ಮನಸೆಂಬ ಮಧುರ ಫಲ
ಅದೊಂದು ಸುಂದರ ತೋಪು. ಅಲ್ಲೊಂದು ಕುಟೀರ. ಕುಟೀರದಲ್ಲೊಬ್ಬ ಸಾಧು ವಾಸಿಸುತ್ತಿದ್ದ. ದಿನದ ಬಹುಭಾಗವನ್ನು ಆತ ಧ್ಯಾನದಲ್ಲೇ ಕಳೆಯುತ್ತಿದ್ದ. ಉಳಿದ ಸಮಯ ಸುತ್ತಮುತ್ತ ಓಡಾಡುವ ಮೊಲ, ಜಿಂಕೆಗಳಿಗೆ ಆಹಾರವುಣಿಸುತ್ತಿದ್ದ. ತನ್ನನ್ನು ಕಾಣಲು ಬರುವ ಮಕ್ಕಳಿಗೆ ಕಲ್ಲುಸಕ್ಕರೆ ಕೊಟ್ಟು ಹರಸುತ್ತಿದ್ದ.
ಒಂದು ದಿನ ಒಬ್ಬ ಗುರುತಿನವ ಉಸ್ ಉಸ್ ಅನ್ನುತ್ತ ಬಂದ. ಸಾಧು ನಗುನಗುತ್ತ ಸ್ವಾಗತಿಸಿ ಕುಡಿಯಲು ನೀರು-ಬೆಲ್ಲ ಕೊಟ್ಟ. ಯಾತ್ರೆಗೆ ಹೋಗಿದ್ದೆಯಲ್ಲಿ ಹೇಗಿತ್ತು? ಎಂದು ವಿಚಾರಿಸಿದ. 'ಯಾತ್ರೆಯೇ? ಅದೊಂದು ಪೀಡೆ! ಯಾತ್ರೇಲಿ ಊಟ, ನಿದ್ದೆ ಸರಿಯಾಗಿರಲಿಲ್ಲ' ಎಂದು ಸಿಡುಕಿದ. ಬರೀ ಕಷ್ಟವನ್ನೇ ಪಟ್ಟಿಮಾಡಿ ಹೇಳುವುದನ್ನು ಕೇಳಿ ಸಾಧು ನಗುತ್ತ, 'ಅಲ್ಲಿ ಸುಂದರವಾದದ್ದು ಏನೂ ಇರಲಿಲ್ಲವೇ? ಗಿರಿ, ತೊರೆ, ಕಾನು, ಸಮುದ್ರತೀರ, ಹಕ್ಕಿ ಹಾಡು .. ಯಾವುದೂ? ಅಗೋ ನೋಡು, ಎದುರಿನ ಮಾವಿನ ಮರದಲ್ಲಿ ಅನೇಕ ಪಕ್ಷಿಗಳು ಬಂದು ಕುಳಿತುಕೊಳ್ಳುತ್ತವೆ. ಎಲ್ಲವೂ ಹಕ್ಕಿಗಳೇ.. ಆದರೆ ಸ್ವಭಾವದಲ್ಲಿ ಮಾತ್ರ ಎಷ್ಟೊಂದು ವ್ಯತ್ಯಾಸ. ಮಾವಿನ ಮರದಲ್ಲೇ ಇದ್ದರೂ ಗಿಡುಗ-ಕಾಗೆ ದೂರದಲ್ಲಿ ದೃಷ್ಟಿ ಹಾಯಿಸುತ್ತವೆ, ಏನಾದರೂ ಮಾಂಸ ಸಿಗುವುದೇ ಎಂದು. ಆದರೆ ಗಿಳಿ ಮಾತ್ರ ತನ್ನ ಹತ್ತಿರವೇ ಇರುವ ಹಸನಾದ ಹಣ್ಣನ್ನು ಅರಸುತ್ತದೆ. ಹಾಗೇ ನಮ್ಮ ಮನಸ್ಸು. ಒಳ್ಳೆಯದು ನಮ್ಮ ಸುತ್ತಮುತ್ತಲಲ್ಲೇ ಇದ್ದರೂ ಅದನ್ನು ಕಂಡುಕೊಳ್ಳದೆ ಬೇರೆ ಯಾವುದನ್ನೋ ಹುಡುಕುತ್ತದೆ.'
- ಭಾರತಿ ಕಾಸರಗೋಡು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.