ಅನಸ್ತೇಶಿಯಾ ಕಿರಿಕಿರಿಗೆ ಸುಲಭ ಪರಿಹಾರ!
ಶಸ್ತ್ರಚಿಕಿತ್ಸೆಗಳನ್ನು ಮಾಡುವಾಗ ರೋಗಿಗೆ ಅರಿವಳಿಕೆ (ಅನಸ್ತೇಶಿಯಾ) ಕೊಡುತ್ತಾರೆ. ಹಲ್ಲುಗಳನ್ನು ಕೀಳುವಾಗ ಸಹ ಆ ಭಾಗಕ್ಕೆ ಅನಸ್ತೇಶಿಯಾ ಕೊಟ್ಟಿರುತ್ತಾರೆ. ಬಹಳಷ್ಟು ಮಂದಿಗೆ ಅನಸ್ತೇಶಿಯಾ ಅಲರ್ಜಿ ಇರುತ್ತದೆ. ಸರ್ಜರಿ ಮುಗಿದು ಪ್ರಜ್ಞೆ ಬಂದ ಬಹಳ ಹೊತ್ತಿನ ತನಕವೂ ಒಂದು ರೀತಿಯ ಹ್ಯಾಂಗ್‌ಓವರ್ ಕಾಡುತ್ತಿರುತ್ತದೆ. ಹೊಟ್ಟೆಯಲ್ಲಿ ವಿಚಿತ್ರ ಸಂಕಟ. ಹೊಟ್ಟೆ ಕಲಕಿದಂತೆ ಆಗುವುದು, ವಾಂತಿ ಬಂದಂತೆ ಆಗುವುದು ಮೊದಲಾದ ಅನುಭವಗಳು ಆಗುತ್ತವೆ. ಈ ರೀತಿಯ ತೊಂದರೆಗಳಿಗೆ ಶುಂಠಿಯೇ ಮದ್ದು! ಸರ್ಜರಿ ನಂತರದ ಅನಸ್ತೇಶಿಯಾ ಅಲರ್ಜಿ ಹೋಗಲಾಡಿಸುವ ಪರಿಣಾಮಕಾರಿ ಔಷಧಕ್ಕಾಗಿ ಹೆಚ್ಚೂಕಡಿಮೆ ಐದು ದಶಕಗಳಿಂದಲೂ ಸಂಶೋಧನೆಗಳು ನಡೆಯುತ್ತಲೇ ಇದ್ದವು. ಸೋಜಿಗ ಎಂದರೆ ಕೊನೆಗೆ ಪರಿಹಾರ ಸಿಕ್ಕಿದ್ದು ಶುಂಠಿಯಲ್ಲಿ!! ಯಾವುದನ್ನೂ ಸುಲಭಕ್ಕೆ ಪಾಶ್ಚಾತ್ಯರು ಹಲವು ಪ್ರಯೋಗಗಳ ಮೂಲಕ ಇದು ಎಷ್ಟು ಪರಿಣಾಮಕಾರಿ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ ಮತ್ತು ಅಳವಡಿಸಿಕೊಂಡಿದ್ದಾರೆ.
ಸ್ತ್ರೀರೋಗಕ್ಕೆ ಸಂಬಂಧಿಸಿದ ಸರ್ಜರಿಗೆ ಒಳಗಾದ 60 ಮಹಿಳೆಯರ ಮೇಲೆ ಲಂಡನ್‌ನ ಬಾರ್ತೊಲೊಮೆವ್ ಆಸ್ಪತ್ರೆಯ ತಜ್ಞ ಡಾ.ಎಂ.ಇ. ಬೋನ್ ಮತ್ತು ಅವರ ಸಹೋದ್ಯೋಗಿಗಳು ಶುಂಠಿ ಪ್ರಯೋಗ ಕೈಗೊಂಡರು. ಸರ್ಜರಿಗೆ ಮುನ್ನ ಅವರಿಗೆ ಒಂದೂವರೆ ಗ್ರಾಂನಷ್ಟು (ಸುಮಾರು ಮುಕ್ಕಾಲು ಚಮಚ) ಶುಂಠಿ ತಿನ್ನಿಸಿದರು. ಶಸ್ತ್ರಚಿಕಿತ್ಸೆ ನಂತರ ಅವರಲ್ಲಿ ಅನಸ್ತೇಶಿಯಾ ಕಿರಿಕಿರಿ ಕಾಣಿಸಿಕೊಳ್ಳಲಿಲ್ಲ. ಅನಸ್ತೇಶಿಯಾ ಕೊಡುವಾಗ ಮುನ್ನೆಚ್ಚರಿಕೆಯಾಗಿ ಮೆಟೊಕ್ಲೊಪ್ರಮೈಡ್ ಅಥವಾ ಪ್ಲಾಸೆಬೊ ಔಷಧಗಳನ್ನು ನೀಡುವುದು ವಾಡಿಕೆ. ಇಂಥ ಔಷಧ ಸೇವಿಸಿದವರಲ್ಲಿ ಅನಸ್ತೇಶಿಯಾ ಕಿರಿಕಿರಿ ಇದ್ದೇ ಇತ್ತು. ಇದರಿಂದ ಸರ್ಜರಿ ನಂತರ ಅನಸ್ತೇಶಿಯಾದಿಂದ ಉಂಟಾಗುವ ಉದರ ತೊಂದರೆಗಳಿಗೆ ಶುಂಠಿ ಒಳ್ಳೆಯ ಔಷಧ ಎನ್ನುವ ತೀರ್ಮಾನಕ್ಕೆ ಡಾ.ಬೋನ್ ಮತ್ತು ಅವರ ತಂಡ ಬಂದಿತು. ಬೇರೆ ಮಾತ್ರೆ ಅಥವಾ ಇಂಜೆಕ್ಷನ್‌ಗಳಿಂದ ಅಡ್ಡಪರಿಣಾಮಗಳಾಗುವ ಸಾಧ್ಯತೆ ಹೆಚ್ಚು. ಶುಂಠಿಯಲ್ಲಿ ಇಂಥ ಯಾವುದೇ ಸಮಸ್ಯೆಗಳಿಲ್ಲ. ಆದ್ದರಿಂದ ಸರ್ಜನ್‌ಗಳು ಈಗೀಗ ಆಧುನಿಕ ಔಷಧಗಳಿಗಿಂತ ಶುಂಠಿ ಬಳಕೆಯನ್ನು ಉತ್ತೇಜಿಸುತ್ತಿದ್ದಾರಂತೆ.
ಪ್ರಯಾಣ ಕಾಲದ ವಾಂತಿ ತಡೆಯಲೂ ಶುಂಠಿ ಸಹಕಾರಿ. ಹೊಟ್ಟೆ ತೊಳೆಸಿದಂತಾಗುವುದು ಮತ್ತಿತರ ತೊಂದರೆಗಳಿಗೂ ಇದನ್ನು ಬಳಸಬಹುದು. ಕೆಲವರಿಗೆ ಜಲವಿಹಾರ, ಸಮುದ್ರ ಪ್ರಯಾಣ ಆಗಿಬರುವುದಿಲ್ಲ. ಅಂಥವರು ಕೂಡ ಶುಂಠಿ ಮೂಲಕ ತಮ್ಮ ತೊಂದರೆಯನ್ನು ಪರಿಹರಿಸಿಕೊಳ್ಳಬಹುದು. ಪ್ರಯಾಣ ಆರಂಭಕ್ಕೆ ಅರ್ಧ ಗಂಟೆ ಮೊದಲು ಯಾವುದೇ ರೂಪದಲ್ಲಿ ಶುಂಠಿ ಸೇವಿಸುವುದು ಒಳ್ಳೆಯದು. ಅದರ ಪರಿಣಾಮ ನಾಲ್ಕು ತಾಸುಗಳವರೆಗೂ ಇರುತ್ತದೆ!
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com