ನಮ್ಮಿಷ್ಟದಂತೆ ನಡೆಯಲು ಸಾಧ್ಯವೇ?
ಪ್ರಪಂಚದಲ್ಲಿ ಉತ್ತರವಿಲ್ಲದ ಪ್ರಶ್ನೆಯಾಗಲಿ, ಪರಿಹಾರವಿಲ್ಲದ ಸಮಸ್ಯೆಯಾಗಲೀ ಇಲ್ಲ. ಆದರೆ, ನಾವು ಯಾವುದಾದರೂ ಒಂದು ನಂಬಿಕೆಯ ಗೂಟಕ್ಕೆ ಬಂಧಿಯಾಗಿದ್ದರೆ ಪೂರ್ಣ ಸತ್ಯ ...
ಪ್ರಪಂಚದಲ್ಲಿ ಉತ್ತರವಿಲ್ಲದ ಪ್ರಶ್ನೆಯಾಗಲಿ, ಪರಿಹಾರವಿಲ್ಲದ ಸಮಸ್ಯೆಯಾಗಲೀ ಇಲ್ಲ. ಆದರೆ, ನಾವು ಯಾವುದಾದರೂ ಒಂದು ನಂಬಿಕೆಯ ಗೂಟಕ್ಕೆ ಬಂಧಿಯಾಗಿದ್ದರೆ ಪೂರ್ಣ ಸತ್ಯ ನಮ್ಮಿಂದ ನುಣಿಚಿಕೊಳ್ಳುತ್ತದೆ. ಆ ಮಿತಿಯಿಂದ ನಾವು ಹೊರಬರಬೇಕು, ಆಗ ಮಾತ್ರ ನಿಜ ಬದುಕಿನ ಪರಿಚಯವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆ ಕಟ್ಟಿಕೊಳ್ಳುವುದು ಅಷ್ಟೈಶ್ವರ್ಯಗಳ ಮಳೆಯೇ ಸುರಿಯುತ್ತದೆ ಎಂದು ಅರ್ಥವಲ್ಲ. ನಾವು ನಿರ್ಮಿಸಿದ ಕನಸಿನ ಮನೆ ಸುಖ, ಶಾಂತಿ, ನೆಮ್ಮದಿಯ ತಾಣವಾಗಬೇಕು. ನಿತ್ಯ ನರಕ ಜೀವನ ಆಗುವುದಲ್ಲ. ನಮಗೆ ತಿಳಿದ ಹಾಗೆ, ನಮಗೆ ಬೇಕಾದ ಅನುಕೂಲತೆ ಮಾಡಿಕೊಂಡು ಮನೆ ಕಟ್ಟಿದ್ದೇವೆ ಎಂದು ಸಮಸ್ಯೆ ತಂದುಕೊಳ್ಳುವುದು ಆಗಬಾರದು. ಮನೆ ಕಟ್ಟಿ ಅಭಿವೃದ್ಧಿ ಆದವರೂ ಇದ್ದಾರೆ, ಸಮಸ್ಯೆಗಳಿಂದ ಬಳಲುವವರೂ ಇದ್ದಾರೆ. ನೂರಕ್ಕೆ ನೂರರಷ್ಟು ವಾಸ್ತು ಶಾಸ್ತ್ರದ ಪ್ರಕಾರ ಮನೆ ಕಟ್ಟಲು ಆಗೋದಿಲ್ಲ. ಸಾಧ್ಯವಾದಷ್ಟು ತತ್ತ್ವದ ಪ್ರಕಾರ ಮಾಡಲು ಪ್ರಯತ್ನಿಸಬೇಕು. ಎಲ್ಲ ನಾವಂದುಕೊಂಡ ಹಾಗೆ ಕೆಲಸಗಳು ನಡೆದಿದ್ದರೆ, ಈ ಜಗತ್ತು ಏನಾಗುತ್ತಿತ್ತು ನೀವೆ ಹೇಳಿ...?
-ವೀರಣ್ಣ ಚನ್ನಬಸಪ್ಪ ಜಾಡರ, ಶಿರಗುಪ್ಪ
ವೈಜ್ಞಾನಿಕ ಅಂಶ ಅಡಕ
ನಮ್ಮ ಹಿರಿಯರು ಮಾಡಿರುವ ಪ್ರತಿಯೊಂದು ಶಾಸ್ತ್ರ, ಸಂಪ್ರದಾಯದಲ್ಲೂ ವೈಜ್ಞಾನಿಕ ಅಂಶ ಅಡಕವಾಗಿದೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಅಳವಡಿಸಿಕೊಂಡರೆ ಧನಾತ್ಮಕ ಪರಿಣಾಮವಾಗುತ್ತದೆ. ಜೋತಿಷಿಯ ಮಾತು ಕೇಳಿ ಚೆನ್ನಾಗಿ ಕಟ್ಟಿರುವ ಮನೆಯ ಗೊಡೆ ಕೆಡವುದು, ನಕ್ಷೆ ಬದಲಿಸುವುದು ಬೇಡ. ವಾಸ್ತು ವೈಜ್ಞಾನಿಕವಾಗಿ ಬೇಕು, ಅಂಧ ನಂಬಿಕೆ ಬೇಡ. ನಮ್ಮ ಊರಲ್ಲಿ ಸುಮಾರು ಕೋಟಿ ಬೆಲೆಬಾಳುವ ಮನೆಯನ್ನು ವಾಸ್ತು ಶಾಸ್ತ್ರಜ್ಞರು ನಿಮ್ಮ ಮನೆಯ ವಾಸ್ತು ಸರಿ ಇಲ್ಲ ಎಂದು ಹೇಳಿ ಕೆಲವು ಭಾಗವನ್ನು ಕೆಡವಿ, ಪುನರ್ನಿರ್ಮಿಸಲಾಯಿತು. ಆದರೂ ಅವರು ಈಗ ಸಾಲ ಹೆಚ್ಚಾಗಿ ಮನೆ ಮಾರುವ ಸ್ಥಿತಿಯಲ್ಲಿದ್ದಾರೆ. ಹೀಗೆ ಢೋಂಗಿ ವಾಸ್ತು ಶಾಸ್ತ್ರಜ್ಞರನ್ನು ನಂಬಿದರೆ ಅನಾಹುತಗಳನ್ನು ಮೈಮೇಲೆ ಎಳೆದುಕೊಂಡಂತೆ.
-ಸುರೇಶ ನಿಂಗಪ್ಪಾ ಶೇಡಬಾಳ, ಹಾರೂಗೇರಿ
ವಾಸ್ತು ಬೇಕು ಮನಸ್ಸಿಗೆ
ವಾಸ್ತು ಬೇಕಿರುವುದು ಮನೆಗಲ್ಲ, ಮನಸ್ಸಿಗೆ. ವಾಸ್ತು ಪುರುಷನ ಸಮಾಧಾನಕ್ಕೋಸ್ಕರ ಅವನ ಅಣತಿಯಂತೆ ವಾಸ್ತು ದೋಷ ಪರಿಹಾರಕ್ಕಾಗಿ ಕಟ್ಟಿರುವ ಮನೆಯಲ್ಲಿ ಅಗ್ನಿಮೂಲೆ, ಕುಬೇರನ ಮೂಲೆ ಇತ್ಯಾದಿ ವಿಂಗಡಿಸಿ ದಿಕ್ಕಿಗೊಂದರಂತೆ ನಿರ್ಮಿಸಿಕೊಂಡ ಎಷ್ಟು ಜನ ನೆಮ್ಮದಿ ಪಡೆದಿದ್ದಾರೆ. ಮನಸ್ಸಿನಲ್ಲಿ ಯಾವುದು ಸರಿ ಇಲ್ಲವೋ ಅದನ್ನು ವಾಸ್ತುವಿನಲ್ಲಿ ಪರಿಹರಿಸಲು ಸಾಧ್ಯವೇ? ತೆಲೆನೋವಿಗೆ ಹೊಟ್ಟೆ ನೋವಿನ ಔಷಧ ಸೇವಿಸಿದರೆ ನೋವು ವಾಸಿಯಾಗುವುದೇ? ನ್ಯಾಯ ನೀತಿ ಧರ್ಮವಿರುವಲ್ಲಿ ವಾಸ್ತುವಿನ ಅವಶ್ಯಕತೆ ಬೇಕಿಲ್ಲ. ಭಾರತಕ್ಕೆ ಹಿಮಾಲಯ ಪರ್ವತ ಇರುವುದೇ ವಾಸ್ತು ದೋಷ ಎನ್ನುವಾಗ ಹಿಮಾಲಯವನ್ನು ಬೇರೆಡೆ ಬದಲಾಯಿಸಲು ಸಾಧ್ಯವೇ? ವಾಸ್ತು ಎಂಬುದು ಪಂಡಿತರು ಹಣ ದೋಚಲು ಮಾಡಿರುವ ಸಂಚು. ಬೆಳಗಿನ ಸೂರ್ಯಕಿರಣ ಮನೆ ಒಳಗೆ ಬೀಳುವುದು ವಾಸ್ತುವಲ್ಲ, ಪ್ರಕೃತಿ ನಿಯಮ.
-ವಿ. ಹೇಮಂತಕುಮಾರ, ಬೆಂಗಳೂರು.
'ಜಗುಲಿ'ಯಲ್ಲಿ ಈ ಸಲದ ವಿಷಯ 'ಸಚಿನ್ ನಿವೃತ್ತಿ'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com