ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬಾಗಿಲು ತೆರೆ ಹಾಸನಮ್ಮ

Mainashree
Updated On : 21 Oct 2013, 6:26 am

ವರ್ಷಕ್ಕೊಮ್ಮೆ ಮಾತ್ರ ಈ ದೇವಾಲಯದ ಗರ್ಭಗುಡಿಯ ಬಾಗಿಲನ್ನು ತೆರೆಯಲಾಗುತ್ತದೆ. ಹೀಗೆ ತೆರೆದಾಗ ವಿಸ್ಮಯ ಕಾದಿರುತ್ತದೆ. ಹೋದ ವರ್ಷ ಹಚ್ಚಿದ್ದ ಎಣ್ಣೆ ದೀಪ ಉರಿಯುತ್ತಲೇ ಇರುತ್ತದೆ. ಈ ಕ್ಷಣವನ್ನು ಕಣ್ಣು ತುಂಬಿಕೊಳ್ಳಲು ಭಕ್ತರ ಹಿಂಡೇ ಅಲ್ಲಿ ಸೇರುತ್ತದೆ.
ಇಂಥ ವಿಸ್ಮಯದ ಆಗರವಾದ ಹಾಸನ ನಗರದ ಅಧಿದೇವತೆ ಹಾಸನಾಂಬ ದೇವಾಲಯದ ಬಾಗಿಲು ಇದೇ ಅಕ್ಟೋಬರ್ 24ರಂದು ತೆರೆಯುತ್ತಿದೆ. ಅ. 24ರಿಂದ ನ.5ರವರೆಗೆ, ಅಂದರೆ 13 ದಿನ ಈ ವರ್ಷ ದೇವಿಯ ದರ್ಶನ. ಕಳೆದ ವರ್ಷ 15 ದಿನ ತೆರೆಯಲಾಗಿತ್ತು. ಅರಸು ವಂಶಸ್ಥರು ಬನ್ನಿ ಮರ ಕಡಿಯುವ ಮೂಲಕ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತದೆ. ಈ ಸಂದರ್ಭ ದೇವಿಯ ಮುಂದೆ ಕಳೆದ ವರ್ಷ ಹಚ್ಚಿದ್ದ ದೀಪ ಪ್ರಜ್ವಲಿಸುತ್ತ ಇರುತ್ತದೆ. ಹೂ ಮತ್ತು ಎಡೆ ಬಾಡದಿರುತ್ತದೆ ಎಂಬುದು ಭಕ್ತರ ನಂಬಿಕೆ. ದೀಪ ಆರಿದ್ದರೆ, ಹೂ ಬಾಡಿದರೆ ಅನಿಷ್ಟ ಕಾದಿದೆ ಎಂಬ ನಂಬಿಕೆ.

ದೇವಿಯ ಇತಿಹಾಸ
12ನೇ ಶತಮಾನದಲ್ಲಿ ಚನ್ನಪಟ್ಟಣದ ಪಾಳೆಯಗಾರ ಕೃಷ್ಣಪ್ಪ ನಾಯ್ಕರಿಗೆ ಕನಸಿನಲ್ಲಿ ದೇವಿ ಕಾಣಿಸಿಕೊಂಡಳಂತೆ. ನಾನು ಇಂತಹ ಜಾಗದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದ್ದೇನೆ, ನನಗೊಂದು ಗುಡಿ ಕಟ್ಟಿಸು ಎಂದು ಹೇಳಿದಳು. ಅದರಂತೆ ನಾಯ್ಕರು ದೇವಿಯ ಗುಡಿಯನ್ನು ಕಟ್ಟಿಸಿದರು.
ಸಪ್ತಮಾತೆಯರು ಕಾಶಿಯಿಂದ ದಕ್ಷಿಣದ ಕಡೆಗೆ ಆಕಾಶಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದಾಗ ಹಾಸನದ ಸೌಂದರ್ಯಕ್ಕೆ ಮನಸೋತು ಇಲ್ಲಿ ನೆಲೆನಿಂತರು. ಇವರಲ್ಲಿ ವೈಷ್ಣವಿ, ಕೌಮಾರಿ, ಮಾಹೇಶ್ವರೀ ದೇವಿಯರು ದೇವಸ್ಥಾನದಲ್ಲಿ ಹುತ್ತದ ರೂಪದಲ್ಲಿ ಹಾಗೂ ವಹಾಹಿಣಿ, ಇಂದ್ರಾಣಿ, ಚಾಮುಂಡಿ ನಗರದ ಮಧ್ಯಭಾಗದಲ್ಲಿರುವ ದೇವಿಗೆರೆಯಲ್ಲಿ ನೆಲೆಸಿದರು. ಬ್ರಾಹ್ಮದೇವಿಯು ಕೆಂಚಮ್ಮ ಹೊಸಕೋಟೆಯಲ್ಲಿ ಕೆಂಚಾಂಬೆಯ ಹೆಸರಿನಲ್ಲಿ ನೆಲೆಸಿದ್ದಾಳೆ.

