ಜಾಹೀರಾತಲ್ಲ ಬದುಕು
ಟಿವಿ ಮುಂದೆ ಕುಳಿತಿರುತ್ತೀರಿ. ಚಾನೆಲ್ ಬದಲಿಸಲು ಹೊರಟವರಿಗೆ ಜಾಹೀರಾತೊಂದು ಗಮನ ಸೆಳೆಯುತ್ತದೆ. ಹತ್ತು ಹದಿನೈದು ಸೆಕೆಂಡ್ಗಳಿಗಿಂತಲೂ ಕಡಿಮೆ ಅವಧಿಯ ಆ ಜಾಹೀರಾತು ನಿಮ್ಮ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಬಿಡುತ್ತದೆ. ಅದರ ಕ್ರಿಯಾಶೀಲತೆ, ದೃಶ್ಯಾವಳಿ, ಅದರ ರಿಚ್ನೆಸ್, ಮಾಡೆಲ್ಗಳ ಸೌಂದರ್ಯ ಎಲ್ಲವೂ ನಿಮ್ಮ ಮೇಲೆ ಪ್ರಭಾವ ಬೀರಿರುತ್ತವೆ. ಅಷ್ಟೆ ಮರುದಿನ ಶಾಪಿಂಗ್ಗೆ ಅಂತ ಹೋದರೆ ಅದೇ ಜಾಹೀರಾತಿನಲ್ಲಿ ನೋಡಿದ್ದ ಉತ್ಪನ್ನ ಸಹಜವಾಗಿ ನಿಮ್ಮ ಆಯ್ಕೆಯಾಗಿರುತ್ತದೆ. ಅದರ ಗುಣಮಟ್ಟ, ದರ, ಪರಿಣಾಮ, ಅಗತ್ಯ ಇತ್ಯಾದಿ ಯಾವುದರ ಬಗ್ಗೆಯೂ ನೀವು ಯೋಚಿಸುವುದೇ ಇಲ್ಲ. ಜೀವನದಲ್ಲಿಯೂ ಹಾಗೆಯೇ. ನಿಮ್ಮನ್ನು ಇಂಪ್ರೆಸ್ ಮಾಡಲು ಸಾಕಷ್ಟು ಮಂದಿ ಸಾಕಷ್ಟು ರೀತಿಯ ಸರ್ಕಸ್ ಮಾಡುತ್ತಾರೆ. ಜಾಹೀರಾತಿನಂತೆಯೇ ನಿಮ್ಮ ಮೇಲೆ ಅವರ ಮಾತುಗಳು ಪ್ರಭಾವ ಬೀರುತ್ತವೆ. ಸ್ವಂತಿಕೆಯನ್ನು ನೀವು ಮರೆತಿರೋ, ನಿಮ್ಮನ್ನು ಈ ಜಗತ್ತು ಮರುಳು ಮಾಡಿಬಿಡುತ್ತದೆ. ಜಾಹೀರಾತಿನ ಉದಾಹರಣೆಯನ್ನೇ ತೆಗೆದುಕೊಂಡರೆ ಅದರ ಬಗ್ಗೆ ನಿಮಗೆ ಸಾಕಷ್ಟು ಆಕ್ಷೇಪಗಳು, ಸೈದ್ಧಾಂತಿಕ, ವೈಯಕ್ತಿಕ ವಿರೋಧ ಇದ್ದೇ ಇರುತ್ತದೆ. ಅದು ಸುಳ್ಳನ್ನು ಸಾರುತ್ತಿದೆ ಎಂಬುದೂ ಗೊತ್ತಿರುತ್ತದೆ. ಆದರೆ ಅದರಲ್ಲಿನ ಬುದ್ಧಿವಂತಿಕೆ, ಸತ್ಯವನ್ನು ಮರೆಮಾಚಿ ನಿಮ್ಮನ್ನು ಆವರಿಸಿಕೊಳ್ಳುವ ರೀತಿ ಇದೆಯಲ್ಲಾ ಅದೇ ಇಂದಿನ ಜಗತ್ತಿನಲ್ಲಿ ಸಾಮರ್ಥ್ಯ ಎಂದು ಕರೆಸಿಕೊಳ್ಳುತ್ತಿದೆ. ಇನ್ನೂ ಮುಖ್ಯ ಸಂಗತಿಯೆಂದರೆ ಜಾಹೀರಾತುಗಳು ನಿಮಗೆ ಏನು ಬೇಕೋ ಅದನ್ನೆಲ್ಲಾ ವಿವರವಾಗಿ ಸಾರುವುದಿಲ್ಲ. ನಿಮ್ಮಲ್ಲಿ ಕುತೂಹಲ ಉದ್ದೀಪಿಸುವ ಸಂಗತಿಯಷ್ಟನ್ನೇ ಹೇಳಿ ಮರೆಯಾಗಿಬಿಡುತ್ತವೆ. ನಿಮ್ಮೆದುರು ಸಲಹೆಗಳನ್ನು ಮಂಡಿಸುವ ಮಂದಿಯೂ ಹಾಗೆಯೇ. ನಿಮ್ಮ ವೀಕ್ನೆಸ್ ತಿಳಿದುಕೊಂಡು ನಿಮ್ಮನ್ನು ಕಟ್ಟಿ ಹಾಕುತ್ತಾರೆ. ನಿಮ್ಮದೇ ಆದ ಟೇಸ್ಟ್, ವಿವೇಚನೆ, ಅಗತ್ಯ, ಬಜೆಟ್ ಇವ್ಯಾವುದೂ ಅಲ್ಲಿ ಮುಖ್ಯವಾಗುವುದೇ ಇಲ್ಲ. ಹಾಗೆಯೇ ಬೇರೆಯವರ ಮಾತು ಕೇಳಿ ಬದುಕುವವನ ಸ್ಥಿತಿಯೂ. ಎಲ್ಲರ ಮಾತುಗಳನ್ನೂ ಕೇಳಿಸಿಕೊಳ್ಳಿ. ಆದರೆ ನೀವು ಹೇಗೆ ಬದುಕಬೇಕು ಎಂಬುದನ್ನು ನಿಮ್ಮ ವಿವೇಚನೆಯೇ ನಿರ್ಧರಿಸಲಿ. ಜಾಹೀರಾತಿನಲ್ಲಿಯಂತೆ ನಡೆಯುವುದಲ್ಲ ಬದುಕು.
- ಸಹನೆ