ಸಿಸಿಟಿವಿಯಿಂದ ನೋಟಿಸ್
ನಗರದ ವಿವಿಧ ಸಿಗ್ನಲ್ಗಳಲ್ಲಿ ಅಳವಡಿಸಿರುವ ಸಿಸಿಟಿವಿಗಳಲ್ಲಿ ಸಂಗ್ರಹವಾಗುವ ದೃಶ್ಯಗಳು, ನಿಯಮ ಉಲ್ಲಂಘಿಸುವವರನ್ನು ಪರಿಶೀಲಿಸಲು ಇರುವ ಸಿಬ್ಬಂದಿ ಕಂಪ್ಯೂಟರ್ನಲ್ಲಿ ಒಂದು ವೇಳೆಗೆ ನಾಲ್ಕು ಸಿಗ್ನಲ್ಗಳಲ್ಲಿನ ದೃಶ್ಯಗಳನ್ನು ವೀಕ್ಷಿಸುತ್ತಾರೆ. ಅದಕ್ಕಾಗಿ ಅವರಿಗೆ ನಾಲ್ಕು ಸಿಗ್ನಲ್ಗಳಲ್ಲಿನ ದೃಶ್ಯ ಕಾಣುವಂತೆ ಕಂಪ್ಯೂಟರ್ ಅಳವಡಿಸಲಾಗಿರುತ್ತದೆ. ಅಲ್ಲಿ ಸಂಚರಿಸುವ ವಾಹನಗಳಲ್ಲಿ ಯಾರಾದರೂ ನಿಯಮ ಉಲ್ಲಂಘಿಸಿದರೆ ತಕ್ಷಣ ಸಿಸಿಟಿವಿಯಲ್ಲೇ ಆ ವಾಹನದ ಸಂಖ್ಯೆಯನ್ನು ಪತ್ತೆ ಮಾಡಿ ಸಂಬಂಧಪಟ್ಟ ಠಾಣೆಯ ಪೊಲೀಸರಿಗೆ ಮಾಹಿತಿ ನೀಡುತ್ತಾರೆ.
ಆತ ಮಾಡಿದ ಉಲ್ಲಂಘನೆ ಗಮನಿಸಿ, ಆತನ ವಿಳಾಸ ಪತ್ತೆ ಮಾಡಿ ಕಾನೂನು ರೀತಿ ಮನೆಗೆ ನೋಟಿಸ್ ಕಳುಹಿಸುತ್ತಾರೆ. ಆ ನೋಟಿಸ್ ಸಿಕ್ಕಿದ ನಂತರ ನಿಗದಿಪಡಿಸಿದ ಸಮಯದಲ್ಲಿ ವಾಹನ ಚಾಲಕ ನ್ಯಾಯಾಲಯಕ್ಕೆ ಹಾಜರಾಗಿ ನೋಟಿಸ್ ನೀಡದಿದ್ದಲ್ಲಿ ಮತ್ತೆ ನೋಟಿಸ್ ಹೋಗುತ್ತದೆ. ಹೀಗೆ ಮೂರು ಬಾರಿ ನೋಟಿಸ್ಗೆ ಉತ್ತರ ನೀಡದಿದ್ದಲ್ಲಿ ಪೊಲೀಸರೇ ಆರೋಪಿಯನ್ನು ಬಂಧಿಸಿ ಕರೆತಂದು ದಂಡ ಕಟ್ಟಿಸುತ್ತಾರೆ. ಇದು ಸಣ್ಣಪುಟ್ಟ ಪ್ರಕರಣಗಳಿಗೆ ಅನ್ವಯವಾಗುವುದಿಲ್ಲ. ಅಪಘಾತ ಮಾಡಿ ಪರಾರಿಯಾದವರು, ಚಾಲನಾ ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡುವವರು, ಮದ್ಯಪಾನ ಸೇವಿಸಿ ಚಾಲನೆ ಮಾಡುವವರು.. ಹೀಗೆ ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತ ಮಾತ್ರ ನ್ಯಾಯಾಲಯಕ್ಕೆ ಹಾಜರಾಗಿ ದಂಡ ವಿಧಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹೋಗಿ ದಂಡ ವಿಧಿಸಿರುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರನ್ನು ಸಂಪರ್ಕಿಸಿ ಠಾಣೆಯಲ್ಲೇ ದಂಡ ಕಟ್ಟಿ ಬರಬೇಕು.
ಹೆಲ್ಮೆಟ್ ಧರಿಸದಿರುವುದು, ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದಿರುವುದು, ಸಿಗ್ನಲ್ ಜಂಪ್ ಮಾಡುವುದು, ಏಕಮುಖ ರಸ್ತೆಯಲ್ಲಿ ಸಂಚರಿಸುವುದು ಸೇರಿದಂತೆ ಇಂತಹ ಕೆಲವು ಪ್ರಕರಣಗಳಲ್ಲಿ ಸ್ಥಳದಲ್ಲೇ ದಂಡ ವಿಧಿಸಬೇಕು. ಹಣ ಇಲ್ಲದಿದ್ದಲ್ಲಿ ಪೊಲೀಸರು ವಾಹನ ಅಥವಾ ಚಾಲನಾ ಪರವಾನಗಿಯನ್ನು ತಮ್ಮ ಬಳಿ ಇಟ್ಟುಕೊಳ್ಳುತ್ತಾರೆ. ದಂಡ ಕಟ್ಟಿದ ನಂತರ ಅದನ್ನು ಹಿಂತಿರುಗಿಸುತ್ತಾರೆ.
- ಶಾಂತ ತಮ್ಮಯ್ಯ