ಪ್ರಣಯ ಕಲೆ
ಪುರುಷನಲ್ಲಿ 'ಪ್ರಣಯ ಕಲೆ' ಇರಬೇಕು. ಅದಿಲ್ಲವಾದರೆ ಪ್ರಿಯತಮೆಯ ಕಂಗಳಲ್ಲಿ ಅರಸಿಕನೆನ್ನಿಸಿಕೊಳ್ಳಬೇಕಾಗುತ್ತದೆ. ತರುಣಿಯಲ್ಲಿಯೂ ಅದು ಇರಬೇಕು. ಇನ್ನು ಈ 'ಕಲೆ'ಯಲ್ಲಿ ಚತುರರಾದ ಗಂಡಸರು ಮಾಡುವ ಇತರ 'ಕಲೆ'ಗಳ ಬಗ್ಗೆ ಹೇಳುವುದೇನು? ಗಂಡಸು ಹೆಣ್ಣ ಮೈಯ ಮೇಲೆ, ಹೆಣ್ಣು ಗಂಡಿನ ಮೈಯ ಮೇಲೆ ಮೂಡಿಸುವ ಕಲೆಗಳಲ್ಲಿ ಎರಡು ಪ್ರಮುಖ- ದಂತಕ್ಷತ ಮತ್ತು ನಖಕ್ಷತ. ದಂತಕ್ಷತದಿಂದಾಗುವ ಪಾಡು ಹೇಳಲಳವಲ್ಲ. ನಖಕ್ಷತವೂ ಕಮ್ಮಿ ಏನಿಲ್ಲ. ಹೀಗೆ 'ಕಲೆಗಾರ' ಪುರುಷನೊಬ್ಬ ಮಾಡಿದ ಅವಾಂತರ ಇಲ್ಲಿದೆ.
ಅದ್ಯಾಪಿ ತತ್ಕನಕರೇಣುಘನೋರುದೇಶೇ
ನ್ಯಸ್ತಂ ಸ್ಮರಾಮಿ ನಖರಕ್ಷತಲಕ್ಷ್ಮತಸ್ಯಾಃ
ಆಕೃಷ್ಟ ಹೇಮರುಚಿರಾಂಬರಮುತ್ಥಿತಾಯಾ
ಲಜ್ಜಾವಶತ್ಕರಧೃತಂ ಚ ತತೋ ವ್ರಜಂತ್ಯಾಃ
ರಾತ್ರಿ ಭರ್ಜರಿ ಸುರತಕ್ರೀಡೆಯನ್ನು ಅನುಭವಿಸಿ, ಬಳಲಿದ ಜೋಡಿ ಮೈಮರೆತು ನಿದ್ರಿಸಿ ಬೆಳಗ್ಗೆ ಏಳುತ್ತಿದೆ. ಪ್ರಿಯತಮೆಯ ಮೈಮೇಲೆ ಒಂದು ಪೀತಾಂಬರ ಬಿಟ್ಟರೆ ಬೇರೇನೂ ಇಲ್ಲ. ಪ್ರಿಯಕರನಿಗೆ ಆಕೆಯನ್ನು ಕೀಟಲೆ ಮಾಡುವ ತವಕ. ಆ ಪೀತಾಂಬರವನ್ನು ಸೆಳೆದುಬಿಡುತ್ತಾನೆ. ಕೂಡಲೇ ಹೂವಿನ ಪರಾಗದ ಕೇಸರಿ ಬಣ್ಣ ಮಿಶ್ರಿತ ಹೊಂಬಣ್ಣದ ಆಕೆಯ ತೊಡೆಗಳು ಗೋಚರಿಸುತ್ತವೆ. ಅದರಲ್ಲಿ ರಾತ್ರಿ ನಲ್ಲನು ರತ್ಯಾತುರದಲ್ಲಿ ಮಾಡಿದ ಉಗುರಿನ ಗುರುತುಗಳು! ಅದನ್ನು ಕಂಡು ನಲ್ಲೆ ನಾಚಿಕೆಯಿಂದ ಕಂಗೆಟ್ಟು, ಮುಖವನ್ನು ಕೈಗಳಿಂದ ಮುಚ್ಚಿಕೊಂಡು ಒಳಗೆ ಓಡಿಹೋಗುತ್ತಾಳೆ.
ಇದು ನಖಕ್ಷತದ ಪಾಡು. ಪರಸ್ಪರ ನೋಡಿದರೇ ಈ ಪರಿ ನಾಚಿಕೆ. ಇನ್ನು ಅನ್ಯರೇನಾದರೂ ನೋಡಿದರೆ!?
- ಹರಿಹರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.