ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಅವರಾಗಿಯೇ ಒಪ್ಪಿಕೊಳ್ಳಲಿ!

Rashmi Kasaragodu
Updated On : 28 Oct 2013, 12:45 pm

ಅದನ್ನೇ ನಾಯಕತ್ವ ಎನ್ನುವುದು. ನಿಮ್ಮನ್ನು ಎಲ್ಲರೂ ಒಮ್ಮೆಲೇ ಒಪ್ಪಿಕೊಂಡು ಬಿಡುತ್ತಾರೆ ಎನ್ನಲಾಗದು. ಏಕೆಂದರೆ ಅಲ್ಲಿ ನಿಮಗಿಂತ ಹಿರಿಯರಿರಬಹುದು, ಅನುಭವಿಗಳಿರಬಹುದು, ಸಮರ್ಥರೂ ಇರಬಹುದು. ನಿಮ್ಮ ನಾಯಕತ್ವದಡಿಯಲ್ಲಿ ಕೆಲಸ ಮಾಡುವ ಮಂದಿ ಎಲ್ಲ ಸಂದರ್ಭದಲ್ಲೂ ನಿಮಗಿಂತ ಚಿಕ್ಕವರೇ ಆಗಿರಬೇಕೆಂದೇನೂ ಇಲ್ಲ. ಮುಖ್ಯವಾಗಿ ಒಬ್ಬೊಬ್ಬರ ಕಾರ್ಯ ವೈಖರಿ ಒಂದೊಂದು ತೆರ. ಕೆಲವರು ನೀವು ಹೇಳಿದ್ದಕ್ಕೆಲ್ಲ ತಲೆಯಾಡಿಸಿ, ಒಪ್ಪಿಕೊಂಡು ಹೇಳಿದಷ್ಟನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ಇನ್ನು ಕೆಲವರದು ಪ್ರತಿಯೊಂದನ್ನೂ ಪ್ರಶ್ನಿಸುವ ಮನೋಭಾವ. ಅನಗತ್ಯ ತರಲೆ ಎತ್ತುವವರಿಗೇನೂ ಕಡಿಮೆ ಇರುವುದಿಲ್ಲ. ಒಂದಷ್ಟು ಮಂದಿ ಚುರುಕಾಗಿರುತ್ತಾರೆ, ಇನ್ನಷ್ಟು ಜನ ದಪ್ಪ ಚರ್ಮದ, ಏನೂ ಮಾಡಿದರೂ ಅಲ್ಲಾಡದ ಪರಮ ಜೋಭದ್ರರಿರುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಸ್ಥಾನಕ್ಕೇ ಪೈಪೋಟಿ ನಡೆಸುತ್ತಿದ್ದವರಿಗೇನೂ ಕಡಿಮೆ ಇರುವುದಿಲ್ಲ. ಇನ್ನೂ ಯಾವ್ಯಾವುದೋ ಕಾರಣಗಳಿಗಾಗಿ ಎಲ್ಲ ಸ್ತರದ, ಎಲ್ಲ ವರ್ಗದ, ಎಲ್ಲ ಮನೋಭಾವದ ವ್ಯಕ್ತಿಗಳನ್ನು ಒಂದೇ ನೇರಕ್ಕೆ ಕರೆದುಕೊಂಡು ಹೋಗಬೇಕಿರುವುದು ಸುಲಭದ ಮಾತೇನಲ್ಲ. ಹಾಗೆಂದು ಯಾವಾಗಲೂ ಅವಿರೋಧವಾಗಿಯೇ ನೀವು ಬದುಕಿಬಿಡುತ್ತೀರಿ ಎನ್ನುವುದು ಭ್ರಮೆ. ಸಾಮೂಹಿಕವಾಗಿ ನೋಡಿದಾಗ ಬಹುಮತದಲ್ಲಿ ನೀವು ನಾಯಕತ್ವಕ್ಕೆ ಆಯ್ಕೆ ಆಗಿರಬಹುದು. ಅಥವಾ ಇನ್ನಾವುದೋ ಸನ್ನಿವೇಶದಲ್ಲಿ ನಿಮಗೆ ಅಂಥ ಅವಕಾಶ ಒದಗಿ ಬಂದುಬಿಟ್ಟಿರಬಹುದು. ಅಂಥ ಸಂದರ್ಭದಲ್ಲಿ ಅಯಾ ವ್ಯಕ್ತಿಗಳಿಗೆ ಹೊಂದಾಣಿಕೆಯಾಗುವ ರೀತಿಯಲ್ಲೇ ವ್ಯವಹರಿಸಬೇಕಾಗುತ್ತದೆ. ಅವರು ಬೇಡ, ಇವರು ಇಲ್ಲದಿದ್ದರೇನಂತೆ...ಇಂಥವರು ಹೋದರೆ ಹೋಗಲಿ...ಅವನಿಂದೇನಾಗಬೇಕಿದೆ... ಇಂಥ ಧೋರಣೆಗಳು ನಾಯಕನಿಗೆ ಸಲ್ಲ. ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಸಮರ್ಥರೇ ಇರುತ್ತಾರೆ. ಅವರವರ ಸಾಮರ್ಥ್ಯ ಗುರುತಿಸಿ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಜತೆಯಲ್ಲಿ ಕರೆದುಕೊಂಡು ಹೋಗುವುದೇ ಜಾಣ್ಮೆ. ಕೆಲವೊಮ್ಮೆ ಏನು ಮಾಡಿದರೂ ಬಗ್ಗದವರಿರುತ್ತಾರೆ. ಅಂಥವರಿಗೇ ಅವಕಾಶಗಳನ್ನು ಕೊಟ್ಟು ಸಕಾರಾತ್ಮಕವಾಗಿ ಅವರನ್ನು ಮಣಿಸಿಕೊಳ್ಳಬೇಕು. ಗುಬ್ಬಿಗೆ ಪ್ರಯೋಗಿಸಿದ ಹುಲ್ಲುಕಡ್ಡಿಯಿಂದಲೇ ಆನೆಯನ್ನೂ ಪಳಗಿಸಲಾಗುವುದಿಲ್ಲ. ಅದಕ್ಕೆ ಅಂಕುಶವೇ ಬೇಕಾಗುತ್ತದೆ. ಹಾಗೆಂದು ಎಲ್ಲ ಸಂದರ್ಭದಲ್ಲೂ ಬಲಪ್ರಯೋಗವೇ ಪರಿಹಾರವಲ್ಲ. ಒಟ್ಟಾರೆ ಅವರಾಗಿಯೇ ತನ್ನನ್ನು ಒಪ್ಪಿಕೊಳ್ಳುವಂತೆ ಮಾಡುವವನು ಅತ್ಯಂತ ಸಮರ್ಥ ನಾಯಕನಾಗಿರುತ್ತಾನೆ.

-  ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement