ಜೋಳಿಗೆ ತುಂಬುವ ವಾಸ್ತು
ವಾಸ್ತವದಲ್ಲಿ ವಾಸ ಮಾಡಲು ಯೋಗ್ಯವಾಗಿರುವುದೇ ವಾಸ್ತು! 'ವಾಸ್ತು' ಎಂಬ ಪದವು ಮೂಢನಂಬಿಕೆಗೆ ಒಂದು ಹಂತ. ಮನೆಯ ವಾಸ್ತು ಚೆನ್ನಾಗಿದ್ದರೆ ಮನೆಯಲ್ಲಿ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯುತ್ತವೆ ಎಂಬುದು ಸುಳ್ಳೇಸುಳ್ಳು. ಏಕೆಂದರೆ ವಾಸ್ತು ಸರಿಯಿದ್ದರೆ ಮನೆಯಲ್ಲಿ ಜಗಳಗಳು ನಡೆಯುವುದಿಲ್ಲ ಎಂಬುದಂತೂ ಶುದ್ಧ ಬೊಗಳೆ. ಎಷ್ಟೋ ಮನೆಗಳು ವಾಸ್ತುವಿನ ಪ್ರಕಾರವೇ ಇದ್ದರೂ ಜಗಳ, ಮನಸ್ತಾಪಗಳು ನಡೆಯುತ್ತಲೇ ಇರುತ್ತವೆ. ವಾಸ್ತುವಿಗೂ ಜಗಳಗಳಿಗೂ ಸಂಬಂಧವಿಲ್ಲ. ಮೂಢನಂಬಿಕೆಗೆ ಒತ್ತುಕೊಡುವ ಸಮಾಜ ಒಂದು ಭಾಗ ಇದನ್ನು ಮೆರೆಯಲು ಬಿಡುತ್ತಿದ್ದಾರೆ. ಈ ಮೂಢನಂಬಿಕೆಗೆ ಜನ ಮುಗ್ಧರನ್ನೂ ಬಲಿ ಕೊಡುತ್ತಿದ್ದಾರೆ. ವಾಸ್ತುತಜ್ಞರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ವಾಸ್ತುವಿಗೆ ಹೆಚ್ಚು ಪ್ರಚಾರ ಕೊಡುತ್ತಿದ್ದಾರೆ.
-ನಂದಿನಿ ಮಹೇಶ್.ಎ.ಬಿ., ಅರಳೀಕಟ್ಟೆ
ಕೃತಕ ಅನಿವಾರ್ಯ!
ವಾಸ್ತು ಬೇಕೇ ಎಂದುಕೇಳಿದ ಕೂಡಲೆ ನಮ್ಮ ಮನೆ ಬಗ್ಗೆ ಹೇಳಬೇಕು ಅನ್ನಿಸುತ್ತದೆ. ಎರಡು ವರ್ಷ ಹಿಂದೆ ಮನೆಗೆ ಬಂದ ಬಂಧುಬಳಗದವರು ಮನೆಯ ವಾಸ್ತು ಸರಿಯಿಲ್ಲವೆಂದು ತಿಳಿಸಿದರು. ನನ್ನ ತಂದೆ-ತಾಯಿ ವಾಸ್ತುಶಾಸ್ತ್ರಜ್ಞರನ್ನು ಕರೆಸಿ ದೋಷ ನಿವಾರಣೆಗೆ ಪೂಜೆಗಳನ್ನು ಮಾಡಿಸಿದರು. ಅದಾದ ಮೇಲೆ ಸ್ವಲ್ಪ ಮಟ್ಟಿಗೆ ವಾಸ್ತುದೋಷ ನಿವಾರಣೆಯಾಗಿದೆ ಎಂದು ಅವರು ನಂಬಿದ್ದಾರೆ ಅಷ್ಟೆ. ಅದಕ್ಕೂ ಮೊದಲು ನಮ್ಮ ಮನೆಯಲ್ಲಿ ಯಾವ ಸಮಸ್ಯೆಯೂ ಇರಲಿಲ್ಲ, ಈಗಲೂ ಇಲ್ಲ. ಈಗೀಗಂತೂ ಮನೆಗಳು, ಕಟ್ಟಡಗಳು ವಾಸ್ತುವಿಲ್ಲದೆ ನಿರ್ಮಿತವಾಗುವುದೇ ಇಲ್ಲ ಎಂಬಷ್ಟು ವಾಸ್ತು ಪ್ರಾಮುಖ್ಯತೆ ಪಡೆದಿದೆ. ವಾಸ್ತು ಹೆಸರಿನಲ್ಲಿ ಸಿಕ್ಕಾಪಟ್ಟೆ ಸಂಪಾದಿಸಬಹುದು. ಹಣವಂತರಿಗೆ ಮಾತ್ರ ಈ ವಾಸ್ತು ಸೀಮಿತವಾಗಿದೆ. ಯಾರೇ ಆಗಲಿ, ಶ್ರಮ ಪಟ್ಟು ದುಡಿದು ಹಣ ಗಳಿಸಿದರೆ ನೆಮ್ಮದಿಯ ಜೀವನ ಸಿಗುತ್ತದೆ. ವಾಸ್ತು ಅವರವರ ಯೋಚನೆಗೆ ಬಿಟ್ಟದ್ದು.
-ಶ್ವೇತಾ.ಎಂ.ಎಚ್, ತುಮಕೂರು
ಅಸಾಧಾರಣ ವಿಜ್ಞಾನ
ಇತ್ತೀಚೆಗೆ ಕೆಲವರು ವಾಸ್ತು ಕೇವಲ ಢೋಂಗಿ, ಮೂಢನಂಬಿಕೆ ಅಂತ ಹೇಳ್ತಾರೆ. ಆದರೆ ಅದೇ ವ್ಯಕ್ತಿಗಳು ತಮ್ಮ ಮನೆ ಕಟ್ಟಿಸಿದ ನಂತರ ವಾಸ್ತುಪುರುಷ ಹೋಮ ನಡೆಸುತ್ತಾರೆ ಅಂದರೆ ಅಲ್ಲಿ ವಾಸ್ತು ಪುರುಷ ಇದ್ದಾನೆ ಎಂಬುದು ನಿಜವಲ್ಲವೇ? ಮನುಷ್ಯ ಪ್ರಕೃತಿಯ ಶಿಶು ಎಂಬ ಕಠೋರ ಸತ್ಯವನ್ನು ವಾಸ್ತುಶಾಸ್ತ್ರ ಪ್ರತಿಪಾದಿಸಿದೆ. ಪಂಚಭೂತಗಳಾದ ಜಲ, ಅಗ್ನಿ, ವಾಯು, ಭೂಮಿ, ಆಕಾಶಗಳನ್ನು ಪ್ರಕೃತಿ-ಮಾನವನ ಬೆಸುಗೆಯನ್ನು ಶಾಶ್ವತಗೊಳಿಸಲು ಬಳಸುತ್ತಾರೆ. ಭೂಮಿಯ ಆಯಸ್ಕಾಂತೀಯ ಶಕ್ತಿ, ಸೌರಶಕ್ತಿ, ಧ್ವನಿ ತರಂಗ, ಜಲ ವಾಯು ಶಕ್ತಿಗಳೇ ಅಲ್ಲದೇ ಸೌರವ್ಯೂಹದ ಅಗೋಚರ ಶಕ್ತಿಗಳೆನ್ನೆಲ್ಲಾ ವಾಸ್ತುಶಾಸ್ತ್ರದಲ್ಲಿ ಬಳಸಿರುವುದನ್ನು ಗಮನಿಸಿದರೆ ವಾಸ್ತು ಮೂಢನಂಬಿಕೆಯಲ್ಲ ಅದೊಂದು ಅಸಾಧಾರಣ ವಿಜ್ಞಾನ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ವಾಸ್ತು ಪ್ರಕಾರ ನಿರ್ಮಿತ ಮನೆ, ಕಟ್ಟಡಗಳೆಲ್ಲಾ ದೇವಾಲಯದಂತೆಯೇ.
-ಸುರೇಶ್.ಎಂ.ಜಿ, ಭದ್ರಾವತಿ
'ಜಗುಲಿ'ಯಲ್ಲಿ ಈ ಸಲದ ವಿಷಯ 'ಸಚಿನ್ ನಿವೃತ್ತಿ'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com