ಮಹಾಭಾರತ
ಆಧುನಿಕ ಜೀವನಶೈಲಿಯ ಮಹತ್ವದ ಕೊಡುಗೆ ಎಂದರೆ ಬೊಜ್ಜು. ಇದು ಒಂದು ದೇಶಕ್ಕೆ ಸೀಮಿತವಾಗಿರುವ ಸಮಸ್ಯೆ ಅಲ್ಲ...
ಇಂದು (ಅಕ್ಟೋಬರ್ 26) ವಿಶ್ವ ಬೊಜ್ಜು ದಿನಾಚರಣೆ. ಬೊಜ್ಜು ಹೃದಯ ಸಂಬಂಧಿ ಕಾಯಿಲೆಗಳಿಗೆ ಹೇಗೆ ಮೂಲ ಕಾರಣ ಎನ್ನುವ ಮಾಹಿತಿ.
ಆಧುನಿಕ ಜೀವನಶೈಲಿಯ ಮಹತ್ವದ ಕೊಡುಗೆ ಎಂದರೆ ಬೊಜ್ಜು. ಇದು ಯಾವುದೇ ಒಂದು ದೇಶಕ್ಕೆ ಸೀಮಿತವಾಗಿರುವ ಸಮಸ್ಯೆ ಅಲ್ಲ. ಇಡೀ ವಿಶ್ವ ಈ ತೊಂದರೆಯಿಂದ ಬಳಲುತ್ತಿದೆ ಎಂದರೆ ನಂಬಲೇಬೇಕು. ಸಾಂಕ್ರಾಮಿಕ ಕಾಯಿಲೆ ಸ್ವರೂಪದಲ್ಲಿ ಬೊಜ್ಜು ಎನ್ನುವ ಆರೋಗ್ಯ ಸಮಸ್ಯೆ ಜಗತ್ತನ್ನೇ ಆವರಿಸಿಕೊಳ್ಳುತ್ತಿದೆ.
ಬೊಜ್ಜಿಗೆ ಕೆಟ್ಟ ಜೀವನ ಶೈಲಿ ಪ್ರಮುಖ ಕಾರಣ. ಕೆಲವು ಪ್ರಕರಣಗಳಲ್ಲಿ ವಂಶವಾಹಿನಿಯೂ ಕಾರಣ ಆಗಬಲ್ಲದು. ಕೃಷಿ ಆಧಾರಿತ ಸಮಾಜದಲ್ಲಿ ಸೇವಿಸಲಾಗುತ್ತಿದ್ದ ತರಕಾರಿ ಮತ್ತಿತರ ಆಹಾರ ಕ್ರಮಗಳನ್ನು ಬಿಟ್ಟು ನಾವು ಕೊಬ್ಬಿನ ಅಂಶ ಹೆಚ್ಚಿರುವ ಆಹಾರ ಪದ್ಧತಿಯತ್ತ ವಾಲಿದೆವು. ಹಾಗೆಯೇ, ಅತ್ಯಂತ ಶಕ್ತಿಶಾಲಿ ಆಹಾರ ಎಂದುಕೊಳ್ಳುವ ಪ್ರಾಣಿಜನ್ಯ ಕೊಬ್ಬಿನ ಅಂಶದ ಸೇವನೆಯತ್ತ ಸರಿದೆವು. ಇದರ ಜತೆಗೆ ದೈಹಿಕ ಪರಿಶ್ರಮ ಇಲ್ಲದಂತಾಗಿ ಬೊಜ್ಜಿನ ಸಮಸ್ಯೆಗೆ ಇಂಬು ಕೊಟ್ಟಿತು.
ಬೊಜ್ಜಿನಿಂದ ಕೂಡಿದ ದೇಹವು, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ರಕ್ತನಾಳಗಳನ್ನು ಕಟ್ಟುವ ರೋಗಗಳಿಗೆ ಆಹ್ವಾನ ನೀಡುತ್ತದೆ. ಹೃದಯಕ್ಕೆ ರಕ್ತವನ್ನು ಸರಾಗವಾಗಿ ಸರಬರಾಜು ಮಾಡಬೇಕಾದ ನಾಳಗಳು ನಿಧಾನವಾಗಿ ಬಿಗಿಗೊಳ್ಳುತ್ತ ಬಂದು ಕೊನೆಗೊಮ್ಮೆ ರಕ್ತನಾಳದ ಹಿಗ್ಗುವಿಕೆಗೆ ತಡೆಯೊಡ್ಡಿ ರಕ್ತಸರಬರಾಜನ್ನು ನಿಲ್ಲಿಸಿದರೆ ಅಥವಾ ರಕ್ತಸರಬರಾಜಿಗೆ ಅಡ್ಡಿಪಡಿಸಿ, ರಕ್ತಗರಣೆ ಕಟ್ಟಿದರೆ ಹೃದಯದ ಕೆಲಸ ಸ್ಥಗಿತವಾಗುತ್ತದೆ. ಇದನ್ನೇ ಹೃದ್ರೋಗ ಅಥವಾ ಕೊರೊನರಿ ಹಾರ್ಟ್ ಡಿಸೀಸ್ (ಸಿಎಚ್‌ಡಿ) ಎನ್ನುತ್ತಾರೆ.
ಒಂದು ಅಂದಾಜಿನ ಪ್ರಕಾರ ಭಾರತದ ನಗರ ಪ್ರದೇಶಗಳಲ್ಲಿ ಶೇಕಡಾ 8ರಿಂದ 10ರಷ್ಟು ಜನತೆ ಸಿಎಚ್‌ಡಿಯಿಂದ ಬಳಲುತ್ತಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಶೇಕಡಾ 3ರಿಂದ 4ರಷ್ಟು ಜನರಿಗೆ ಈ ಸಮಸ್ಯೆಯಿದೆ. ಇದು 1960ರಿಂದ 2002ರ ಅವಧಿಯಲ್ಲಿ ನಗರ ಪ್ರದೇಶಗಳಲ್ಲಿ ಆರು ಪಟ್ಟು ಹೆಚ್ಚಿದ್ದರೆ ಗ್ರಾಮೀಣ ಪ್ರದೇಶಗಳಲ್ಲಿ ದ್ವಿಗುಣವಾಗಿದೆ. ಆತಂಕಕಾರಿ ವಿಷಯವೆಂದರೆ 2015ರ ವೇಳೆಗೆ ಸಿಎಚ್‌ಡಿ ಸಮಸ್ಯೆಯಿಂದ ಮರಣ ಹೊಂದುವರ ಪ್ರಮಾಣ ದೇಶದಲ್ಲಿ ಶೇಕಡಾ 33.5ರಷ್ಟು ಎಂದು ಅಧ್ಯಯನಗಳು ತಿಳಿಸಿವೆ. ಹೀಗಾದರೆ ಬೇರಾವುದೇ ಸಾಂಕ್ರಾಮಿಕ ರೋಗಗಳಿಂದ ಸಾಯುವರಿಗಿಂತ ಹೃದ್ರೋಗಗಳಿಂದ ಮರಣ ಹೊಂದುವರ ಸಂಖ್ಯೆಯೇ ಮೊದಲ ಸ್ಥಾನದಲ್ಲಿ ಬರುತ್ತದೆ.
ಬೆಂಗಳೂರಿನ ಸಾಗರ್ ಹಾಸ್ಪಿಟಲ್ಸ್‌ನ ಇಂಟರ್‌ವೆನ್‌ಶನ್ ಕಾರ್ಡಿಯಾಲಜಿಸ್ಟ್ ಡಾ.ಕೆ.ಎಸ್. ಕಿಶೋರ್ ಅವರು ಹೇಳುವ ಪ್ರಕಾರ, ಬೊಜ್ಜು ನಿಯಂತ್ರಿಸುವುದೇ ಹೃದಯ ರೋಗಗಳ ತಡೆಗೆ ಮೊದಲ ಹೆಜ್ಜೆ. ಜೀವನ ಶೈಲಿಯ ಬದಲಾವಣೆಯಿಂದ ಬೊಜ್ಜು ನಿಯಂತ್ರಿಸುವುದು ಹೇಳಿದಷ್ಟು ಸುಲಭವಲ್ಲ. ಆದ್ದರಿಂದ ಈ ಹಿನ್ನೆಲೆಯಲ್ಲಿ ನಮ್ಮ ಹೃದಯದ ಆರೋಗ್ಯದ ಮೇಲೆ ಎಚ್ಚರಿಕೆಯ ನಿಗಾ ಇಡುವುದು ಉತ್ತಮ ಮಾರ್ಗ. ಸಿಗರೇಟ್ ಅಥವಾ ತಂಬಾಕು ಉತ್ಪನ್ನಗಳ ಸೇವನೆ ಬಿಡುವುದರ ಜೊತೆಗೆ ನಾರು ಅಂಶಗಳಿರುವ ಉತ್ತಮ ಆಹಾರ ತಿನ್ನುವುದರಿಂದ ಮತ್ತು ವ್ಯಾಯಾಮ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು.
