ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ರುಚಿಯಾದ ಅಡುಗೆಯಂತಿರಲಿ!

ಎಲ್ಲರಿಗೂ ವಾಸ್ತು ಬೇಕು, ಆದರೆ ಅದು ಅತಿಯಾಗಬಾರದು. ವಾಸ್ತು ರುಚಿಯಾದ ಅಡುಗೆಯಂತಿರಬೇಕು. ಹೆಚ್ಚು ಖಾರ ತಿಂದರೆ ಅಲ್ಸರ್, ಸಿಹಿ...

Rashmi Kasaragodu
Updated On : 23 Oct 2013, 6:16 am

ಎಲ್ಲರಿಗೂ ವಾಸ್ತು ಬೇಕು, ಆದರೆ ಅದು ಅತಿಯಾಗಬಾರದು. ವಾಸ್ತು ರುಚಿಯಾದ ಅಡುಗೆಯಂತಿರಬೇಕು. ಹೆಚ್ಚು ಖಾರ ತಿಂದರೆ ಅಲ್ಸರ್, ಸಿಹಿ ಹೆಚ್ಚು ತಿಂದರೆ ಸಕ್ಕರೆ ಕಾಯಿಲೆ ಬರುವಂತೆ ವಾಸ್ತು ಕುರಿತ ಅತಿ ಚಿಂತೆ ನೆಮ್ಮದಿಯನ್ನು ಹಾಳು ಮಾಡುತ್ತದೆ. ಸರಳ ವಾಸ್ತು ಅಂದರೆ ಮನೆಯ ಮುಂಬಾಗಿಲು ಪೂರ್ವ ಅಥವಾ ಉತ್ತರ ದಿಕ್ಕಿಗೆ ಇರಬೇಕು ಎನ್ನುವ ಮಟ್ಟಿಗೆ ಇದ್ದರೆ ಸಾಕು. ಉಳಿದ ವಿಚಾರಗಳಲ್ಲಿ ತಲೆ ಕೆಡಿಸಿಕೊಳ್ಳಬಾರದು.
- ಜಿ.ಸಿ. ಶಾಂತ, ಬೆಂಗಳೂರು

ಮನಸ್ಸು ಸರಿ ಇದ್ದರೆ ಸಾಕು!
'ವಾಸ್ತು' ಅನ್ನುವುದು ಕೆಲವೇ ವರ್ಗದ ಜನರು ತಮ್ಮ ಸ್ವಾರ್ಥಕ್ಕಾಗಿಯೇ ಮಾಡಿಕೊಂಡಿರುವ ವಿಚಾರ. ದುರ್ಬಲ ಮನಸ್ಸುಗಳ ಮೇಲೆ ದುಷ್ಪರಿಣಾಮ ಬೀರುವ ಇಂತಹ ಸಮಾಚಾರ ಬೇಡವೇ ಬೇಡ. ಯಾವುದೇ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವಾಗ ಅದರ ಸುತ್ತಮುತ್ತಲಿನ ಪರಿಸರ, ಒಳ್ಳೆಯ ಗಾಳಿ-ಬೆಳಕು ಇದ್ದರೆ ಸಾಕು. ಇವೆಲ್ಲವನ್ನೂ ವೈಜ್ಞಾನಿಕವಾಗಿ ತಿಳಿದು ಸಲಹೆ ನೀಡುವುದೇ ನಿಜವಾದ ವಾಸ್ತು.  ಕೆಲವರು ಆ ದಿಕ್ಕು ಸರಿಯಿಲ್ಲ, ಈ ದಿಕ್ಕು ಸರಿಯಿಲ್ಲ ಎಂದು ದಿಕ್ಕು ತಪ್ಪಿಸುತ್ತಾರೆ. ಕೇವಲ ಗುರುತಿಗೋಸ್ಕರ ಈ ದಿಕ್ಕು ಮೂಲೆಗಳನ್ನು ಉಪಯೋಗಿಸಿಕೊಂಡಿರುತ್ತೇವೆ. ನಿಜವಾದ ವಾಸ್ತು ಇರುವುದು ನಮ್ಮ ಮನಸ್ಸುಗಳಲ್ಲಿ!
- ಕೆ. ರಂಗಯ್ಯ, ಬೆಂಗಳೂರು

