಗಳನ್ನು ತುಂಬಿಕೊಂಡು ಕಿರಾಣಿ ಅಂಗಡಿಯಲ್ಲಿ ಮಾರುತ್ತಾರೆ. ಬಂದ ಹಣದಿಂದ ಪೂಜಾ ಸಾಮಗ್ರಿ ಖರೀದಿಸಿ ಊರ ಹೊರಗಿನ ಗಂಗೆ ಪೂಜೆ ಮಾಡಿ ಹತ್ತಿರದ ಫಲವತ್ತಾದ ಮಣ್ಣನ್ನು ತಲಾ ಒಂದು ಸೇರಿನಂತೆ ಸಂಗ್ರಹಿಸಿಕೊಂಡು ಬಂದು ಹತ್ತಿರದ ದೇವಸ್ಥಾನದ ಆವರಣದಲ್ಲಿ ಸುರಿದು ಸಣ್ಣ ಗೌರಿ ಎಂದು ಪ್ರತಿಷ್ಠಾಪಿಸುತ್ತಾರೆ. ಪ್ರತಿ ದಿನ  ಸಂಜೆ ಬಗೆಬಗೆಯ ಖಾದ್ಯ, ಹೂ, ತರಕಾರಿಗಳ ಪ್ರಣತಿಗಳನ್ನು ತಯಾರಿಸಿ ಗೌರಿ ಹಾಡನ್ನು ಹಾಡುತ್ತಾ ಆರಾಧಿಸುತ್ತಾರೆ. ನಂತರ ಈ ಮಣ್ಣಿನ ಗೌರಿಯನ್ನು ತಮ್ಮ ತಮ್ಮ ಸೇರುಗಳಲ್ಲಿ ತುಂಬಿಕೊಂಡು ಗಂಗೆಯಲ್ಲಿ ವಿಸರ್ಜಿಸುವವರೂ ಈ ಮಕ್ಕಳೇ.

ಗೌರಮ್ಮಳಿಗೆ ಪ್ರಿಯವಾದ ಸಿಹಿ ಖಾದ್ಯ ಸಕ್ಕರೆ ಆರತಿ. ಇದನ್ನು ಸಕ್ಕರೆ, ನಿಂಬೆ ರಸ, ಮಜ್ಜಿಗೆ, ಆಹಾರದ ಬಣ್ಣ ಇತ್ಯಾದಿಗಳ ಮಿಶ್ರಣದಿಂದ ತಯಾರು ಮಾಡುತ್ತಾರೆ. ಮರದ ಅಚ್ಚುಪಡಿಗಳಲ್ಲಿ ಪಾನಕ ಹಾಕಿ ಸಕ್ಕರೆ ಆರತಿ ತಯಾರು ಮಾಡುತ್ತಾರೆ. ವರ್ಷಕ್ಕೊಮ್ಮೆ ಸಿಗುವ ವಿಶೇಷ ಸಿಹಿ ಖಾದ್ಯವಿದು. ಇದೇ ಸಂದರ್ಭ ಹಿರಿಯರ ಪೂಜೆ, ಗೋಪೂಜೆಗಳನ್ನೂ ಮಾಡುತ್ತಾರೆ. ನಿಶ್ಚಿತವಾಗಿರುವ ವಧುವಿನ ಮನೆಗೆ ವರನ ಕಡೆಯವರು ಸಕ್ಕರೆ ಆರತಿ ಉಡುಗೊರೆ ಕೊಡುವ ಸಂಪ್ರದಾಯವೂ ಇದೆ. ಇದನ್ನು ದಂಡೆ ನೀಡುವುದು ಎನ್ನುತ್ತಾರೆ.

- ವಿ.ಜಿ. ವೃಷಭೇಂದ್ರ ಕೂಡ್ಲಿಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement