ಹೊಟ್ಟೆ ಕೆಟ್ಟಾಗ ಬಿಸಿ ಒಳ್ಳೆಯದೊ? ತಂಪೋ?
ಹೊಟ್ಟೆ ಕೆಟ್ಟಾಗ ಏನನ್ನು ಸೇವಿಸಬೇಕು? ಯಾವ ಪಥ್ಯ ಅನುಸರಿಸಬೇಕು? ಮೇಲ್ನೋಟಕ್ಕೆ ಸರಳ ಪ್ರಶ್ನೆ ಅಂತ ಅನ್ನಿಸಬಹುದು. ಆದರೆ ಸತ್ಯ ಅದಲ್ಲ. ಬಹಳಷ್ಟು ಜನ ಅಂದುಕೊಂಡಿರುವ ಮತ್ತು ಅನುಸರಿಸುವ ತಪ್ಪು ವಿಧಾನ ಎಂದರೆ, ಉದರದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಿಕೊಂಡ ತಕ್ಷಣ ಲಿಂಬು ಸೋಡಾ ಅಥವಾ ಲಿಂಬು ಶರಬತ್ತು ಕುಡಿಯುವುದು. ಆದರೆ, ಹುಳಿ ಅಂಶಗಳನ್ನು ವಿಶೇಷತಃ ಸಿಟ್ರಸ್ ಅಂಶವಿರುವ ಯಾವುದೇ ಪದಾರ್ಥವನ್ನೂ ಸೇವಿಸಬಾರದು ಎನ್ನುತ್ತಾರೆ ತಜ್ಞರು.
'ಹೊಟ್ಟೆ ಕೆಟ್ಟಾಗ, ಅದರಲ್ಲೂ ವಾಕರಿಕೆ, ಹೊಟ್ಟೆ ತೊಳೆಸುವುದು ಅಥವಾ ಮಲವಿಸರ್ಜನೆಗೆ ಸಂಬಂಧಪಟ್ಟ ತೊಂದರೆಗಳಿದ್ದಾಗ ಸಿಟ್ರಸ್ ಆ್ಯಸಿಡ್ ಹೊಟ್ಟೆ ಸೇರಿದರೆ ಕಿರಿಕಿರಿ ಇನ್ನಷ್ಟು ಜಾಸ್ತಿಯಾಗುತ್ತದೆ. ಸಿಟ್ರಸ್‌ನಿಂದ ಯಾವುದೇ ಉಪಶಮನ ಸಿಗುವುದಿಲ್ಲ' ಎನ್ನುವುದು ಪೆನಿಸಲ್ವೇನಿಯಾ ಸ್ಟೇಟ್ ವಿಶ್ವವಿದ್ಯಾಲಯದ ಪ್ರೊಫೆಸರ್ ಮತ್ತು ಸಂಶೋಧಕ ಡಾ.ಕೆನ್ನೆತ್ ಎಲ್. ಕೋಚ್ ಅವರ ಸಲಹೆ. ಹೊಟ್ಟೆ ಕೆಟ್ಟಾಗ ಏನು ಸೇವಿಸಬಾರದು, ಏನನ್ನು ಸೇವಿಸಬೇಕು ಎಂಬುದರ ಕುರಿತಾಗಿಯೇ ಅವರ ಬಹಳಷ್ಟು ವರ್ಷ ಸಂಶೋಧನೆ ನಡೆಸಿದ್ದಾರೆ.
ಉದರದಲ್ಲಿ ಸಣ್ಣಪುಟ್ಟ ಸಮಸ್ಯೆ, ಕಿರಿಕಿರಿ ಕಾಣಿಸಿಕೊಂಡಾಗ ಪರಿಶುದ್ಧ ನೀರು ಕುಡಿಯುವುದೇ ಅತ್ಯುತ್ತಮ ಉಪಾಯ. ಕುದಿಸಿ ಕುಡಿದರೂ ಆದೀತು. ನೀರಿನ ಜತೆ ಸಕ್ಕರೆ ಅಥವಾ ಉಪ್ಪು ಸೇರಿಸಿಕೊಳ್ಳುವುದು ಒಳ್ಳೆಯದು (ಅತಿಸಾರದಲ್ಲಿ ಸಕ್ಕರೆ ಬಳಸಬಾರದು ಎನ್ನುವುದು ನೆನಪಿರಲಿ.) ನಿಧಾನವಾಗಿ ಕುಡಿಯಬೇಕು. ಒಂದು ಸಲ ಎರಡ್ಮೂರು ಸಿಪ್ ಅನ್ನು ಸಾವಕಾಶವಾಗಿ ಸೇವಿಸಬೇಕು. ಸೊರ್ರ್ ಅಂತ ಒಂದೇ ಸಲ ಗ್ಲಾಸ್ ಖಾಲಿ ಮಾಡುವುದು ಸರಿಯಾದ ಕ್ರಮ ಅಲ್ಲ. ಸ್ವಲ್ಪಸ್ವಲ್ಪವಾಗಿ ಅರ್ಧರ್ಧ ಗಂಟೆ ಬಿಟ್ಟು ಕುಡಿಯಬಹುದು. 'ಉಪ್ಪು, ಸಕ್ಕರೆ ಎರಡೂ ಹೊಟ್ಟೆಯನ್ನು ಸರಿಸ್ಥಿತಿಗೆ ತರಲು ಸಹಕಾರಿ. ವಾಂತಿಯಾದ ನಂತರ ಉಪ್ಪು ಹೊಟ್ಟೆ ಪ್ರವೇಶಿಸಿದರೆ ಎಲೆಕ್ಟ್ರೋಲೈಟ್‌ಗಳನ್ನು ಪುನರುಜ್ಜೀವನಗೊಳಿಸುತ್ತದೆ. ಇದರಿಂದ ನಿರ್ಜಲೀಕರಣ ಆಗುವುದು ತಪ್ಪುತ್ತದೆ' ಎನ್ನುತ್ತಾರೆ ಡಾ.ಕೋಚ್. ಹೊಟ್ಟೆ ಒಂದು ಹಂತಕ್ಕೆ ಬರುವವರೆಗೆ ಯಾವುದೇ ಹಣ್ಣಿನ ರಸ ಕುಡಿಯದಿರುವುದು ವಾಸಿ.
ತಂಪು ಅಥವಾ ಬಿಸಿ ನೀರು- ಇವೆರಡರಲ್ಲಿ ಯಾವುದು ಉತ್ತಮ? ಬಹಳಷ್ಟು ಜನರ ಆಯ್ಕೆ ಬಿಸಿ ಅಥವಾ ಉಗುರು ಬೆಚ್ಚನೆಯ ನೀರು ಆಗಿರುತ್ತದೆ ಎನ್ನುವುದು ನಿಜ. ವಾಸ್ತವದಲ್ಲಿ, 'ತಂಪು ಅಥವಾ ಬಿಸಿ ಅಂತೇನೂ ಇಲ್ಲ. ತಣ್ಣನೆಯ ನೀರು ಕುಡಿದರೂ ಅದು ಬಹಳ ಬೇಗನೇ ದೇಹದ ಉಷ್ಣತೆಗೆ ಹೊಂದಿಕೊಳ್ಳುತ್ತದೆ. ಆದರೆ ಶುದ್ಧ ನೀರು ಕುಡಿಯುವುದು ಮುಖ್ಯ' ಎನ್ನುತ್ತಾರೆ ಡಾ.ಕೋಚ್.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com