ಭಾರತದ ಮೊದಲ ರಾಷ್ಟ್ರೀಯ ಮುತ್ಸದ್ದಿ!
ಸ್ವಾಮೀಜಿ ಅಮೆರಿಕಾಕ್ಕೆ ತೆರಳುವ ಮಾರ್ಗದಲ್ಲಿ ಜಪಾನ್ ದೇಶವನ್ನು ಸಂದರ್ಶಿಸಿದರು. ಅಲ್ಲಿಯ ಸುವ್ಯವಸ್ಥಿತ ಜನಜೀವನ, ಕೈಗಾರಿಕಾ ಪ್ರಗತಿ...
ಸ್ವಾಮೀಜಿ ಅಮೆರಿಕಾಕ್ಕೆ ತೆರಳುವ ಮಾರ್ಗದಲ್ಲಿ ಜಪಾನ್ ದೇಶವನ್ನು ಸಂದರ್ಶಿಸಿದರು. ಅಲ್ಲಿಯ ಸುವ್ಯವಸ್ಥಿತ ಜನಜೀವನ, ಕೈಗಾರಿಕಾ ಪ್ರಗತಿ, ವಿದ್ಯಾಭ್ಯಾಸ, ಪ್ರಗತಿಯ ಹಂಬಲ, ಸ್ವಾವಲಂಬಿತನ ಮೆಚ್ಚಿಕೊಂಡ ಸ್ವಾಮೀಜಿ ಆ ಬಗ್ಗೆ ಭಾರತದ ಶಿಷ್ಯರಿಗೆ ಪತ್ರ ಬರೆದರು. ಅವರು ಕೇವಲ ಮೋಕ್ಷಮಾರ್ಗ ಹಿಡಿದ ಸನ್ಯಾಸಿ ಮಾತ್ರವಾಗಿರಲಿಲ್ಲ, ರಾಷ್ಟ್ರಾಭಿವೃದ್ಧಿಯ ರಾಜಮಾರ್ಗ ನಿರ್ಮಿಸುವ ರಾಷ್ಟ್ರೀಯ ಮುತ್ಸದ್ದಿಯಾಗಿದ್ದರು.
ಯೊಕೊಹಾವು ನಗರದಿಂದ ಹಡಗಿನಲ್ಲಿ ವ್ಯಾಂಕೋವರ್ ಕಡೆಗೆ ಪಯಣಿಸುತ್ತಿದ್ದಾಗ ಕೈಗಾರಿಕಾ ಸಾಮ್ರಾಟ ಜೆಮ್ ಶೆಟ್ಜಿ ಟಾಟಾರ ಭೇಟಿಯಾಯಿತು. ಸ್ವಾಮೀಜಿಯ ಅಸಾಮಾನ್ಯ ವ್ಯಕ್ತಿತ್ವದಿಂದ ಆಕರ್ಷಿತರಾದ ಟಾಟಾರವರು ಸ್ವಾಮೀಜಿಯಿಂದ ದೀಕ್ಷೆ ಪಡೆಯುವ ಅಪೇಕ್ಷೆ ವ್ಯಕ್ತಪಡಿಸಿದರು. ಅದಕ್ಕೊಪ್ಪದ ಸ್ವಾಮೀಜಿ, ಭಾರತಮಾತೆ ಅವರಿಂದ ಬಯಸಿರುವ ಸೇವೆಯನ್ನು ಮನಗಾಣಿಸಿದರು. ಜಪಾನಿನಂತಹ ಕೈಗಾರಿಕಾ ಕ್ರಾಂತಿ ಭಾರತದಲ್ಲೂ ನಡೆಯಬೇಕೆಂಬ ಆಶಯ ವ್ಯಕ್ತಪಡಿಸಿದರು.
ಸ್ವಾಮೀಜಿ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಟಾಟಾರವರು ಭಾರತದಲ್ಲಿ ವಿಜ್ಞಾನ, ತಂತ್ರಜ್ಞಾನಗಳ ಅಭಿವೃದ್ಧಿಯ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ಹೀಗೆ ಸ್ವಾಮೀಜಿ ದೇಶದ ಪ್ರಗತಿಗಾಗಿ ಕೈಗಾರಿಕಾಭಿವೃದ್ಧಿಯನ್ನು ಮನಗಂಡು ಟಾಟಾರವರ ಮೂಲಕ ಪರೋಕ್ಷವಾಗಿ ಭಾರತದ ಅಭಿವೃದ್ಧಿಯ ಹರಿಕಾರರಾದರು. ಸನ್ಯಾಸಿಯಾ ಗಬಯಸಿದವನನ್ನು ದೇಶದ ಏಳ್ಗೆಗಾಗಿ ದುಡಿಯುವಂತೆ ಅಭಿಪ್ರೇರಿಸಿದರು. ಭಾರತೀಯರ ಹೃನ್ಮನಗಳಲ್ಲಿ ಭವಿಷ್ಯಭಾರತವನ್ನು ಬಿತ್ತಿದ ಮೊದಲ ರಾಷ್ಟ್ರೀಯ ಮುತ್ಸದ್ದಿ ಎನಿಸಿದರು.
- ಆನಂದ ಎಸ್.ಎನ್.
anandsn193@gmail.com