ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಚಿಕಿತ್ಸೆ ಮಾತ್ರವಲ್ಲ,ಪರಿಹಾರವೂ ತಾತ್ಕಾಲಿಕ!

ಗ್ಯಾಸ್ ಸಮಸ್ಯೆ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆಗಳು ನಡೆಯುತ್ತಲೇ ಇವೆ. ಡಾ.ಮೈಖೆಲ್ ಲೆವಿಟ್ ಎನ್ನುವ ತಜ್ಞರು ಅಮೆರಿಕದ ಮಿನ್ನೆಸೊಟಾ ವಿಶ್ವವಿದ್ಯಾಲಯದಲ್ಲಿ ...

Rashmi Kasaragodu
Updated On : 28 Oct 2013, 12:45 pm

ಗ್ಯಾಸ್ ಸಮಸ್ಯೆ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆಗಳು ನಡೆಯುತ್ತಲೇ ಇವೆ. ಡಾ.ಮೈಖೆಲ್ ಲೆವಿಟ್ ಎನ್ನುವ ತಜ್ಞರು ಅಮೆರಿಕದ ಮಿನ್ನೆಸೊಟಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ವಾಯು ತೊಂದರೆ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಜಗತ್ತಿನ ಕೆಲವೇ ವ್ಯಕ್ತಿಗಳಲ್ಲಿ ಒಬ್ಬರು ಎನ್ನುವ ಗೌರವವೂ ಅವರಿಗಿದೆ. ಅಷ್ಟರಮಟ್ಟಿನ ಅಧ್ಯಯನ, ಸಂಶೋಧನೆ ಮಾಡಿದ್ದಾರೆ; ವಿಷಯದ ಬಗ್ಗೆ ಅಂತಹ ಹಿಡಿತ ಸಾಧಿಸಿದ್ದಾರೆ. ಗ್ಯಾಸ್ ಕುರಿತಾದ ಸಂಶೋಧನೆಯೇ ಅವರಿಗೆ ಅಂತರರಾಷ್ಟ್ರೀಯ ಮನ್ನಣೆ ಗಳಿಸಿಕೊಟ್ಟಿದೆ.
ಹಾಗಾದರೆ ಗ್ಯಾಸ್ಟ್ರಿಕ್‌ನ ಲಕ್ಷಣಗಳಾದರೂ ಏನು? ವಾಕರಿಕೆ, ಮೇಲಿಂದಮೇಲೆ ಹೊಟ್ಟೆ ಕೆಡುವುದು, ಹೊಟ್ಟೆ ಉಬ್ಬಿದಂತಾಗುವುದು, ಹೊಟ್ಟೆ ನೋವು, ಅಜೀರ್ಣ, ವಿಶೇಷವಾಗಿ ರಾತ್ರಿ ವೇಳೆ ಹೊಟ್ಟೆ ಉರಿ, ಬಿಕ್ಕಳಿಕೆ, ವಿಪರೀತ ಹಸಿವು, ಮಲ ಕಪ್ಪುಬಣ್ಣದಲ್ಲಿರುವುದು, ಒಮ್ಮೊಮ್ಮೆ ರಕ್ತ ವಾಂತಿ ಇವೆಲ್ಲವೂ ಗ್ಯಾಸ್ಟ್ರಿಕ್ ಲಕ್ಷಣಗಳು. ಧೂಮಪಾನ ಮತ್ತು ಮದ್ಯಪಾನ ಮಾಡುವವರಲ್ಲಿ ಗ್ಯಾಸ್ಟ್ರಿಕ್ ತೊಂದರೆ ಜಾಸ್ತಿ. ವೈದ್ಯರು ಗ್ಯಾಸ್ಟ್ರಿಕ್ ಸಮಸ್ಯೆಯ ತೀವ್ರತೆ ಅರಿತುಕೊಳ್ಳಲು ನಿಮ್ಮ ಮತ್ತು ಇಡೀ ಕುಟುಂಬದ ವೈದ್ಯಕೀಯ ಇತಿಹಾಸ, ಜೀವನಶೈಲಿ, ಆಹಾರ ಪದ್ಧತಿ ಎಲ್ಲವುಗಳ ಬಗ್ಗೆಯೂ ವಿವರವಾಗಿ ನಿಮ್ಮನ್ನು ಪ್ರಶ್ನಿಸಬಹುದು. ಎಂಡೊಸ್ಕೊಪಿ, ರಕ್ತ ಪರೀಕ್ಷೆ, ಮಲ ಪರೀಕ್ಷೆ ಮೊದಲಾದ ಪರೀಕ್ಷೆಗಳನ್ನೂ ನಡೆಸಬಹುದು. ಗ್ಯಾಸ್ಟ್ರಿಕ್ ಸಮಸ್ಯೆ ಒಮ್ಮೊಮ್ಮೆ ಇದ್ದಕ್ಕಿದ್ದಂತೆ ತೀವ್ರ ಸ್ವರೂಪದಲ್ಲಿ ಕಾಣಿಸಿಕೊಳ್ಳಬಹುದು ಅಥವಾ ಶುರುವಿನಲ್ಲಿ ಅಷ್ಟು ತೀವ್ರವಾಗಿ ಬಾಧಿಸದೇ ಒಮ್ಮೆಲೇ ಆಸ್ಫೋಟಿಸಿಬಿಡಬಹುದು. ಇವತ್ತಿನ ಜೀವನಶೈಲಿಯಲ್ಲಿ ಗ್ಯಾಸ್ಟ್ರಿಕ್ ತೊಂದರೆಯನ್ನು ಕಡೆಗಣಿಸಬಾರದು. ತೀವ್ರ ಸ್ವರೂಪ ತಾಳಿದರೂ ಚಿಕಿತ್ಸೆ ಪಡೆಯದೇ ಇದ್ದರೆ ಉದರ ಕ್ಯಾನ್ಸರ್‌ನಂಥ ಗಂಭೀರ ಕಾಯಿಲೆಗಳಿಗೂ ದಾರಿ ಮಾಡಿಕೊಡಬಹುದು. ಒಂದು ಹಂತ ದಾಟಿದ ಮೇಲೆ ಸ್ವಯಂ ವೈದ್ಯವೂ ಸಲ್ಲದು. ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳುತ್ತಿರುವಾಗ ಸಮಸ್ಯೆ ಕಡಿಮೆಯಾದ ಅನುಭವ ಆಗುತ್ತಿದ್ದಂತೆ ಔಷಧೋಪಚಾರವನ್ನು ಏಕಾಏಕಿ ನಿಲ್ಲಿಸುವುದೂ ಸಲ್ಲದು. ವೈದ್ಯರ ಸಲಹೆ ಪಡೆಯದೇ ಮುಂದುವರಿಯುವುದು ಸರಿಯಲ್ಲ.
ಗ್ಯಾಸ್ಟ್ರಿಕ್ ಬಾಧೆ ಆರಂಭದಲ್ಲೇ ತನ್ನ ಸುಳಿವನ್ನು ತೋರಿಸುತ್ತ ಇರುತ್ತದೆ. ಅದರ ಲಕ್ಷಣಗಳೇನು ಎನ್ನುವುದು ನಿಮಗೆ ಗೊತ್ತಾಗಿದೆ. ಅಂಥ ಯಾವುದೇ ಲಕ್ಷಣ ನಿಮ್ಮಲ್ಲಿ ಗೋಚರವಾಗುತ್ತಿದ್ದಂತೆ ನೀವು ಎಚ್ಚೆತ್ತುಕೊಳ್ಳಬೇಕು ಅಂದರೆ ಹಂತಹಂತವಾಗಿ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಮುಂದಾಗಬೇಕು. ವೈದ್ಯಕೀಯ ಚಿಕಿತ್ಸೆ ಮಾಡಿಸಿಕೊಂಡರೆ ಅದು ತಾತ್ಕಾಲಿಕವೇ ವಿನಾ ಸಮಸ್ಯೆ ಮತ್ತೆ ಮರುಕಳಿಸುವುದಿಲ್ಲ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಡಯಟ್‌ನಲ್ಲಿನ ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡರೆ ಗ್ಯಾಸ್ಟ್ರಿಕ್‌ನಿಂದ ಶಾಶ್ವತವಾಗಿ ಮುಕ್ತಿ ಪಡೆಯಬಹುದು. ಲೆವಿಟ್ ಹೇಳುವುದೂ ಅದನ್ನೇ, 'ಗ್ಯಾಸ್ಟ್ರಿಕ್‌ಗೆ ಡಯಟ್‌ಗಿಂತ ಪರಿಣಾಮಕಾರಿ ಮದ್ದು ಬೇರೆ ಇಲ್ಲ'.

- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement