ಚಪಲಚಿತ್ತೆಯರು
ತರುಣಿಯರನ್ನು ನಮ್ಮ ಸುಭಾಷಿತ ಕವಿಗಳೂ ಗಂಡಸರಿಗೆ ಸಮಾನವಾಗಿ ಕಂಡದ್ದು ಕಡಿಮೆ. ಅದರಲ್ಲೂ ಹೆಣ್ಣಿನ ಚಾಪಲ್ಯ ಅವರಿಗೆ ಯಾವಾಗಲೂ ಟೀಕೆ, ವ್ಯಂಗ್ಯದ ವಸ್ತು...
ತರುಣಿಯರನ್ನು ನಮ್ಮ ಸುಭಾಷಿತ ಕವಿಗಳೂ ಗಂಡಸರಿಗೆ ಸಮಾನವಾಗಿ ಕಂಡದ್ದು ಕಡಿಮೆ. ಅದರಲ್ಲೂ ಹೆಣ್ಣಿನ ಚಾಪಲ್ಯ ಅವರಿಗೆ ಯಾವಾಗಲೂ ಟೀಕೆ, ವ್ಯಂಗ್ಯದ ವಸ್ತು. ಎಲ್ಲೋ ಕೆಲವು ಕವಿಗಳು ಮಾತ್ರ ಈ ಮನುಷ್ಯ ಸ್ವಭಾವವನ್ನು ಕರುಣೆಯಿಂದ, ತಮಾಷೆಯಿಂದ ನೋಡಿದ್ದಾರೆ. ಇನ್ನಿತರರ ಪಾಲಿಗೆ, ಹೆಣ್ಣು ಎಂದರೆ ಜಾರಲು ಕಾಯುತ್ತಿರುವವಳು ಎಂಬಂತೆಯೇ ಭಾಸವಾಗುತ್ತದೆ.
ಶಾಸ್ತ್ರಂ ಸ್ವಧೀತಮಪಿ ತತ್ ಪರಿಚಿಂತನೀಯಂ
ಪ್ರೀತೋ ನೃಪೋಪಿ ಸತತಂ ಪರಿಸೇವನೀಯಃ
ಅಂಕೇ ಸ್ಥಿತಾಪಿ ಯುವತೀ ಪರಿರಕ್ಷಣೀಯಾ
ಶಾಸ್ತ್ರೇ ನೃಪೇ ಚ ಯುವತೌ ಚ ಕುತೋ ವಶತ್ವಮ್
ಶಾಸ್ತ್ರ ಗೊತ್ತಿದ್ದರೂ ಅದನ್ನು ಮತ್ತೆ ಮತ್ತೆ ಓದಿ ಮನನ ಮಾಡಿಕೊಳ್ಳುತ್ತಿರಬೇಕು. ರಾಜ ನಮಗೆ ಅನುಕೂಲನಾಗಿದ್ದರೂ ಆತನನ್ನು ಪುನಃ ಪುನಃ ಓಲೈಸುತ್ತಿರಬೇಕು. ಹೆಣ್ಣು ನಮ್ಮ ವಶದಲ್ಲಿದ್ದರೂ ಎಚ್ಚರದಿಂದ ಕಾಯುತ್ತಿರಬೇಕು. ಇವು ಮೂರೂ, ಶಾಶ್ವತವಾಗಿ ವಶವಾಯಿತೆಂದಿಲ್ಲ.
ಆಪದಿ ಮಿತ್ರಪರೀಕ್ಷಾ ಶೂರಪರೀಕ್ಷಾ ರಣಾಂಗಣೇ ಭವತಿ
ವಿನಯೇ ವಂಶಪರೀಕ್ಷಾ ಸ್ತ್ರೀಯಃ ಪರೀಕ್ಷಾ ತು ನಿರ್ಧನೇ ಪುಂಸಿ
(ಆಪತ್ತಿನಲ್ಲಿ ಸ್ನೇಹದ, ಕದನದ ವೇಳೆಯಲ್ಲಿ ವೀರನ, ವಿನಯದಿಂದ ಒಬ್ಬನ ಕುಲದ, ಬಡತನ ಬಂದಾಗ ಹೆಣ್ಣಿನ ಪ್ರೀತಿಯ ಪರೀಕ್ಷೆಯಾಗುತ್ತದೆ.)
ಹೆಂಗಳೆಯರನ್ನು ಶಾಶ್ವತವಾಗಿ ಚಪಲಚಿತ್ತೆಯರ ಸ್ಥಾನದಲ್ಲಿಡುವ, ಕಿಂಡಲ್ ಮಾಡುವ ಈ ಮಾತುಗಳು ಹಿಂದಿನ ಕಾಲದಲ್ಲೇನೋ ನಡೆಯುತ್ತಿತ್ತು. ಈಗಿನವರು ಇದನ್ನು
ಒಪ್ಪಲಾದೀತೆ?
- ಹರಿಹರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.