ಅಪಾಯದ ಗಂಟೆ
ದೇಹದ ಎತ್ತರದ ತಕ್ಕಂತೆ ತೂಕ ಇರಬೇಕು. ಸೊಂಟದ ಸುತ್ತಳತೆ ಎತ್ತರಕ್ಕೆ ತಕ್ಕಂತೆ ಇರಬೇಕು. ಇವು ಈ ರೋಗ ತಡೆಯುವಲ್ಲಿ ಪ್ರಮುಖ ಅಂಶಗಳು. ದೇಹದ ತೂಕ ಏರುತ್ತ ಹೋದರೆ ಹೃದ್ರೋಗವನ್ನು ಆಹ್ವಾನಿಸಿದಂತೆ. ಪುರುಷರ ಬಾಡಿ ಮಾಸ್ ಇಂಡೆಕ್ಸ್ ಒಂದು ವೇಳೆ 30ಕ್ಕಿಂತ ಹೆಚ್ಚಿದ್ದರೆ ಖಂಡಿತವಾಗಿಯೂ ಅದು ಬೊಜ್ಜಿನ ಸೂಚಕ. ಹಾಗೂ ಹೃದ್ರೋಗಕ್ಕೆ ತುತ್ತಾಗುವ ಅಪಾಯ ಇಂತಹ ವ್ಯಕ್ತಿಗಳಲ್ಲಿ ಹೆಚ್ಚು. ಮಹಿಳೆಯರ ಬಾಡಿ ಮಾಸ್ ಇಂಡೆಕ್ಸ್ ಒಂದು ವೇಳೆ 21ಕ್ಕಿಂತ ಹೆಚ್ಚಿದ್ದರೆ ಹೃದಯ ಸಂಬಂಧಿ ಕಾಯಿಲೆಗಳು ಎದುರಾಗುತ್ತವೆ. ಜೊತೆಗೆ ಪುರುಷರ ಸೊಂಟದ ಸುತ್ತಳತೆ 90 ಸೆಂಟಿ ಮೀಟರ್‌ಗಿಂತ ಹೆಚ್ಚಿದ್ದರೆ ಹಾಗೂ ಮಹಿಳೆಯರ ಸೊಂಟದ ಸುತ್ತಳತೆ 80 ಸೆಂಟಿ ಮೀಟರ್‌ಗಿಂತ ಹೆಚ್ಚಿದ್ದರೆ ಹೃದಯ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.
ಕನ್ನಡಿಗರೂ ಹಿಂದಿಲ್ಲ!
ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವ ಹೃದಯ ಪ್ರತಿಷ್ಠಾನಗಳ ಸಮೀಕ್ಷೆ ಪ್ರಕಾರ ಜಗತ್ತಿನಲ್ಲಿ ಸುಮಾರು 400 ದಶಲಕ್ಷ ಜನ ಬೊಜ್ಜಿನಿಂದ ಬಳಲುತ್ತಿದ್ದಾರೆ. ಆತಂಕಕಾರಿ ಸಂಗತಿ ಎಂದರೆ ಐದು ವರ್ಷ ಒಳಗಿನ 17.6 ದಶಲಕ್ಷ ಮಕ್ಕಳನ್ನು ಬೊಜ್ಜು ಕಾಡುತ್ತಿದೆ! ಸುಮಾರು ಮೂರು ಕೋಟಿ ಭಾರತೀಯರು ಬೊಜ್ಜಿನ ಸಮಸ್ಯೆ ಹೊಂದಿದ್ದಾರೆ. ಈ ಸಂಖ್ಯೆಯು ಮುಂದಿನ 5 ವರ್ಷಗಳಲ್ಲಿ ದ್ವಿಗುಣಗೊಳ್ಳುವ ಅಪಾಯ ಇದೆ. ಇನ್ನು ಕರ್ನಾಟಕ ಪುರುಷರ ಬೊಜ್ಜಿನ ಪ್ರಮಾಣದಲ್ಲಿ ದೇಶದಲ್ಲಿ 14ನೇ ಹಾಗೂ ಮಹಿಳೆಯರ ಬೊಜ್ಜಿನ ಪ್ರಮಾಣದಲ್ಲಿ 9ನೇ ಸ್ಥಾನದಲ್ಲಿದೆ. ಅಂದರೆ ಇಲ್ಲಿನ ಶೇಕಡಾ 12ರಷ್ಟು ಪುರುಷರು ಹಾಗೂ ಶೇಕಡಾ 17.3ರಷ್ಟು ಮಹಿಳೆಯರು ಬೊಜ್ಜಿನಿಂದ ಬಳಲುತ್ತಿದ್ದಾರೆ.
- ಡಾ. ಕೆ.ಎಸ್. ಕಿಶೋರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.