ಕ್ಷೇತ್ರ ಮಹಿಮೆ
ಇಲ್ಲಿ ಪ್ರತಿದಿನ ಭಕ್ತರಿಗೆ ದೇವಿ ದರ್ಶನ ಭಾಗ್ಯವಿಲ್ಲ. ವರ್ಷಕ್ಕೆ ಕೇವಲ ಹತ್ತರಿಂದ ಹನ್ನೆರಡು ದಿನ ಮಾತ್ರ ದರ್ಶನ. ಆಶ್ವಯುಜ ಮಾಸದ ಹುಣ್ಣಿಮೆಯ ನಂತರದ ಗುರುವಾರ ಬಾಗಿಲು ತೆರೆಯಲಾಗುತ್ತದೆ ಮತ್ತು ಬಲಿಪಾಡ್ಯದ ಮೂರನೇ ದಿನ ಮುಚ್ಚುತ್ತಾರೆ. ಮುಚ್ಚುವ ದಿನ ದೇವಿಯರಿಗೆ ಬಳೆ, ಅರಶಿನ, ಕುಂಕುಮ, ಹೂವು ಮುಂತಾದ ಮಂಗಳದ್ರವ್ಯ ಅರ್ಪಿಸಿ ನಂದಾದೀಪ ಉರಿಸಿಡುತ್ತಾರೆ. ದೇವಿಯ ಭಾವಚಿತ್ರವನ್ನು ಯಾರೂ ಮನೆಯಲ್ಲಿ ಇಡುವುದಿಲ್ಲ. ದೇವಾಲಯದ ಬಾಗಿಲು ತೆರೆದ ನಂತರ ಇಲ್ಲಿ ಯಾರೂ ಒಗ್ಗರಣೆ ಹಾಕಬಾರದು ಎಂಬ ನಂಬಿಕೆ.

ದೇವಿಕೆರೆಯ ವೈಶಿಷ್ಟ್ಯ
ಹಾಸನ ನಗರದ ಮಧ್ಯಭಾಗದಲ್ಲಿರುವ ದೇವಿಕೆರೆಯಲ್ಲಿ ಮೂವರು ದೇವಿಯರು ವಾಸವಾಗಿದ್ದಾರೆ. ಈ ದೇವಿಯರನ್ನು ಪ್ರತಿದಿನ ಭೇಟಿಯಾಗಲು ದೇವಸ್ಥಾನದಿಂದ ಅಕ್ಕಂದಿರು ಬರುತ್ತಾರಂತೆ. ಹಿಂದೆ ಅತ್ತೆಯಿಂದ ತುಂಬಾ ಕಾಟ ಅನುಭವಿಸುತ್ತಿದ್ದ ಸೊಸೆಯೊಬ್ಬಳು ಹಾಸನಾಂಬೆಯ ಸನ್ನಿಧಿಯಲ್ಲಿ ಕಲ್ಲಾಗಿದ್ದಾಳೆ. ಆ ಕಲ್ಲು ವರ್ಷದಿಂದ ವರ್ಷಕ್ಕೆ ಬತ್ತದ ಕಾಳಿನಷ್ಟು ಚಲಿಸುತ್ತದಂತೆ. ಅದು ದೇವಿಯ ಪಾದ ತಲುಪಿದ ದಿನ ಕಲಿಯುಗದ ಅಂತ್ಯವಂತೆ!

- ದಯಾಶಂಕರ ಮೈಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement