ತಿರುಗಿ ಬಂದ ಟ್ರಂಕು!
ಯಾರೋ ಬಸ್ಸಿನ ಮೇಲೆ ಹಾಕಿದ ಟ್ರಂಕ್ ಬಿಚ್ಚಿ ನೋಡಿದ ಡ್ರೈವರ್, ಕಂಡಕ್ಟರ್ ದಂಗಾದರು. ಅದರಲ್ಲಿತ್ತು ಮಹಿಳೆಯೊಬ್ಬಳ ಹೆಣ!
ಅದು ಶಿರಾ ಪೊಲೀಸ್ ಠಾಣೆ. ಮಧ್ಯಾಹ್ನದ ವೇಳೆ ಯಾವುದೋ ಫೈಲುಗಳಲ್ಲಿ ಮುಳುಗಿದ್ದಾರೆ ಇನ್ಸ್‌ಪೆಕ್ಟರ್ ಫಾಲಾಕ್ಷಯ್ಯ. ಠಾಣೆ ಎದುರಿಗೆ ಏನೋ ಗಲಾಟೆ ಕೇಳಿ ತಲೆ ಎತ್ತಿ ನೋಡಿದಾಗ ಕೆಎಸ್‌ಆರ್‌ಟಿಸಿ ಬಸ್ಸಿನ ಕಂಡಕ್ಟರ್ ಮತ್ತು ಡ್ರೈವರ್ ಜೋರಾಗಿ ಮಾತನಾಡಿಕೊಂಡು ಬರುತ್ತಿದ್ದರು. ಬಂದ ಅವರು ಇನ್ಸ್‌ಪೆಕ್ಟರ್ ಎದುರಿಗೆ ಕುಳಿತು 'ಸಾರ್ ಬಸ್ಸಿನಲ್ಲಿ ಹೆಣ' ಎಂದು ಬಡಬಡಿಸಿದರು. ಸುಧಾರಿಸಿಕೊಂಡ ನಂತರ ನಡೆದ ಕತೆ ಹೇಳಿದರು.
'ಸಾರ್ ನಮ್ಮ ಬಸ್ಸು ಬೆಂಗಳೂರಿನಿಂದ ರಾಯದುರ್ಗಕ್ಕೆ ಹೋಗುತ್ತದೆ. ನೆನ್ನೆ ಬೆಳಗ್ಗೆ ಶಿರಾಗೆ ಬಂದಾಗ ಯಾರೋ ಇಬ್ಬರು ಒಂದು ದೊಡ್ಡ ಟ್ರಂಕ್ ತಂದು ಬಸ್ಸಿನ ಮೇಲೆ ಹಾಕಿದರು. ಶಿರಾದಿಂದ ಸ್ವಲ್ಪ ದೂರ ಹೋದ ಮೇಲೆ ಟಾಪ್ ಮೇಲಿದ್ದ ಪೆಟ್ಟಿಗೆಗೆ ಲಗ್ಗೇಜ್ ಕೇಳಿದೆ. ಯಾರೂ ಚಕಾರ ಎತ್ತಲಿಲ್ಲ. ಇಳಿಯುವಾಗ ಕೊಡಬಹುದು ಎಂದು ಸುಮ್ಮನಿದ್ದೆ. ಹಿರಿಯೂರು, ಚಿತ್ರದುರ್ಗ, ಮೊಳಕಾಲ್ಮುರು ಬಿಟ್ಟು ರಾಯದುರ್ಗ ಬಂದರೂ ಪೆಟ್ಟಿಗೆ ಮಾಲೀಕರು ಅದನ್ನು ಇಳಿಸಲಿಲ್ಲ. ಯಾರೋ ಬಸ್ಸಿನ ಮೇಲೆ ಹಾಕಿ ಬಸ್ಸು ಮಿಸ್ಸಾಗಿರಬಹುದು ನಾಳೆ ಶಿರಾದಲ್ಲಿ ಇಳಿಸಿ ಕಂಟ್ರೋಲರ್‌ಗೆ ಹೇಳಿದರೆ ಬಂದು ತೆಗೆದುಕೊಂಡು ಹೋಗುತ್ತಾರೆ ಎಂದು ಸುಮ್ಮನಾದೆ. ಇಂದು ಶಿರಾ ಬಸ್ಸು ನಿಲ್ದಾಣಕ್ಕೆ ಬಂದು ಕಂಟ್ರೋಲರ್‌ಗೆ ಹೇಳಿದಾಗ ಅದು ಇಲ್ಲೇ ಲೋಡ್ ಆಗಿದೆ ಎಂದು ಹೇಗೆ ಹೇಳ್ತೀರಾ ಎಂದು ಕೇಳಿದರು. ಅದಕ್ಕೆ ನನಗೆ ಚೆನ್ನಾಗಿ ನೆನಪಿದೆ ಪೆಟ್ಟಿಗೆ ತಂದವರು ಒಬ್ಬರು ತಲೆ ಮೇಲೆ ಎತ್ತಿಕೊಂಡಿದ್ದರೆ ಮತ್ತೊಬ್ಬರು ಬಸ್ಸಿನ ಮೇಲೆ ಹತ್ತಿ ಅದನ್ನು ಮೇಲೆ ಎಳೆದುಕೊಂಡರು ಎಂದು ಹೇಳಿದೆ. ಅದಕ್ಕೆ ಅವರು ಪೆಟ್ಟಿಗೆ ಬೀಗ ಒಡೆದು ನೋಡಿ ಅದರಲ್ಲಿ ವಿಳಾಸ ಇರಬಹುದು ಎಂದರು. ಒಡೆದು ನೋಡಿದಾಗ ಒಳಗೆ ಹುಡುಗಿಯ ಶವ ಇದೆ ಸಾರ್' ಎಂದು ಒಂದೇ ಉಸುರಿಗೆ ಹೇಳಿ ಮುಗಿಸಿದ ಕಂಡಕ್ಟರ್ ಭೀಮಣ್ಣ.
=
ಇನ್ಸ್‌ಪೆಕ್ಟರ್ ಬಸ್ಸು ನಿಲ್ದಾಣಕ್ಕೆ ಬಂದರು. ಅದೊಂದು ಕಪ್ಪು ಬಣ್ಣದ ಪೆಟ್ಟಿಗೆಯಾಗಿತ್ತು. ಕತ್ತು ಕೈಕಾಲು ಮುದುರಿ ಮೃತ ದೇಹವನ್ನು ಅದಕ್ಕೆ ತುರುಕಲಾಗಿತ್ತು. ಸುಮಾರು 25 ವರ್ಷದ ವಿವಾಹಿತ ಮಹಿಳೆಯಂತೆ ಕಾಣುತ್ತಿದ್ದ ಹೆಣದ ಒಂದು ಕಾಲಿನಲ್ಲಿ ಮಾತ್ರ ಕಾಲುಂಗುರ ಇತ್ತು. ಶವ ಇನ್ನೂ ಕೊಳೆತಿರಲಿಲ್ಲ. ಹಾಗಾಗಿ ಹಿಂದಿನ ದಿನವೇ ಕೊಲೆ ನಡೆದಿರಬಹುದು ಎಂಬ ತೀರ್ಮಾನಕ್ಕೆ ಇನ್ಸ್‌ಪೆಕ್ಟರ್ ಬಂದರು. ಪಂಚನಾಮೆ ಮುಗಿಸಿ ಯಾರಾದರೂ ಹೆಣವನ್ನು ಗುರ್ತು ಹಿಡಿವರೇ ಎಂಬ ಉದ್ದೇಶದಿಂದ ನಿಲ್ದಾಣದಲ್ಲಿಯೇ ಹೆಣವನ್ನು ಇಡಲಾಯಿತು. ಸಂಜೆವರೆಗೂ ಇದ್ದರೂ ಯಾರೂ ಗುರುತು ಹಿಡಿಯಲಿಲ್ಲ. ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಯಿತು.
ಹೆಣದ ಫೋಟೋ ತೆಗೆಸಿ ಎಲ್ಲ ಠಾಣೆಗಳಿಗೆ ಸುದ್ದಿ ಮುಟ್ಟಿಸಲಾಯಿತು. ಕರಪತ್ರಗಳನ್ನು ಮುದ್ರಿಸಿ ಯಾರಾದರೂ ಕಾಣೆಯಾಗಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಯಿತು. ಆದರೆ ಇವು ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಕೊನೆಗೆ ಆಂಧ್ರದಿಂದ ಹೆಣ ತಂದು ಇಲ್ಲಿ ಹಾಕಿರಬಹುದೇ ಎಂಬ ಅನುಮಾನ ಕಾಡಿತು. ಆದರೆ ಬಸ್ಸು ಆಂಧ್ರಕ್ಕೆ ಹೋಗುತ್ತಿದೆ ಎಂದು ತಿಳಿದೂ ಆಂಧ್ರದವರು ಆ ಬಸ್ಸಿಗೆ ಹಾಕಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದು ಕರ್ನಾಟಕದಲ್ಲಿಯೇ ಹುಡುಕಾಟ ಮುಂದುವರೆಸಿದರು.
