ವಿರಹಾಹಾರ
ವಿರಹಕ್ಕೆ ನೂರು ಸಾವಿರ ಬಗೆ. ಪರಿಸ್ಥಿತಿಯ ಪ್ರಭಾವದಿಂದ ಉಂಟಾಗುವ ವಿರಹ ಬೇರೆ. ನಾನಾ ಕಾರಣಗಳಿಂದ ತಾನಾಗೇ ಆಯ್ದುಕೊಳ್ಳುವ ವಿರಹ ಬೇರೆ. ಕೆಲವೊಮ್ಮೆ ಅದನ್ನು ಅಭಿವ್ಯಕ್ತಿಪಡಿಸುವುದಂತೂ ಅಸಾಧ್ಯವೇ ಸರಿ.
ಹಿಂದೊಬ್ಬ ತರುಣ ಕವಿಯಿದ್ದ. ಆತನದೂ ಮಂತ್ರಿಯ ಮಗಳದೂ ಕದ್ದು ಮುಚ್ಚಿ ಪ್ರಣಯ ಸಲ್ಲಾಪ ನಡೆಯುತ್ತಿತ್ತು. ಇಬ್ಬರ ನಡುವೆ ದಾರದೆಳೆಯೂ ಇರಬಾರದು ಎಂಬಂಥ ಉನ್ಮಾದಮಯ ಪ್ರಣಯವದು. ಒಮ್ಮೆ 'ನನ್ನನ್ನು ಎಲ್ಲಾದರೂ ಹಾರಿಸಿಕೊಂಡು ಹೋಗಿ ಮದುವೆಯಾಗು' ಎಂದು ಆಕೆ ಆಹ್ವಾನಿಸಿದಳು. ಆತನೋ ಬಡ ಕವಿ, ಮಂತ್ರಿಗಳನ್ನು ಎದುರಿಸಲಾದರೂ ಹೇಗೆ ಸಾಧ್ಯ? ಭಯದಿಂದ ಸುಮ್ಮನಾದ. ಅದಾಗಿ ಕೆಲವೇ ದಿನಗಳಲ್ಲಿ ಮಂತ್ರಿಯ ಮಗಳ ಮೇಲೆ ಆ ರಾಜ್ಯದ ರಾಜನ ಕಣ್ಣು ಬಿತ್ತು. ಆಕೆಯನ್ನು ತನಗೆ ಮದುವೆ ಮಾಡಿಕೊಡುವಂತೆ ಮಂತ್ರಿಯಲ್ಲಿ ಕೇಳಿದ. ಮಂತ್ರಿ, ರಾಜನ ಮಾವನಾಗುವ ಅವಕಾಶ ಬಿಟ್ಟುಕೊಡುತ್ತಾನೆಯೆ? ರಾಜನಿಗೆ ಧಾರೆಯೆರೆದು ಕೊಟ್ಟೇ ಬಿಟ್ಟ. ರಾಜನ ಮದುವೆಯ ಧಾರೆಯ ನಂತರ ನಡೆದ ಕವಿಗೋಷ್ಠಿಯಲ್ಲಿ ನಮ್ಮ ಈ ತರುಣ ಕವಿ ತನ್ನ ಕವನವನ್ನು ವಾಚಿಸಿದ:
ಹಾರೋ ನಾರೋಪಿತಃ ಕಂಠೇ ಮಯಾ ವಿಶ್ಲೇಷಭೀರುಣಾ
ಇದಾನೀಮಾವಯೋರ್ವುಧ್ಯೇ ಸರಿತ್ಸಾಗರಪರ್ವತಾಃ
ಅಂದು, ನಮ್ಮಿಬ್ಬರ ನಡುವೆ ಬೇರೆ ಯಾವ ಅಡ್ಡಿಯೂ ಇರಬಾರದೆಂದು ನಾನು ನಿನಗೆ ಹಾರ ಹಾಕಲಿಲ್ಲ (ವಿವಾಹವಾಗಲಿಲ್ಲ ಎಂಬರ್ಥ). ಇಂದು ಪರ್ವತ ನದಿ ಸಾಗರಗಳೆಲ್ಲ ನಾವಿಬ್ಬರೂ ಎಂದೂ ಒಂದಾಗದಂತೆ ಅಡ್ಡ ನಿಂತುಬಿಟ್ಟಿವೆ!
ಈ ಕವನವನ್ನು ಸಂಪೂರ್ಣ ಅರ್ಥ ಮಾಡಿಕೊಂಡವಳು ಹೊಸ ರಾಣಿ ಮಾತ್ರವೇ ಇರಬೇಕು!
- ಹರಿಹರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.