ತಲೆ ಕೆಡಿಸಿಕೊಳ್ಳಬೇಡಿ, ಸಂತೃಪ್ತರಾಗಿರಿ!
ನೆನಪು ಎಂದರೆ ಒಂದು ರೀತಿಯಲ್ಲಿ ಅದು ಕನಸಿನಂತೆಯೇ. ಎಷ್ಟೇ ಸ್ಥೂಲವಾಗಿ ಅನುಭವಿಸಿದ್ದರೂ, ಅನುಭವಗಳು ನೆನಪಾಗಿ ಮಾರ್ಪಡುವುದಷ್ಟೇ ಅಲ್ಲ, ಕಾಲಕ್ರಮೇಣ ಮಸಕಾಗುತ್ತದೆ. ಇಂದ್ರಿಯಗಳ ಸಾಕ್ಷಿಯಿಂದ ಅನುಭವಿಸಿದ್ದಕ್ಕಾಗಿ ಕನಸು ಸತ್ಯವಾಗಿ ಕಾಣುತ್ತದೆ. ಒಬ್ಬನ ಹತ್ತು ವರ್ಷದ ಹಿಂದಿನ ಪ್ರವಾಸ ಮತ್ತು ಇನ್ನೊಬ್ಬನ ಇತ್ತೀಚಿನ ಸುಂದರವಾರ ಪ್ರವಾಸದ ಕನಸನ್ನು ತುಲನೆ ಮಾಡಿ ನೋಡಿದರೆ, ಹಳೆಯ ಅನುಭವ ಮತ್ತು ಹೊಸ ಕನಸಿನಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬರುವುದಿಲ್ಲ. ಎಲ್ಲಾ ಅನುಭವಗಳೂ ಕ್ರಮೇಣ ಕನಸಾಗಿಯೇ ಭಾಸವಾಗುತ್ತದೆ. ಹಾಗೆಯೇ ಗತ ವೈಭವದ ದಿನಗಳು, ಗಳಿಸಿದ- ಕಳೆದ ಆಸ್ತಿ, ಸಂಪತ್ತಿನಿಂದ ಅನುಭವಿಸಿದ ಸುಖ ಎಲ್ಲವೂ ಕನಸಿನಂತೆಯೇ ಕಾಣುತ್ತದೆ. ಜೀವನದ ಪ್ರತಿಯೊಂದು ಸುಖದ ಕ್ಷಣವೂ ನೆನಪಾಗಿ ಮಾರ್ಪಡುತ್ತದೆ. ನೆನಪೆಂದರೆ ಅದೂ ಒಂದು ಬಗೆಯ ಕನಸೇ!
ಮನುಷ್ಯನ ಬದುಕಿನ ಒಂದು ಮೂರಾಂಶ ಅಂದರೆ ಸುಮಾರು ಇಪ್ಪತ್ತು ವರ್ಷ ನಿದ್ರೆಯಲ್ಲಿ, ಇನ್ನು ಒಂದು ಮೂರಂಶ ಕಲಿಕೆಯಲ್ಲಿ, ಮುಂದಿನ ಜೀವನಕ್ಕೆ ಸಿದ್ಧಗೊಳ್ಳುವಲ್ಲಿ, ಹಣದ ಬಗ್ಗೆ ಚಿಂತಿಸದ ಬಾಲ್ಯದಲ್ಲಿ ಕಳೆದು ಹೋಗುತ್ತದೆ. ಇನ್ನುಳಿದ ಒಂದು ಮೂರರಷ್ಟು ಕಷ್ಟಪಡುವುದರಲ್ಲಿ, ಸಾಹಸದಲ್ಲಿ, ಸಂಪಾದಿಸುವುದರಲ್ಲಿ, ಸ್ಪರ್ದಿಸುವುದರಲ್ಲಿ, ಕೌಶಲ ತೋರಿಸುವುದರಲ್ಲಿ, ರಾಜಕೀಯದಲ್ಲಿ, ಪ್ರಯಾಣದಲ್ಲಿ, ಬೇಡವಾದ ಕ್ಷಣಗಳನ್ನು, ಬೇಡವಾದ ವ್ಯಕ್ತಿಗಳನ್ನು ಎದುರಿಸುವಲ್ಲಿ, ಅನಾರೋಗ್ಯದಲ್ಲಿ, ಆಸ್ಪತ್ರೆಯಲ್ಲಿ ಅಥವಾ ಇನ್ಯಾವುದೋ ಒತ್ತಡದಲ್ಲಿ ಕಳೆದು ಹೋಗುತ್ತದೆ. ಹಾಗಾದರೆ ಮನುಷ್ಯ ತನ್ನ ಜೀವನದಲ್ಲಿ ಸರಕು-ಸಾಮಗ್ರಿಗಳಿಂದ, ಭೌತಿಕವಾದ ವಸ್ತುಗಳಿಂದ ನಿಜವಾಗಿ ಎಷ್ಟು ಸುಖ ಪಡಬಹುದು ಅಷ್ಟೇ ಅಲ್ಲ, ಇಷ್ಟೆಲ್ಲ ಜಂಜಾಟಗಳ, ಓಡಾಟಗಳ ನಡುವೆ ಎಷ್ಟು ಸಮಯ ಬುದ್ಧಿಪೂರ್ವಕವಾಗಿ, ಮನಸಾರೆ ಅನುಭವಿಸಬಹುದು ಏನನ್ನೆಲ್ಲ ಹೊಂದಿದ್ದರೂ ವ್ಯಕ್ತಿ ನಿಜವಾಗಿ ಅದನ್ನೆಲ್ಲ ಅನುಭವಿಸಿ, ಸಂತೋಷವಾಗಿರುವುದು ಕೆಲವು ಕ್ಷಣಗಳು ಮಾತ್ರ. ದಿನದ ಒಂದು ಅಥವಾ ಎರಡು ಗಂಟೆಗಿಂತ ಅಧಿಕವಾಗಿ ಯಾವ ವ್ಯಕ್ತಿಯೂ ತನ್ನ ಎಲ್ಲಾ ಸಂಪತ್ತನ್ನು ಅದರಲ್ಲಿಯೇ ಲಕ್ಷ್ಯವಿಟ್ಟು ಅನುಭವಿಸುವುದಿಲ್ಲ. ಆದ್ದರಿಂದ ತನ್ನ ಎಲ್ಲಾ ಶಕ್ತಿಯನ್ನೂ ಹೆಚ್ಚಿನ ಹಣ ಸಂಪಾದನೆಗಾಗಿಯೋ, ಹೆಚ್ಚಿನ ಆಸ್ತಿ ಗಳಿಸುವುದಕ್ಕೋಸ್ಕರವೋ ಉಪಯೋಗಿಸುವುದನ್ನು ಬಿಟ್ಟು, ಅನಿವಾರ್ಯತೆ-ಅವಶ್ಯಕತೆಯನ್ನು ತಿಳಿದು, ಜೀವನವನ್ನು ಅರಿತು, ಸಂತೋಷವಾಗಿರುವುದು ಹೇಗೆಂದು ಅಭ್ಯಾಸ ಮಾಡಿಕೊಂಡರೆ, ಆಸ್ತಿಯ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳದೇ ಸಂತೃಪ್ತನಾಗಿರಬಹುದು.
ಸತ್ಯವೇನೆಂದರೆ, ವ್ಯಕ್ತಿ ಜೀವನದಲ್ಲಿ ಸಂತೃಪ್ತನಾಗಿದ್ದರೆ ಏನನ್ನೂ ಕಳೆದುಕೊಳ್ಳುವುದಿಲ್ಲ.
(ಮುಂದುವರಿಯುವುದು)
ಕಿರಣ್ ಉಪಧ್ಯಾಯ
keyrun1970@gmail.com