=
ಅದೊಂದು ದಿನ ಪೇದೆಯೊಬ್ಬ ಬಂದು 'ಸಾರ್ ಬುಕ್ಕಾಪಟ್ನದಲ್ಲಿ ಒಬ್ಬ ಮಹಿಳೆ ಕಾಣೆಯಾಗಿದ್ದಾರಂತೆ. ಒಂದು ವರ್ಷದ ಮಗುವನ್ನು ಬಿಟ್ಟು ಎರಡು ವಾರದ ಹಿಂದೆ ತಾಯಿ ತವರಿಗೆ ಹೋಗಿದ್ದಾಳೆ ಎಂದು ಹೇಳುತ್ತಿದ್ದಾರೆ' ಎಂದು ಹೇಳಿದ. ಮಾರನೇ ದಿನ ಫೋಟೋ ಸಮೇತ ಹೋಗಿ ವಿಚಾರಿಸಿದಾಗ ಕಾಣೆಯಾಗಿರುವ ಮಹಿಳೆ ಆಕೆಯೇ ಎಂಬುದು ಖಚಿತವಾಯಿತು. ಮನೆಯಲ್ಲಿ ಮೃತಳ ಗಂಡ, ಅತ್ತೆ, ಮಾವ, ಗಂಡನ ತಮ್ಮ ವಾಸವಿರುವುದು ಗೊತ್ತಾಯಿತು.
ಕೂಡಲೇ ಮೃತಳ ಗಂಡನನ್ನು ಠಾಣೆಗೆ ಕರೆತರಲಾಯಿತು. ಆತನ ವಿಚಾರಣೆಯನ್ನು ಇನ್ಸ್‌ಪೆಕ್ಟರ್ ಆರಂಭಿಸಿದರು. ಆತನ ಹೆಸರು ವೆಂಕಟಸ್ವಾಮಿ. ಮದುವೆಯಾಗಿ ಐದು ವರ್ಷಗಳಾಗಿದೆ. ಅರಸೀಕೆರೆಯ ಸಮೀಪದ ಒಂದು ಹಳ್ಳಿಯಿಂದ ಪ್ರಮೀಳಾ ಎಂಬ ಹುಡುಗಿಯನ್ನು ಮದುವೆ ಆಗಿದ್ದ. ಆಕೆ ಜಗಳ ಮಾಡಿಕೊಂಡು ಒಂದು ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದಾಳೆ. ಕರೆ ತರಲು ಅಥವಾ ವಿಚಾರಿಸಲು ಹೋಗದಿರಲು ಕಾರಣ ಮಾವನಿಗೆ ಮತ್ತು ತನಗೆ ಆಗುವುದಿಲ್ಲ. ಹಾಗಾಗಿ ತಾನು ಅವಳನ್ನು ಕರೆ ತರಲಿಲ್ಲ ಎಂದು ಹೇಳಿದ.
ಠಾಣೆಯಲ್ಲಿದ್ದ ಫೋಟೋ ತೆಗೆದು ತೋರಿಸಿದಾಗ ಇದು ಅವಳೇ ಇದ್ದ ಹಾಗೆ ಇದೆ ಸಾರ್ ಎಂದು ಅನುಮಾನದಿಂದ ಹೇಳಿದ. ಸರಿಯಾಗಿ ನೋಡಿ ಹೇಳೋ ಎಂದು ಗದರಿದಾಗ ಹೌದು ಅವಳು ತನ್ನ ಹೆಂಡತಿ ಪ್ರಮೀಳ ಎಂದು ಒಪ್ಪಿಕೊಂಡ. ಇನ್ಸ್‌ಪೆಕ್ಟರ್ ಆತನ ತಮ್ಮ ರಾಮಸ್ವಾಮಿಯನ್ನು ಕರೆ ತಂದು ವಿಚಾರಿಸಿದರು. ಆತನೂ ಕೂಡಾ ಆರಂಭದಲ್ಲಿ ವೆಂಕಟಸ್ವಾಮಿ ಹೇಳಿದ ಕತೆಯನ್ನೇ ಚಾಚೂ ತಪ್ಪದೇ ಹೇಳಿದ. ಆದರೆ ಹೆಣ ಇಟ್ಟಿದ್ದ ಪೆಟ್ಟಿಗೆ ತೋರಿಸಿದ ಕೂಡಲೇ ರಾಮಸ್ವಾಮಿ ಮುಖದಲ್ಲಿ ಕೆಲವು ಬದಲಾವಣೆಗಳು ಕಂಡವು. ಅದೇ ಬದಲಾವಣೆಗಾಗಿ ಕಾದಿದ್ದ ಪೊಲೀಸರು ಇಬ್ಬರನ್ನೂ ಒಳಗೆ ತಳ್ಳಿ ರುಬ್ಬಿದರು. ಆಗ ಹೊರಗೆ ಬಂತು ಸತ್ಯ.
=
ವೆಂಕಟಸ್ವಾಮಿ ಟೈಲರ್ ಕೆಲಸ ಮಾಡುತ್ತಿದ್ದ. ತನ್ನ ಸಂಪಾದನೆ ಸಂಸಾರ ನಿರ್ವಹಣೆಗೆ ಸಾಲುವುದಿಲ್ಲ ಯಾವುದಾದರೂ ವ್ಯಾಪಾರ ಮಾಡಬೇಕು, ತವರಿನಿಂದ ಹಣ ತಾ ಎಂದು ಹೆಂಡತಿಯನ್ನು ಪೀಡಿಸುತ್ತಿದ್ದ. ಪದೇ ಪದೆ ಹಣ ತಂದುಕೊಟ್ಟು ಸಾಕಾಗಿದ್ದ ಕಾರಣ ಮತ್ತೆ ಹಣ ಕೇಳಲು ತವರಿಗೆ ಹೋಗುವುದಿಲ್ಲ ಎಂದು ಪ್ರಮೀಳ ಹಠ ಹಿಡಿದಳು. ಇದರಿಂದ ಕುಪಿತಗೊಂಡ ವೆಂಕಟಸ್ವಾಮಿ ಹೆಂಡತಿಯನ್ನು ಕೆಟ್ಟ ಮಾತುಗಳಿಂದ ನಿಂದಿಸತೊಡಗಿದ. ಇದರಿಂದ ಬೇಸರಗೊಂಡ ಆಕೆ ಗಂಡನ ಕೊರಳಪಟ್ಟಿ ಹಿಡಿದು ಎಷ್ಟು ಬಾರಿ ಹಣ ತಂದುಕೊಟ್ಟರೂ ನಿಯತ್ತಿಲ್ಲ ನಿನಗೆ ಎಂದು ಪ್ರಶ್ನಿಸಿದಳು.
ಆಗ ಮಧ್ಯಾಹ್ನ. ಊಟ ಮಾಡಲು ವೆಂಕಟಸ್ವಾಮಿ ತಮ್ಮ ರಾಮಸ್ವಾಮಿ ಮನೆಗೆ ಬಂದಿದ್ದ. ಕೊರಳಪಟ್ಟಿ ಹಿಡಿದ ಕೂಡಲೇ ವೆಂಕಟಸ್ವಾಮಿ ಜೋರಾಗಿ ಕಿರುಚಿದ. ಓಡಿಬಂದ ರಾಮಸ್ವಾಮಿ ಅತ್ತಿಗೆಯನ್ನು ಹಿಡಿದುಕೊಂಡು ಬಿಡಿಸುವ ಪ್ರಯತ್ನ ಮಾಡಿದ. ಸ್ವಲ್ಪ ಬಿಡುವು ಸಿಕ್ಕಿದ ಕೂಡಲೇ ವೆಂಕಟಸ್ವಾಮಿ ಹೆಂಡತಿಯ ಕುತ್ತಿಗೆಯನ್ನು ಬಿಗಿ ಹಿಡಿದ. ಸ್ವಲ್ಪ ಸಮಯ ಕೊಸರಾಡಿದ ಆಕೆ ನೆಲಕ್ಕೆ ಕುಸಿದು ಬಿದ್ದಳು. ಕೋಪದಲ್ಲಿ ಮಾಡಿದ ಕೆಲಸ ಸ್ವಲ್ಪ ಸಮಯದಲ್ಲಿಯೇ ಒಂದು ಜೀವ ತೆಗೆದಿತ್ತು.