ನಕಾರಾತ್ಮಕ ಚಿಂತನೆ ಏಕೆ?
ಈ ಜಗತ್ತಿನ ಚರಾಚರ ವಸ್ತುವಿನ ಸೃಷ್ಟಿಗೆ ಪಂಚಭೂತಗಳು ಹೇಗೆ ಕಾರಣವೋ ಹಾಗೆಯೇ ವಾಸ್ತುಶಾಸ್ತ್ರಕ್ಕೂ ಪಂಚಭೂತಗಳೇ ಕಾರಣ. ಈ ಶಾಸ್ತ್ರವು ಜ್ಯೋತಿಷ್ಯದ ಒಂದು ಅಂಗವಾಗಿ ಬೆಳೆದು ಬಂದಿದೆ. ಪಂಚಭೂತಗಳನ್ನು ಆಧಾರವಾಗಿಟ್ಟುಕೊಂಡು, ಸಕಾರಾತ್ಮಕ ಚಿಂತನೆಯ ನೆಲೆಗಟ್ಟಿನಲ್ಲಿ ನಮ್ಮ ಪೂರ್ವಿಕರು ವಾಸ್ತು ಶಾಸ್ತ್ರವನ್ನು ರಚಿಸಿದ್ದಾರೆ. ಈಗ ನಾವು ಹೆಜ್ಜೆಹೆಜ್ಜೆಗೂ ನಕಾರಾತ್ಮಕ ಚಿಂತನೆ ರೂಢಿಸಿಕೊಂಡಿದ್ದೇವೆ. ವಾಸ್ತುವೆಂಬ ಶಾಸ್ತ್ರದ ನಿಯಮವಿರಬೇಕು ನಿಜ, ಆದರೆ ಅದರಿಂದಲೇ ನಮ್ಮ ಬದುಕು ಮೂರಾಬಟ್ಟೆಯಾಗುವಂತೆ ನಾವು ವರ್ತಿಸಬಾರದು ಅಲ್ಲವೆ?
ಅಶೋಕ ಬಾಬು, ಮಾಲೂರು

ಬ್ರಹ್ಮನೇ ಬರೆದಿದ್ದಾನೆ!
ವಾಸ್ತುಶಾಸ್ತ್ರ ಎನ್ನುವುದನ್ನು ಈ ಜಗತ್ತನ್ನು ಸೃಷ್ಟಿಸಿದ ಶ್ರೀಮನ್‌ನಾರಾಯಣ, ಸೃಷ್ಟಿಕರ್ತ ಬ್ರಹ್ಮನಿಗೆ ಆಜ್ಞೆ ಮಾಡಿದ್ದಾನೆ. ಆ ಬ್ರಹ್ಮನು ನಮ್ಮೆಲ್ಲರ ಹುಟ್ಟು-ಸಾವು, ಬಾಳುವೆ-ಬದುಕನ್ನು ನಮ್ಮ ದೇಹಾತ್ಮಕ್ಕೆ ಅಳವಡಿಸಿದ್ದಾನೆ. ಅದುವೇ ನಿಜವಾದ ವಾಸ್ತು! ಅದರ ಗುಟ್ಟು ಬ್ರಹ್ಮನಿಗೆ ಮಾತ್ರ ತಿಳಿದಿರುತ್ತದೆ!
- ಎಚ್.ಪಿ. ಹುಚ್ಚೇಗೌಡ, ಹಲಗಾಪುರ
 
'ಜಗುಲಿ'ಯಲ್ಲಿ ಈ ಸಲದ ವಿಷಯ 'ಸಚಿನ್ ನಿವೃತ್ತಿ'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement