ಗೊಂಬೆ ನಾಟಕದೊಂದಿಗೆ ಹಬ್ಬದ ಸಂಭ್ರಮ
ದೇಶದ ಅತಿ ದೊಡ್ಡ ಖಾಸಗಿ ರೇಡಿಯೊ, ನಂಬರ್ ಒನ್ ರೇಡಿಯೊ ನೆಟ್ವರ್ಕ್ 92.7 ಬಿಗ್ ಎಫ್ಎಂ ಬೆಂಗಳೂರು, ಈ ಸಲದ ಹಬ್ಬವನ್ನು ಗೊಂಬೆ ನಾಟಕದೊಂದಿಗೆ ಸಂಭ್ರಮಿಸಿತು. ಮಲ್ಲೇಶ್ವರಂನ ಬ್ರಿಗೇಡ್ ಗೇಟ್ವೇನಲ್ಲಿ ಅಪ್ಪಾಜಿ ಮತ್ತು ತಂಡ ಗೊಂಬೆಯಾಟವನ್ನು ಪ್ರದರ್ಶಿಸಿತು.
ರಾಮಾಯಣ ಮತ್ತು ಮಹಾಭಾರತವನ್ನು ಹಿನ್ನೆಲೆಗಾಯನದೊಂದಿಗೆ ಬೊಂಬೆ ಮೂಲಕ ಪ್ರದರ್ಶಿಸಲಾಯಿತು. ಹಬ್ಬದ ಋತುವನ್ನು ದಸರಾದೊಂದಿಗೆ ಆರಂಭಿಸಿ ಬೊಂಬೆ ನಾಟಕದೊಂದಿಗೆ ದೀಪಾವಳಿವರೆಗೆ ಸಂಭ್ರಮಿಸಲು ನಿರ್ಧರಿಸಿರುವ ಏಕೈಕ ರೇಡಿಯೊ ಕೇಂದ್ರ 92.7 ಬಿಗ್ ಎಫ್ಎಂ. ಅಪ್ಪಾಜಿ ಮತ್ತು ತಂಡ ಮಹಾಭಾರತದ ಭೀಷ್ಮನ ಪ್ರತಿಜ್ಞೆ ಪ್ರಸಂಗವನ್ನು ಆಡಿ ತೋರಿಸಿತು. ಹಿನ್ನೆಲೆ ಧ್ವನಿ ಜನಪ್ರಿಯ ಆರ್ಜೆಗಳದ್ದು.
ಅಪ್ಪಾಜಿ ಅವರ ತಾತ ಹೊಂಬಯ್ಯ 80 ವರ್ಷಗಳ ಹಿಂದೆ ಗೊಂಬೆ ನಾಟಕದ ಕಂಪನಿ ಆರಂಭಿಸಿದ್ದರು. ಮಂಡ್ಯ ಜಿಲ್ಲೆಯ ಇವರು ದೇಶದಾದ್ಯಂತ ಪ್ರದರ್ಶನ ನೀಡಿದ್ದಾರೆ. ಅಷ್ಟೇ ಅಲ್ಲ ಬೇರೆ ರಾಷ್ಟ್ರಗಳಲ್ಲೂ 18 ಪ್ರದರ್ಶನ ನೀಡಿದ್ದಾರೆ, ಅನೇಕ ರಾಷ್ಟ್ರೀಯ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.