ಜೀವ ಇದೆಯೇನೋ ಎಂಬ ಅನುಮಾನದಿಂದ ಓಡಿಹೋಗಿ ನೀರು ತಂದು ಮುಖಕ್ಕೆ ಎರಚಿದರು. ಆದರೆ ಆಕೆ ಸಾವನ್ನಪ್ಪಿರುವುದು ಖಚಿತವಾಯಿತು. ಕತ್ತಿನಲ್ಲಿದ್ದ ತಾಳಿ, ಸರ, ಕಿವಿಯ ಓಲೆ ಮತ್ತು ಕಾಲಿನಲ್ಲಿದ್ದ ಕಾಲುಂಗುರ ತೆಗೆದರು. ಒಂದು ಕಾಲುಂಗುರ ಬರಲಿಲ್ಲ. ಉಳಿದ ಎಲ್ಲ ಒಡವೆಗಳನ್ನು ತಲೆದಿಂಬಿನಲ್ಲಿ ಬಚ್ಚಿಡಲಾಯಿತು. ಮನೆಯಲ್ಲಿ ಬಟ್ಟೆಗಳನ್ನು ತುಂಬಿದ್ದ ಪೆಟ್ಟಿಗೆ ತಂದು ಅದರಲ್ಲಿ ಆಕೆಯ ಹೆಣ ತುಂಬಲು ಯತ್ನಿಸಿದರು. ಆದರೆ ಅದು ಹಿಡಿಯಲಿಲ್ಲ. ಕೊನೆಗೆ ವೆಂಕಟಸ್ವಾಮಿ ಕಾಲಿನಿಂದ ತುಳಿದು ಹೆಣವನ್ನು ಒಳಗೆ ತುರುಕಿದ.
ಪೆಟ್ಟಿಗೆಗೆ ಬೀಗ ಹಾಕಿ ತಲೆ ಮೇಲೆ ಹೊತ್ತುಕೊಂಡು ಬುಕ್ಕಾಪಟ್ನದ ಕ್ರಾಸ್‌ಗೆ ಬಂದೆವು. ಅಲ್ಲಿಗೆ ಬಂದ ಪ್ರಕಾಶ್ ಬಸ್ಸಿನ ಒಳಗೆ ಪೆಟ್ಟಿಗೆ ಇಟ್ಟುಕೊಂಡು ಶಿರಾಗೆ ಬಂದೆವು. ಬಸ್ಸು ನಿಲ್ದಾಣದಲ್ಲಿ ಹೆಚ್ಚಿನ ಜನಸಂದಣಿ ಇತ್ತು. ಅಂತಾರಾಜ್ಯ ಬಸ್ಸಿನ ಮೇಲೆ ಪೆಟ್ಟಿಗೆ ಹಾಕಿ ಮನೆಗೆ ವಾಪಸ್ ಹೋದೆವು ಎಂದು ವಿವರವಾಗಿ ಹೇಳಿದ.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಮೃತಳ ಮೈಮೇಲಿದ್ದ ಒಡವೆಗಳನ್ನು ಅಮಾನತು ಪಡಿಸಿಕೊಂಡರು. ಮೃತಪಟ್ಟ ಮಹಿಳೆಯ ಪತ್ತೆ, ಕೊಲೆಗಡುಕರ ಪತ್ತೆ, ಸಾಕ್ಷ್ಯಾಧಾರಗಳ ಪತ್ತೆ- ಈ ಮೂರೂ ಅಂಶಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಜೊತೆಗೆ ಪೆಟ್ಟಿಗೆಯನ್ನು ಬಸ್ಸಿನ ಮೇಲೆ ಹಾಕಿದವರು ಇವರೇ ಎಂಬುದನ್ನು ಬಸ್ಸಿನ ಕಂಡಕ್ಟರ್ ಗುರ್ತಿಸಿದ. ಇದನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು. ಆದರೆ ಸಾಕ್ಷಿಗಳು ನ್ಯಾಯಾಲಯದಲ್ಲಿ ಸರಿಯಾಗಿ ಹೇಳದ ಕಾರಣ ಆರೋಪಿಗಳು ಖುಲಾಸೆಯಾದರು. ತನಿಖೆ ಸರಿಯಾಗಿ ನಡೆದರೂ ಶಿಕ್ಷೆಯಾಗಲಿಲ್ಲ ಎಂಬ ಕೊರಗು ಇನ್ಸ್‌ಪೆಕ್ಟರ್‌ಗೆ ಉಳಿಯಿತು.
- ಅಶ್ವತ್ಥನಾರಾಯಣ್ ಎಲ್.
sathyajns@gmail.com