ಮೈಮನಗಳ ಸುಳಿ
ಕಾಮದ ಬಗ್ಗೆ ನಮ್ಮ ಪೂರ್ವಜರು ಸಾಕಷ್ಟು ಚಿಂತಿಸಿದ್ದರೆಂಬುದು ನಿಜ. ನಾಲ್ಕು ಪುರುಷಾರ್ಥಗಳಲ್ಲಿ ಅದನ್ನು ಒಂದಾಗಿ ಅವರು ಕಂಡದ್ದೇ ಇದಕ್ಕೆ...
ಕಾಮದ ಬಗ್ಗೆ ನಮ್ಮ ಪೂರ್ವಜರು ಸಾಕಷ್ಟು ಚಿಂತಿಸಿದ್ದರೆಂಬುದು ನಿಜ. ನಾಲ್ಕು ಪುರುಷಾರ್ಥಗಳಲ್ಲಿ ಅದನ್ನು ಒಂದಾಗಿ ಅವರು ಕಂಡದ್ದೇ ಇದಕ್ಕೆ ಸಾಕ್ಷಿ. ಕಾಮವನ್ನು ಬಯಕೆಯಾಗಿ, ಅದನ್ನು ಮೋಕ್ಷಕ್ಕೂ ಮೆಟ್ಟಿಲಾಗಿ ಅವರು ಕಂಡಿದ್ದರು. ಪ್ರಣಯಕ್ರಿಯೆ, ರತಿಕ್ರೀಡೆ, ಮಿಲನಮಹೋತ್ಸವ ಮುಂತಾದ ಪದಗಳನ್ನು ವಿಶ್ಲೇಷಿಸಿದರೆ, ಅದನ್ನು ಬರಿಯ ದೇಹಗಳ ಸಂಗಮ ಎಂದು ಅವರು ಕಂಡಿರಲಿಲ್ಲವೆನಿಸುತ್ತದೆ. ದೈಹಿಕ ಕ್ರಿಯೆಗೂ ಮಿಗಿಲಾದ ಏನೋ ಒಂದನ್ನು ಅವರು ಮಿಲನದಲ್ಲಿ ಕಂಡಿದ್ದರು.
ಯತ್ರ ನ ವದನವಿಕಾರಃ ಸದ್ಭಾವಸಮರ್ಪಣಂ ನ ಗಾತ್ರಾಣಾಮ್
ತಸ್ಮಿನ್ನುದ್ಧತಭಾವೇ ಪಶುಕರ್ಮಣಿ ಪಶವ ಏವ ರಜ್ಯಂತೇ
'ಸಮೃದ್ಧ ಕಾಮಕೂಟದ ಬಳಿಕ ಮುಖಗಳು ಪ್ರಫುಲ್ಲಿತವಾಗಬೇಕು. ದೇಹದಂತೆ, ಭಾವವನ್ನೂ ಅಂತರಂಗವನ್ನೂ ಸಂಗಾತಿಗೆ ಅರ್ಪಿಸಿಕೊಳ್ಳಬೇಕು. ಇದಿಲ್ಲದೆ, ಬಲವಂತವಾಗಿ ರತಿಕ್ರೀಡೆಯಲ್ಲಿ ಪಾಲ್ಗೊಳ್ಳುವುದು, ಸಂಗಾತಿಯ ದೇಹವನ್ನು ಇಚ್ಛೆಯಿಲ್ಲದಿದ್ದರೂ ಬಳಸಿಕೊಳ್ಳುವುದು ಪಶುಕಾಮಕ್ಕೆ ಸಮಾನ. ಮೃಗಗಳಿಗಷ್ಟೇ ಅದು ಸಂತೃಪ್ತಿ ನೀಡಬಲ್ಲುದು.'
ಎಲ್ಲೆಡೆ ನಡೆಯುತ್ತಿರುವ ಹಠಸಂಭೋಗ, ಅತ್ಯಾಚಾರ ಪ್ರಕರಣಗಳನ್ನು ಕಂಡರೆ, ಮೃಗಗಳು ಮಾತ್ರವೇ ಈ ದುರ್ವಿಕಾರದಲ್ಲಿ ತೊಡಗಲು ಸಾಧ್ಯ ಎನಿಸುತ್ತದೆ. ಇದರ ಅರಿವು ಈ ಸುಭಾಷಿತಕಾರನಿಗೂ ಇತ್ತು. 'ಸದ್ಭಾವಸಮರ್ಪಣ' ಎನ್ನುವ ಪದವೇ ಎಷ್ಟು ಸೊಗಸಾಗಿದೆ. ಅದು ಮೈಮನಗಳ ಸುಳಿ- ಮೈಯ ಜತೆ ಮನವೂ ಇರಬೇಕು.
- ಹರಿಹರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.